19 ವರ್ಷದ ಯುವಕನನ್ನು ಚಾಕುವಿನಿಂದ ಇರಿದು ಕೊಂದ ಆಘಾತಕಾರಿ ಘಟನೆ ಕೇರಳದಲ್ಲಿ ನಡೆದಿದೆ. ಯುವಕ ಹುಡುಗಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಹುಡುಗಿಯ ತಂದೆ ಈ ಕೃತ್ಯ ಎಸಗಿದ್ದಾನೆ. ಘಟನೆಯ ನಂತರ ಆರೋಪಿ ಪ್ರಸಾದ್ ಪೊಲೀಸರಿಗೆ ಶರಣಾಗಿದ್ದಾನೆ.
ಮಗಳನ್ನು ಪ್ರೀತಿಸುತ್ತಿದ್ದ 19 ವರ್ಷದ ಯುವಕನನ್ನು ಹುಡುಗಿಯ ಅಪ್ಪನೇ ಚಾಕುವಿನಿಂದ ಇರಿದು ಕೊಂದ ಆಘಾತಕಾರಿ ಘಟನೆ ದೇವರನಾಡು ಕೇರಳದಲ್ಲಿ ನಡೆದಿದೆ. ಮೃತ ಯುವಕನನ್ನು ಅರುಣ್ ಕುಮಾರ್ ಎಂದು ಗುರುತಿಸಲಾಗಿದೆ. ಈತ ಕೊಲ್ಲಂ ಜಿಲ್ಲೆಯ ಇರ್ವಿಪುರಂ ನಿವಾಸಿಯಾಗಿದ್ದು, ಗಲ್ಫ್‌ನಲ್ಲಿ ಕೆಲಸದಲ್ಲಿ ಇದ್ದ. ಇತ್ತೀಚೆಗಷ್ಟೇ ಈತ ತನ್ನೂರಿಗೆ ಬಂದಿದ್ದ. ಕೊಲೆ ಮಾಡಿದ ವ್ಯಕ್ತಿಯನ್ನು 46 ವರ್ಷದ ಪ್ರಸಾದ್ ಎಂದು ಗುರುತಿಸಲಾಗಿದೆ. ಮಗಳ ಗೆಳೆಯನ್ನು ಕೊಲೆ ಮಾಡಿದ ಆರೋಪಿ ಪ್ರಸಾದ್ ಬಳಿ ಸಕ್ತಿಕುಲಂಗರ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಈಗ ಪಶ್ಚಿಮ ಕೊಲ್ಲಂನ ಪೊಲೀಸರು ಆತನನ್ನು ಕಸ್ಟಡಿಗೆ ಪಡೆದಿದ್ದಾರೆ.
ಆರೋಪಿ ಪ್ರಸಾದ್‌ನ 17 ವರ್ಷದ ಮಗಳು ಸಂಬಂಧಿಕರೊಬ್ಬರ ಮನೆಯಲ್ಲಿ ವಾಸ ಮಾಡುತ್ತಿದ್ದಳು. ಅರುಣ್ ಹಾಗೂ ಆ ಹುಡುಗಿಯ ಮಧ್ಯೆ ಪ್ರೇಮ ಸಂಬಂಧವಿತ್ತು. ಹಾಗೂ ಆಕೆಯ ಆಹ್ವಾನದ ಹಿನ್ನೆಲೆಯಲ್ಲಿ ಅರುಣ್ ಆಗಾಗ ಹುಡುಗಿ ಇದ್ದ ಮನೆಗೆ ಹೋಗುತ್ತಿದ್ದ. ಈ ವಿಚಾರ ಇತ್ತೀಚೆಗೆ ಹುಡುಗಿಯ ತಂದೆ ಪ್ರಸಾದ್‌ಗೆ ಗೊತ್ತಾಗಿದ್ದು, ಅರುಣ್ ಕುಮಾರ್ ಜೊತೆ ಇದೇ ವಿಚಾರವಾಗಿ ಹುಡುಗಿಯ ಅಪ್ಪ ಪ್ರಸಾದ್ ಜಗಳವಾಡಿದ್ದಾನೆ. ಇದಾದ ನಂತರ ಅವರಿಬ್ಬರು ಇರ್ಟಕಾಡ್‌ನಲ್ಲಿ ಶುಕ್ರವಾರ ರಾತ್ರಿ ಭೇಟಿ ಮಾಡಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ಮತ್ತೆ ಮಾತಿನ ಚಕಮಕಿ ನಡೆದಿದ್ದು, ಈ ಜಗಳ ವಿಕೋಪಕ್ಕೆ ತಿರುಗಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ. ಇರ್ಟಕಾಡ್‌ನಲ್ಲಿರುವ ಆರೋಪಿಯ ಪತ್ನಿಯ ಹಿರಿಯ ಸೋದರಿಯ ಮನೆ ಸಮೀಪ ಈ ಘಟನೆ ನಡೆದಿದೆ.
ಘಟನೆಯ ನಂತರ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 109ರ ಅಡಿ ಬಂಧಿಸಿದ್ದಾರೆ. ಎಫ್‌ಐಆರ್‌ನಲ್ಲಿ ದಾಖಲಾಗಿರುವಂತೆ ಅರುಣ್ ಕುಮಾರ್, ಪ್ರಸಾದ್ ಪುತ್ರಿಯನ್ನು ಮನೆಯಿಂದ ಕರೆದುಕೊಂಡು ಹೋಗಲು ನೋಡಿದಾಗ ಘಟನೆ ನಡೆದಿದೆ. ಅರುಣ್ ಕುಮಾರ್ ವರ್ತನೆಯಿಂದ ಸಿಟ್ಟಿಗೆದ್ದ ಆರೋಪಿ ಪ್ರಸಾದ್ ಚಾಕುವಿನಿಂದ ಅರುಣ್ ಕುಮಾರ್‌ನ ಎದೆಗೆ ಇರಿದಿದ್ದಾನೆ. ನಂತರ ಕೂಡಲೇ ಅರುಣ್‌ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರು ಆತ ಬದುಕುಳಿಯಲಿಲ್ಲ.
ಒಡಿಶಾದ ಖ್ಯಾತ ಗಾಯಕಿ ರುಕ್ಸಾನಾ ಬಾನು ಹಠಾತ್ ಸಾವು: ಪ್ರತಿಸ್ಪರ್ಧಿ ಗಾಯಕಿ ವಿಷವಿಕ್ಕಿದ ಆರೋಪ
ಇತ್ತ ಅರುಣ್ ತಂದೆ ಮಾಧ್ಯಮಗಳ ಮುಂದೆ ದೂರಿರುವ ಪ್ರಕಾರ, ಪ್ರಸಾದ್ ಅರುಣ್‌ನನ್ನು ಕೊಲೆ ಮಾಡುವುದಾಗಿ ಈ ಹಿಂದೆಯೂ ಆಗಾಗ ಹೇಳಿದ್ದ. ಅರುಣ್‌ನ ತಾಯಿ ಹೇಳಿದ್ದಂತೆ ಇಬ್ಬರು ಬೇರೆ ಬೇರೆ ಧರ್ಮಕ್ಕೆ ಸೇರಿರುವುದರಿಂದ ಈ ಕೊಲೆ ನಡೆದಿದೆ, ಅರುಣ್ ಕುಮಾರ್ ಹಾಗೂ ಪ್ರಸಾದ್‌ನ ಪುತ್ರಿ ಪೇಮ ಸಂಬಂಧದಲ್ಲಿದ್ದರು. ಪ್ರಸಾದ್ ಪುತ್ರಿ 8 ತರಗತಿಯಲ್ಲಿರುವಾಗಲೇ ಇಬ್ಬರ ಮಧ್ಯೆ ಪ್ರೀತಿಯಾಗಿತ್ತು. ಆರಂಭದಲ್ಲಿ ಮಕ್ಕಳ ಪ್ರೇಮಕ್ಕೆ ಪ್ರಸಾದ್ ಒಪ್ಪಿಗೆ ಇತ್ತು. ಆದರೆ ನಂತರದಲ್ಲಿ ಆತ ನಾವು ಬೇರೆ ಬೇರೆ ಧರ್ಮಕ್ಕೆ ಸೇರಿದವರು ಎಂದು ಹೇಳಿ ಪ್ರೇಮಕ್ಕೆ ವಿರೋಧ ವ್ಯಕ್ತಪಡಿಸಿದ್ದ. ಪ್ರಸಾದ್ ಹಿಂದೂ ಧರ್ಮವನ್ನು ನಂಬುತ್ತಿದ್ದರೆ ಅರುಣ್ ಕುಮಾರ್ ಕುಟುಂಬ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿತ್ತು. ಆದರೆ ಕೊಲ್ಲಂ ಪೊಲೀಸರು ಮಾತ್ರ ಈ ಆರೋಪವನ್ನು ನಿರಾಕರಿಸಿದ್ದಾರೆ. ಧರ್ಮದ ಕಾರಣಕ್ಕೆ ಕೊಲೆ ನಡೆದಿರುವುದಕ್ಕೆ ಯಾವುದೇ ಸಾಕ್ಷ್ಯವಿಲ್ಲ ಎಂದು ಹೇಳಿದ್ದಾರೆ.
ಲೈಂಗಿಕ ಕಾರ್ಯಕರ್ತೆಯ ಹತ್ಯೆ: ಶವ ಪೀಸ್ ಪೀಸ್ ಮಾಡಿ ಟ್ರಾಲಿಗೆ ತುಂಬಿ ಎಸೆದ ಪಾಪಿ