ಐಎಸ್‌ಕೆಪಿಯ ಅಲ್-ಅಜೈಮ್ ಮೀಡಿಯಾ ಫೌಂಡೇಶನ್ ಪ್ರಕಟ ಮಾಡಿರುವ ಪ್ರಚಾರ ನಿಯತಕಾಲಿಕದಲ್ಲಿ ದಕ್ಷಿಣ ಭಾರತದಲ್ಲಿ ಐಸಿಸ್ ಭಯೋತ್ಪಾದಕರು ಸಕ್ರಿಯರಾಗಿದ್ದಾರೆ ಎಂದು ಹೇಳಿದ್ದು, ಕೊಯಮತ್ತೂರು ಮತ್ತು ಮಂಗಳೂರು ಬಾಂಬ್ ಸ್ಫೋಟಗಳಲ್ಲಿ ತಮ್ಮ ಪಾತ್ರವಿರುವುದಾಗಿ ಹೇಳಿದೆ.
ನವದೆಹಲಿ (ಮಾ.5): ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಆದ ಅಂದಾಜು ಮೂರು ತಿಂಗಳ ಬಳಿಕ ಹಾಗೂ ಕೊಯಮತ್ತೂರಿನಲ್ಲಿ ಕಾರ್ ಬಾಂಬ್ ಸ್ಫೋಟವಾದ ನಾಲ್ಕು ತಿಂಗಳ ಬಳಿಕ ಖೊರಸಾನ್ ಪ್ರಾಂತ್ಯದ ಇಸ್ಲಾಮಿಕ್ ಸ್ಟೇಟ್ (ಐಎಸ್‌ಕೆಪಿ) ತನ್ನ ಮುಖವಾಗಿ 'ವಾಯ್ಸ್ ಆಫ್ ಖೊರಸಾನ್' ಪತ್ರಿಕೆಯ ಮೂಲಕ ಇದು ತಾವೇ ಮಾಡಿದ ಕೃತ್ಯ ಎಂದು ಒಪ್ಪಿಕೊಂಡಿದೆ. ತಮ್ಮ ಭಯೋತ್ಪಾದಕರು ದಕ್ಷಿಣ ಭಾರತದಲ್ಲಿ ಸಕ್ರಿಯರಾಗಿದ್ದು, ಕಳೆದ ವರ್ಷ ನಡೆದ ಎರಡು ಬ್ಲಾಸ್ಟ್‌ಗಳಲ್ಲಿ ಇವರು ಭಾಗಿಯಾಗಿದ್ದಾರೆ ಎಂದು ಬರೆದುಕೊಂಡಿದೆ. ಐಎಸ್‌ಕೆಪಿಯ ಅಲ್ ಅಜೀಮ್ ಮೀಡಿಯಾ ಫೌಂಡೇಷನ್ 68 ಪುಟಗಳ 23ನೇ ದೀರ್ಘ ಆವೃತ್ತಿಯಾಗಿರುವ ವಾಯ್ಸ್ ಆಫ್ ಖೊರಸಾನ್‌ಅನ್ನು ಪ್ರಕಟ ಮಾಡಿದ್ದು, ಅದರಲ್ಲಿ ಈ ವಿವರಗಳನ್ನು ದಾಖಲು ಮಾಡಿದೆ. ತನ್ನ ಕುಕೃತ್ಯಗಳು ಹಾಗೂ ಹಿಂಸಾ ಆಲೋಚನೆಗಳನ್ನು ಪ್ರಚಾರ ಮಾಡಲು ಬಳಸಿಕೊಳ್ಳುವ ಈ ಮ್ಯಾಗಝೀನ್‌ಅನ್ನು ಸಂಪೂರ್ಣವಾಗಿ ಇಂಗ್ಲೀಷ್‌ನಲ್ಲಿ ಪ್ರಕಟಿಸಿದೆ. ಆದರೆ, ಮ್ಯಾಗಜೀನ್‌ನ ಲೇಖನದಲ್ಲಿ ದಕ್ಷಿಣದ ಯಾವ ರಾಜ್ಯದಲ್ಲಿ ಅದರ 'ಮುಜಾಹಿದ್ದೀನ್‌ಗಳು' ಸಕ್ರಿಯವಾಗಿದ್ದಾರೆ ಎನ್ನುವುದನ್ನು ನಿರ್ದಿಷ್ಟವಾಗಿ ಹೇಳಿಲ್ಲ. ಈಗಿರುವ ಅಂದಾಜಿನ ಪ್ರಕಾರ ಕೇರಳದಲ್ಲಿ ಇವರ ಸಂಖ್ಯೆ ಹೆಚ್ಚಾಗಿದ್ದು, ಕರ್ನಾಟಕ ಹಾಗೂ ತಮಿಳುನಾಡಿನ ಕೆಲವು ಭಾಗಗಳಲ್ಲಿ ಇವರು ಕೃತ್ಯಗಳನ್ನು ಎಸಗಬಹುದು ಎನ್ನಲಾಗಿದೆ.
ಕಳೆದ ವರ್ಷ ಅಕ್ಟೋಬರ್ 23 ರಂದು ಕೊಯಮತ್ತೂರಿನಲ್ಲಿ ನಡೆದ ಕಾರ್ ಬಾಂಬ್ ಸ್ಪೋಟ ಮತ್ತು ನವೆಂಬರ್ 19 ರಂದು ಮಂಗಳೂರಿನಲ್ಲಿ ಆಟೋರಿಕ್ಷಾದಲ್ಲಿ ಕುಕ್ಕರ್ ಸ್ಫೋಟವನ್ನು ಐಸಿಸ್ ಉಗ್ರರು ನಡೆಸಿದ್ದರು ಎಂದು ಐಎಸ್‌ಕೆಪಿ ಹೇಳಿದೆ. ' ಕೊಯಮತ್ತೂರು, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ನಡೆದ ನಮ್ಮ ದಾಳಿಗಳನ್ನು ನೀವು ಪರಿಗಣಿಸುವುದಿಲ್ಲವೇ [ಲೇಖನದ ಬರಹಗಾರ ಮಂಗಳೂರು ಬದಲಿಗೆ ಬೆಂಗಳೂರು ಎಂದು ಬರೆದಿದ್ದಾರೆ], ಅಲ್ಲಿ ನಮ್ಮ ಸಹೋದರರು ನಮ್ಮ ಧರ್ಮದ ಗೌರವಕ್ಕಾಗಿ ಕುಫರ್ (ಮುಸ್ಲಿಮೇತರರು ಮತ್ತು ನಂಬಿಕೆಯಿಲ್ಲದವರು) ಮತ್ತು ಅದರ ಅನುಯಾಯಿಗಳ ಮೇಲೆ ಸೇಡು ತೀರಿಸಿಕೊಂಡಿದ್ದಾರೆ' ಎಂದು ಬರೆಯಲಾಗಿದೆ. ಅದರೊಂದಿಗೆ ದಕ್ಷಿಣ ಭಾರತದಲ್ಲಿ ಐಸಿಸ್ ಹಾಗೂ ಅದರೊಂದಿಗೆ ಬೆಸೆದಿರುವ ಇತರ ಸಂಘಟನೆಗಳು ಸಕ್ರಿಯವಾಗಿದೆ ಎನ್ನುವ ಮಾತನ್ನೂ ಐಎಸ್‌ಕೆಪಿ ತನ್ನ ವರದಿಯಲ್ಲಿ ತಿಳಿಸಿದೆ.
ಐಸಿಸ್ ಬಗ್ಗೆ ಮೃದು ಧೋರಣೆ ಹೊಂದಿರುವ ಶಂಕಿತ ವ್ಯಕ್ತಿಗಳಿಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೇರಳ, ತಮಿಳುನಾಡು ಮತ್ತು ಕರ್ನಾಟಕದಲ್ಲಿ 60 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ನಡೆಸಿದ ಎರಡು ವಾರಗಳ ನಂತರ ಈ ವಿಚಾರ ಪ್ರಕಟವಾಗಿದೆ.
ಅದರೊಂದಿಗೆ ಐಎಸ್‌ಕೆಪಿ, ತಮ್ಮ ಹೊಸ ಆವೃತ್ತಿಯಲ್ಲಿ ಎಂದಿನಂತೆ ಹಿಂದುಗಳು, ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮತ್ಉತ ಭಾರತೀಯ ಸೇನೆಯ ಬಗ್ಗೆ ವಿಷಕಾರಿದೆ. ದಕ್ಷಿಣ ಭಾರತದ ಮುಜಾಹಿದ್ದೀನ್‌ಗಳು ಇವರ ವಿರುದ್ಧ ಯುದ್ಧ ಸಾರಬೇಕು ಎಂದು ಬರೆಯಲಾಗದೆ. ಲೇಖನದಲ್ಲಿ ಹಿಂದುಗಳನ್ನು ಅಲ್ಲಾ ಹಾಗೂ ಪ್ರವಾದಿಯ ವಿರೋಧಿಗಳು ಎಂದು ಮೊದಲಿನಿಂದಲೂ ಉಲ್ಲೇಖ ಮಾಡಲಾಗುತ್ತಿದ್ದು, ಇವರ ವಿರುದ್ಧ ಸೇಡು ತೀರಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಅದರೊಂದಿಗೆ ಕಾಶ್ಮೀರ (ಮುಸ್ಲಿಂಮೇತರರನ್ನು ಗುರಿಯಾಗಿಸಿ), ಬಾಬ್ರಿ ಮಸೀದಿ ಹಾಗೂ ಗುಜರಾತ್ ಗಲಭೆಗಳಿಗೆ ಸೇಡು ತೀರಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ನನ್ನ ಪರಿಸ್ಥಿತಿ ಯಾರಿಗೂ ಬರಬಾರದು ರಿಕ್ಷಾ ಚಾಲಕನ ಸಂಕಟ
"ನಿಮ್ಮ ಉಲ್ಲಂಘನೆಯು ಎಲ್ಲಾ ಮಿತಿಗಳನ್ನು ಮೀರಿದೆ, ಮತ್ತು ಇಸ್ಲಾಂ ಮತ್ತು ಅದರ ಜನರ ಮೇಲಿನ ನಿಮ್ಮ ದ್ವೇಷವನ್ನು ಪದಗಳು ಮತ್ತು ಕಾರ್ಯಗಳಲ್ಲಿ ತೋರಿಸಲಾಗಿದೆ" ಎಂದು ಪತ್ರಿಕೆಯ ಲೇಖನವು ಹೇಳುತ್ತದೆ. "ನಿಮ್ಮ ಶಾಂತಿಯು ಅವ್ಯವಸ್ಥೆಯಾಗಿ ಬದಲಾಗುತ್ತದೆ, ನಿಮ್ಮ ಭದ್ರತೆಯು ಭಯವಾಗಿ, ಮತ್ತು ನಿಮ್ಮ ಸಂತೋಷವು ದುಃಖವಾಗಿ ಬದಲಾಗುತ್ತದೆ, ಮತ್ತು ಅಲ್ಲಾಹನ ಚಿತ್ತದಿಂದ, ನೀವು ಅಲ್ಲಾನನ್ನು ಮಾತ್ರ ಆರಾಧಿಸುವವರೆಗೆ ಯಾವುದೇ ನಂಬಿಕೆಯಿಲ್ಲದವರಿಗೆ ಯಾವುದೇ ಭದ್ರತೆ ಅಥವಾ ಶಾಂತಿ ಇರುವುದಿಲ್ಲ ಎಂದು ಐಎಸ್‌ಕೆಪಿ ತನ್ನ ನಿಯತಕಾಲಿಕದಲ್ಲಿ ಬರೆದಿದೆ.
ಕುಕ್ಕರ್ ಬಾಂಬ್ ಸ್ಫೋಟ ತನಿಖೆ ತೀವ್ರ: ರಾಜ್ಯದ ಇಬ್ಬರು ಶಂಕಿತ ಐಸಿಸ್ ಉಗ್ರರ ಬಂಧನ
ಅದರೊಂದಿಗೆ ಚೀನಾದ ಕಣ್ಗಾವಲು ಬಲೂನ್‌ನ ಬಗ್ಗೆ ಪ್ರಸ್ತಾಪ ಮಾಡುತ್ತಾ, ಅಮೆರಿಕ ಹಾಗೂ ಚೀನಾ ಎರಡೂ ದೇಶಗಳ ಬಗ್ಗೆ ಲೇವಡಿ ಮಾಡಿದೆ. ಪಾಕಿಸ್ತಾನ ಮತ್ತು ಅದರ ಧಾರ್ಮಿಕ ವಿದ್ವಾಂಸರ ವಿರುದ್ಧ ತನ್ನ ವಾಗ್ದಾಳಿಯನ್ನು ಮುಂದುವರಿಸುತ್ತಾ, ಇಸ್ಲಾಮಿಕ್ ಸ್ಟೇಟ್‌ನ ಮುಖವಾಣಿ ಶಹಬಾಜ್ ಷರೀಫ್‌ನ ದೇಶವನ್ನು "ಇಸ್ಲಾಮಿಕ್ ಉಮ್ಮಾದ ದೇಹದಲ್ಲಿನ ಕ್ಯಾನ್ಸರ್" ಎಂದು ಕರೆದಿದೆ.