
ನವದೆಹಲಿ (ಜು.27): 'ಕಾಕ್ರೋಚ್ ಜನತಾ ಪಾರ್ಟಿ' (CJP) ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಸುತ್ತಿದ್ದ 37 ದಿನಗಳ ಸುದೀರ್ಘ ಪ್ರತಿಭಟನೆಯನ್ನು ಹಿಂಪಡೆದ ಬೆನ್ನಲ್ಲೇ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಪಾರ್ಟಿ ಮಾಡಿ, ನೃತ್ಯದ ಮೂಲಕ ಸಂಭ್ರಮಿಸಿದ ಯುವ ನಾಯಕರ ವಿಡಿಯೋಗಳು ತೀವ್ರ ಟೀಕೆಗೆ ಹಾಗೂ ಚರ್ಚೆಗೆ ಗ್ರಾಸವಾಗಿವೆ. ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿರುವ ಈ ವಿಡಿಯೋಗಳಲ್ಲಿ CJP ವಕ್ತಾರ ಸೌರವ್ ದಾಸ್, ಅಶುತೋಷ್ ರಾಂಕಾ ಸೇರಿದಂತೆ ಇತರೆ ಸದಸ್ಯರು ಪ್ರತಿಭಟನೆ ಮುಕ್ತಾಯಗೊಂಡ ನಂತರ ಹೋಟೆಲ್ ಒಂದರಲ್ಲಿ ಮ್ಯೂಸಿಕ್ ಹಚ್ಚಿ ಸಂಭ್ರಮದಿಂದ ಕುಣಿದು ಕುಪ್ಪಳಿಸುತ್ತಿರುವುದು ಕಂಡುಬಂದಿದೆ. ಈ ವಿಡಿಯೋದ ಮೇಲೆ "ರೆಸಿಗ್ನೇಶನ್ ಪಾರ್ಟಿ" (ರಾಜೀನಾಮೆ ಸಂಭ್ರಮಾಚರಣೆ) ಎಂದು ಬರೆಯಲಾಗಿತ್ತು.
ಬಿಜೆಪಿ ರಾಜ್ಯಸಭಾ ಸದಸ್ಯ ಹಾಗೂ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ಈ ಸಂಭ್ರಮಾಚರಣೆಯ ಸಮಯವನ್ನು ಖಂಡಿಸಿ ಎಕ್ಸ್ (X) ಪ್ಲಾಟ್‌ಫಾರ್ಮ್‌ನಲ್ಲಿ ಪ್ರಶ್ನಿಸಿದ್ದಾರೆ. "ರಾಜಧಾನಿ ದೆಹಲಿಯಲ್ಲಿ ದಿನಗಟ್ಟಲೆ ಹಿಂಸಾಚಾರ ನಡೆದ ನಂತರ, ಈ ಯುವ ಕಾರ್ಯಕರ್ತರು ಹೋಟೆಲ್‌ನಲ್ಲಿ ಮ್ಯೂಸಿಕ್ ಹಚ್ಚಿ ಪಾರ್ಟಿ ಮಾಡುತ್ತಾ ಕುಣಿಯುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಇಷ್ಟೂ ವಾರಗಳ ಕಾಲ ನಡೆದ ಸುದೀರ್ಘ ಪ್ರತಿಭಟನೆಗೆ ತಗುಲಿದ ಪ್ರಯಾಣ, ತಂಗುವಿಕೆ, ಆಹಾರ ಹಾಗೂ ಇತರ ವೆಚ್ಚಗಳನ್ನು ಭರಿಸಿದವರು ಯಾರು?" ಎಂದು ಜೇಠ್ಮಲಾನಿ ಕಿಡಿಕಾರಿದ್ದಾರೆ.
Seriously?
The CJP leadership throwing a victory party at a hotel! After Delhi witnessed days of violence, these so-called youth activists switched on the music and began dancing.
More serious questions:
Who funded the travel, food, accommodation, equipment and logistics… pic.twitter.com/KSl4GIu0gr— Mahesh Jethmalani (@JethmalaniM) July 27, 2026
ಆಕ್ಷೇಪಾರ್ಹ ವಿಡಿಯೋಗಳ ಕುರಿತು ಪ್ರತಿಕ್ರಿಯಿಸಿ ತಮ್ಮ ಸಂಭ್ರಮಾಚರಣೆಯನ್ನು 'ಹೌದು ನಾವಿರೋದೇ ಹಿಂಗೆ..' ಅನ್ನೋ ಭಾಷೆಯಲ್ಲಿ ಸಮರ್ಥಿಸಿಕೊಂಡಿರುವ ಸಿಜೆಪಿ (CJP) ವಕ್ತಾರ ಸೌರವ್ ದಾಸ್, "ಹಳೆಯ ತಲೆಮಾರಿನ ಜನರು ಇಂದಿನ ಯುವ ಪೀಳಿಗೆಯ (Gen Z) ಚಳವಳಿಯ ಶೈಲಿಯನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ" ಎಂದು ತಿರುಗೇಟು ನೀಡಿದ್ದಾರೆ.
ಎಕ್ಸ್ (X) ಪೋಸ್ಟ್‌ನಲ್ಲಿ ಬರೆದುಕೊಂಡಿರುವ ದಾಸ್, "ನಾವು ಬೇಕಿದ್ದರೆ ರಸ್ತೆಯ ಮೇಲೆಯೂ ಕುಳಿತು ಹೋರಾಟ ಮಾಡಬಲ್ಲೆವು, ಡ್ಯಾನ್ಸ್ ಮಾಡುತ್ತಲೇ ಪ್ರತಿಭಟನೆಯನ್ನೂ ನಡೆಸಬಲ್ಲೆವು. ಕೋಲ್ಡ್ ಕಾಫಿ ಕುಡಿಯುತ್ತಲೇ ಸಂಘಟನೆಯನ್ನೂ ಕಟ್ಟಬಲ್ಲೆವು. ಹಿಂದಿನ ತಲೆಮಾರಿನವರು ಅಂದುಕೊಂಡಿರುವ ಸಾಂಪ್ರದಾಯಿಕ ಶೈಲಿಯಲ್ಲಿಯೇ ನಾವಿಲ್ಲಿ ಹೋರಾಟ ಮಾಡಬೇಕಿಲ್ಲ. ಈ ಪೀಳಿಗೆಯ ಆಲೋಚನೆಯೇ ಬೇರೆ - ಆತ್ಮವಿಶ್ವಾಸ, ಸೃಜನಶೀಲತೆ ಹಾಗೂ ದಿಟ್ಟತನವೇ ನಮ್ಮ ಶಕ್ತಿ. ಹಿರಿಯ ಅಂಕಲ್ ಮತ್ತು ಆಂಟಿಗಳು ದೂರ ಇದ್ದು ದೂರುವುದನ್ನು ಮುಂದುವರಿಸಬಹುದು, ಆದರೆ ಅವರು ನಮ್ಮ ಈ ಶೈಲಿಯನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ!" ಎಂದು ಹೇಳಿದ್ದಾರೆ.
It just goes to show that the government and godi anchors simply do not understand the language of Gen Z and younger generations.
We can sit on the road for as long as it takes. We can protest while dancing. We can organise while sipping cold coffee. We can fight for change… https://t.co/3URTemFOoA— Saurav Das (@SauravDassss) July 27, 2026
ಉದ್ಯೋಗವಿಲ್ಲದ ಯುವಕರನ್ನು "ಕಾಕ್ರೋಚ್‌ಗಳು" (ಜಿರಳೆಗಳು) ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹೋಲಿಸಿದ್ದಕ್ಕೆ ಪ್ರತಿಯಾಗಿ 'ಕಾಕ್ರೋಚ್ ಜನತಾ ಪಾರ್ಟಿ' (CJP) ಎಂಬ ಸಾಂಕೇತಿಕ ಹಾಗೂ ವ್ಯಂಗ್ಯಾತ್ಮಕ ಆನ್‌ಲೈನ್ ಒಕ್ಕೂಟ ರಚನೆಯಾಗಿತ್ತು. ಆ ನಂತರ ಈ ಸಂಘಟನೆಯು ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳು ಹಾಗೂ ವಿದ್ಯಾರ್ಥಿಗಳ ಆತ್ಮಹ*ಗಳನ್ನು ಖಂಡಿಸಿ ಚಳವಳಿಯನ್ನು ತೀವ್ರಗೊಳಿಸಿತು. 'ನೀಟ್' (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಹೊಣೆ ಹೊತ್ತು ಅಂದಿನ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಇವರು ಪಟ್ಟು ಹಿಡಿದಿದ್ದರು.
ಜುಲೈ 20 ರಂದು ಸಂಸತ್ತಿನ ಕಡೆಗೆ ಮೆರವಣಿಗೆ ಹೊರಟಿದ್ದ ಸಾವಿರಾರು ಪ್ರತಿಭಟನಾಕಾರರನ್ನು ಪೊಲೀಸರು ತಡೆದಿದ್ದರು. ಈ ವೇಳೆ ಪೋಲಿಸರು ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ ಹಾಗೂ ಪೆಲೆಟ್ ಗನ್‌ಗಳನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ, ನಿಷೇಧಾಜ್ಞೆಯನ್ನು ಉಲ್ಲಂಘಿಸಿದ್ದರಿಂದ ಬಲಪ್ರಯೋಗ ಮಾಡಬೇಕಾಯಿತು ಎಂದು ದೆಹಲಿ ಪೊಲೀಸರು ಸಮರ್ಥಿಸಿಕೊಂಡಿದ್ದರು.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮತ್ತು ಕೇಂದ್ರ ಸರ್ಕಾರವು ಸಂಘಟನೆಯ ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಜುಲೈ 25 ರಂದು CJP ತನ್ನ ಸುದೀರ್ಘ ದೇಶವ್ಯಾಪಿ ಪ್ರತಿಭಟನೆಯನ್ನು ಹಿಂಪಡೆಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ