ಬಿಎಸ್‌ವೈ ಕನಸಿನ ಯೋಜನೆ, ವಿಧಾನಸೌಧದಲ್ಲಿ ಬಸವೇಶ್ವರ ಪ್ರತಿಮೆ ಅನುಮತಿ!

By Suvarna News  |  First Published Jul 16, 2021, 12:53 PM IST

* ವಿಧಾನಸೌಧದಲ್ಲಿ ಬಸವೇಶ್ವರ ಪ್ರತಿಮೆಗೆ ಸಂಪುಟ ಅನುಮತಿ

* ವಚನ ಬರೆವ ಭಂಗಿಯಲ್ಲಿ ನಿರ್ಮಾಣಕ್ಕೆ ಚಿಂತನೆ

* ಬಿಎಸ್‌ವೈ ಕನಸಿನ ಯೋಜನೆಗೆ ಹಾದಿ ಸುಗಮ


ಬೆಂಗಳೂರು(ಜು.16): ಸಮಾಜ ಸುಧಾರಕ ಜಗಜ್ಯೋತಿ ಬಸವೇಶ್ವರರ ಪ್ರತಿಮೆಯನ್ನು ವಿಧಾನಸೌಧದ ಆವರಣದಲ್ಲಿ ನಿರ್ಮಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ.

ವಿಧಾನಸೌಧಕ್ಕೆ ಕೂಗಳತೆ ದೂರದಲ್ಲಿ ಬಸವೇಶ್ವರರ ಅಶ್ವಾರೂಢ ಪ್ರತಿಮೆ ಇರುವುದರಿಂದ ವಚನ ಬರೆಯುವ ಭಂಗಿ ಸೇರಿ ಇತರ ಭಂಗಿಗಳಲ್ಲಿನ ಪ್ರತಿಮೆ ಸ್ಥಾಪಿಸುವ ಬಗ್ಗೆ ಚಿಂತನೆ ನಡೆದಿದೆ.

Tap to resize

Latest Videos

ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಬಸವರಾಜ ಬೊಮ್ಮಾಯಿ, ವಿಧಾನಸೌಧದ ಆವರಣದಲ್ಲಿ ಬಸವೇಶ್ವರರ ಪ್ರತಿಮೆಯನ್ನು ಸ್ಥಾಪಿಸುವ ಕುರಿತಂತೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವೆಚ್ಚದ ಬಗ್ಗೆ ತೀರ್ಮಾನಿಸಲಿದೆ. ಅಶ್ವಾರೂಢ ಬಸವೇಶ್ವರ ಪ್ರತಿಮೆ ಬದಲು ವಚನ ಬರೆಯುವ ಭಂಗಿ ಸೇರಿ ಇತರ ಭಂಗಿಗಳಲ್ಲಿನ ಪ್ರತಿಮೆ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆ. ಮುಂದಿನ ದಿನದಲ್ಲಿ ಈ ಬಗ್ಗೆ ಅಂತಿಮವಾಗಿ ತೀರ್ಮಾನಿಸಲಾಗುವುದು ಎಂದರು.

ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ದಿಢೀರನೆ ವಿಧಾನಸೌಧದ ಆವರಣದಲ್ಲಿ ಬಸವೇಶ್ವರರ ಪ್ರತಿಮೆ ಸ್ಥಾಪಿಸುವ ನಿರ್ಧಾರ ಕೈಗೊಂಡು ಈ ಬಗ್ಗೆ ಪ್ರಸ್ತಾವನೆ ಸಿದ್ಧಪಡಿಸಿ ಕಳುಹಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗಳಿಗೆ ಸೂಚಿಸಿದ್ದರು. ಅದರ ಬೆನ್ನಲ್ಲೇ ಕಳೆದ ವಾರ ವಿಧಾನಸೌಧದ ಆವರಣದಲ್ಲಿ ಖುದ್ದಾಗಿ ಸ್ಥಳ ಪರಿಶೀಲನೆಯನ್ನೂ ನಡೆಸಿದ್ದರು.

click me!