
ನವದೆಹಲಿ (ಜುಲೈ.10): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ್ದು, ರಾಜ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಅಗತ್ಯವಿರುವ ರಕ್ಷಣಾ ಇಲಾಖೆಗೆ ಸೇರಿದ ಭೂಮಿ ಹಸ್ತಾಂತರಕ್ಕೆ ಮನವಿ ಮಾಡಿದ್ದಾರೆ.
ಭೇಟಿ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ, ಉತ್ತರ ಪ್ರದೇಶ, ತಮಿಳುನಾಡು ಮಾದರಿಯಲ್ಲಿ ರಾಜ್ಯದಲ್ಲಿಯೂ ಡಿಫೆನ್ಸ್ ಕಾರಿಡಾರ್ ಸ್ಥಾಪನೆ, ಮೈಸೂರು ದಸರಾ ವೇಳೆ ಏರ್‌ಶೋ ಆಯೋಜನೆ ಸೇರಿ ಹಲವು ಯೋಜನೆಗಳ ಜಾರಿಗೆ ಮನವಿ ಮಾಡಿದ್ದೇನೆ. ರಾಜ್ಯದ ಹಲವು ಅಭಿವೃದ್ಧಿ ಯೋಜನೆಗಳ ಜಾರಿಗಾಗಿ ರಕ್ಷಣಾ ಇಲಾಖೆಗೆ ಸೇರಿದ ಭೂಮಿಯ ಅಗತ್ಯವಿದೆ. ಅಗತ್ಯ ಭೂಮಿಯ ಹಸ್ತಾಂತರಕ್ಕೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವರಲ್ಲಿ ಮನವಿ ಮಾಡಿದ್ದೇನೆ. ಅವರು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು. ಈ ವೇಳೆ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಕೂಡ ಉಪಸ್ಥಿತರಿದ್ದರು.
ಕೇಂದ್ರಕ್ಕೆ ಸಿಎಂ ಬೇಡಿಕೆ ಪಟ್ಟಿ:
1. ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಏರ್ ಶೋ ಆಯೋಜಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದಕ್ಕೆ ಅನುಮತಿ ನೀಡಿ.
2. ಉತ್ತರ ಪ್ರದೇಶ, ತಮಿಳುನಾಡಿನಲ್ಲಿ ಡಿಫೆನ್ಸ್ ಕಾರಿಡಾರ್ ಇದೆ. ಅದೇ ರೀತಿ ಕರ್ನಾಟಕದಲ್ಲೂ ಡಿಫೆನ್ಸ್ ಕಾರಿಡಾರ್ ಸ್ಥಾಪಿಸಿ.
3. ಬೈಯ್ಯಪ್ಪನಹಳ್ಳಿ ರೈಲ್ವೆ ಜಂಕ್ಷನ್ ಸಂಪರ್ಕಿಸುವ ರೋಟರಿ ಪ್ಲೈ ಓವರ್ ಯೋಜನೆಗೆ ರಕ್ಷಣಾ ಇಲಾಖೆಯ ಭೂಮಿ ಬೇಕಿದ್ದು, ಭೂಮಿ ಹಸ್ತಾಂತರಕ್ಕೆ ಅನುಮತಿ ನೀಡಿ.
4. ಈಜಿಪುರ ಜಂಕ್ಷನ್ ಮೂಲಕ ಕೆಳ ಅಗ್ರಹಾರ ರಸ್ತೆ (ಸರ್ಕಾರಿ ಆಸ್ಪತ್ರೆ ಸಮೀಪ) ಮತ್ತು ಸರ್ಜಾಪುರ ರಸ್ತೆ ಸಂಪರ್ಕಿಸುವ ರಸ್ತೆಯ 24 ಮೀಟರ್ ಅಗಲೀಕರಣಕ್ಕೆ ಯೋಜಿಸಿದ್ದು, ಇದಕ್ಕೆ ರಕ್ಷಣಾ ಇಲಾಖೆಯ ಭೂಮಿ ಬೇಕಿದೆ. ಭೂಮಿ ಹಸ್ತಾಂತರಕ್ಕೆ ಅನುಮತಿ ನೀಡಿ.
5. ಹೆಬ್ಬಾಳದ ಎಸ್ಟೀಮ್ ಮಾಲ್‌ನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ ಸುರಂಗ ಮಾರ್ಗ ನಿರ್ಮಿಸುವ ಪ್ರಸ್ತಾವನೆಯಿದೆ. ಇದಕ್ಕೆ ಹೆಬ್ಬಾಳದ ಬಳಿ ರಕ್ಷಣಾ ಇಲಾಖೆಗೆ ಸೇರಿದ 2.039ಎಕರೆ ಭೂಮಿ ಬೇಕಿದ್ದು, (ಹೆಬ್ಬಾಳ ಡಿಫೆನ್ಸ್ ಡೈರಿ ಫಾರ್ರ್ಮಗೆ ಸೇರಿದ ಭೂಮಿ) ಇದರ ಹಸ್ತಾಂತರಕ್ಕೆ ಅನುಮತಿ ನೀಡಿ. ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಗಮ ಸಂಚಾರ ಕಲ್ಪಿಸಲು ಇದು ಸಹಕಾರಿ.
6. ಏರ್‌ಪೋರ್ಟ್ ರಸ್ತೆ (ಬಳ್ಳಾರಿ ರಸ್ತೆ) ಯಿಂದ ಸರೋವರ ಲೇಔಟ್‌ಗೆ ಲಿಂಕ್ ರೋಡ್ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿ ಹಸ್ತಾಂತರಕ್ಕೆ ಅನುಮತಿ ಕೊಡಿ.
7. ಗೊರಗುಂಟೆಪಾಳ್ಯ ಬಳಿ ಮೆಟ್ರೋ ಫೇಸ್-3ಗಾಗಿ ಡಬಲ್ ಡೆಕ್ಕರ್ ಪ್ಲೈ ಓವರ್ ನಿರ್ಮಾಣಕ್ಕೆ ಅಗತ್ಯವಿರುವ (0.3 ಎಕ್ರೆ) ಭೂಮಿ ಹಸ್ತಾಂತರಕ್ಕೆ ಅನುಮತಿ ನೀಡಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ