Nitin Gadkari: ಮೆಟಾ, ಎಕ್ಸ್ ಮತ್ತು ಗೂಗಲ್ ವಿರುದ್ಧ ಪ್ರಕರಣ ದಾಖಲಿಸಿದ ಗಡ್ಕರಿ! ತಪ್ಪಿತಸ್ಥರೆಂದು ಸಾಬೀತಾದರೆ ಯಾರಿಗೆ ಶಿಕ್ಷೆ?

Published : Jul 27, 2026, 03:49 PM IST
nitin gadkari

ಸಾರಾಂಶ

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು,ಬಾಂಬೆ ಹೈಕೋರ್ಟ್‌ನಲ್ಲಿ ಮೆಟಾ, ಗೂಗಲ್, ಮತ್ತು ಎಕ್ಸ್ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಸಾಮಾಜಿಕ ಜಾಲತಾಣ ದೈತ್ಯರ ಹೊಣೆಗಾರಿಕೆಯನ್ನು ಪ್ರಶ್ನಿಸಿದ್ದೇಕೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ!

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಎಐ ಆಧಾರಿತ 'ಡೀಪ್‌ಫೇಕ್' ವೀಡಿಯೊಗಳು ಮತ್ತು ಸುಳ್ಳು ಹೂಡಿಕೆ ಜಾಹೀರಾತುಗಳ ವಿರುದ್ಧ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಜಾಗತಿಕ ಸಾಮಾಜಿಕ ಜಾಲತಾಣ ದೈತ್ಯರಾದ ಮೆಟಾ (ಫೇಸ್‌ಬುಕ್, ಇನ್‌ಸ್ಟಾಗ್ರಾಮ್), ಎಕ್ಸ್ (ಟ್ವಿಟರ್) ಮತ್ತು ಗೂಗಲ್ (ಯೂಟ್ಯೂಬ್) ವಿರುದ್ಧ ಸಿವಿಲ್ ಮಾನನಷ್ಟ ಮೊಕದ್ದಮೆ ಹೂಡಲು ನ್ಯಾಯಮೂರ್ತಿ ಅಭಯ್ ಅಹುಜಾ ಅವರ ಪೀಠವು ಗಡ್ಕರಿ ಅವರಿಗೆ ಅನುಮತಿ ನೀಡಿದೆ.

ಏನಿದು ಪ್ರಕರಣ?

ಇತ್ತೀಚಿನ ದಿನಗಳಲ್ಲಿ AI ತಂತ್ರಜ್ಞಾನವನ್ನು ಬಳಸಿ ಸಚಿವ ನಿತಿನ್ ಗಡ್ಕರಿ ಅವರ ಮುಖ, ಧ್ವನಿ ಮತ್ತು ಚಿತ್ರಗಳನ್ನು ನಕಲಿ ವೀಡಿಯೊಗಳಲ್ಲಿ ದುರುಪಯೋಗಪಡಿಸಿಕೊಳ್ಳಲಾಗಿತ್ತು. ಈ ಡೀಪ್‌ಫೇಕ್ ಜಾಹೀರಾತುಗಳಲ್ಲಿ ಗಡ್ಕರಿ ಅವರು ಕೆಲವು ನಿರ್ದಿಷ್ಟ ಹೂಡಿಕೆ ಯೋಜನೆಗಳನ್ನು ಅನುಮೋದಿಸುತ್ತಿದ್ದಾರೆ ಅಲ್ಲದೇ ಜನರಿಗೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಸಿಗುತ್ತದೆ ಎಂದು ಬಿಂಬಿಸಲಾಗಿತ್ತು. ಗಡ್ಕರಿ ಮತ್ತು ಅವರ ಕುಟುಂಬವು ಎಥೆನಾಲ್ ಮಿಶ್ರಿತ ಪೆಟ್ರೋಲ್ (EBP) ಹಾಗೂ E20 ಕಾರ್ಯಕ್ರಮಗಳಿಂದ ಅಕ್ರಮ ಲಾಭ ಗಳಿಸುತ್ತಿದೆ ಎಂಬ ಸುಳ್ಳು ಆರೋಪಗಳನ್ನು ಸೇರಿಸಲಾಗಿತ್ತು. ಆದರೆ, ಗಡ್ಕರಿ ಅವರು ತಾವು ಯಾವುದೇ ಹೂಡಿಕೆ ವೇದಿಕೆಯನ್ನು ಬೆಂಬಲಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಬಿಪಿ ಮತ್ತು ಇ20 ಯೋಜನೆಗಳು ಸಂಪೂರ್ಣವಾಗಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಕ್ಕೆ ಒಳಪಟ್ಟಿದ್ದು, ಇದರಲ್ಲಿ ತಮ್ಮ ಯಾವುದೇ ವೈಯಕ್ತಿಕ ಪಾತ್ರವಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ವಕೀಲ ಸಂದೀಪ್ ಎಸ್. ಲಡ್ಡಾ ಅವರು ನ್ಯಾಯಾಲಯದಲ್ಲಿ ಗಡ್ಕರಿ ಅವರ ಪರ ವಾದ ಮಂಡಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೇಲೇಕೆ ದೂರು?

ಮೆಟಾ, ಗೂಗಲ್ ಮತ್ತು ಎಕ್ಸ್ ಸಂಸ್ಥೆಗಳು ಕೋಟ್ಯಂತರ ಬಳಕೆದಾರರನ್ನು ಹೊಂದಿರುವ ಪ್ರಮುಖ ಡಿಜಿಟಲ್ ವೇದಿಕೆಗಳಾಗಿವೆ. ಈ ಪ್ಲಾಟ್‌ಫಾರ್ಮ್‌ಗಳಲ್ಲಿ ನಕಲಿ ಮತ್ತು ವಂಚನೆಯ ಜಾಹೀರಾತುಗಳು ನಿರಂತರವಾಗಿ ಪ್ರಸಾರವಾಗುತ್ತಿದ್ದರೂ, ದೂರು ನೀಡಿದಾಗ ಸೂಕ್ತ ಮತ್ತು ಸಕಾಲಿಕ ಕ್ರಮ ಕೈಗೊಳ್ಳಲಾಗಿಲ್ಲ ಎಂಬುದು ಗಡ್ಕರಿ ಅವರ ಆರೋಪ. ಬಾರ್ & ಬೆಂಚ್ ವರದಿಯ ಪ್ರಕಾರ, ನಕಲಿ ವಿಷಯಗಳನ್ನು ತಕ್ಷಣವೇ ತೆಗೆದುಹಾಕಲು (ಟೇಕ್‌ಡೌನ್) ಮತ್ತು ತಾತ್ಕಾಲಿಕ ತಡೆಯಾಜ್ಞೆ ನೀಡುವ ಮಧ್ಯಂತರ ಪರಿಹಾರದ ಅರ್ಜಿಯನ್ನು ನ್ಯಾಯಾಲಯ ಮುಂದಿನ ದಿನಗಳಲ್ಲಿ ವಿಚಾರಣೆ ನಡೆಸಲಿದೆ.

ಬೆಳೆಯುತ್ತಿರುವ ಡೀಪ್‌ಫೇಕ್ ಬೆದರಿಕೆ ಹಾಗೂ ಕಾನೂನು!

ಇತ್ತೀಚೆಗೆ ಪ್ರಸಿದ್ಧ ವ್ಯಕ್ತಿಗಳು, ರಾಜಕಾರಣಿಗಳು ಮತ್ತು ಉದ್ಯಮಿಗಳ ನಕಲಿ ವೀಡಿಯೊಗಳನ್ನು ಬಳಸಿ ಸಾರ್ವಜನಿಕರಿಂದ ಹಣ ದೋಚುವ ಕ್ರಿಪ್ಟೋ ಅಥವಾ ಹೂಡಿಕೆ ಹಗರಣಗಳು ಹೆಚ್ಚಾಗುತ್ತಿವೆ. ಭಾರತೀಯ ಕಾನೂನಿನಡಿ (IPC ಮತ್ತು IT ಕಾಯ್ದೆ 2000), ನಕಲಿ ವಿಷಯ ಸೃಷ್ಟಿಸಿದವರು ಮತ್ತು ವಂಚಿಸಿದವರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶವಿದೆ. ಸಾಮಾಜಿಕ ಮಾಧ್ಯಮ ಕಂಪನಿಗಳು ಕಾನೂನಿನಡಿ 'ಮಧ್ಯವರ್ತಿ' ರಕ್ಷಣೆ ಹೊಂದಿದ್ದರೂ, ದೂರು ಬಂದ ತಕ್ಷಣ ಸೂಕ್ತ ಜಾಗರೂಕತೆ ವಹಿಸಿ ಕ್ರಮ ಕೈಗೊಳ್ಳದಿದ್ದರೆ ಆ ರಕ್ಷಣೆಯನ್ನು ಕಳೆದುಕೊಳ್ಳುತ್ತವೆ. ಈ ಪ್ರಕರಣದಲ್ಲಿ ಈ ಕಂಪನಿಗಳು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿವೆಯೇ ಎಂಬುದನ್ನು ಬಾಂಬೆ ಹೈಕೋರ್ಟ್ ನಿರ್ಧರಿಸಲಿದೆ. ಈ ಪ್ರಕರಣವು ಡಿಜಿಟಲ್ ಜಗತ್ತಿನಲ್ಲಿ ಎಐ ದುರುಪಯೋಗ ಮತ್ತು ಪ್ಲಾಟ್‌ಫಾರ್ಮ್‌ಗಳ ಹೊಣೆಗಾರಿಕೆಯ ಕುರಿತು ಪ್ರಮುಖ ಮೈಲಿಗಲ್ಲಾಗುವ ಸಾಧ್ಯತೆಯಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ಟಾರ್ ಹೊಟೆಲ್‌ನಲ್ಲಿ ರಾಜೀನಾಮೆ ಪಾರ್ಟಿ ವಿಡಿಯೋ, ಕಾಕ್ರೋಚ್ ಫಂಡಿಂಗ್ ಪ್ರಶ್ನಿಸಿದ ವಕೀಲ ಜೇಠ್ಮಲಾನಿ
ಜೀವಾವಧಿ ಶಿಕ್ಷೆ ಪ್ರಸ್ತಾಪ, 10 ಕೋಟಿ ದಂಡ! Anti-Paper Leak ಮಸೂದೆಯಲ್ಲಿ 6 ಪ್ರಮುಖ ಬದಲಾವಣೆ!