China Threat: ಯುದ್ಧಕ್ಕೆ ಬಂದ್ರೆ ಜಯ ನಮ್ಮದೆ, ಚೀನಾಕ್ಕೆ ಸೇನಾ ಮುಖ್ಯಸ್ಥ ಎಚ್ಚರಿಕೆ

By Kannadaprabha NewsFirst Published Jan 13, 2022, 3:12 AM IST
Highlights

* ಚೀನಾ ಯುದ್ಧಕ್ಕೆ ಬಂದರೆ  ಜಯ ನಮ್ಮದೇ: ಭಾರತ

* ಸಂಪೂರ್ಣ ಸನ್ನದ್ಧರಾಗಿದ್ದೇವೆ: ಸೇನಾ ಮುಖ್ಯಸ್ಥ

* ಆದರೆ ಯುದ್ಧ ನಮ್ಮ ಪಾಲಿನ ಕಟ್ಟಕಡೆಯ ಅಸ್ತ್ರ

ನವದೆಹಲಿ (ಜ. 13) ಪೂರ್ವ ಲಡಾಖ್‌ ಗಡಿಯಲ್ಲಿ ಪರಿಸ್ಥಿತಿ ತಿಳಿಯಾಗಿದ್ದರೂ, ಚೀನಾದಿಂದ (China) ಅಪಾಯ ಕಡಿಮೆಯಾಗಿಲ್ಲ ಎಂದು ಸ್ಪಷ್ಟಪಡಿಸಿರುವ (Indian Army)ಸೇನಾ ಮುಖ್ಯಸ್ಥ
ಎಂ.ಎಂ.ನರವಣೆ, ಬಿಕ್ಕಟ್ಟು ಇತ್ಯರ್ಥಕ್ಕೆ ಚೀನಾದೊಂದಿಗೆ ನಾವು  ನಿರಂತರವಾಗಿ ಮಾತುಕತೆ ನಡೆಸುತ್ತಿದ್ದೇವೆ. ಯುದ್ಧ (War) ಎಂಬುದು ನಮ್ಮ ಪಾಲಿನ ಕಟ್ಟಕಡೆಯ ಅಸ್ತ್ರ. ಒಂದು ವೇಳೆ ಅದೇನಾದರೂ ಅನಿವಾರ್ಯವಾದರೆ ನಾವು ಜಯಶಾಲಿಯಾಗಿ ಹೊರಹೊಮ್ಮಲಿದ್ದೇವೆ ಎಂದು ವಿಶ್ವಾಸ  ವ್ಯಕ್ತಪಡಿಸಿದ್ದಾರೆ. ಈ ಮೂಲಕ ಗಡಿಯಲ್ಲಿ ಪದೇ ಪದೇ ಕಾಲು ಕೆರೆದು ಜಗಳಕ್ಕೆ ಬರುತ್ತಿರುವ ಚೀನಾಕ್ಕೆ ಸೂಕ್ತ ಸಂದೇಶ ರವಾನಿಸುವ ಯತ್ನಮಾಡಿದ್ದಾರೆ.

ಜ.15ರ ಸೇನಾ ದಿನಾಚರಣೆ ಹಿನ್ನೆಲೆಯಲ್ಲಿ ಬುಧವಾರ ಆಯೋಜಿತವಾಗಿದ್ದ ಕಾರ್ಯಕ್ರಮ ಮತ್ತು ಬಳಿಕ ಸುದ್ದಿಸಂಸ್ಥೆಗಳೊಂದಿಗೆ ಮಾತನಾಡಿರುವ ಜನರಲ್‌ ನರವಣೆ ‘ಪೂರ್ವ ಲಡಾಖ್‌ ಗಡಿಯಲ್ಲಿ ಪರಿಸ್ಥಿತಿ ತಿಳಿಯಾಗಿದ್ದರೂ, ಯಾವುದೇ ರೀತಿಯಲ್ಲೂ ಅಪಾಯ ಕಡಿಮೆಯಾಗಿಲ್ಲ. ಹೀಗಾಗಿಯೇ ಭಾರತೀಯ ಸೇನೆ ಪೂರ್ಣ ಸನ್ನದ್ಧ ಸ್ಥಿತಿಯಲ್ಲಿದೆ. ಚೀನಾ ಸೇನೆಯನ್ನು ಎದುರಿಸಲು ನಾವು ಕಠಿಣ ಮನೋಸಂಕಲ್ಪ ಮತ್ತು ದೃಢ ನಿಶ್ಚಯದಲ್ಲಿದ್ದೇವೆ. ಯಾವುದೇ ಪರಿಸ್ಥಿತಿ ಎದುರಿಸಲು ನಾವು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಲಡಾಖ್‌ ಮಾತ್ರವಲ್ಲದೆ ದೇಶದ ಉತ್ತರ ಗಡಿಯಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಿಕೊಳ್ಳಲಾಗಿದ್ದು, ಸಮಗ್ರ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ’ ಎಂದರು.

ಇದೆ ವೇಳೆ ‘ಚೀನಾ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಗಡಿ ಕಾಯ್ದೆ ಭಾರತಕ್ಕೆ ಬಾಧ್ಯಸ್ಥವಲ್ಲ. ಈ ಕಾಯ್ದೆಯಿಂದ ಎದುರಾಗಬಹುದಾದ ಯಾವುದೇ ಸವಾಲು ಎದುರಿಸಲು ನಾವು ಸನ್ನದ್ದರಾಗಿದ್ದೇವೆ. ಸದ್ಯ ಲಡಾಖ್‌ನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ ಮುಂದೇನಾಗಬಹುದು? ಪರಿಸ್ಥಿತಿ ಉಲ್ಬಣವಾಗಬಲ್ಲದೇ? ಎಂಬುದನ್ನು ನಾವು ಈಗಲೇ ಊಹಿಸಲು ಸಾಧ್ಯವಿಲ್ಲ. ಆದರೂ ಯುದ್ಧ ಮತ್ತು ಸಂಘರ್ಷಗಳು ನಮ್ಮ ಪಾಲಿಗೆ ಎಂದೆಂದೂ ಕೊನೆಯ ಅಸ್ತ್ರವಾಗಿರಲಿದೆ. ಆದರೆ ಅದು ಒಂದೊಮ್ಮೆ ಅನಿವಾರ್ಯವಾದರೆ ನಾವು ಅದರಲ್ಲಿ ಜಯಶಾಲಿಯಾಗಿ ಹೊರಹೊಮ್ಮಲಿದ್ದೇವೆ’ ಎಂದು ನರವಣೆ ಭರವಸೆ ವ್ಯಕ್ತಪಡಿಸಿದ್ದಾರೆ.

Viral News: ಹಿಮಪಾತದ ನಡುವೆ ಗರ್ಭಿಣಿಯನ್ನು ಹೊತ್ತು ಆಸ್ಪತ್ರೆ ತಲುಪಿಸಿದ ಯೋಧರು, ಯೇ ಮೇರಾ ಇಂಡಿಯಾ!

ಪಾಕ್‌, ಉಗ್ರರಿಗೆ ಎಚ್ಚರಿಕೆ: ಇದೇ ವೇಳೆ ಭಾರತೀಯ ಸೇನೆ, ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ ಹೊಂದಿದ್ದು, ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರರಿಂದ ಎದುರಾಗುವ ಯಾವುದೇ ಸವಾಲುಗಳನ್ನು ಎದುರಿಸಲಿದೆ. ಪಾಕಿಸ್ತಾನದ  ಭಾಗದಲ್ಲಿ 350ರಿಂದ 400 ಉಗ್ರರು ತರಬೇತಿ ಪಡೆಯುತ್ತಿದ್ದು, ಭಾರತದೊಳಕ್ಕೆ ಉಗ್ರರ ನುಸುಳುವಿಕೆ ಯತ್ನವು ಪಾಕಿಸ್ತಾನದ ಕ್ರೂರ ಮನಸ್ಥಿತಿಯಾಗಿದೆ. ಇದಕ್ಕೆ ತಿರುಗೇಟು ನೀಡಲು ನಮ್ಮ ಯೋಧರು ಸದಾ ಕಟ್ಟೆಚ್ಚರದಿಂದ  ಇರಲಿದ್ದಾರೆ ಎಂದು ನರವಣೆ ಹೇಳಿದರು.

ಸೂಕ್ತ ಕ್ರಮ:  ಕಳೆದ ವರ್ಷದ ಡಿ.4ರಂದು ನಾಗಾಲ್ಯಾಂಡ್‌ನ ಮಾನ್‌ ಜಿಲ್ಲೆಯಲ್ಲಿ ಉಗ್ರರೆಂದು ಭಾವಿಸಿ ಯೋಧರ ಗುಂಡಿನ ಕಾರ್ಯಾಚರಣೆಯಲ್ಲಿ ಬಲಿಯಾದ 14 ನಾಗರಿಕರು ಬಲಿಯಾದ ಘಟನೆಯು ದುರದೃಷ್ಟಕರವಾದದ್ದು. ಈ  ಕುರಿತಾದ ತನಿಖೆಯು ಕೊನೇ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ತನಿಖಾ ವರದಿ ಕೈಸೇರಲಿದೆ. ಆ ಬಳಿಕ ತನಿಖೆಯ ವರದಿ ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

ಈ ಹಿಂದಿನಿಂದಲೂ ಲಡಾಕ್ ಗಡಿಯಲ್ಲಿ ಒಂದೆಲ್ಲ ಒಂದು ಕ್ಯಾತೆ ತೆಗೆದುಕೊಂಡು ಬಂದಿರುವ ಚೀನಾ ಸದ್ದಿಲ್ಲದೆ  ತನ್ನ ಕುತಂತ್ರಿ ಕೆಲಸ ಮಾಡುತ್ತಲೇ ಇದೆ. ಪ್ರಪಂಚದ ಎದುರು ಸಭ್ಯನಂತೆ ನಟಿಸುತ್ತ ಪಾಕಿಸ್ತಾನವನ್ನು ಎತ್ತಿಕಟ್ಟುವ ಕೆಲಸವ ಮಾಡುತ್ತಿರುವುದು ಗೊತ್ತಿರದ ಸಂಗತಿ ಅಲ್ಲ.  ಕಳೆದ ವರ್ಷ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿತ್ತು. ಕುತಂತ್ರಿ ಚೀನಾ ಇಪ್ಪತ್ತಕ್ಕೂ ಅಧಿಕ ಭಾರತೀಯ ಸೈನಿಕರನ್ನು ಬಲಿ ಪಡೆದಿತ್ತು. 

 

 

click me!