
ನವದೆಹಲಿ : ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿ ಭಾನುವಾರ ನಿವೃತ್ತಿ ಹೊಂದಲಿದ್ದಾರೆ. ನ್ಯಾ. ಸೂರ್ಯಕಾಂತ್ ಅವರು ಹೊಸ ಸಿಜೆ ಆಗಿ ಸೋಮವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
6 ತಿಂಗಳು ಕಾಲ ನ್ಯಾಯಾಂಗದ ಉನ್ನತ ಹುದ್ದೆಯಲ್ಲಿದ್ದ ಗವಾಯಿ ಅವರು, ಈ ಹುದ್ದೆಗೆ ಏರಿದ ಮೊದಲ ಬೌದ್ಧ ಮತ್ತು 2ನೇ ದಲಿತ ವ್ಯಕ್ತಿ ಆಗಿದ್ದರು.
ದೇಶದ 52ನೇ ಸಿಜೆ ಆಗಿ ಅಧಿಕಾರ ನಡೆಸಿದ ಗವಾಯಿ ಅವರು ವಕ್ಫ್ ತಿದ್ದುಪಡಿ ಕಾಯ್ದೆಯ ಕೆಲ ಅಂಶಗಳು, ಬುಲ್ಡೋಜರ್ ನ್ಯಾಯ- ಹೀಗೆ ಕೆಲವು ವಿವಾದಿತ ಕ್ರಮಗಳಿಗೆ ತಡೆ ನೀಡಿ ಸುದ್ದಿ ಮಾಡಿದ್ದರು. ಜೊತೆಗೆ ಭಗವಾನ್ ವಿಷ್ಣು ಬಗ್ಗೆ ಅವರು ಮಾಡಿದ ಟಿಪ್ಪಣಿ ವಿವಾದಕ್ಕೆ ಕಾರಣವಾಗಿತ್ತು.
ಕೋಲ್ಕತಾ: ‘ಡಿ.6ಕ್ಕೆ ಬಾಬ್ರಿ ಮಸೀದಿ ಧ್ವಂಸದ ವರ್ಷಾಚರಣೆ ಹಿನ್ನೆಲೆಯಲ್ಲಿ ಅದೇ ದಿನ ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ರೀತಿಯಲ್ಲಿಯೇ ಮಸೀದಿ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಯಲಿದೆ’ ಎಂದು ತೃಣಮೂಲ ಕಾಂಗ್ರೆಸ್ ಶಾಸಕ ಹುಮಾಯೂನ್ ಕಬೀರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದ ಅವರು ‘ ಮುರ್ಷಿದಾಬಾದ್‌ನಲ್ಲಿ ಡಿ.6ಕ್ಕೆ ಬಾಬ್ರಿ ಮಸೀದಿ ನಿರ್ಮಾಣಕ್ಕೆ ಶಂಕು ಸ್ಥಾಪನೆ ನಡೆಯಲಿದೆ. 3 ವರ್ಷಗಳಲ್ಲಿ ಪೂರ್ಣ ನಿರ್ಮಾಣವಾಗಲಿದೆ’ ಎಂದಿದ್ದಾರೆ.
ಟಿಎಂಸಿ ಶಾಸಕನ ಹೇಳಿಕೆಗೆ ಬಿಜೆಪಿ ಕಿಡಿಕಾರಿದ್ದು, ‘ಬಾಬ್ರಿ ಮಸೀದಿಯನ್ನು ಪುನಃ ಸ್ಥಾಪಿಸುತ್ತೇವೆ ಎನ್ನುವುದು ತುಷ್ಟೀಕರಣ ರಾಜಕೀಯವಲ್ಲದೆ ಬೇರೇನೂ ಅಲ್ಲ. ಮಸೀದಿಯನ್ನು ನಿರ್ಮಿಸುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಸರಿಯಾದ ಸ್ಥಳದಲ್ಲಿರಬೇಕು. ಅವರು ಮಸೀದಿಯನ್ನು ರಾಜಕೀಯಕ್ಕೆ ಬಯಸುತ್ತಿದ್ದಾರೆ’ ಎಂದು ಹೇಳಿದೆ.
ಇತ್ತ ಕಾಂಗ್ರೆಸ್ ‘ನಮ್ಮ ಪಕ್ಷ ಅಭಿವೃದ್ಧಿ ವಿಚಾರಗಳ ಬಗ್ಗೆ ಮಾತ್ರ ಗಮನವಹಿಸುತ್ತದೆ’ ಎಂದು ಹೇಳಿ ಅಂತರ ಕಾಯ್ದುಕೊಂಡಿದೆ. ಕಬೀರ್ ಇಂತಹ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. 2024ರಲ್ಲಿಯೂ ‘ ರಾಜ್ಯದಲ್ಲಿ ಬಾಬ್ರಿ ಮಸೀದಿ ರೀತಿಯಲ್ಲಿಯೇ ಮಸೀದಿ ನಿರ್ಮಿಸುತ್ತೇನೆ’ ಎಂದು ವಿವಾದ ಸೃಷ್ಟಿಸಿದ್ದರು.
ಶಬರಿಮಲೆ ಚಿನ್ನಕ್ಕೆ ಕನ್ನ: ಕೇಂದ್ರೀಯ ತನಿಖೆ ಸಾಧ್ಯತೆ
ಕಲ್ಲಿಕೋಟೆ : ಶಬರಿಮಲೆ ದ್ವಾರಪಾಲಕ ಮೂರ್ತಿಗಳು ಹಾಗೂ ದ್ವಾರದ ಚಿನ್ನಕ್ಕೆ ಕನ್ನ ಹಾಕಿದ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ಏಜೆನ್ಸಿಗಳು ವಹಿಸಿಕೊಳ್ಳಬಹುದು ಎಂದು ಕೇಂದ್ರ ಸಚಿವ ಜಾರ್ಜ್ ಕುರಿಯನ್ ಹೇಳಿದ್ದಾರೆ.
ಶನಿವಾರ ಮಾತನಾಡಿದ ಅವರು, ‘ಕಪ್ಪುಹಣ ಹರಿದಾಟದ ಸಾಧ್ಯತೆ ಇದ್ದರೆ, ಕೇಂದ್ರ ತನಿಖಾ ಸಂಸ್ಥೆಗಳು ಮಧ್ಯ ಪ್ರವೇಶಿಸಬಹುದು. ‘ಪ್ರಕರಣವನ್ನು ಹಣಕಾಸಿನ ಅವ್ಯವಹಾರ ಎಂದು ಎಫ್‌ಐಆರ್ ದಾಖಲಿಸಿಕೊಂಡಿದ್ದೇ ಇದಕ್ಕೆ ಕಾರಣ. ಇದು ರಾಜಕೀಯವಾಗುವುದಿಲ್ಲ, ಕಾನೂನಿನಲ್ಲಿಯೇ ಅವಕಾಶವಿದೆ. ಅಂಥವರನ್ನು ಅಯ್ಯಪ್ಪಸ್ವಾಮಿ ಎಂದಿಗೂ ಸುಮ್ಮನೇ ಬಿಡುವುದಿಲ್ಲ’ ಎಂದರು,ಜೊತೆಗೆ ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವವರನ್ನು ‘ನಾಸ್ತಿಕರು’ ಎಂದು ಕರೆದ ಸಚಿವರು, ‘ಬಂಧನವಾದಾಗ ಎಲ್ಲರ ಮುಖದಲ್ಲಿಯೂ ನಗು ಇತ್ತು. ತಮ್ಮ ಸಿದ್ಧಾಂತವನ್ನು ಸಾಧಿಸಿದೆವು ಎಂಬ ಸಾರ್ಥಕತೆ ಅವರಲ್ಲಿತ್ತು. ಆದರೆ ಯಾರೂ ತಲೆಕೆಡಿಸಿಕೊಳ್ಳಬೇಕಿಲ್ಲ. ಅಯ್ಯಪ್ಪ ಸ್ವಾಮಿ ಯಾರನ್ನೂ ಸುಮ್ಮನೇ ಬಿಡುವುದಿಲ್ಲ’ ಎಂದರು.
ಶಬರಿಮಲೆ ಜನಸಂದಣಿ ನಿಯಂತ್ರಣಕ್ಕೆ ಆರ್‌ಎಎಫ್ ನಿಯೋಜನೆ
ಶಬರಿಮಲೆ (ಕೇರಳ): ಇಲ್ಲಿನ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಭಾರಿ ಜನದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಕೇರಳ ಸರ್ಕಾರವು ಕ್ಷಿಪ್ರ ಕಾರ್ಯಪಡೆಯನ್ನು (ಆರ್‌ಎಎಫ್) ನಿಯೋಜಿಸಿದೆ.ಕೊಯಮತ್ತೂರಿನ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ನ 140 ಜನರ ತಂಡವು ಈಗಾಗಲೇ ಇಲ್ಲಿಗೆ ಬಂದಿದ್ದು, ಮೂರು ಪಾಳಿಯಲ್ಲಿ 32 ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ಇವರೊಂದಿಗೆ 10 ಜನರ ತುರ್ತು ಸ್ಪಂದನ ತಂಡವೂ (ಕ್ಯೂಆರ್‌ಟಿ) ಸಹ ಸನ್ನಿಧಾನದಲ್ಲಿರಲಿದ್ದು, 24 ತಾಸೂ ತುರ್ತು ಸ್ಥಿತಿಗಳಲ್ಲಿ ಕಾರ್ಯನಿರ್ವಹಿಸಲಿದೆ. 2 ತಿಂಗಳು ಕಾಲ ನಡೆಯುವ ಮಂಡಲ-ಮಕರವಿಳಕ್ಕೂ ಉತ್ಸವದ ಅವಧಿವರೆಗೂ ಈ ತಂಡ ಇಲ್ಲಿಯೇ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ