ಪತಿ ಸಮ್ಮುಖದಲ್ಲೇ ಕಣ್ಮುಚ್ಚಿದ ಅನಿತಾ : ಜೆಟ್ ಏರ್‌ವೇಸ್‌ನ ನರೇಶ್ ಗೋಯಲ್ ಪತ್ನಿ ಕ್ಯಾನ್ಸರ್‌ಗೆ ಬಲಿ

By Anusha Kb  |  First Published May 16, 2024, 10:43 AM IST

ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಪತ್ನಿ ಅನಿತಾ ಗೋಯಲ್ ಕ್ಯಾನ್ಸರ್‌ನಿಂದ ಇಂದು ಮುಂಜಾನೆ ಸಾವನ್ನಪ್ಪಿದ್ದಾರೆ. ಹಲವು ಸಮಯದಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ಅವರು  ಕ್ಯಾನ್ಸರ್‌ನ ಕೊನೆಹಂತದಲ್ಲಿದ್ದರು.


ಮುಂಬೈ: ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಪತ್ನಿ ಅನಿತಾ ಗೋಯಲ್ ಕ್ಯಾನ್ಸರ್‌ನಿಂದ ಇಂದು ಮುಂಜಾನೆ ಸಾವನ್ನಪ್ಪಿದ್ದಾರೆ. ಹಲವು ಸಮಯದಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ಅವರು  ಕ್ಯಾನ್ಸರ್‌ನ ಕೊನೆಹಂತದಲ್ಲಿದ್ದರು.  ಇವರು ಪತಿ ನರೇಶ್ ಗೋಯಲ್ ಮಕ್ಕಳಾದ ನಮೃತಾ ಹಾಗೂ ನಿವಾನ್ ಗೋಯಲ್ ಅವರನ್ನು ಅಗಲಿದ್ದಾರೆ.  ಮುಂಬೈನ ಮನೆಯಲ್ಲಿ ಇಂದು ಮುಂಜಾನೆ 3.30ರ ಸುಮಾರಿಗೆ ಅವರು ಇಹಲೋಕ ತ್ಯಜಿಸಿದ್ದು, ಈ ಸಂದರ್ಭದಲ್ಲಿ ಪತಿ ನರೇಶ್ ಗೋಯಲ್ ಜೊತೆಗಿದ್ದರು ಎಂದು ತಿಳಿದು ಬಂದಿದೆ. ಕಾರ್ಯಕಾರಿ ಉಪಾಧ್ಯಕ್ಷರಾಗಿದ್ದ ಅನಿತಾ ಜೆಟ್ ಏರ್‌ವೇಸ್‌ನ ಕಾರ್ಯಾಚರಣೆಯ ಭಾಗವಾಗಿದ್ದರು.  ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿದ್ದ ಅವರನ್ನು ಮನೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ಇಂದು ಮುಂಜಾನೆ ಅವರು ಉಸಿರು ಚೆಲ್ಲಿದ್ದಾರೆ. 

ಇತ್ತ ನರೇಶ್ ಗೋಯಲ್ ಅವರು ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ 1 ರಂದು ಅವರನ್ನು ಜಾರಿ ನಿರ್ದೇಶನಾಲಯವೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿತ್ತು. ಆದರೆ ಪತ್ನಿಯೂ ಕಾನ್ಸರ್‌ನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಮಾನವೀಯತೆಯ ನೆಲೆಯಲ್ಲಿ ಹಾಗೂ ವೈದ್ಯಕೀಯ ಕಾರಣದಿಂದ ಮಧ್ಯಂತರ ಜಾಮೀನು ನೀಡುವಂತೆ ಅವರು ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 

Tap to resize

Latest Videos

ಜೆಟ್ ಏರ್’ವೇಸ್ ಮಾಲೀಕ ನರೇಶ್ ಗೋಯಲ್ ಮನೆ ಮೇಲೆ ಇಡಿ ದಾಳಿ!

ಅನಿತಾ ಗೋಯಲ್ ತಮ್ಮ ಜೀವನದ ಕೊನೆ ಹಂತದಲ್ಲಿದ್ದು, ಕೆಲ ದಿನಗಳು ಮಾತ್ರ ಅವರು ಬದುಕಿರಲಿದ್ದಾರೆ. ಈ ಕಷ್ಟದ ಸಮಯದಲ್ಲಿ ಪತಿಯಾಗಿ ನರೇಶ್ ಗೋಯಲ್ ಆಕೆಯ ಜೊತೆಗಿರಲು ಬಯಸುತ್ತಾರೆ ಹೀಗಾಗಿ ಅವರಿಗೆ ಜಾಮೀನು ನೀಡುವಂತೆ ನರೇಶ್ ಗೋಯಲ್ ಪರ ವಕೀಲರು ಹೈಕೋರ್ಟ್‌ಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು.

ಪ್ರೀಮಿಯಂ ಏರ್‌ಲೈನ್ಸ್‌ನ ದಿಢೀರ್‌ ಅವಸಾನ

ಮುಂಬೈ ಮೂಲದ ಜೆಟ್‌ ಏರ್‌ವೇಸ್‌ ಭಾರತದ ಬಾನಯಾನದಲ್ಲಿ ಇಂಡಿಗೋ ನಂತರ 2ನೇ ಸ್ಥಾನದಲ್ಲಿತ್ತು. ಭಾರತದ ಒಟ್ಟು ವಿಮಾನ ಪ್ರಯಾಣಿಕರಲ್ಲಿ ಶೇ.17.8ರಷ್ಟುಮಂದಿ ಜೆಟ್‌ ಏರ್‌ವೇಸ್‌ನಲ್ಲಿ ಪ್ರಯಾಣಿಸುತ್ತಿದ್ದರು. 1993ರಲ್ಲಿ ತನ್ನ ಸೇವೆ ಆರಂಭಿಸಿದ ಜೆಟ್‌ ಏರ್‌ವೇಸ್‌, 2004ರಲ್ಲಿ ಅಂತಾರಾಷ್ಟ್ರೀಯ ಸೇವೆಯನ್ನೂ ಆರಂಭಿಸಿತು. 2007 ಜೆಟ್‌ ಏರ್‌ವೇಸ್‌ನ ಉಚ್ಛ್ರಾಯ ದಿನಗಳು. ಏರ್‌ ಸಹಾರಾವನ್ನು ಖರೀದಿಸಿದ ಕಂಪನಿ ತಾನು ಆರ್ಥಿಕವಾಗಿ ಬಲಿಷ್ಠ ಎಂಬುದನ್ನು ನಿರೂಪಿಸಿತು. 2012ರವರೆಗೂ ಉತ್ತಮ ಸ್ಥಿತಿಯಲ್ಲಿದ್ದ ಕಂಪನಿ, ತದನಂತರ ಆರ್ಥಿಕ ಹೊಡೆದ ಅನುಭವಿಸಲು ಆರಂಭಿಸಿತ್ತು. 2019ರ ಫೆಬ್ರವರಿಯಲ್ಲಿ ಕಂಪನಿಗೆ ನಿಜವಾದ ಬಿಕ್ಕಟ್ಟು ಆರಂಭವಾಯಿತು. ಮಾಚ್‌ರ್‍ 25ರಂದು ಕಂಪನಿಯ ಅಧ್ಯಕ್ಷ ನರೇಶ್‌ ಗೋಯಲ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. 2019ರ ಏಪ್ರಿಲ್‌ 12ರಂದು ಜೆಟ್‌ಏರ್‌ವೇಸ್‌ನ ಅಂತಾರಾಷ್ಟ್ರೀಯ ಸೇವೆ ಸ್ಥಗಿತಗೊಂಡಿತು. 400 ಕೋಟಿ ಹಣ ಹೊಂದಿಸಲಾಗದ ಕಂಪನಿ 2019ರ ಏಪ್ರಿಲ್‌ 17ರಂದು ತನ್ನ ಎಲ್ಲ ವಿಮಾನಗಳ ಸೇವೆಯನ್ನು ನಿಲ್ಲಿಸಿತು. ಕಂಪನಿ ಸದ್ಯ 11000 ಕೋಟಿ ಗೂ ಅಧಿಕ ಸಾಲದಲ್ಲಿದೆ. 

2019ರಲ್ಲಿ ಸಾಲದ ಸುಳಿಗೆ ಸಿಲುಕಿದ ನಂತರ ವಿದೇಶಕ್ಕೆ ತೆರಳಲು ಮುಂದಾದ ನರೇಶ್ ಗೋಯಲ್ ಹಾಗೂ ಪತ್ನಿ ಅನಿತಾ ಗೋಯಲ್ ಅವರನ್ನು ವಲಸೆ ವಿಭಾಗದ ಅಧಿಕಾರಿಗಳು ವಿಮಾನದಿಂದ ಕೆಳಗೆ ಇಳಿಸಿದ್ದ ಘಟನೆ ನಡೆದಿತ್ತು.ಬ್ಯಾಂಕ್‌ಗಳಿಗೆ ಜೆಟ್‌ ಏರ್‌ವೇಸ್‌ ಸಂಸ್ಥೆ ಸಾವಿರಾರು ಕೋಟಿ ಸಾಲ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ, ಗೋಯಲ್‌ ವಿರುದ್ಧ ಲುಕೌಟ್‌ ನೋಟಿಸ್‌ ಜಾರಿಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವಾಲಯ ಹೇಳಿತ್ತು.

ವಿದೇಶಕ್ಕೆ ಹೋಗಬೇಕಿದ್ರೆ 18000 ಕೋಟಿ ರು. ಠೇವಣಿ ಇಡಿ: ನರೇಶ್‌ಗೆ ಸೂಚನೆ 

ಅಂದು ಏನಾಯ್ತು?:

ನರೇಶ್‌ ಗೋಯಲ್‌ ತಮ್ಮ ಪತ್ನಿಯೊಡಗೂಡಿ ಲಂಡನ್‌ಗೆ ತೆರಳಲು ಎಮಿರೇಟ್ಸ್‌ ವಿಮಾನ ಏರಿದ್ದರು. ಮಧ್ಯಾಹ್ನ 3 ಗಂಟೆ ವೇಳೆಗೆ ವಿಮಾನ ಇನ್ನೇನು ಹೊರಡುಬೇಕು ಎನ್ನುವ ಹಂತದಲ್ಲಿ, ಲುಕೌಟ್‌ ನೋಟಿಸ್‌ ಪಟ್ಟಿಯಲ್ಲಿ ನರೇಶ್‌ ಹೆಸರು ಪತ್ತೆ ಮಾಡಿದ ವಲಸೆ ವಿಭಾಗದ ಅಧಿಕಾರಿಗಳು, ವಿಮಾನ ಹಾರಾಟಕ್ಕೆ ಬ್ರೇಕ್‌ ಹಾಕಿದ್ದರು. ಹೊರಡಲು ಸಿದ್ಧವಾಗಿದ್ದ ವಿಮಾನವನ್ನು ಮರಳಿ ಬದಿಗೆ ತಂದು ನಿಲ್ಲಿಸಿ ಪತಿ, ಪತ್ನಿಯನ್ನು ಕೆಳಗೆ ಇಳಿಸಿದ್ದರು.

ಈ ಹಿಂದೆ ಉದ್ಯಮಿಗಳಾದ ವಿಜಯ್‌ ಮಲ್ಯ, ನೀರವ್‌ ಮೋದಿ ಸೇರಿದಂತೆ ಹಲವು ಸಾವಿರಾರು ಕೋಟಿ ರು. ಸಾಲ ಮಾಡಿ ವಿದೇಶಕ್ಕೆ ಪರಾರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಬ್ಯಾಂಕ್‌ ಸಾಲ ಉಳಿಸಿಕೊಂಡವರ ವಿದೇಶ ಪ್ರಯಾಣದ ಮೇಲೆ ತೀವ್ರ ನಿಗಾ ಇಡಲಾಗಿದೆ.

click me!