ಶೀಘ್ರವೇ ತಿರುಪತಿ ದೇಗುಲ ಶುದ್ಧೀಕರಣ: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು

By Kannadaprabha News  |  First Published Sep 22, 2024, 4:34 AM IST

ಈಗ ಆಗಿರುವ ಅಪಚಾರವನ್ನು ಹೇಗೆ ಸರಿಪಡಿಸಬೇಕು ಎಂಬ ಬಗ್ಗೆ ನಾವು ಮಠಾಧೀಶರು, ಅರ್ಚಕರು ಮತ್ತು ಇತರ ಹಿಂದೂ ಧರ್ಮದ ಉನ್ನತ ಪಂಡಿತರೊಂದಿಗೆ ಸಮಾಲೋಚನೆ ಮಾಡುತ್ತೇವೆ. ಸಂಪ್ರೋಕ್ಷಣೆಯನ್ನು (ಶುದ್ಧೀಕರಣ) ಹೇಗೆ ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಸಿ ನಿರ್ಧರಿಸುತ್ತೇವೆ ಎಂದ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು
 


ಅಮರಾವತಿ/ತಿರುಪತಿ(ಸೆ.22): ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಕಲಬೆರಕೆಯಾಗಿ ವಿವಾದ ಸೃಷ್ಟಿಯಾಗಿರುವ ಕಾರಣ, ತಿರುಮಲ ವೆಂಕಟೇಶ್ವರ ದೇಗುಲದ ‘ಶುದ್ಧೀಕರಣ’ ಮಾಡುವುದಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.

ಶನಿವಾರ ವಿವಾದದ ಬಗ್ಗೆ ಅಧಿಕೃತ ಪ್ರಕಟಣೆ ನೀಡಿರುವ ನಾಯ್ಡು, ‘ಈಗ ಆಗಿರುವ ಅಪಚಾರವನ್ನು ಹೇಗೆ ಸರಿಪಡಿಸಬೇಕು ಎಂಬ ಬಗ್ಗೆ ನಾವು ಮಠಾಧೀಶರು, ಅರ್ಚಕರು ಮತ್ತು ಇತರ ಹಿಂದೂ ಧರ್ಮದ ಉನ್ನತ ಪಂಡಿತರೊಂದಿಗೆ ಸಮಾಲೋಚನೆ ಮಾಡುತ್ತೇವೆ. ಸಂಪ್ರೋಕ್ಷಣೆಯನ್ನು (ಶುದ್ಧೀಕರಣ) ಹೇಗೆ ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಸಿ ನಿರ್ಧರಿಸುತ್ತೇವೆ’ ಎಂದಿದ್ದಾರೆ.

Tap to resize

Latest Videos

ತಿರುಪತಿಯ 'ನಾನ್‌ವೆಜ್‌..' ಪ್ರಸಾದ ತಿಂದ ಪಾಪ ಕಾಡ್ತಿದ್ಯಾ? ದೈವಜ್ಞ ಸೋಮಯಾಜಿ ಪರಿಹಾರ ಹೇಳಿದ್ದಾರೆ ನೋಡಿ..

ಇನ್ನು ಲಡ್ಡುವಿನಲ್ಲಿ ಪ್ರಾಣಿಯ ಕೊಬ್ಬು ಬಳಸಿದ ಆರೋಪ ಸುಳ್ಳು ಎಂದ ಹಿಂದಿನ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ‘ಜಗನ್‌ ಅವಧಿಯಲ್ಲಿ ರಾಜ್ಯದ ಅನೇಕ ದೇವಾಲಯಗಳು ಅಪವಿತ್ರ ಆಗಿವೆ ಎಂಬ ದೂರುಗಳು ಬಂದಿದ್ದವು. ಪ್ರತಿ ಧರ್ಮಕ್ಕೂ ಅದರದ್ದೇ ಆದ ಪಾವಿತ್ರ್ಯವಿದೆ. ಅದನ್ನು ನಮ್ಮ ಸರ್ಕಾರ ಕಾಪಾಡಲಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಜಗನ್‌ ಅವಧಿಯಲ್ಲಿ ಕೇವಲ 320 ರು.ಗೆ ಲಡ್ಡುವಿಗೆ ತುಪ್ಪ ಖರೀದಿಸಲಾಗಿದೆ. ಇಷ್ಟು ಕಡಿಮೆ ದರಕ್ಕೆ ಹೇಗೆ ಖರೀದಿ ಸಾಧ್ಯ?’ ಎಂದಿರುವ ನಾಯ್ಡು, ‘ನಾನು ಅಧಿಕಾರಕ್ಕೆ ಬಂದ ಕೂಡಲೇ ತಿರುಮಲ ದೇವಾಲಯದಲ್ಲಿ ‘ಸ್ವಚ್ಛತಾ ಕೆಲಸ’ (ಅಕ್ರಮಗಳಿಗೆ ಬ್ರೇಕ್‌ ಹಾಕುವ ಕೆಲಸ) ಆರಂಭಿಸಿದೆ. ಕೆಲವು ಪೂರೈಕೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಲಡ್ಡು ಗುಣಮಟ್ಟ ಹೆಚ್ಚಿಸುವ ಕ್ರಮ ಆರಂಭಿಸಿದೆ. ಅದರ ಭಾಗವಾಗ ಕರ್ನಾಟಕದ ನಂದಿನಿ ತುಪ್ಪ ಖರೀಸಿದಿದ್ದೇವೆ. ಟಿಟಿಡಿ ಹೊಸ ಸಿಇಒ ಇಂಥ ಅನೇಕ ಕ್ರಮ ಕೈಗೊಂಡರು. ಆದರೆ ಹೆಚ್ಚು ಪ್ರಚಾರ ಪಡೆಯದೇ ನಮ್ಮ ಕೆಲಸ ನಾವು ಮುಂದುವರಿಸಿದ್ದೆವು. ಆದರೆ ಈಗ ಲಡ್ಡು ಅಕ್ರಮದ ಬಗ್ಗೆ ದೇವರೇ ನನ್ನನ್ನು ಮಾತಾಡುವಂತೆ ಮಾಡಿದ’ ಎಂದು ವಿವರಿಸಿದ್ದಾರೆ.

ತಿರುಪತಿ ಲಡ್ಡು ಪ್ರಸಾದಕ್ಕೆ ಪ್ರಾಣಿ ಕೊಬ್ಬು ಬಳಸಿದ ಬಗ್ಗೆ ರಾಹುಲ್ ಗಾಂಧಿ ಯಾಕೆ ಸೈಲೆಂಟ್? ಜಗದೀಶ್ ಶೆಟ್ಟರ್ ಕಿಡಿ

ಇತರೆಡೆ ಲಡ್ಡು ತಯಾರಿಕೆಗೆ ವಿಫಲ ಯತ್ನ:

ಇದೇ ವೇಳೆ, ತಿರುಪತಿ ಲಡ್ಡುವಿನ ಶ್ರೇಷ್ಠತೆಯ ಬಗ್ಗೆ ಮಾತನಾಡಿರುವ ಅವರು, ‘ಲಡ್ಡುವಿಗೆ ಶತಮಾನದ ಇತಿಹಾಸವಿದೆ. ಅನೇಕ ಕಡೆ ಇದೇ ರೀತಿಯ ಲಡ್ಡು ತಯಾರಿಕೆ ಯತ್ನ ನಡೆದವು. ಆದರೆ ಆಗಲಿಲ್ಲ. ಅಯೋಧ್ಯೆಯಲ್ಲಿ ಕೂಡ ತಿರುಮಲದಿಂದಲೇ ಕೆಲಸಗಾರರನ್ನು ಕರೆದುಕೊಂಡು ಹೋಗಿ ಲಡ್ಡು ತಯಾರಿಕೆಗೆ ಯತ್ನಿಸಲಾಯಿತು. ಆದರೆ ಸಾಧ್ಯವಾಗಲಿಲ್ಲ. ಹೀಗೆಂದು ನನಗೆ ಅಯೋಧ್ಯೆಯ ಜನರೇ ಹೇಳಿದ್ದಾರೆ’ ಎಂದು ಹೇಳಿದ್ದಾರೆ.

ತಿರುಪತಿಯಲ್ಲಿ ಕುಂಭಾಭಿಷೇಕ?

ಲಡ್ಡು ಪ್ರಸಾದದ ವಿವಾದದ ಹಿನ್ನೆಲೆಯಲ್ಲಿ ತಿರುಪತಿಯ ತಿಮ್ಮಪ್ಪನ ದೇಗುಲದ ಶುದ್ಧೀಕರಣಕ್ಕೆ ಕುಂಭಾಭಿಷೇಕ ನಡೆಸಲು ತಿರುಮಲ ತಿರುಪತಿ ದೇವಾಲಯ ಸಮಿತಿ (ಟಿಟಿಡಿ) ಸಿದ್ಧತೆ ಆರಂಭಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಕೆಲವು ಮಾಧ್ಯಮ ವರದಿಗಳು ಹೇಳಿವೆ.

click me!