
ಪಿಟಿಐ ನರಸಣ್ಣಪೇಟ (ಆಂಧ್ರ): ಜನಸಂಖ್ಯಾ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿ, ಜನಸಂಖ್ಯೆ ಪ್ರಮಾಣ ಹೆಚ್ಚಿಸುವ ಬಗ್ಗೆ ಹಿಂದಿನಿಂದಲೂ ಪ್ರತಿಪಾದಿಸುತ್ತಲೇ ಬಂದಿದ್ದ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಇದೀಗ 3 ಮತ್ತು 4ನೇ ಮಗು ಹೆರುವ ಪೋಷಕರಿಗೆ ಭರ್ಜರಿ ಧನಸಹಾಯ ನೆರವು ಘೋಷಿಸಿದ್ದಾರೆ. ಈ ಮೂಲಕ ಇಂಥ ಯೋಜನೆ ಘೋಷಿಸಿದ ದೇಶದ ಮೊದಲ ರಾಜ್ಯವೆಂಬ ದಾಖಲೆಗೆ ಆಂಧ್ರಪ್ರದೇಶ ಪಾತ್ರವಾಗಿದೆ.
ಆಂಧ್ರಪ್ರದೇಶದಲ್ಲಿ ಜನಸಂಖ್ಯಾ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ, ದಂಪತಿಗೆ ಹುಟ್ಟುವ 3ನೇ ಮಗುವಿಗೆ 30 ಸಾವಿರ ರು. ಹಾಗೂ 4ನೇ ಕಂದನಿಗೆ 40 ಸಾವಿರ ರು. ಪ್ರೋತ್ಸಾಹಧನ ನೀಡುವುದಾಗಿ ನಾಯ್ಡು ಶನಿವಾರ ಘೋಷಿಸಿದ್ದಾರೆ.
ಶ್ರೀಕಾಕುಲಂ ಜಿಲ್ಲೆಯಲ್ಲಿ ಮಾತನಾಡಿದ ನಾಯ್ಡು, ‘ಜನನ ದರವನ್ನು ಹೆಚ್ಚಿಸಲು ಶ್ರಮಿಸಬೇಕಾದ ಸಮಯ ಬಂದಿದೆ. ಇನ್ನುಮುಂದೆ 3ನೇ ಮಗು ಜನಿಸುತ್ತಿದ್ದಂತೆ 30 ಸಾವಿರ ರು. ನೀಡಲಾಗುವುದು ಹಾಗೂ 4ನೇ ಮಗುವಿಗೆ 40 ಸಾವಿರ ರು. ಕೊಡಲಾಗುವುದು’ ಎಂದರು.
ಹೆಚ್ಚು ಮಕ್ಕಳು ಹೊರೆಯಲ್ಲ, ಆಸ್ತಿ:
ಪ್ರಸ್ತುತ ಆಂಧ್ರದ ಫಲವತ್ತತೆ ದರ ಕೇವಲ 1.5 ಇದೆ. ಈ ಬಗ್ಗೆ ಮಾತನಾಡಿದ ನಾಯ್ಡು. ‘ಆದಾಯ ಹೆಚ್ಚುತ್ತಿದ್ದಂತೆ ಜನ ಒಂದೇ ಮಗುವನ್ನು ಹೊಂದುವತ್ತ ಒಲವು ತೋರುತ್ತಿದ್ದಾರೆ. ಮೊದಲನೆಯದು ಹೆಣ್ಣಾದರಷ್ಟೇ ಮತ್ತೊಂದು ಮಗು ಹೊಂದುವ ಬಗ್ಗೆ ಯೋಚಿಸುತ್ತಾರೆ. ಆದರೆ ಒಟ್ಟು ಫಲವತ್ತತೆ ದರ (ಟಿಎಫ್‌ಆರ್) 2.1 ಇದ್ದರಷ್ಟೇ ಜನಸಂಖ್ಯೆ ಸ್ಥಿರವಾಗಿರುತ್ತದೆ. ಇದು ಕುಸಿದು, ವಯಸ್ಸಾದವರ ಸಂಖ್ಯೆ ಹೆಚ್ಚಳವಾದ ದೇಶಗಳೆಲ್ಲಾ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ’ ಎಂದು ನಾಯ್ಡು ಹೇಳಿದರು.
ಮಕ್ಕಳು ಹೊರೆ ಎಂಬ ವಾದವನ್ನು ತಿರಸ್ಕರಿಸಿರುವ ನಾಯ್ಡು, ‘ಸಂತಾನವು ಆಸ್ತಿಯಾಗಿದೆ’ ಎಂದು ಪ್ರತಿಪಾದಿಸಿದರು. ಜತೆಗೆ, ಸದ್ಯ ‘ತಲ್ಲಿಕಿ ವಂದನ ಕಲ್ಯಾಣ’ ಯೋಜನೆಯಡಿ ಶಾಲೆಗೆ ಹೋಗುತ್ತಿರುವ ಮಕ್ಕಳಿಗೆ ನೀಡಲಾಗುತ್ತಿರುವ ಮೊತ್ತವನ್ನು 15 ಸಾವಿರ ರು.ನಿಂದ ಹೆಚ್ಚಿಸುವುದಾಗಿಯೂ ತಿಳಿಸಿದ್ದಾರೆ.
ಹಿಂದಿನ ಕ್ರಮಗಳು:
2ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಸ್ಥಳೀಯ ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಿದ್ದ ಕಾಯ್ದೆಯನ್ನು ನಾಯ್ಡು ಸರ್ಕಾರ 2024ರ ನವೆಂಬರ್‌ನಲ್ಲಿ ರದ್ದುಗೊಳಿಸಿತ್ತು. ಬಳಿಕ, 2ನೇ ಮಗು ಜನಿಸಿದರೆ 25 ಸಾವಿರ ರು. ಪ್ರೋತ್ಸಾಹ ಧನ ನೀಡಲು ಆರಂಭಿಸಲಾಗಿತ್ತು. ಈಗ ಇದನ್ನು 3 ಮತ್ತು 4ನೇ ಮಗುವಿಗೂ ವಿಸ್ತರಿಸಲಾಗಿದೆ.
ಜನಸಂಖ್ಯಾ ಕುಸಿತ ತಡೆಗೆ ನಡೆ । ದೇಶದಲ್ಲೇ ಮೊದಲು
3ನೇ ಮಗು ಹೆತ್ತರೆ ₹30,000, 4ನೇ ಮಗುವಿಗೆ ₹40,000 ಪ್ರೋತ್ಸಾಹಧನ
ಈಗ ಆಂಧ್ರದ ಫಲವತ್ತತೆ ದರ 1.5 । 2.1 ಇದ್ರಷ್ಟೇ ಜನಸಂಖ್ಯೆ ಸ್ಥಿರ: ಸಿಎಂ
2ನೇ ಮಗು ಹೆತ್ತರೆ ಇದ್ದ ಕೊಡುಗೆ ಮತ್ತಷ್ಟು ವಿಸ್ತರಣೆ: ಚಂದ್ರಬಾಬು ಘೋಷಣೆ
ಬೇರೆ ದೇಶಗಳಲ್ಲಿ ಹೇಗಿದೆ?
- ಹಂಗೇರಿ, ಫ್ರಾನ್ಸ್, ಪೋಲೆಂಡಲ್ಲಿ 2ಕ್ಕಿಂತ ಹೆಚ್ಚು ಮಕ್ಕಳ ಹೊಂದಲು ಆರ್ಥಿಕ ನೆರವು, ಆದಾಯ ತೆರಿಗೆ ವಿನಾಯ್ತಿ
ರಷ್ಯಾದಲ್ಲಿ ಪ್ರತಿ ಮಗು ಜನನದ ಬಳಿಕ ಆರ್ಥಿಕ ನೆರವು. 10 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳ ಹೆತ್ತರೆ ₹13 ಲಕ್ಷ
ವಿಯೆಟ್ನಾಂ 2025ರಲ್ಲಿ ಇಬ್ಬರು ಮಕ್ಕಳ ನೀತಿ ರದ್ದು. ಟರ್ಕಿಯಲ್ಲಿ 1ಕ್ಕಿಂತ ಹೆಚ್ಚು ಮಕ್ಕಳಿದ್ದರೆ ನಿರ್ವಹಣಾ ಭತ್ಯೆ
ಸಿಂಗಾಪುರ, ದ. ಕೊರಿಯಾ, ಜಪಾನ್‌ನಲ್ಲಿ ಹೆಚ್ಚಿನ ಮಕ್ಕಳ ಹೊಂದಲು ಪ್ರೋತ್ಸಾಹ. ನಗದು/ನಿರ್ವಹಣಾ ಭತ್ಯೆ
- ಚೀನಾದಲ್ಲಿ ಕುಟುಂಬಕ್ಕೆ ಒಂದೇ ಮಗು ನೀತಿ ರದ್ದು. ಹೆಚ್ಚು ಮಕ್ಕಳ ಹೊಂದಿದ ಕುಟುಂಬಕ್ಕೆ ನಾನಾ ಪ್ರೋತ್ಸಾಹ
ಜನನ ದರ ಹೆಚ್ಚಿಸಿ
ಆದಾಯ ಹೆಚ್ಚುತ್ತಿದ್ದಂತೆ ಜನ ಒಂದೇ ಮಗು ಹೊಂದುವತ್ತ ಒಲವು ತೋರುತ್ತಿದ್ದಾರೆ. ಹೀಗಾಗಬಾರದು. ಫಲವತ್ತತೆ ದರ 2.1ಕ್ಕಿಂತ ಇಳಿದರೆ ಯುವಕರ ಸಂಖ್ಯೆ ಇಳಿದು ವೃದ್ಧರ ಸಂಖ್ಯೆ ಹೆಚ್ಚಳವಾಗುತ್ತದೆ. ಆರ್ಥಿಕ ಸಂಕಷ್ಟ ಆಗುತ್ತದೆ.
- ಚಂದ್ರಬಾಬು ನಾಯ್ಡು, ಆಂಧ್ರ ಸಿಎಂ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ