
ನವದೆಹಲಿ : ನ.10ರಂದು 15 ಜನರ ದುರ್ಮರಣಕ್ಕೆ ಕಾರಣವಾದ ಕೆಂಪು ಕೋಟೆ ಬಳಿಯ ಸ್ಫೋಟದ ತನಿಖೆಯಲ್ಲಿ ದಿನಕ್ಕೊಂದು ಆಘಾತಕಾರಿ ಮಾಹಿತಿ ಬಹಿರಂಗವಾಗುತ್ತಿದೆ. ಆತ್ಮಾಹುತಿ ದಾಳಿಕೋರ ಡಾ। ಉಮರ್ ನಬಿ ಹಾಗೂ ಆತನ ಸ್ನೇಹಿತರಾದ ಇತರ ಬಂಧಿತ ಟೆರರ್ ಡಾಕ್ಟರ್‌ಗಳು ಸೇರಿಕೊಂಡು ಕಳೆದ 2023ರಿಂದಲೇ ವರ್ಷದಿಂದ ದೇಶದ ವಿವಿಧ ಭಾಗಗಳಲ್ಲಿ ಭಾರೀ ಸ್ಫೋಟಗಳನ್ನು ನಡೆಸಲು ಸಿದ್ಧತೆ ನಡೆಸುತ್ತಿದ್ದರು ಹಾಗೂ ಅದಕ್ಕಾಗಿ ಸ್ವಂತ ಹಣವನ್ನೂ ವಿನಿಯೋಗಿಸಿದ್ದರು ಎಂದು ಬಂಧಿತ ವೈದ್ಯ ಡಾ। ಮುಜಮ್ಮಿಲ್ ಶಕೀಲ್ ಬಾಯಿಬಿಟ್ಟಿದ್ದಾನೆ.
ಎನ್‌ಐಎ ತನಿಖೆ ವೇಳೆ ಈತ, ‘ನನಗೆ ಯೂರಿಯಾ ಹಾಗೂ ಅಮೋನಿಯಂ ನೈಟ್ರೇಟ್ ಖರೀದಿಸುವ ಜವಾಬ್ದಾರಿ ನೀಡಲಾಗಿತ್ತು. 2023ರಿಂದ ನಾನು 3 ಲಕ್ಷ ರು.ಗೆ ಗುರುಗ್ರಾಮ ಮತ್ತು ನೂಹ್‌ನಿಂದ 26 ಕ್ವಿಂಟಾಲ್ ಎನ್‌ಪಿಕೆ ರಸಗೊಬ್ಬರ ಕೊಂಡಿದ್ದೆ. ಇತರೆ ಸ್ಫೋಟಕ ಸಾಧನಗಳನ್ನು ನೂಹ್‌ನಿಂದ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳನ್ನು ಫರೀದಾಬಾದ್‌ನ 2 ಪ್ರತ್ಯೇಕ ಮಾರುಕಟ್ಟೆಗಳಿಂದ ಖರೀದಿಸಿದ್ದೆ. ಇವುಗಳನ್ನೆಲ್ಲಾ ಶೇಖರಿಸಿಡಲು ಫ್ರೀಜರ್ ಕೂಡ ನನ್ನ ಬಳಿ ಇತ್ತು. 6.5 ಲಕ್ಷ ರು.ಗೆ ಎಕೆ-47 ರೈಫಲ್ ಕೂಡ ಖರೀದಿ ಮಾಡಿದ್ದೆ’ ಎಂದಿದ್ದಾನೆ.
ಇದೇ ವೇಳೆ ಆತ ಆತ್ಮಾಹುತಿ ದಾಳಿಕೋರ ಡಾ। ನಬಿ ಪಾತ್ರವನ್ನೂ ವಿವರಿಸಿದ್ದಾನೆ. ‘ಬಾಂಬ್‌ಗೆ ಬೇಕಾಗುವಂತೆ ರಸಗೊಬ್ಬರವನ್ನು ಉಮರ್ ಸಂಸ್ಕರಿಸುತ್ತಿದ್ದ. ಬಾಂಬ್ ತಯಾರಿಕೆಗೆ ಸಂಬಂಧಿಸಿದ ವಿಡಿಯೋ ಮತ್ತು ಸಾಹಿತ್ಯವನ್ನು ಆತ ಅಧ್ಯಯನ ಮಾಡಿದ್ದ. ಒಮ್ಮೆ ನಬಿ ಜತೆ ಹಣದ ವಿಷಯಕ್ಕೆ ಜಗಳವೂ ಆಗಿತ್ತು. ಆದಾದ ಬಳಿಕವೇ ನಬಿ ನನಗೆ ತನ್ನ ಕೆಂಪು ಎಕೋಸ್ಪೋರ್ಟ್ ಕಾರು ಕೊಟ್ಟಿದ್ದ’ ಎಂದು ಮುಜಮ್ಮಿಲ್ ಹೇಳಿದ್ದಾನೆ ಎಂದು ಎನ್‌ಐಎ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ.
ಇತ್ತೀಚೆಗಷ್ಟೇ ಫರೀದಾಬಾದ್‌ನಲ್ಲಿ ಕಾರು ವಶಪಡಿಸಿಕೊಳ್ಳಲಾಗಿತ್ತು.
ಈ ಉಗ್ರರಿಗೆ ಪಾಕಿಸ್ತಾನಿ ಸಂಘಟನೆಗಳಿಂದ ಆರ್ಥಿಕ ನೆರವು ಸಿಗುತ್ತಿರುವ ಬಗ್ಗೆ ಆತ ಪ್ರತಿಕ್ರಿಯಿಸಿದ್ದಾನೆ, ಆದರೆ, ‘ದೆಹಲಿ ಸ್ಫೋಟಕ್ಕೆ ನಾವೇ ಕೈಯಿಂದ ದುಡ್ಡು ಹಾಕಿದ್ದೆವು. ನಬಿ 2 ಲಕ್ಷ ರು., ಮುಜಮ್ಮಿಲ್ 5 ಲಕ್ಷ ರು., ಅದೀಲ್ ರಾಥರ್ 8 ಲಕ್ಷ ರು., ಮುಜಫ್ಫರ್ ರಾಥರ್ 6 ಲಕ್ಷ ರು., ಶಾಹೀನ್ 5 ಲಕ್ಷ ರು. ಕೊಟ್ಟಿದ್ದರು’ ಎಂದು ಹೇಳಿದ್ದಾನೆ.
ಈ ಉಗ್ರರನ್ನು ಪಾಕಿಸ್ತಾನದಿಂದ ನಿಯಂತ್ರಿಸಲಾಗುತ್ತಿದೆ ಎಂಬುದೂ ತನಿಖೆ ವೇಳೆ ಬಯಲಾಗಿದೆ. ಮುಜಮ್ಮಿಲ್‌ನನ್ನು ಮನ್ಸೂರ್ ಹಾಗೂ ಉಮರ್‌ನನ್ನು ಹಾಶಿಂ ಎಂಬ ಹ್ಯಾಂಡ್ಲರ್ ನಿಯಂತ್ರಿಸುತ್ತಿದ್ದ. ಅವರಿಬ್ಬರ ಮೇಲೂ ನಿಗಾ ಇಡಲು ಇನ್ನೊಬ್ಬ ಹ್ಯಾಂಡ್ಲರ್ ಇದ್ದು, ಆತನ ಹೆಸರು ಇಬ್ರಾಹಿಂ. ಆತನ ಸೂಚನೆಯಂತೆ ಕೆಲಸ ನಡೆಯುತ್ತಿತ್ತು ಎಂದು ಗೊತ್ತಾಗಿದೆ.
ಟರ್ಕಿಗೂ ಪ್ರಯಾಣ:
ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್(ಟಿಟಿಪಿ)ನ ಒಸಾಕಾ ಎಂಬಾತನ ನಿರ್ದೇಶನದಂತೆ ಮುಜಮ್ಮಿಲ್, ಆದಿಲ್ ಮತ್ತು ಮುಜಾಫರ್ ಟರ್ಕಿಗೂ ಪ್ರಯಾಣಿಸಿದ್ದರು. ಅಲ್ಲಿಂದ ಅಫ್ಘಾನಿಸ್ತಾನಕ್ಕೆ ಹೋಗುವ ಯೋಜನೆಯಿದ್ದರೂ, ಹ್ಯಾಂಡ್ಲರ್‌ಗಳ ಸೂಚನೆಯಂತೆ ಹಿಂದೆ ಸರಿದರು ಎನ್ನಲಾಗಿದೆ.
ಟೆರರ್ ಡಾಕ್ಟರ್ ಕೇಸ್ : ಪುಲ್ವಾಮಾದ ಎಲೆಕ್ಟ್ರೀಷಿಯನ್ ತುಫೈಲ್ ಬಂಧನ
ಶ್ರೀನಗರ : ಕೆಂಪುಕೋಟೆ ಬಳಿಯ ಉಗ್ರದಾಳಿಗೆ ಸಂಬಂಧಿಸಿದಂತೆ ಬಂಧನಗಳು ಮುಂದುವರೆದಿದ್ದು, ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಎಲೆಕ್ಟ್ರೀಷಿಯನ್‌ಯೊಬ್ಬನನ್ನು ವಿಶೇಷ ತನಿಖಾ ತಂಡ ಬಂಧಿಸಿದೆ. ಈತನನ್ನು ಶ್ರೀನಗರದ ಬತಮಲೂ ಪ್ರದೇಶದ ನಿವಾಸಿ ತುಫೈಲ್ ನಿಯಾಜ್ ಭಟ್ ಎಂದು ಗುರುತಿಸಲಾಗಿದ್ದು, ಜೈಷ್-ಎ-ಮೊಹಮ್ಮದ್ ಸಂಘಟನೆ ಜತೆ ನಂಟು ಹೊಂದಿರುವ ಶಂಕೆಯಿದೆ.
ದಾಳಿಯಲ್ಲಿ ಈತನೂ ಉಗ್ರವೈದ್ಯರ ಜತೆ ಕೈ ಜೋಡಿಸಿರುವ ಬಗ್ಗೆ ಶಂಕೆಯಿದ್ದ ಕಾರಣ, ಕೈಗಾರಿಕಾ ಎಸ್ಟೇಟ್‌ನಲ್ಲಿ ಬಂಧಿಸಿವಿಚಾರಣೆಗೆ ಒಳಪಡಿಸಲಾಗಿದೆ.
ದೆಹಲಿ ಸ್ಫೋಟಕ್ಕೆ ಸಂಬಂಧಿಸಿದಂತೆ ಕುಲ್ಗಾಮ್‌ನಲ್ಲಿರುವ ಡಾ. ಮುಜಫ್ಫರ್ ಅಹ್ಮದ್ ರಾಥರ್ ಪತ್ತೆಗಾಗಿ ಅರೆಸ್ಟ್ ವಾರಂಟ್ ಹೊರಡಿಸಿದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ