
ಭೋಪಾಲ್ (ಮೇ 3, 2023): ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧಿಸುವ ಭರವಸೆ ನೀಡಿದೆ. ಇದು ಮಧ್ಯಪ್ರದೇಶದಲ್ಲೂ ಮಾತಿನ ಸಮರವನ್ನು ಉಂಟುಮಾಡಿದೆ. ಮಧ್ಯ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಅವರ ಹನುಮಾನ ಭಕ್ತಿಯನ್ನು ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಪ್ರಶ್ನೆ ಮಾಡಿದ್ದಾರೆ. ಈ ಸಂಬಂಧ ಕಮಲ್‌ನಾಥ್ ಅವರಿಗೆ ಬುಧವಾರ ಪತ್ರ ಬರೆದಿರುವ ಗೃಹ ಸಚಿವ ನರೋತ್ತಮ್ ಮಿಶ್ರಾ, "ಕಾಂಗ್ರೆಸ್ ತುಷ್ಟೀಕರಣದ ರಾಜಕೀಯಕ್ಕಾಗಿ ಯಾವುದೇ ಹಂತಕ್ಕೆ ಹೋಗಬಹುದು" ಎಂದು ಹೇಳಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕಮಲ್ ನಾಥ್, ದ್ವೇಷ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಕೂಡ ಹೇಳುತ್ತಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ: 'ಜೈ ಭಜರಂಗ ಬಲಿ' ಘೋಷಣೆ ಮೂಲಕ ಕಾಂಗ್ರೆಸ್ ಪ್ರಣಾಳಿಕೆಗೆ ಪ್ರಧಾನಿ ಮೋದಿ ಟಾಂಗ್
ಮೇ 10 ರಂದು ನಡೆಯಲಿರುವ ಕರ್ನಾಟಕ ಚುನಾವಣೆಯ ಪ್ರಣಾಳಿಕೆಯಲ್ಲಿ ಕಾಂಗ್ರೆಸ್, ಬಜರಂಗದಳ ಮತ್ತು ಪಿಎಫ್‌ಐನಂತಹ ಸಂಘಟನೆಗಳ ಮೇಲೆ ನಿಷೇಧ ಹೇರುವುದು ಸೇರಿದಂತೆ ಕಾನೂನಿನ ಪ್ರಕಾರ ನಿರ್ಣಾಯಕ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದೆ ಮತ್ತು ಅವು ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುತ್ತಿವೆ ಎಂದು ಪ್ರಣಾಳಿಕೆಯಲ್ಲಿ ಆರೋಪಿಸಲಾಗಿದೆ. ಬಜರಂಗ ದಳವು ಬಲಪಂಥೀಯ ಹಿಂದೂ ಸಂಘಟನೆಯಾಗಿದೆ. ಬಜರಂಗಿ ಎನ್ನುವುದು ಭಗವಾನ್ ಹನುಮಾನ್‌ನ ಇನ್ನೊಂದು ಹೆಸರಾಗಿದ್ದು, ಈ ಸಂಘಟನೆಯ ಉಡುಪಿನ ಚಿಹ್ನೆಯು ಹನುಮಾನ್ ಚಿತ್ರವನ್ನು ಹೊಂದಿದೆ.
“ಕಮಲ್ ನಾಥ್ ಅವರಿಗೆ ಪತ್ರ ಬರೆದಿದ್ದೇನೆ. ಅವರ ಅನೇಕ ಟ್ವೀಟ್‌ಗಳನ್ನು ನಾನು ನೋಡಿದ್ದೇನೆ, ಅದರಲ್ಲಿ ಅವರು ಹನುಮಾನ್ ಭಕ್ತ ಎಂದು ತೋರಿಸಿದ್ದಾರೆ. ಕಾಂಗ್ರೆಸ್ ಬಜರಂಗದಳವನ್ನು ಪಿಎಫ್‌ಐಗೆ ಸಮೀಕರಿಸಿದೆ. ಕಮಲನಾಥ್ ಅವರು ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಇದೇ ಕಾಂಗ್ರೆಸ್ ರಾಮ ಜನ್ಮಭೂಮಿಯನ್ನು ಪ್ರಶ್ನಿಸುತ್ತಲೇ ಬಂದಿದೆ’’ ಎಂದೂ ಅವರು ಹೇಳಿದರು. ಹಾಗೆ, ಕಾಂಗ್ರೆಸ್‌ನ ಈ ತುಷ್ಟೀಕರಣದ ರಾಜಕೀಯವು "ರಾಷ್ಟ್ರ ಭಕ್ತರ" ಮತ್ತು ರಾಮ ಹಾಗೂ ಹನುಮಂತನ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದೂ ನರೋತ್ತಮ್ ಮಿಶ್ರಾ ಹೇಳಿದ್ದಾರೆ.
ಇದನ್ನೂ ಓದಿ: 10 ಕೋಟಿ ನಕಲಿ ಹೆಸರಲ್ಲಿ ಸರ್ಕಾರಿ ಯೋಜನೆಗಳಲ್ಲಿ ಕಾಂಗ್ರೆಸ್ ಲೂಟಿ ಮಾಡಿದೆ: ಪ್ರಧಾನಿ ಮೋದಿ
ಕರ್ನಾಟಕದ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧಿಸುವ ಬಗ್ಗೆ ಮತ್ತು ಮಧ್ಯಪ್ರದೇಶದ ಪ್ರಣಾಳಿಕೆಯಲ್ಲೂ ಅದನ್ನು ಸೇರಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಮಲನಾಥ್, ಅದನ್ನು ಪ್ರಣಾಳಿಕೆ ಸಮಿತಿಯು ನಿರ್ಧರಿಸುತ್ತದೆ. ದ್ವೇಷ ಹರಡುವ ಮತ್ತು ವಿವಾದ ಸೃಷ್ಟಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮತ್ತು ಇಡೀ ರಾಜ್ಯ ಹೇಳುತ್ತಿದೆ. ಇದು ನಮ್ಮ ಸಾಮಾಜಿಕ ಏಕತೆಯ ವಿಷಯವಾಗಿದೆ ಎಂದು ಸುದ್ದಿಗಾರರಿಗೆ ಹೇಳಿದ್ದಾರೆ.
ನೀವು ಹನುಮಂತನ ಭಕ್ತರಲ್ಲವೇ ಎಂಬ ಪ್ರಶ್ನೆಗೆ ಅದಕ್ಕೂ ಬಜರಂಗದಳವನ್ನು ನಿಷೇಧಿಸುವುದಕ್ಕೂ ಸಂಬಂಧವೇನು ಎಂದು ಕಮಲ್‌ನಾಥ್ ಕೇಳಿದ್ದಾರೆ. ಈ ಸಂಬಂಧ ಕಾಂಗ್ರೆಸ್‌ನ ರಾಜ್ಯಸಭಾ ಸಂಸದ ದಿಗ್ವಿಜಯ ಸಿಂಗ್ ಕೂಡ ಹಲವು ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್‌ನದು 85% ಕಮಿಷನ್ ಸರ್ಕಾರ; ಇದನ್ನು ಆ ಪಕ್ಷದ ಪ್ರಧಾನಿಯೇ ಒಪ್ಪಿಕೊಂಡಿದ್ರು: 40% ಆರೋಪಕ್ಕೆ ಮೋದಿ ತಿರುಗೇಟು
“ಮೋದಿ ಜೀ ಅವರ ಧರ್ಮವು ‘ಹಿಂದುತ್ವ’ ವೇ ಹೊರತು ಹಿಂದೂ ಅಥವಾ ಸನಾತನ ಧರ್ಮವಲ್ಲ. ಸಾವರ್ಕರ್ ಜೀ ಹೇಳಿರುವಂತೆ ‘ಹಿಂದೂ ಧರ್ಮಕ್ಕೂ ಹಿಂದುತ್ವಕ್ಕೂ ಯಾವುದೇ ಸಂಬಂಧವಿಲ್ಲ’. ಹೀಗೆ, ಬಜರಂಗ ದಳಕ್ಕೂ ಹನುಮಂತ ದೇವರಿಗೂ ಯಾವುದೇ ಸಂಬಂಧವಿಲ್ಲ. ಇದು ಗೂಂಡಾಗಳ ಸಂಘಟನೆಯಾಗಿದೆ ಎಂದು ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ; ಮೋದಿ ಸಮಾವೇಶಕ್ಕೆ ಹೆಚ್ಚಿನ ಜನ ಕರೆತರಲು ಹಣ ಹಂಚಿ ಆಮಿಷ ಆರೋಪ: ಶಾಸಕ ಪಿ.ರಾಜೀವ್ ವಿರುದ್ಧ ಕೇಸು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ