ಇಂದು ಅಪ್ಪಳಿಸಲಿದೆ 'ನಿವಾರ್': ದಕ್ಷಿಣ ಭಾರತ ರಾಜ್ಯಗಳಲ್ಲಿ ರೆಡ್ ಅಲರ್ಟ್!

By Suvarna NewsFirst Published Nov 25, 2020, 7:59 AM IST
Highlights

ಇಂದು ದಕ್ಷಿಣದ ಮೇಲೆ ನಿವಾರ್‌ ದಾಳಿ| ಚಂಡಮಾರುತ ಭಾರೀ ತೀವ್ರ ಸ್ವರೂಪ ಪಡೆಯುವ ಮುನ್ನೆಚ್ಚರಿಕೆ|  ತಮಿಳ್ನಾಡು, ಪುದುಚೇರಿ, ಆಂಧ್ರ, ತೆಲಂಗಾಣದಲ್ಲಿ ರೆಡ್‌ ಅಲರ್ಟ್‌| ನಿವಾರ್‌ ಎದುರಿಸಲು ರಾಜ್ಯಗಳಿಗೆ ಪ್ರಧಾನಿ ಮೋದಿ ಅಗತ್ಯ ನೆರವಿನ ಭರವಸೆ| ನಿವಾರ್‌ ಎದುರಿಸಲು 1200 ಎನ್‌ಡಿಆರ್‌ಎಫ್‌, 800 ಹೆಚ್ಚುವರಿ ಸಿಬ್ಬಂದಿ ಸನ್ನದ್ಧ

ನವದೆಹಲಿ(ನ.25): ನಿವಾರ್‌ ಚಂಡಮಾರುತ ಬುಧವಾರ ರಾತ್ರಿ 8 ಗಂಟೆ ವೇಳೆಗೆ ತಮಿಳುನಾಡಿನ ಕರಾವಳಿ ಮೇಲೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಅಲ್ಲದೆ ನಿವಾರ್‌ ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಎಂದು ಅದು ಮುನ್ನೆಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶದ ಹಲವು ಭಾಗಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ.

ಮಂಗಳವಾರ ರಾತ್ರಿಯೇ ನಿವಾರ್‌ ತೀವ್ರ ಸ್ವರೂಪ ಪಡೆದುಕೊಂಡಿದೆ. ಬುಧವಾರ ಅದು ತಮಿಳುನಾಡು ಮತ್ತು ಪುದುಚೇರಿಯನ್ನು ಕಾರೈಕಲ್‌ ಮತ್ತು ಮಾಮಲ್ಲಪುರಂ ನಡುವೆ ಹಾದುಹೋಗಲಿದೆ. ಈ ವೇಳೆಗೆ ಗಂಟೆಗೆ 120-130 ಕೀ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಈ ಹಿನ್ನೆಲೆಯಲ್ಲಿ ಮೂರೂ ರಾಜ್ಯಗಳಲ್ಲಿ ಭಾರೀ ಮಳೆಯ ಸಾಧ್ಯತೆ ಇದೆ. ಹೀಗಾಗಿ ಯಾರೂ ಸಹ ಮೀನುಗಾರಿಕೆ, ಮೋಟರ್‌ ಬೋಟ್ಸ್‌ ಸೇರಿ ಇನ್ನಿತರ ಚಟುವಟಿಕೆಗಳಿಗಾಗಿ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ತಮಿಳುನಾಡಿನಲ್ಲಿ ಮಂಗಳವಾರದಿಂದಲೇ ಮಳೆಯಾಗುತ್ತಿದ್ದು, ಚಂಡಮಾರುತದ ಹಿನ್ನೆಲೆಯಲ್ಲಿ ಬುಧವಾರ ರಜೆ ಘೋಷಿಸಲಾಗಿದೆ.

ಸಜ್ಜು: ಈ ನಡುವೆ ಚಂಡಮಾರುತದ ಸವಾಲುಗಳನ್ನು ಎದುರಿಸಲು ತಮಿಳುನಾಡು, ಆಂಧ್ರಪ್ರದೇಶ ಮತ್ತು ಪುದುಚೇರಿಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ 1200 ಸಿಬ್ಬಂದಿ ಸಜ್ಜಾಗಿದ್ದಾರೆ. ಅಲ್ಲದೆ, ಇತರೆ 800 ಹೆಚ್ಚುವರಿ ಮಂದಿಯೂ ರಕ್ಷಣಾ ಕಾರ್ಯಾಚರಣೆಗೆ ಧುಮುಕಲು ಸನ್ನದ್ಧ ಸ್ಥಿತಿಯಲ್ಲಿದ್ದಾರೆ. ಮತ್ತೊಂದೆಡೆ, ಚಂಡಮಾರುತದಿಂದ ಸಂಕಷ್ಟಕ್ಕೆ ಸಿಲುಕಲಿರುವ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.

ಮತ್ತೊಂದೆಡೆ ಬುಧವಾರ ಆಂಧ್ರಪ್ರದೇಶದ ಮೇಲೆ ಗತಿ ಚಂಡಮಾರುತ ಕೂಡಾ ದಾಳಿ ನಡೆಸಲಿದೆ.

click me!