ಯುಪಿ ವಿಧಾನಸಭೆಯಲ್ಲಿ ಯೋಗಿ, ಅಖಿಲೇಶ್ ಮುಖಾಮುಖಿ: ಬೆನ್ನು ಸವರಿ ವಿಪಕ್ಷ ನಾಯಕನ ಜೊತೆ ಸಿಎಂ ಮಾತು!

By Suvarna NewsFirst Published Mar 28, 2022, 11:51 AM IST
Highlights

* ಉತ್ತರ ಪ್ರದೇಶ ಚುನಾವಣಾ ಅಖಾಡದಲ್ಲಿ ಹಾವು, ಮುಂಗುಸಿಯಂತಿದ್ದ ಯೋಗಿ ಅಖಿಲೇಶ್

* ವಿಧಾನಸಭೆಯಲ್ಲಿ ಉಭಯ ನಾಯಕರು ಮುಖಾಮುಖಿ

* ಬೆನ್ನು ಸವರಿ ವಿಪಕ್ಷ ನಾಯಕನ ಜೊತೆ ಸಿಎಂ ಮಾತು

ಲಕ್ನೋ(ಮಾ.28): ಉತ್ತರ ಪ್ರದೇಶ ಚುನಾವಣೆ ಪ್ರಚಾರದಿಂದ ಹಿಡಿದು ಫಲಿತಾಂಶ ಪ್ರಕಟವಾಗುವವರೆಗೆ ರಾಜಕೀಯ ಪಕ್ಷಗಳ ಪರಸ್ಪರ ವಾಗ್ದಾಳಿ ಭಾರೀ ಸದ್ದು ಮಾಡುತ್ತಿದ್ದವು. ಕಂಡ ಕಂಡಲ್ಲಿ ಮಾತುಗಳಿಂದಲೇ ತಿವಿಯುತ್ತಿದ್ದ ರಾಜಕೀಯ ನಾಯಕರ ವರಸೆ ಜನ ಸಾಮಾಣ್ಯರನ್ನೂ ಬೇಸರಗೊಳಿಸಿತ್ತು. ಆದರೀಗ ಇದೇ ರಾಜ್ಯದ ವಿಧಾನಸಭೆ ಅಚ್ಚರಿಯ ಕ್ಷಣವೊಂದಕ್ಕೆ ಸಾಕ್ಷಿಯಾಗಿದೆ. ಹೌದು ಚುನಾವಣಾ ಕಣದಲ್ಲಿ ಹಾವು, ಮುಂಗುಸಿಯಂತಿದ್ದ ಸಿಎಂ ಯೋಗಿ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ನಗುಮೊಗದಿಂದ ಪರಸ್ಪರ ಸ್ವಾಗತಿಸಿ ಮಾತನಾಡಿದ್ದಾರೆ.

ನೂತನವಾಗಿ ಚುನಾಯಿತ ಶಾಸಕರ ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ವಿರೋಧ ಪಕ್ಷದ ನಾಯಕ ಅಖಿಲೇಶ್ ಯಾದವ್ ಪರಸ್ಪರ ಕೈಕುಲುಕಿದ್ದರು. ಇದೇ ಸಂದರ್ಭದಲ್ಲಿ ಸಿಎಂ ಯೋಗಿ ಕೂಡ ಅಖಿಲೇಶ್ ಬೆನ್ನು ಸವರುತ್ತಾ ನಗುಮೊಗದಿಂದ ಮಾತನಾಡಿದ್ದಾರೆ. ಸದ್ಯ ಈ ದೃಶ್ಯಗಳು ವೈರಲ್ ಆಗಿವೆ. 

ವಾಸ್ತವವಾಗಿ, ಸೋಮವಾರ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಹೊಸದಾಗಿ ಚುನಾಯಿತ ಶಾಸಕರ ಪ್ರಮಾಣ ವಚನ ಸ್ವೀಕಾರ ಕಾರ್ಯ ನಡೆಯುತ್ತಿದೆ. ಮೊದಲನೆಯದಾಗಿ ಆಡಳಿತ ಪಕ್ಷದ ಶಾಸಕಾಂಗ ಪಕ್ಷದ ನಾಯಕ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಮಾಣ ವಚನ ಸ್ವೀಕರಿಸಿದದಾರೆ. ಅವರಿಗೆ ಹಂಗಾಮಿ ಸ್ಪೀಕರ್ ರಮಾಪತಿ ಶಾಸ್ತ್ರಿ ಪ್ರಮಾಣ ವಚನ ಬೋಧಿಸಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿದ ಸಿಎಂ ಯೋಗಿ ಕೆಳಗಿಳಿದ ಕೂಡಲೇ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಿದ್ದಾರೆ.

Uttar Pradesh CM Yogi Adityanath meets Leader of Opposition Akhilesh Yadav in the Legislative Assembly during oath-taking of newly-elected legislators pic.twitter.com/7r6fX7ErjX

— ANI UP/Uttarakhand (@ANINewsUP)

ಅಖಿಲೇಶ್ ಯಾದವ್ ಅವರನ್ನು ನೋಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಗುಳ್ನಕ್ಕಿದ್ದಾರೆ. ಅಲ್ಲದೇ ಮರುಕ್ಷಣ ಇಬ್ಬರೂ ನಾಯಕರು ಪರಸ್ಪರ ಕೈಕುಲುಕಿದ್ದಾರೆ. ಈ ವೇಳೆ ಅಖಿಲೇಶ್‌ಗೆ ಅಭಿನಂದನೆ ಸಲ್ಲಿಸಿದ ಸಿಎಂ ಯೋಗಿ ಅವರ ಬೆನ್ನು ಸವರಿದ್ದಾರೆ. ಸ್ವಲ್ಪ ಸಮಯದ ನಂತರ ಅಖಿಲೇಶ್ ಅವರು ವಿಧಾನಸಭೆಯೊಳಗೆ ಎಲ್ಲಾ ಶಾಸಕರಿಗೆ ಶುಭಾಶಯ ಕೋರಿದರು. ಈ ವೇಳೆ ಅಖಿಲೇಶ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೇಶವ್ ಪ್ರಸಾದ್ ಮೌರ್ಯ ಅವರಿಗೆ ಹಸ್ತಲಾಘವ ಮಾಡಿದ್ದಾರೆ. 

ಮತ್ತೊಂದೆಡೆ, ಸಿಎಂ ನಿರ್ಗಮನದ ನಂತರ ಅಖಿಲೇಶ್ ಇತರ ಶಾಸಕರನ್ನು ಭೇಟಿ ಮಾಡಿದರು. ಅಖಿಲೇಶ್ ಯಾದವ್ ಅವರ ಚೇಂಬರ್ ಅನ್ನು ಇಂದೇ ಸಿದ್ಧಪಡಿಸಲಾಗಿದೆ ಎಂಬುವುದು ಉಲ್ಲೇಖನೀಯ. ಇನ್ನು ವಿಧಾನಪರಿಷತ್ ಅಧ್ಯಕ್ಷ ಕುನ್ವರ್ ಮನ್ವೇಂದ್ರ ಪ್ರತಾಪ್ ಸಿಂಗ್ ಅವರ ಕೊಠಡಿಯ ಎದುರೇ ಅಖಿಲೆಶ್ ಯಾದವ್ ಕೊಠಡಿಯನ್ನು ನಿಗದಿಪಡಿಸಲಾಗಿದೆ. ಇಂದು ಬೆಳಗ್ಗೆಯೇ ಅವರ ಕೊಠಡಿಯಲ್ಲಿ ಕುರ್ಚಿಗಳನ್ನು ಅಳವಡಿಸಲಾಗಿತ್ತು.

click me!