* ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಎಫೆಕ್ಟ್
* 5 ವರ್ಷದ ದಾಖಲೆ ಮಳೆಗೆ ಮುಳುಗಿದ ಚೆನ್ನೈ
* ಒಂದೇ ದಿನ 20 ಸೆಂ.ಮೀ. ಎಡೆಬಿಡದ ವರ್ಷಧಾರೆ
* ಕಾಂಚೀಪುರಂ, ತಿರುವಳ್ಳೂರು ಜಿಲ್ಲೆಗಳಲ್ಲೂ ಭಾರೀ ಮಳೆ
* ಚೆನ್ನೈನ ಅನೇಕ ಪ್ರದೇಶಗಳಲ್ಲಿ ಪ್ರವಾಹ ಸೃಷ್ಟಿ
ಚೆನ್ನೈ(ನ.08): ಬಂಗಾಳ ಕೊಲ್ಲಿಯಲ್ಲಿ (Bay of Bengal) ಸಂಭವಿಸಿದ ವಾಯುಭಾರ ಕುಸಿತದ ಕಾರಣ ತಮಿಳುನಾಡಿನ ರಾಜಧಾನಿ ಚೆನ್ನೈ (Chennai) ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ 5 ವರ್ಷದ ಗರಿಷ್ಠ ವರ್ಷಧಾರೆ ಸುರಿದಿದೆ. ಇದರಿಂದಾಗಿ ಚೆನ್ನೈನ ಅನೇಕ ಪ್ರದೇಶಗಳು ಜಲಾವೃತವಾಗಿದ್ದು, 2015ರ ಪ್ರವಾಹ (Flood) ಪರಿಸ್ಥಿತಿ ಮತ್ತೊಮ್ಮೆ ನೆನಪಿಗೆ ಬರುವಂತೆ ಮಾಡಿದೆ.
ಶನಿವಾರ ಆಗಾಗ ಬಿದ್ದ ಭಾರೀ ಮಳೆ (Rain), ರಾತ್ರಿಯಿಂದ ಭಾನುವಾರ ಬೆಳಗ್ಗೆಯವರೆಗೆ ಎಡೆಬಿಡದೇ ಸುರಿದಿದೆ. ಚೆನ್ನೈನಲ್ಲಿ ಈ ದಿನ ಸರಾಸರಿ 20 ಸೆಂ.ಮೀ. ಮಳೆ ಸುರಿದಿದ್ದು, ಇದು 5 ವರ್ಷದ ದಾಖಲೆಯಾಗಿದೆ. 2015ರಲ್ಲಿ ಒಂದೇ ದಿನ 49 ಸೆಂ.ಮೀ. ಮಳೆ ಸುರಿದಿತ್ತು. ಆಗ 250 ಮಂದಿ ಪ್ರವಾಹಕ್ಕೆ ಬಲಿಯಾಗಿದ್ದರು. ಅದೇ ವೇಳೆ ಚೆನ್ನೈ ನಗರವನ್ನು ಪ್ರಾಕೃತಿಕ ವಿಕೋಪ ವಲಯ ಎಂದು ಸಾರಲಾಗಿತ್ತು.
undefined
ಅಂದಿನ ಮಳೆಗಿಂತ ಈಗ ಅರ್ಧದಷ್ಟು ಮಳೆ ಸುರಿದಿದ್ದು, ಆದರೂ ನಗರ ಜಲಾವೃತವಾಗಿದ್ದು, ಜನತೆ ಪರದಾಡಿದ್ದಾರೆ. ನಗರಕ್ಕೆ ಸಂಬಂಧಿಸಿದ 3 ಜಲಾಶಯಗಳು ಭರ್ತಿ ಆಗಿದ್ದು, ನೀರು ಹೊರಬಿಡಲು ನಿರ್ಧರಿಸಲಾಗಿದೆ. ಇದೇ ವೇಳೆ ಚೆನ್ನೈ ಸನಿಹದ ಕಾಂಚೀಪುರಂ (Kanchipuram) ಹಾಗೂ ತಿರುವಳ್ಳೂರು ಜಿಲ್ಲೆಗಳಲ್ಲಿ ಕೂಡ ಭಾರಿ ವರ್ಷಧಾರೆ ಸಂಭವಿಸಿದೆ.
ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತವೇ ಈ ಮಳೆಗೆ ಕಾರಣ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಇನ್ನೂ 4 ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ (Weather Department) ತಿಳಿಸಿದೆ. ನ.10 ಹಾಗೂ ನ.11ರಂದು ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಸಾರಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಅಪಾಯದ ವಲಯದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲು ಸೂಚಿಸಲಾಗಿದೆ.
ಸಿಎಂ ಭೇಟಿ, 4 ಪರಿಹಾರ ತಂಡ ನಿಯೋಜನೆ:
ಪ್ರವಾಹ ಪೀಡಿತ ಸ್ಥಳಗಳಿಗೆ ಭಾನುವಾರ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (MK Stalin) ಹಾಗೂ ಅವರ ಸಂಪುಟದ ಸಹೋದ್ಯೋಗಿಗಳು, ಶಾಸಕರು ಭೇಟಿ ನೀಡಿ ಪರಿಸ್ಥಿತಿ ಅವಲೋಕನ ನಡೆಸಿದರು ಹಾಗೂ ರಕ್ಷಣಾ ಕಾರ್ಯಕ್ಕೆ ಮಾರ್ಗೋಪಾಯ ಸೂಚಿಸಿದರು. 4 ರಾಷ್ಟ್ರೀಯ ವಿಪತ್ತು ರಕ್ಷಣಾ ತಂಡಗಳನ್ನು ಚೆನ್ನೈನಲ್ಲಿ ನಿಯೋಜಿಸಲಾಗಿದ್ದು, ಜಲಾವೃತ ಪ್ರದೇಶದಲ್ಲಿನ ಜನರನ್ನು ಸಂತ್ರಸ್ತ ಕೇಂದ್ರಗಳಿಗೆ ಸ್ಥಳಾಂತರ ಮಾಡುವಲ್ಲಿ ತೊಡಗಿವೆ. ಭಾರೀ ಮಳೆ ಹಿನ್ನೆಲೆಯಲ್ಲಿ 4 ಜಿಲ್ಲೆಗಳಲ್ಲಿ ಶಾಲಾ ಕಾಲೇಜಿಗೆ 2 ದಿನ ರಜೆ ಘೋಷಿಸಲಾಗಿದೆ. ಮತ್ತೊಂದೆಡೆ ದೀಪಾವಳಿಗಾಗಿ ಊರಿಗೆ ತೆರಳಿದವರು ಇನ್ನು 2-3 ದಿನ ಚೆನ್ನೈಗೆ ಮರಳದೇ ಇರುವುದು ಒಳಿತು ಎಂದು ಸಿಎಂ ಸ್ಟಾಲಿನ್ ಸಲಹೆ ನೀಡಿದ್ದಾರೆ.
ಈ ನಡುವೆ ಭಾನುವಾರ ನಟ ಕಮಲ್ ಹಾಸನ್ ಅವರ 67ನೇ ಜನ್ಮದಿನ ಇತ್ತು. ‘ಆದರೆ ಜನರ ರಕ್ಷಣೆ ಮಾಡಿ. ಅದೇ ನೀವು ನನಗೆ ಕೊಡುವ ಜನ್ಮದಿನದ ಕಾಣಿಕೆ’ ಎಂದು ಕಮಲ್ ಹಾಸನ್ ಅವರು ಅಭಿಮಾನಿಗಳಿಗೆ ಸೂಚಿಸಿದ್ದಾರೆ.
2 ದಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ ಮತ್ತು ತಿರುವಳ್ಳೂರು ಜಿಲ್ಲೆಗಳ ಸುತ್ತಲಿನ ಶಿಕ್ಷಣ ಸಂಸ್ಥೆಗಳಿಗೆ ಮುಂದಿನ ಎರಡು ದಿನಗಳ ಕಾಲ ರಜೆ ಘೋಷಿಸಿದ್ದಾರೆ. ಶನಿವಾರ ರಾತ್ರಿ ಚೆನ್ನೈನಲ್ಲಿ ಸುರಿದ ಭಾರೀ ಮಳೆಯಿಂದಾಗಿ ನಗರದ ಕನಿಷ್ಠ 40 ಜನನಿಬಿಡ ವಸತಿ ಮತ್ತು ವಾಣಿಜ್ಯ ನೆರೆಹೊರೆಗಳು ಪ್ರವಾಹದಲ್ಲಿ ಸಿಲುಕಿವೆ. 2015 ನಂತರ ಚೆನ್ನೈನಲ್ಲಿ ಸುರಿದ ಅಧಿಕ ಮಳೆ ಇದಾಗಿದೆ.
ಇನ್ನೂ ಐದು ದಿನ ಮಳೆ:
ಮುಂದಿನ 5 ದಿನಗಳ ಕಾಲ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಭಾರೀ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. "ಚಂಡಮಾರುತದ ಪರಿಚಲನೆಯು ಆಗ್ನೇಯ ಬಂಗಾಳ ಕೊಲ್ಲಿ ಮತ್ತು ಪಕ್ಕದ ಸಮಭಾಜಕ ಹಿಂದೂ ಮಹಾಸಾಗರದ ಮೇಲೆ ಸರಾಸರಿ ಸಮುದ್ರ ಮಟ್ಟದಿಂದ 4.5 ಕಿಮೀ ವರೆಗೆ ವಿಸ್ತರಿಸಿದೆ. ಇದರ ಪ್ರಭಾವದ ಅಡಿಯಲ್ಲಿ, ಆಗ್ನೇಯ ಬಂಗಾಳ ಕೊಲ್ಲಿ ಮತ್ತು ನೆರೆಹೊರೆಯಲ್ಲಿ 09 ನವೆಂಬರ್ 2021 ರ ಸುಮಾರಿಗೆ ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳುವ ಸಾಧ್ಯತೆಯಿದೆ ಎಂದು IMD ಹೇಳಿದೆ.