USA Vs China: ಪ್ರಾಬಲ್ಯಕ್ಕಾಗಿ ಗುದ್ದಾಡುವ ಬದಲು ವಿಶ್ವವನ್ನೇ 2 ತುಂಡಾಗಿಸಿ ಹಂಚಿಕೊಂಡು ಆಳುವ ಇಂಗಿತ ಟ್ರಂಪ್‌, ಕ್ಸಿಗೆ!

Kannadaprabha News   | Kannada Prabha
Published : May 19, 2026, 08:36 AM IST
China Challenges Superpower USA Trump and Xi Intend to Divide and Rule the World into Two Halve

ಸಾರಾಂಶ

ಇತ್ತೀಚಿನ ಟ್ರಂಪ್-ಕ್ಸಿ ಭೇಟಿಯು, ಅಮೆರಿಕ ಮತ್ತು ಚೀನಾ ಜಾಗತಿಕ ಪ್ರಾಬಲ್ಯಕ್ಕಾಗಿ ಕಿತ್ತಾಡುವ ಬದಲು ವಿಶ್ವವನ್ನು ಹಂಚಿಕೊಳ್ಳುತ್ತಿರುವಂತೆ ಕಾಣುತ್ತಿದೆ. ಈ ಅಘೋಷಿತ ಅಧಿಕಾರ ಹಂಚಿಕೆಯು ಭಾರತದಂತಹ ದೇಶಗಳಿಗೆ ದೊಡ್ಡ ಸವಾಲನ್ನು ಒಡ್ಡಿದ್ದು, ಯಾರ ಪರ ನಿಲ್ಲಬೇಕೆಂಬ ಗೊಂದಲವನ್ನು ಸೃಷ್ಟಿಸಿದೆ.

  • ಶಶಿ ತರೂರ್‌ ಕಾಂಗ್ರೆಸ್‌ ಸಂಸದ

ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು 3 ದಿನಗಳ ಚೀನಾ ಭೇಟಿ ಮುಗಿಸಿ ಮರಳಿದರು. ವಿಶ್ವದಲ್ಲಿ ಸೂಪರ್‌ಪವರ್‌ ಆಗಿ ಮೆರೆಯುತ್ತಿರುವ ಅಮೆರಿಕ ಮತ್ತು ಆ ಪಟ್ಟದ ಮೇಲೆ ಕಣ್ಣಿಟ್ಟಿರುವ ಚೀನಾ ಮುಖಾಮುಖಿಯಾದ ಆ ಸಂದರ್ಭಗಳಲ್ಲಿ ಕೆಲ ಕುತೂಹಲಕಾರಿ ಬೆಳವಣಿಗೆಗಳಾದವು. ಜಾಗತಿಕ ಪ್ರಾಬಲ್ಯಕ್ಕಾಗಿ ಕಿತ್ತಾಡುವ ಬದಲು ಎರಡೂ ರಾಷ್ಟ್ರಗಳು ವಿಶ್ವವನ್ನು ತಮ್ಮಲ್ಲೇ ಹಂಚಿಕೊಂಡು ಆಳಲು ನಿರ್ಧರಿಸಿದಂತೆ ಹಾಗೂ ಉಳಿದ ದೇಶಗಳು ಅದನ್ನು ಕಣ್ಣುಬಿಟ್ಟುಕೊಂಡು ನೋಡುತ್ತಿದ್ದಂತಿತ್ತು.

ಕ್ಸಿ ಮುಂದೆ ಬಾಗಿದ ಟ್ರಂಪ್‌:

ಕ್ಸಿ ಹಾಗೂ ಟ್ರಂಪ್‌ ಮುಖಾಮುಖಿಯಾದ ಸಂದರ್ಭದ ದೃಶ್ಯಗಳನ್ನು ನೀವು ನೋಡಿರಬಹುದು. ಅದರಲ್ಲಿ ಅಮೆರಿಕದ ಅಧ್ಯಕ್ಷರು ಕೊಂಚ ಬಾಗಿ, ಹಸ್ತಾಲಾಘವ ಮಾಡಿದ್ದನ್ನು ನೋಡಿದ್ದರೆ, ಚೀನಾಧ್ಯಕ್ಷರಿಗೆ ಗೌರವ ಸೂಚಿಸಿದಂತಿತ್ತು. ಮೊದಲವರು ಕ್ಸಿ ಕೈಯ್ಯನ್ನೆಳೆದುಕೊಂಡರಾದರೂ, ಮರುಕ್ಷಣವೇ ಟ್ರಂಪ್‌ರ ಪ್ರಾಬಲ್ಯ ಜಯಿಸಲು ಬಿಡದ, ಕ್ಸಿ ಅಷ್ಟೇ ದೃಢವಾಗಿ ಟ್ರಂಪ್‌ರ ಹಸ್ತವನ್ನು ಎಳೆದುಕೊಂಡರು. ಈ ಮೂಲಕ, ನಾವಿಬ್ಬರೂ ಸಮಾನರೆಂಬುದನ್ನು ಟ್ರಂಪ್‌ಗೆ ಕ್ಸಿ ಮೊದಲ ಭೇಟಿಯಲ್ಲೇ ಮನವರಿಕೆ ಮಾಡಿಸಿದರು.

ಸಿಇಒ ದಂಡು ಫೋಟೋಗಷ್ಟೇ:

ಟ್ರಂಪ್‌ ಅವರ ಜತೆ ಅಮೆರಿಕದ ದೊಡ್ಡದೊಡ್ಡ ಕಂಪನಿಗಳ ಸಿಇಒಗಳ ದಂಡೇ ಹೋಗಿತ್ತು. ಆದರೆ ಅವರು ಅಲ್ಲಿ ನಡೆದುಕೊಂಡ ರೀತಿಯಲ್ಲಿ ಯಾವುದೇ ಗತ್ತು ಕಾಣಲಿಲ್ಲ. ಬದಲಿಗೆ ಅವರೆಲ್ಲಾ ಟ್ರಂಪ್‌ರ ಈ ಪ್ರವಾಸಕ್ಕೆ ಬ್ಯುಸಿನೆಸ್‌ನ ಬಣ್ಣವನ್ನು ಬಳಿಯಲು ಬಂದಂತಿತ್ತು. ಅವರೆಲ್ಲಾ ಫೋಟೋಗಳಿಗೆ ಪೋಸ್‌ ಕೊಡಲಷ್ಟೇ ಸೀಮಿತವಾಗಿದ್ದರು.

ಈ ಭೇಟಿ ವೇಳೆ ಅಮೆರಿಕದಿಂದ ಬೋಯಿಂಗ್‌, ಸೋಯಾಬೀನ್‌ ಖರೀದಿಯಂತಹ ಒಪ್ಪಂದಗಳನ್ನು ಮಾಡಿಕೊಳ್ಳಲಾಯಿತು ನಿಜ. ಆದರೆ ಇದೆಲ್ಲಾ, ‘ಟ್ರಂಪ್‌ ಖಾಲಿ ಕೈಯ್ಯಲ್ಲಿ ಮರಳಿದರು’ ಎಂಬ ಅಪವಾದದಿಂದ ತಪ್ಪಿಸಿಕೊಳ್ಳುವ ತಂತ್ರವಾಗಿತ್ತಷ್ಟೇ.

ಥುಸಿಡೈಡ್ಸ್ ಬಲೆ ಭಯವೇ ಮಾಯ:

ಅದಾಗಲೇ ಸೂಪರ್‌ಪವರ್‌ ಆಗಿರುವ ಅಮೆರಿಕದ ಜತೆ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಚೀನಾ ಯುದ್ಧಕ್ಕಿಳಿಯಬಹುದು ಎಂಬ ಆತಂಕವು ಪಾಶ್ಚಾತ್ಯ ವಿದೇಶಾಂಗ ನೀತಿ ತಜ್ಞರನ್ನು ವರ್ಷಗಳಿಂದ ಕಾಡುತ್ತಿತ್ತು. ಇದನ್ನು ರಾಜತಾಂತ್ರಿಕ ಭಾಷೆಯಲ್ಲಿ ‘ಥುಸಿಡೈಡ್ಸ್ ಬಲೆ’ ಎಂದು ಕರೆಯಲಾಗುತ್ತದೆ. ಆದರಿಂದು ಚೀನಾದ ವರ್ತನೆ ನೋಡಿದರೆ, ಅದಕ್ಕೆ ಅಮೆರಿಕದೊಂದಿಗೆ ಕಾದಾಡುವ ಆಸಕ್ತಿಯೇ ಇಲ್ಲ ಅನ್ನಿಸುತ್ತದೆ. ಬದಲಿಗೆ, ‘ನೀವು ನಿಮ್ಮ ಸ್ಥಾನದಲ್ಲೇ ಇರಿ. ನಾವೂ ಸಮನಾಗಿ ಬೆಳೆಯುತ್ತೇವೆ’ ಎಂಬ ಸಂದೇಶವನ್ನು ನೀಡಿದಂತಿತ್ತು.

ಬಾಳಿ ಹಾಗೂ ಬಾಳಲು ಬಿಡಿ:

ವ್ಯಾಪಾರ ಸಮರವಾಗಿದ್ದ ಅಮೆರಿಕ ಮತ್ತು ಚೀನಾದ ನಡುವಿನ ಪೈಪೋಟಿ ವಿಶ್ವವನ್ನಾಳುವ ವಿಷಯದಲ್ಲಿ ಭುಗಿಲೇಳಬಹುದು ಎಂಬ ವಿಶ್ಲೇಷಣೆಯೀಗ ತಲೆಕೆಳಗಾಗಿದೆ. ಅವುಗಳೀಗ ತಮ್ಮ ಸಾಮರ್ಥ್ಯಕ್ಕನುಗುಣವಾಗಿ ವಿಶ್ವವನ್ನೇ ಹಂಚಿಕೊಳ್ಳುತ್ತಿವೆ. ಅಮೆರಿಕವು ಉತ್ಕೃಷ್ಟ ತಂತ್ರಜ್ಞಾನ, ಸಾಫ್ಟ್‌ವೇರ್‌, ಕೃತಕ ಬುದ್ಧಿಮತ್ತೆ, ಆರ್ಥಿಕತೆಗಳನ್ನು ಹೊಂದಿದೆ. ಅತ್ತ ಚೀನಾ ವಿಶ್ವದ ಅತಿದೊಡ್ಡ ಉತ್ಪಾದಕ ಹಾಗೂ ವ್ಯಾಪಾರಿಯಾಗಿ ಹೊರಹೊಮ್ಮಿದ್ದು, ಜಾಗತಿಕ ಪೂರೈಕೆ ಸರಪಳಿಯನ್ನು ನಿಯಂತ್ರಿಸುತ್ತಿದೆ. ಅಂದರೆ, ಅಮೆರಿಕ ಆರ್ಥಿಕತೆಯನ್ನು ತನ್ನ ಮುಷ್ಟಿಯಲ್ಲಿಟ್ಟುಕೊಂಡಿದ್ದರೆ, ಚೀನಾ ಉತ್ಪಾದನೆ ಮತ್ತು ಪೂರೈಕೆಯ ಮೇಲೆ ಹಿಡಿತ ಸಾಧಿಸಿದೆ.

ತೈವಾನ್‌ ಬಗ್ಗೆ ಟ್ರಂಪ್‌ ನಿರಾಸಕ್ತಿ?:

ಚೀನಾ ಆಕ್ರಮಣಕ್ಕೆ ಮುಂದಾದರೆ ತೈವಾನ್‌ಅನ್ನು ಕಾಪಾಡುವುದಾಗಿ ಹೇಳುತ್ತಿದ್ದ ಅಮೆರಿಕದ ಅಧ್ಯಕ್ಷರ ಧೋರಣೆ ಬದಲಾದಂತಿತ್ತು. ‘ತೈವಾನ್‌ ಚೀನಾದಿಂದ ಕೇವಲ 59 ಮೈಲಿ ದೂರದಲ್ಲಿದೆ. ಆದರೆ ಅಮೆರಿಕದಿಂದ ಬರೋಬ್ಬರಿ 9,500 ಮೈಲಿ ದೂರವಿದೆ’ ಎಂದು ಟ್ರಂಪ್‌ ಹೇಳಿದರು. ಇದರರ್ಥ, ತೈವಾನ್‌ ರಕ್ಷಣೆ ಹೇಳಿದಷ್ಟು ಸುಲಭವಿಲ್ಲ ಎಂದು ಅವರೇ ಒಪ್ಪಿಕೊಂಡಂತಾಯಿತು.

ಇದರಲ್ಲಿ ಅಮೆರಿಕದ ಸ್ವಾರ್ಥವೂ ಇಲ್ಲದಿಲ್ಲ. ಸೆಮಿಕಂಡಕ್ಟರ್‌ ಉತ್ಪಾದನೆಯಲ್ಲಿ ತೈವಾನ್‌ ಸಾರ್ವಭೌಮನಾಗಿತ್ತು. ಆದರೀಗ ಅಮೆರಿಕ ಕೂಡ ಅವುಗಳ ಉತ್ಪಾದನೆ ಆರಂಭಿಸಿದ್ದು, ಸ್ವಂತ ಚಿಪ್‌ ಕಾರ್ಖಾನೆಗಳನ್ನು ನಿರ್ಮಿಸಿಕೊಂಡಿದೆ. ಒಂದೊಮ್ಮೆ ಈ ಕ್ಷೇತ್ರದಲ್ಲಿ ಪೂರ್ಣ ಸ್ವಾವಲಂಬಿಯಾಗಿಬಿಟ್ಟರೆ, ಬಳಿಕ ಅಮೆರಿಕವು ತೈವಾನ್‌ ಸ್ನೇಹದಿಂದ ದೂರ ಸರಿಯಬಹುದು. ಹೀಗಾದರೆ ಗೆಲುವು ಚೀನಾದ ಪಾಲಾದಂತೆ.

ಇಬ್ಬರಿಗೂ ಯುದ್ಧ ಬೇಡ:

ಚೀನಾ ನೇರ ಯುದ್ಧಕ್ಕಿಂತ ಆರ್ಥಿಕ ಒತ್ತಡ, ನೌಕಾ ದಿಗ್ಬಂಧನ ಮತ್ತು ಸಾಂಸ್ಥಿಕ ಪ್ರಭಾವಗಳ ಮೂಲಕ ಜಗವನ್ನಾಳಲು ಬಯಸುತ್ತದೆ. ಒಂದೊಮ್ಮೆ ಸಮರ ಆರಂಭವಾದರೆ ಡ್ರೋನ್‌, ಕ್ಷಿಪಣಿಯಂತಹ ದುಬಾರಿ ಶಸ್ತ್ರಾಸ್ತ್ರಗಳನ್ನು ಕಳೆದುಕೊಳ್ಳಬೇಕಾಗುವುದು ಎಂದು ಅಮೆರಿಕಕ್ಕೂ ಗೊತ್ತು. ಚೀನಾ ಎದುರಾಳಿಯಾಗಿ ಬಂದರೆ ಯುದ್ಧ ತಿಂಗಳುಗಟ್ಟಲೆ ಎಳೆಯಲ್ಪಟ್ಟು ತನಗೇ ಭಾರೀ ನಷ್ಟವಾಗುತ್ತದೆ ಎಂಬ ಅರಿವೂ ಅದಕ್ಕಿದೆ. ಹಾಗಾಗಿ ಎರಡೂ ದೇಶಗಳು ಸಮರ ಸಾಧ್ಯತೆಯನ್ನು ದೂರ ತಳ್ಳುತ್ತಿವೆ.

ಭಾರತವೇನು ಮಾಡಬೇಕು?:

ಅಮೆರಿಕ ಮತ್ತು ಚೀನಾದ ನಡುವೆ ಇಂತಹ ಅಘೋಷಿತ ಅಧಿಕಾರ ಹಂಚಿಕೆ ಒಪ್ಪಂದವಾಗುತ್ತಿರುವುದು ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶದ ಪಾಲಿಗೆ ಆತಂಕಕಾರಿ. ಭವ್ಯ ಇತಿಹಾಸ, ಪ್ರಜಾಪ್ರಭುತ್ವ ಮೌಲ್ಯಗಳು, ಮಹತ್ವಾಂಕ್ಷೆಗಳನ್ನು ಹೊಂದಿರುವ ರಾಷ್ಟ್ರದ ಸ್ವತಂತ್ರ ನಿಲುವನ್ನೇ ಕಸಿಯುವ ಬೆಳವಣಿಗೆಯಿದು. ಇಂತಹ ರಾಷ್ಟ್ರಗಳೀಗ, ಯಾವ ಸೂಪರ್‌ಪವರ್‌ ಜತೆ ಕೈಜೋಡಿಸಬೇಕು ಎಂದು ಚಿಂತಿಸುವ ಕಾಲ ಬಂದಿದೆ.

ಒಂದೊಮ್ಮೆ ಆರ್ಥಿಕವಾಗಿ ಬಲಿಷ್ಠವಾಗಿರುವ ಅಮೆರಿಕಕ್ಕೆ ಹತ್ತಿರವಾದರೆ, ವ್ಯಾಪಾರದಲ್ಲಿ ಚೀನಾದಿಂದ ಹೊಡೆತ ತಿನ್ನಬೇಕು. ಚೀನಾ ಜತೆ ಸ್ನೇಹ ವೃದ್ಧಿಸಿಕೊಂಡರೆ ಅಮೆರಿಕದ ನಿಧಿ ಹಾಗೂ ರಕ್ಷಣೆಗೆ ಕತ್ತರಿ ಬೀಳುತ್ತದೆ.

ಚೀನಾ ಈಗಾಗಲೇ ದುರ್ಲಭ ಖನಿಜಗಳ ಮೇಲೆ ಹಿಡಿತ ಹೊಂದಿದ್ದು, ಅದನ್ನಿಟ್ಟುಕೊಂಡು ಭಾರತಕ್ಕೆ ಆಟ ಆಡಿಸುತ್ತಿದೆ. ಅತ್ತ ಅಮೆರಿಕ ಭಾರೀ ತೆರಿಗೆ ಹೇರಿದ್ದು, ಸಂಬಂಧ ಹಳಸುತ್ತಿದ್ದಂತೆ ಅದನ್ನು ಹೆಚ್ಚಿಸುವುದು ಕಷ್ಟದ ಕೆಲಸವೇನಲ್ಲ. ಈ ಪರಿಸ್ಥಿತಿಯಲ್ಲಿ ಭಾರತ ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಅತ್ಯಗತ್ಯ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India News Live: USA Vs China - ಪ್ರಾಬಲ್ಯಕ್ಕಾಗಿ ಗುದ್ದಾಡುವ ಬದಲು ವಿಶ್ವವನ್ನೇ 2 ತುಂಡಾಗಿಸಿ ಹಂಚಿಕೊಂಡು ಆಳುವ ಇಂಗಿತ ಟ್ರಂಪ್‌, ಕ್ಸಿಗೆ!
ಪ್ರಧಾನಿ ಮೋದಿ ನೆದರ್ಲೆಂಡ್‌ ಡೀಲ್‌ನ ಫಲ ಬೆಂಗಳೂರಿಗೆ! ಹೆಸರಘಟ್ಟದಲ್ಲಿ ಡಚ್‌ ಡೈರಿ ತರಬೇತಿ ಹಬ್‌ ಸ್ಥಾಪನೆ! ರೈತರಿಗೆ ಹೇಗೆ ಲಾಭ ಗೊತ್ತಾ?