ಪೌರತ್ವ ಕಾಯ್ದೆ: ಯಾರಿಗೂ ತನ್ನಿಂತಾನೆ ನಾಗರಿಕತ್ವ ಸಿಗದು, ಅರ್ಜಿ ಪರಿಶೀಲಿಸಿ ನಿರ್ಣಯ!

By Suvarna NewsFirst Published Dec 16, 2019, 10:04 AM IST
Highlights

ಪೌರತ್ವ ಕಾಯ್ದೆಯಡಿ ಯಾರಿಗೂ ತನ್ನಿಂತಾನೆ ನಾಗರಿಕತ್ವ ಸಿಗದು| ಅಕ್ರಮ ವಲಸಿಗರಿಗೆ ಪೌರತ್ವ ನೀಡಲ್ಲ: ಕೇಂದ್ರ| ಈಶಾನ್ಯ ರಾಜ್ಯಗಳ ಅನುಮಾನ ಹೋಗಿಸಲು ಯತ್ನ

ನವದೆಹಲಿ[ಡಿ.16]: ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧ ಈಶಾನ್ಯ ರಾಜ್ಯಗಳಲ್ಲಿ ವ್ಯಾಪಕ ಹಿಂಸಾಚಾರ ಸಂಭವಿಸಿದ ಹಿನ್ನೆಲೆಯಲ್ಲಿ ಈ ಶಾಸನದ ಕುರಿತು ಅಲ್ಲಿನ ಜನರಿಗೆ ಇರುವ ಅನುಮಾನಗಳನ್ನು ಹೋಗಲಾಡಿಸಲು ಕೇಂದ್ರ ಸರ್ಕಾರ ಭಾನುವಾರ ಪ್ರಯತ್ನ ನಡೆಸಿದೆ. ಪೌರತ್ವ ಕಾಯ್ದೆಯಡಿ, ಯಾರಿಗೂ ತನ್ನಿಂತಾನೇ ಭಾರತದ ನಾಗರಿಕತ್ವ ಸಿಗುವುದಿಲ್ಲ. ಅದೂ ಅಲ್ಲದೆ, ಅಸ್ಸಾಂನಲ್ಲಿರುವ 1.5 ಲಕ್ಷ ಅಕ್ರಮ ಹಿಂದು ಬಂಗಾಳಿಗಳಿಗೆ ಪೌರತ್ವ ಸಿಗುತ್ತದೆ ಎಂಬುದು ತಪ್ಪು ತಿಳುವಳಿಕೆ ಎಂದು ವಾದಿಸಿದೆ.

‘ಪೌರತ್ವ ಕಾಯ್ದೆ ತಿದ್ದುಪಡಿಯು ಹೊಸ ವಲಸೆ ಪರ್ವಕ್ಕೆ ನಾಂದಿ ಹಾಡುವುದಿಲ್ಲ. ಬಾಂಗ್ಲಾದೇಶದಲ್ಲಿ ಹಿಂದುಗಳ ಸಂಖ್ಯೆ ಶೇ.28ರಷ್ಟಿತ್ತು. ಅದು ಈಗ ಶೇ.8ಕ್ಕೆ ಕುಸಿದಿದೆ. ಬಹುತೇಕ ಅಲ್ಪಸಂಖ್ಯಾತರ (ಹಿಂದುಗಳು) ವಲಸೆ ಈಗಾಗಲೇ ಮುಗಿದಿದೆ’ ಎಂದು ಕೇಂದ್ರ ಸರ್ಕಾರದ ಪಿಐಬಿ (ಪ್ರೆಸ್‌ ಇನ್‌ಫರ್ಮೇಶನ್‌ ಬ್ಯೂರೋ)ಯ ಅಧಿಕೃತ ಖಾತೆಯಿಂದ ಭಾನುವಾರ ಟ್ವೀಟ್‌ ಮಾಡಲಾಗಿದೆ.

ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ಅಸ್ಸಾಂನಲ್ಲಿರುವ 1.5 ಲಕ್ಷ ದಾಖಲೆರಹಿತ ಹಿಂದು ಬಂಗಾಳಿಗಳಿಗೆ ಭಾರತೀಯ ನಾಗರಿಕತ್ವ ಸಿಗುತ್ತದೆ ಎಂಬುದು ತಪ್ಪು ಮಾಹಿತಿ. ಈ ಕಾಯ್ದೆಯಡಿ ಯಾವುದೇ ವಿದೇಶಿಗರಿಗೂ ತನ್ನಿಂತಾನೇ ಪೌರತ್ವ ಸಿಗುವುದಿಲ್ಲ. ಪೌರತ್ವ ಕೋರಿ ಸಲ್ಲಿಕೆಯಾಗುವ ಅರ್ಜಿಗಳನ್ನು ನಿರ್ದಿಷ್ಟಪ್ರಾಧಿಕಾರವೊಂದು ಪರಿಶೀಲಿಸಲಿದೆ. ಕಾಯ್ದೆಯಲ್ಲಿ ಸೂಚಿಸಲಾದ ಮಾನದಂಡಗಳಿಗೆ ಅನುಗುಣವಾಗಿದ್ದವರಿಗೆ ಮಾತ್ರ ಭಾರತೀಯ ಪೌರತ್ವ ನೀಡಲಾಗುತ್ತದೆ ಎಂದು ವಿವರಿಸಲಾಗಿದೆ.

ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗಿದೆ. ಧಾರ್ಮಿಕ ಹಿಂಸೆಯ ಕಾರಣಕ್ಕೆ ಭಾರಿ ಪ್ರಮಾಣದಲ್ಲಿ ಆ ದೇಶದಿಂದ ಜನರು ವಲಸೆ ಬರುವ ಸಾಧ್ಯತೆ ತೀರಾ ಕಡಿಮೆ ಇದೆ ಎಂದು ಸರ್ಕಾರ ಹೇಳಿದೆ.

Close

click me!