
ಸೈಬರ್ ವಂಚನೆಯ ಬಗ್ಗೆ ಪ್ರತಿದಿನವೂ ಸರ್ಕಾರ ಜಾಗೃತಿ ಮೂಡಿಸುತ್ತಿದೆ. ಮೊಬೈಲ್‌ಗೆ ಬರುವ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಅಪರಿಚಿತ ಕರೆಗಳಿಗೆ ಬ್ಯಾಂಕ್ ಪಾಸ್‌ವರ್ಡ್ ಒಟಿಪಿಗಳನ್ನು ಹೇಳದಂತೆ ಮೊಬೈಲ್ ಸಂದೇಶಗಳ ಮೂಲಕ ಜಾಗೃತಿ ಮೂಡಿಸುತ್ತಲೇ ಇದೆ. ಆದರೂ ಜನ ಮೋಸ ಹೋಗುವುದು ತಪ್ಪುವುದೇ ಇಲ್ಲ. ಪ್ರತಿದಿನವೂ ಒಬ್ಬರಲ್ಲ ಒಬ್ಬರು ಈ ಸೈಬರ್ ವಂಚನೆಗೆ ಮೋಸ ಹೋಗುತ್ತಿದ್ದಾರೆ. ಅದರಲ್ಲೂ ಸುಶಿಕ್ಷಿತರೆನಿಸಿದವರೇ ಈ ಮೋಸಕ್ಕೆ ಬಲಿಯಾಗ್ತಿರೋದು ಅಚ್ಚರಿ ಮೂಡಿಸಿದೆ. ಹಿರಿಯ ನಾಗರಿಕರು ನಿವೃತ್ತ ಸರ್ಕಾರಿ ಉದ್ಯೋಗಿಗಳನ್ನೇ ಈ ಸೈಬರ್ ವಂಚಕರು ಟಾರ್ಗೆಟ್ ಮಾಡುತ್ತಿದ್ದು, ಅವರ ಜೀವಮಾನದ ದುಡಿಮೆ ಎಲ್ಲವನ್ನು ಇಳಿವಯಸ್ಸಿನಲ್ಲಿ ಇನ್ನಿಲ್ಲದಂತೆ ಮಾಡಿ ಅವರನ್ನು ನರಕಕ್ಕೆ ತಳ್ಳುತ್ತಿದ್ದಾರೆ. ಅದೇ ರೀತಿ ಇಲ್ಲೊಂದು ಕಡೆ 68 ವರ್ಷದ ಚಾರ್ಟೆಟ್ ಅಕೌಂಟೆಂಟ್ ಒಬ್ಬರು ಸೈಬರ್ ವಂಚಕರ ಮೋಸದ ಜಾಲಕ್ಕೆ ಬಲಿಯಾಗಿದ್ದು, ಬರೋಬ್ಬರು 1.5 ಕೋಟಿ ರೂಪಾಯಿಯನ್ನು ಕಳೆದುಕೊಂಡಿದ್ದಾರೆ.
ಇತ್ತೀಚೆಗೆ ಹೊಸದಾಗಿ ಚಾಲ್ತಿಯಲ್ಲಿರುವ ಡಿಜಿಟಲ್ ವಂಚನೆ ಜಾಲಕ್ಕೆ ಈ ಚಾರ್ಟೆಡ್ ಅಕೌಂಟೆಂಟ್ ಬಲಿಯಾಗಿದ್ದು, ತಮ್ಮ ಉಳಿತಾಯವೆಲ್ಲವನ್ನು ಕಳೆದುಕೊಂಡಿದ್ದಾರೆ. ಸೈಬರ್ ವಂಚಕರು ಇವರ ಬಳಿ ತಾವು ಕಸ್ಟಮ್ಸ್, ಇಡಿ ಮತ್ತು ಸಿಬಿಐ ಅಧಿಕಾರಿಗಳಂತೆ ನಟಿಸಿ, ಹಣ ಅಕ್ರಮ ವರ್ಗಾವಣೆ ಆರೋಪದ ಮೇಲೆ ಅವರ ಮೇಲೆ ಮೊಕದ್ದಮೆ ಹೂಡುವುದಾಗಿ ಬೆದರಿಕೆ ಹಾಕಿ 10 ದಿನಗಳ ಕಾಲ ಅವರನ್ನು ಡಿಜಿಟಲ್ ಬಂಧನದಲ್ಲಿ ಇರಿಸಿದ್ದಾರೆ. ಆದರೆ ಅಕ್ಟೋಬರ್ 18 ರಂದು ಒಡಿಶಾ ಪೊಲೀಸರು ಆರಂಭಿಸಿದ ರಾಜ್ಯಾದ್ಯಂತ ಒಂದು ತಿಂಗಳ ಸೈಬರ್ ಜಾಗೃತಿ ಅಭಿಯಾನದ ನಂತರ ಈ ಹಗರಣ ಬೆಳಕಿಗೆ ಬಂದಿದೆ.
ಕಳೆದ ತಿಂಗಳು ಕೇಂದ್ರ ಕಾನೂನು ಜಾರಿ ಅಧಿಕಾರಿಗಳಂತೆ ಬಿಂಬಿಸಿಕೊಂಡ ಈ ಸೈಬರ್ ವಂಚಕರ ಗುಂಪು ಈ ಚಾರ್ಟೆಡ್ ಅಕೌಂಟೆಂಟ್‌ಗೆ ವಾಟ್ಸಾಪ್ ಕರೆ ಮಾಡಿದ ನಂತರ ಈ ವಂಚನೆಯ ಸರಣಿ ಆರಂಭವಾಗಿದೆ. ಇವರ ಆಧಾರ್ ಕಾರ್ಡ್‌ನ್ನು ಹಣ ವರ್ಗಾವಣೆ ಚಟುವಟಿಕೆಗಳಲ್ಲಿ ಬಳಸಲಾಗಿದೆ ಎಂಬಂತೆ ವಂಚಕರು ಈ ಸಿಎಯನ್ನು ನಂಬಿಸಿ ಬಳಿಕ ಆನ್‌ಲೈನ್‌ನಲ್ಲೇ ಫೇಕ್ ಎಫ್‌ಐಆರ್ ದಾಖಲು ಮಾಡಿ ಅದನ್ನು ತೋರಿಸಿದ್ದಾರೆ.
ಸೈಬರ್ ವಂಚಕರು ಸಿಎಗೆ ವಾಟ್ಸಾಪ್ ವೀಡಿಯೊ ಕರೆಗಳನ್ನು ಮಾಡಿ,, ಅಧಿಕೃತ ಕ್ಷಮೆ ಅಥವಾ ಬೇಲ್ಔಟ್ ಎಂದು ಹೇಳಲಾಗುವ ಹಣಕ್ಕಾಗಿ ಗಣನೀಯ ಮೊತ್ತದ ಹಣವನ್ನು ವರ್ಗಾಯಿಸುವಂತೆ ಒತ್ತಡ ಹೇರಿದ್ದಾರೆ. ಅಲ್ಲದೇ ಅತ್ಯಾಧುನಿಕ ಎಐ ಪರಿಕರಗಳೊಂದಿಗೆ ಸನ್ನದ್ಧರಾಗಿ ವೀಡಿಯೊ ಕರೆ ಮಾಡಿ ಭಾವನಾತ್ಮಕವಾಗಿ ಶರಣಾಗುವವರೆಗೆ ಮತ್ತು ಅಧಿಕೃತ ಕ್ಷಮಾದಾನ ಅಥವಾ ಬೇಲ್‌ಔಟ್‌ಗಾಗಿ ದೊಡ್ಡ ಮೊತ್ತವನ್ನು ವರ್ಗಾಯಿಸುವವರೆಗೆ ನಕಲಿ ನ್ಯಾಯಾಲಯ ಕೊಠಡಿಗಳು ಮತ್ತು ಪೊಲೀಸ್ ಠಾಣೆಗಳನ್ನು ಅವರಿಗೆ ತೋರಿಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅವರಿಗೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕುತ್ತಾ, ಮನೆಯಲ್ಲಿಯೇ ಇರುವಂತೆ ಮತ್ತು ಇತರರೊಂದಿಗೆ ಸಂವಹನ ನಡೆಸದಂತೆಯೂ ಸೂಚಿಸಿ, ಅವರನ್ನು 10 ದಿನಗಳವರೆಗೆ ಡಿಜಿಟಲ್ ಬಂಧನದಲ್ಲಿ ಇರಿಸಿದರು. ಆರ್‌ಬಿಐ ಪರಿಶೀಲನೆಗಾಗಿ ಅವರ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳ ವಂಚಕರು ಕೇಳಿದ್ದಾರೆ. ಅಲ್ಲದೇ ವಿಚಾರಣೆ ಪೂರ್ಣಗೊಂಡ ನಂತರ ದೋಷಮುಕ್ತರಾದರೆ ಅವರ ಸಂಪೂರ್ಣ ಹಣವನ್ನು ಮರುಪಾವತಿಸುವ ಭರವಸೆಯನ್ನು ನೀಡಿದ್ದಾರೆ. ಈ ವೇಳೆ ವಂಚಕರು ಅವರಿಂದ ವಿವಿಧ ಕಂತುಗಳಲ್ಲಿ 1.5 ಕೋಟಿ ರೂ.ಗಳನ್ನು ವರ್ಗಾಯಿಸಿಕೊಂಡಿದ್ದಾರೆ.
ಇತ್ತ ಕುಟುಂಬ ಸದಸ್ಯರು ಅವರ ವಿಚಿತ್ರ ನಡವಳಿಕೆಗೆ ಕಾರಣ ಏನು ಎಂದು ಕೇಳುವವರೆಗೂ ಕುಟುಂಬದವರಿಗೂ ಈ ಬಗ್ಗೆ ತಿಳಿದಿರಲಿಲ್ಲ. ಆದರೆ ನಂತರ ವಂಚನೆಯ ಬಗ್ಗೆ ತಿಳಿದ ಅವರು ಶುಕ್ರವಾರ ಕಟಕ್‌ನಲ್ಲಿರುವ ರಾಜ್ಯ ಅಪರಾಧ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಾವು ತನಿಖೆಯನ್ನು ಪ್ರಾರಂಭಿಸಿದ್ದೇವೆ, ಅಪರಾಧಿಗಳನ್ನು ಪತ್ತೆಹಚ್ಚಲು ಡಿಜಿಟಲ್ ಗುರುತುಗಳು ಮತ್ತು ಬ್ಯಾಂಕಿಂಗ್ ವಹಿವಾಟುಗಳನ್ನು ಪತ್ತೆ ಹಚ್ಚುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತರ ಬ್ಯಾಂಕುಗಳು ಮತ್ತು ಕಾನೂನು ಜಾರಿ ಸಂಸ್ಥೆಗಳ ನಿರಂತರ ಜಾಗೃತಿ ಅಭಿಯಾನ ಮತ್ತು ಎಚ್ಚರಿಕೆಗಳ ಹೊರತಾಗಿಯೂ ಸೈಬರ್ ವಂಚನೆಗಳು ನಿರಂತರ ನಡೆಯುತ್ತಿರುವುದು ಅಚ್ಚರಿ ಮೂಡಿಸಿದೆ..
ಡಿಜಿಟಲ್ ಬಂಧನ ಹಗರಣಗಳಲ್ಲಿ ಆತಂಕಕಾರಿ ಏರಿಕೆಯ ಬಗ್ಗೆ ನವೆಂಬರ್ 3 ರಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಮುಖ್ಯವಾಗಿ ಸೈಬರ್ ವಂಚಕರು ವೃದ್ಧರಿಗೆ, ದೇಶಾದ್ಯಂತ 3,000 ಕೋಟಿ ರೂ.ಗಳಿಗೂ ಹೆಚ್ಚು ವಂಚನೆ ಮಾಡಿದ್ದಾರೆ. ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ) ಮತ್ತು ಸಿಬಿಐ ಈ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿ, ಈ ಹಗರಣಗಳನ್ನು ಹೆಚ್ಚಾಗಿ ಕಳ್ಳಸಾಗಣೆ ಮಾಡಲಾದ ಭಾರತೀಯ ಯುವಕರು ನಡೆಸುತ್ತಾರೆ, ವಿದೇಶಗಳಲ್ಲಿ ವಂಚನೆಯ ಚಟುವಟಿಕೆಗಳಲ್ಲಿ ಅವರನ್ನುಭಾಗವಹಿಸುವಂತೆ ಒತ್ತಾಯಿಸಲಾಗುತ್ತದೆ ಮತ್ತು ಅವರ ಶೋಷಕರು ಅವರ ಪಾಸ್‌ಪೋರ್ಟ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಾರೆ ಎಂದು ತಿಳಿಸಿವೆ.
ಇದನ್ನೂ ಓದಿ: ಸೆಲೆನಾ ಗೋಮೇಜ್ ಹೋಲುವ ಈ ಬಾಲೆ ಯಾರು: ಬಾಲಿವುಡ್‌ನ ಒಂದು ಕಾಲದ ಸ್ಟಾರ್ ನಟಿಯ ಪುತ್ರಿ ಈಕೆ
ಇದನ್ನೂ ಓದಿ: ರಾತ್ರಿ ಕೆಲಸದ ಹೊರೆ ಕಡಿಮೆ ಮಾಡಲು 10 ರೋಗಿಗಳ ಉಸಿರು ನಿಲ್ಲಿಸಿದ ನರ್ಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ