
ನವದೆಹಲಿ(ಜೂ.10): ಕೊರೋನಾ ವೈರಸ್ ಮಕ್ಕಳಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಕೊರೋನಾದಿಂದ ಮಕ್ಕಳನ್ನು ರಕ್ಷಿಸಲು ಪೋಷಕರು ಮುಂಜಾಗ್ರತೆ ವಹಿಸುತ್ತಿದ್ದಾರೆ. ಇದರ ನಡುವೆ ಕೊರೋನಾ ವೈರಸ್ ತಗುಲಿದ ಮಕ್ಕಳ ಆರೈಕೆ ಹಾಗೂ ಚಿಕಿತ್ಸೆಗೆ ಡೈರೆಕ್ಟರ್ ಜನರಲ್ ಆಫ್ ಹೆಲ್ತ್ ಸರ್ವೀಸ್(DGH) ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿ ಪ್ರಕಾರ 18 ವರ್ಷದೊಳಗಿನ ಮಕ್ಕಳ ಕೊರೋನಾ ಚಿಕಿತ್ಸೆಗೆ ರೆಮ್ಡಿಸಿವಿರ್ ಬಳಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಸೋಂಕಿತರ ತುರ್ತು ಚಿಕಿತ್ಸೆಗೆ DRDO ಅಭಿವೃದ್ಧಿಪಡಿಸಿದ 2DG ಔಷಧಿ ಬಳಕೆಗೆ ಮಾರ್ಗಸೂಚಿ ಪ್ರಕಟ!
ಮೈಲ್ಡ್ ಕೊರೋನಾ ಕಾಣಿಸಿಕೊಂಡ ಮಕ್ಕಳಿಗೆ ಪ್ಯಾರಾಸೆಟಮಾಲ್ ಔಷಧಿ 10-15mg/kg/ ಪ್ರತಿ 4 ರಿಂದ 6 ಗಂಟೆಗೊಮ್ಮೆ ನೀಡಬಹುದು. ಕೊರೋನಾ ಕಾಣಿಸಿಕೊಂಡು ಲಕ್ಷಣವಿಲ್ಲದ ಮಕ್ಕಳಿಗೆ ಆಂಟಿಮೈಕ್ರೊಬಿಯಲ್‌ಗಳನ್ನು ಶಿಫಾರಸು ಮಾಡುವುದಿಲ್ಲ ಎಂದು DGH ಪ್ರಕಟಿಸಿದೆ. ಇನ್ನು 5 ವರ್ಷ ಹಾಗೂ 5 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಮಾಸ್ಕ್ ಕಡ್ಡಾಯವಲ್ಲ ಎಂದಿದೆ.
ಸ್ಟಿರಾಯ್ಡ್ ಬಳಕೆ ಮಾರ್ಗಸೂಚಿ:
ಮಕ್ಕಳ ಮೇಲೆ ಸ್ಟೀರಾಯ್ಡ್ಸ್ ಬಳಕೆ ಮಾಡುವಂತಿಲ್ಲ, ಮೈಲ್ಡ್ ಹಾಗೂ ಲಕ್ಷಣ ರಹಿತಿ ಕೊರೋನಾ ಸೋಂಕಿತ ಮಕ್ಕಳಿಗೆ ಸ್ಟೀರಾಯ್ಡ್ ಬಳಕೆ ಹಾನಿಕಾರಕವಾಗಿದೆ. ಇನ್ನು ಆಸ್ಪತ್ರೆ ದಾಖಲಾಗುವು ಮಕ್ಕಳ ಮೇಲೆ ಹೆಚ್ಚಿನ ನಿಗಾವಹಿಸಬೇಕು ಎಂದಿದೆ.
ವ್ಯರ್ಥ ಮಾಡಿದವರಿಗೆ ಲಸಿಕೆ ಪ್ರಮಾಣ ಕಡಿತ: ಕೇಂದ್ರದ ಎಚ್ಚರಿಕೆ
ಕೆಲ ಪ್ರಕರಣಗಳಲ್ಲಿ ಸ್ಟೀರಾಯ್ಡ್ಸ್ ಬಳಕೆ ಮಾಡುವ ಅನಿವಾರ್ಯತೆ ಎದುರಾದಲ್ಲಿ ಸರಿಯಾದ ಸಮಯದಲ್ಲಿ, ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ಅವಧಿಗೆ ಬಳಸಬೇಕು ಎಂದಿದೆ. ಡೆಕ್ಸಮೆಥಾಸೊನ್ 0.15 ಮಿಗ್ರಾಂ / ಕೆಜಿ ದಿನಕ್ಕೆ ಎರಡು ಬಾರಿ (ಗರಿಷ್ಠ 6 ಮಿಗ್ರಾಂ) ಅಥವಾ ಡೆಕ್ಸಮೆಥಾಸೊನ್ ಲಭ್ಯವಿಲ್ಲದಿದ್ದರೆ ಮೀಥೈಲ್‌ಪ್ರೆಡ್ನಿಸೋಲೋನ್‌ನ ಸಮಾನ ಪ್ರಮಾಣವನ್ನು ಬಳಸಬಹುದು. ದೈನಂದಿನ ಆಧಾರದ ಮೇಲೆ ಕ್ಲಿನಿಕಲ್ ಮೌಲ್ಯಮಾಪನವನ್ನು ಅವಲಂಬಿಸಿ 5–14 ದಿನಗಳವರೆಗೆ ಈ ಔಷಧಿ ಬಳಕೆ ಮಾಡಬಹುದು.
ಪ್ರತಿಕಾಯಗಳು:
ಕೊರೋನಾ ವೈರಸ್‌ನಿಂದ ಅಸ್ವಸ್ಥರಾದ ಅಥವಾ ತೀವ್ರವಾಗಿ ಕಾಣಿಸಿಕೊಂಡ ಮಕ್ಕಳಿಗೆ ಆಸ್ಪಿರಿನ್: 3 ಮಿಗ್ರಾಂ / ಕೆಜಿ / ದಿನದಿಂದ 5 ಮಿಗ್ರಾಂ / ಕೆಜಿ / ದಿನ ಗರಿಷ್ಠ 81 ಮಿಗ್ರಾಂ / ದಿನ (ಥ್ರಂಬೋಸಿಸ್ ಸ್ಕೋರ್ 2.5 ಇದ್ದರೆ) ಈ ಔಷಧ ಬಳಕೆ ಮಾಡಬಹುದು.
ರೆಮ್ಡಿಸಿವಿರ್:
ತುರ್ತು ಚಿಕಿತ್ಸೆಗೆ ಬಳಸುತ್ತಿರುವ ರೆಮ್ಡಿಸಿವಿರ್ ಮಕ್ಕಳಿಗೆ ನೀಡಬಾರದು. 18 ವರ್ಷ ಕೆಳಗಿನ ಮಕ್ಕಳಿಗೆ ರೆಮ್ಡಿಸಿವಿರ್ ನೀಡಬಾರದು ಎಂದಿದೆ.
ಕೋವಿಡ್ ಸೋಂಕಿತರಿಗೆ ಇನ್ಮುಂದೆ ಪ್ಲಾಸ್ಮಾ ಥೆರಪಿ ಇಲ್ಲ, ಹೊಸ ಮಾರ್ಗಸೂಚಿ ಬಿಡುಗಡೆ
ಮಾಸ್ಕ್:
5 ವರ್ಷ ಅಥವಾ 5ಕ್ಕಿಂತ ಕೆಳಗಿನ ಮಕ್ಕಳು ಮಾಸ್ಕ್ ಧರಿಸುವ ಅಗತ್ಯವಿಲ್ಲ. 6 ರಿಂದ 11 ವರ್ಷದ ಮಕ್ಕಳು ಪೋಷಕರ ಮೇಲ್ವಿಚಾರಣೆಯಲ್ಲಿ ಮಾಸ್ಕ್ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ಬಳಸಬಹುದು. ಆದರೆ ಮಕ್ಕಳ ಸಾಮರ್ಥ್ಯ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. 12 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳು ವಯಸ್ಕರಂತೆಯೇ ಮಾಸ್ಕ್ ಧರಿಸಬೇಕು.
ಮಕ್ಕಳ ಪರೀಕ್ಷೆ:
12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳ ಕಾರ್ಡಿಯೋ ಪಲ್ಮನರಿ ಪತ್ತೆ ಹಚ್ಚಲು 6 ನಿಮಿಷದ ನಡಿಗೆ ಟೆಸ್ಟ್ ಬಳಸಲು ಶಿಫಾರಸು ಮಾಡಿದೆ. 6-ನಿಮಿಷದ ವಾಕ್ ಟೆಸ್ಟ್ 'ಅನ್ನು 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಲ್ಲಿ ಪೋಷಕರು / ಪೋಷಕರ ಮೇಲ್ವಿಚಾರಣೆಯಲ್ಲಿ ಮಾಡಲಾಗುವುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ