Train Ticket Price Hike: ಹಾಲಿನ ದರ ಹೆಚ್ಚಾದಾಗ ಕೂಗಾಡಿದ್ರಿ, ಈಗ ಬಿಜೆಪಿಯವ್ರು ಬಿಲ ಸೇರ್ಕೊಂಡ್ರಾ? ಸಿದ್ದರಾಮಯ್ಯ

Published : Jul 01, 2025, 11:08 PM IST
train ticket price hike

ಸಾರಾಂಶ

ಭಾರತೀಯ ರೈಲ್ವೇ ಸಚಿವಾಲಯವು ರೈಲ್ವೆ ಟಿಕೆಟ್‌ ದರವನ್ನು ಏರಿಸಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್‌ ಮಾಡಿ ಬೇಸರ ಹೊರಹಾಕಿದ್ದಾರೆ. 

ಜುಲೈ 1, 2025 ರಿಂದ ಭಾರತೀಯ ರೈಲ್ವೇ ಸಚಿವಾಲಯವು ಎಸಿ ಮತ್ತು ನಾನ್-ಎಸಿ ವರ್ಗಗಳ ದರ ಹೆಚ್ಚಳ ಮಾಡಲಿದೆ. ಈ ಬಗ್ಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ಸೋಶಿಯಲ್‌ ಮೀಡಿಯಾದಲ್ಲಿ ಬೇಸರ ಹೊರಹಾಕಿದ್ದಾರೆ.

ಸಿದ್ದರಾಮಯ್ಯ ಏನಂದ್ರು?

ಸಾಮಾನ್ಯ ಜನರ ಸಾರಿಗೆಯಾಗಿಯೇ ಜನಪ್ರಿಯವಾಗಿರುವ ರೈಲುಗಳ ಪ್ರಯಾಣ ದರವನ್ನು ಹೆಚ್ಚಿಸುವ ಮೂಲಕ ನರೇಂದ್ರ ಅವರ ನೇತೃತ್ವದ ಕೇಂದ್ರ ಸರ್ಕಾರ ದೇಶದ ಕೋಟ್ಯಂತರ ಮಧ್ಯಮ ಮತ್ತು ಬಡವರ್ಗದ ಬದುಕಿನ ಮೇಲೆ ಬರೆ ಎಳೆದಿದೆ. ಈ ಬೆಲೆ ಏರಿಕೆಯನ್ನು ತಕ್ಷಣ ಹಿಂದೆಗೆದುಕೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸುತ್ತೇನೆ.

ಏರುತ್ತಲೇ ಇರುವ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ದರಗಳ ಭಾರದಿಂದ ಜನರು ಈಗಾಗಲೇ ತತ್ತರಿಸಿಹೋಗಿದ್ದಾರೆ. ಹಾಲು, ಮೊಸರು, ಚಹಾ ಪುಡಿಯಿಂದ ಹಿಡಿದು ಪಾಪ್ ಕಾರ್ನ್ ವರೆಗೆ ಎಲ್ಲದರ ಮೇಲೆ ಜಿಎಸ್‌ಟಿ ಹೇರಿಕೆಯಿಂದಾಗಿ ಪ್ರತಿಯೊಂದು ಕುಟುಂಬದ ಬಜೆಟ್ ಏರುಪೇರಾಗಿದೆ. ಇದೇ ವೇಳೆ ರೈಲು ಪ್ರಯಾಣದ ದರ ಹೆಚ್ಚಿಸುವ ಮೂಲಕ ನರೇಂದ್ರ ಮೋದಿ ಸರ್ಕಾರ ಜನರ ಜೇಬು ಖಾಲಿ ಮಾಡಲು ಹೊರಟಿದೆ.

ನಮ್ಮ ಸರ್ಕಾರ ರೈತರಿಗೆ ನೆರವಾಗುವ ಉದ್ದೇಶದಿಂದ ಹಾಲಿನ ದರ ಏರಿಕೆ ಮಾಡಿದಾಗ ಜನವಿರೋಧಿ ಎಂದು ಬೊಬ್ಬಿಟ್ಟಿದ್ದ ಬಿಜೆಪಿ ನಾಯಕರು ತಮ್ಮದೇ ಸರ್ಕಾರ ರೈಲು ಪ್ರಯಾಣ ಹೆಚ್ಚಿಸಿದಾಗ ಸದ್ದಿಲ್ಲದೆ ಬಿಲ ಸೇರಿಕೊಂಡಿದ್ದಾರೆ. ಬೆಂಗಳೂರು ಮೆಟ್ರೊ ರೈಲಿನ ಪ್ರಯಾಣ ದರ ಏರಿಕೆಯಾದಾಗ ಬೀದಿಗಿಳಿದಿದ್ದ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಪ್ರತಿನಿಧಿಗಳನ್ನು ಹೊಂದಿರುವ ದರ ನಿರ್ಣಯ ಸಮಿತಿಯೇ ಆ ಏರಿಕೆಯ ನಿರ್ಧಾರ ಕೈಗೊಂಡಿರುವುದನ್ನು ಬಚ್ಚಿಟ್ಟು ನಮ್ಮ ಸರ್ಕಾರದ ವಿರುದ್ದ ಜನರನ್ನು ಎತ್ತಿಕಟ್ಟುವ ವಿಫಲ ಪ್ರಯತ್ನ ನಡೆಸಿದ್ದರು.

ರೈಲ್ವೆ ಇಲಾಖೆ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿದ್ದು, ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ಪ್ರಯಾಣಿಕರು ಸಂಚರಿಸುವ ಈ ಸಾರಿಗೆ ವ್ಯವಸ್ಥೆ ಈಗಲೂ ಲಾಭದಾಯಕವಾಗಿದೆ. ರೈಲ್ವೆ ಇಲಾಖೆಗೆ ಸಂಬಂಧಿಸಿದ ಪ್ರತ್ಯೇಕ ಬಜೆಟ್ ಮಂಡನೆಯ ಪದ್ಧತಿಯನ್ನು ನರೇಂದ್ರ ಮೋದಿ ಸರ್ಕಾರ ಕೈಬಿಟ್ಟಿರುವ ಕಾರಣ ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆಯೇ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ರೈಲುಗಳ ಪ್ರಯಾಣ ದರವನ್ನು ಹೆಚ್ಚಿಸುವ ಮೊದಲು ಇಲಾಖೆಯ ಕಾರ್ಯನಿರ್ವಹಣೆಯ ಬಗ್ಗೆ ಶ್ವೇತಪತ್ರವನ್ನು ದೇಶದ ಜನತೆಯ ಮುಂದಿಡಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸುತ್ತೇನೆ.

ಮೇಲ್, ಎಕ್ಸ್‌ಪ್ರೆಸ್, ಸಾಮಾನ್ಯ ರೈಲುಗಳ ಎಸಿ, ನಾನ್-ಎಸಿ ವರ್ಗಗಳಿಗೆ ದರ ಹೆಚ್ಚಳ ಮಾಡಿದೆ. ಇದು ಜನವರಿ 2020 ರ ನಂತರ 5 ವರ್ಷಗಳಲ್ಲಿ ಮೊದಲ ದರ ಪರಿಷ್ಕರಣೆಯಾಗಿದೆ. ಉಪನಗರ ರೈಲು ದರಗಳು, ಮಾಸಿಕ ಸೀಸನ್ ಟಿಕೆಟ್ ದರಗಳು ಮಾತ್ರ ಯಥಾಸ್ಥಿತಿಯಲ್ಲಿವೆ.

ದರ ಹೆಚ್ಚಳದ ವಿವರಗಳು

ಎಸಿ ವರ್ಗಗಳು (ಫಸ್ಟ್ ಕ್ಲಾಸ್, 2-ಟಿಯರ್, 3-ಟಿಯರ್, ಮತ್ತು ಚೇರ್ ಕಾರ್) ಕಿಲೋಮೀಟರ್‌ಗೆ 2 ಪೈಸೆ ದರ ಹೆಚ್ಚಳ. 1,000 ಕಿಮೀ ಪ್ರಯಾಣಕ್ಕೆ ಪ್ರಯಾಣಿಕರು ರೂ. 20 ಹೆಚ್ಚುವರಿಯಾಗಿ ಪಾವತಿಸಬೇಕು.

ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳ ನಾನ್-ಎಸಿ ವರ್ಗಗಳು (ಸ್ಲೀಪರ್, ಸೆಕೆಂಡ್ ಕ್ಲಾಸ್ ಜನರಲ್, ಮತ್ತು ಫಸ್ಟ್ ಕ್ಲಾಸ್) ಕಿಲೋಮೀಟರ್‌ಗೆ 1 ಪೈಸೆ ದರ ಹೆಚ್ಚಳ, 1,000 ಕಿಮೀ ಪ್ರಯಾಣಕ್ಕೆ ರೂ. 10 ಹೆಚ್ಚುವರಿ ಕೊಡಬೇಕು.

ಸಾಮಾನ್ಯ ರೈಲುಗಳ ಸೆಕೆಂಡ್ ಕ್ಲಾಸ್/ಜನರಲ್ ಕ್ಲಾಸ್ ‌

- 500 ಕಿಮೀವರೆಗಿನ ದೂರಕ್ಕೆ ಯಾವುದೇ ದರ ಹೆಚ್ಚಳವಿಲ್ಲ.

- 501 ಕಿಮೀ ರಿಂದ 1,500 ಕಿಮೀ ದೂರಕ್ಕೆ ರೂ. 5 ಹೆಚ್ಚಳ.

-1,501 ಕಿಮೀ ರಿಂದ 2,500 ಕಿಮೀ ದೂರಕ್ಕೆ ರೂ. 10 ಹೆಚ್ಚಳ.

- 2,501 ಕಿಮೀ ರಿಂದ 3,000 ಕಿಮೀ ದೂರಕ್ಕೆ ರೂ. 15 ಹೆಚ್ಚಳ.

ರಿಸರ್ವೇಶನ್ ಶುಲ್ಕ ಮತ್ತು ಸೂಪರ್‌ಫಾಸ್ಟ್ ಸರ್‌ಚಾರ್ಜ್‌ನಂತಹ ಹೆಚ್ಚುವರಿ ಶುಲ್ಕಗಳು ಯಥಾಸ್ಥಿತಿಯಲ್ಲಿವೆ.

ಪರಿಣಾಮ ಏನಾಗುವುದು?

ಜುಲೈ 1 ರಂದು/ ನಂತರದ ಪ್ರಯಾಣಕ್ಕಾಗಿ ಹಳೆಯ ದರದಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಿದ ಪ್ರಯಾಣಿಕರಿಗೆ ಈ ದರ ಹೆಚ್ಚಳದ ಪರಿಣಾಮವಿರುವುದಿಲ್ಲ. ಆದರೆ, ಜುಲೈ 1, 2025 ರಂದು ಅಥವಾ ನಂತರ ಟಿಕೆಟ್ ಚೆಕಿಂಗ್ ಸಿಬ್ಬಂದಿ ಅಥವಾ ಸ್ಟೇಷನ್‌ಗಳಲ್ಲಿ ಜಾರಿಗೊಳಿಸಲಾದ ಟಿಕೆಟ್‌ಗಳಿಗೆ ಪರಿಷ್ಕೃತ ದರವನ್ನು ವಿಧಿಸಲಾಗುತ್ತದೆ.

ಕೊನೆಯ ದರ ಹೆಚ್ಚಳವು ಜನವರಿ 2020 ರಲ್ಲಿ ಆಗಿತ್ತು. ಆಗ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳ ನಾನ್-ಎಸಿ ವರ್ಗಗಳ ದರವನ್ನು ಕಿಲೋಮೀಟರ್‌ಗೆ 2 ಪೈಸೆ, ಎಸಿ ವರ್ಗಗಳ ದರವನ್ನು 4 ಪೈಸೆ, ಮತ್ತು ಸಾಮಾನ್ಯ ನಾನ್-ಎಸಿ ವರ್ಗಗಳ ದರವನ್ನು 1 ಪೈಸೆಯಷ್ಟು ಹೆಚ್ಚಿಸಲಾಗಿತ್ತು. ಆ ಬಳಿಕ ಈಗ ಹೆಚ್ಚು ಮಾಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ
ಸೆಂಟ್ರಲ್ ಮೆಟ್ರೋ ಮತ್ತು ಹೈಕೋರ್ಟ್ ನಿಲ್ದಾಣಗಳ ನಡುವೆ ನೀಲಿ ಮಾರ್ಗದ ಸುರಂಗದಲ್ಲಿ ಹಠಾತ್ ನಿಂತ ಮೆಟ್ರೋ ರೈಲು