
ಚಂಡೀಗಢ (ಸೆ.26): ಪ್ರೇಯಸಿಯನ್ನು ತಕ್ಷಣವೇ ಮದುವೆಯಾಗಬೇಕು ಮತ್ತು 10 ಲಕ್ಷ ರೂಪಾಯಿ ಹಣ ನೀಡಬೇಕು ಎಂದು ಪಟ್ಟು ಹಿಡಿದಿದ್ದ 18 ವರ್ಷದ ಮಗನೊಬ್ಬ, "ಮದುವೆಯಾಗಲು ಭಾರತದಲ್ಲಿ ಪುರುಷರಿಗೆ 21 ವರ್ಷ ತುಂಬಬೇಕು, ಅಲ್ಲಿಯವರೆಗೆ ಕಾಯಿ" ಎಂದು ಬುದ್ಧಿವಾದ ಹೇಳಿದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ತಂದೆಯನ್ನೇ ಪಿಸ್ತೂಲ್‌ನಿಂದ ಗುಂಡಿಕ್ಕಿ ಭೀಕರವಾಗಿ *ಲೆ ಮಾಡಿರುವ ಆಘಾತಕಾರಿ ಘಟನೆ ಚಂಡೀಗಢದಲ್ಲಿ ನಡೆದಿದೆ. ಚಂಡೀಗಢ ಪೊಲೀಸ್ ಪ್ರಧಾನ ಕಚೇರಿಯ ಅಕೌಂಟ್ಸ್ ವಿಭಾಗದಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಿತಿನ್ ಸಿಂಗ್ (Nitin Singh) *ಲೆಯಾದ ನತದೃಷ್ಟ ತಂದೆ. ತಂದೆಯನ್ನು ಹ*ತ್ಯೆಗೈದ 18 ವರ್ಷದ ಮಗ ಅರ್ಮಾನ್ (Armaan) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಚಂಡೀಗಢದ ಸೆಕ್ಟರ್ 22ರಲ್ಲಿರುವ ಸರ್ಕಾರಿ ವಸತಿಗೃಹದಲ್ಲಿ ಶುಕ್ರವಾರ ನಿತಿನ್ ಸಿಂಗ್ ಅವರು ತಲೆಗೆ ಗುಂಡೇಟು ಬಿದ್ದು ಶವವಾಗಿ ಪತ್ತೆಯಾಗಿದ್ದರು. ಘಟನಾ ಸ್ಥಳದಿಂದ ಪೊಲೀಸರು ದೇಸಿ ಪಿಸ್ತೂಲ್ (Countrymade Pistol) ಒಂದನ್ನು ವಶಪಡಿಸಿಕೊಂಡಿದ್ದಾರೆ. ಗುರುವಾರ ಸಾಯಂಕಾಲ ತಂದೆ ಮತ್ತು ಮಗನ ನಡುವೆ ತೀವ್ರ ಜಗಳ ನಡೆದಿತ್ತು ಎಂದು ತಿಳಿದುಬಂದಿದೆ.
ಕೊ* ನಡೆದ ಬಳಿಕ ಆರೋಪಿ ಅರ್ಮಾನ್ ತನ್ನ ತಾಯಿಯ ಕುತ್ತಿಗೆಯನ್ನು ಹಿಸುಕಿ ಆಕೆಯ ಮೇಲೆಯೂ ಹಲ್ಲೆ ನಡೆಸಿ ಕೊಲ್ಲಲು ಯತ್ನಿಸಿದ್ದ. ಆದರೆ, ಆಕೆ ಹೇಗೋ ಆತನಿಂದ ತಪ್ಪಿಸಿಕೊಂಡು ಟೆರಸ್‌ಗೆ ಓಡಿಹೋಗಿ ನೆರೆಹೊರೆಯವರನ್ನು ಕರೆದು ಪ್ರಾಣ ಉಳಿಸಿಕೊಂಡಿದ್ದಾರೆ. ಘಟನೆ ನಡೆದ ನಂತರ ಆರೋಪಿ ಅರ್ಮಾನ್, ಯಾರೋ ಹೊರಗಿನವರು ಮನೆಗೆ ನುಗ್ಗಿ ತನ್ನ ತಂದೆಯನ್ನು *ಲೆ ಮಾಡಿದ್ದಾರೆ ಎಂಬಂತೆ ಬಿಂಬಿಸಲು ನಾಟಕವಾಡಿದ್ದ ಎಂದು ನೆರೆಹೊರೆಯವರು ತಿಳಿಸಿದ್ದಾರೆ.
ಮೂಲ ತನಿಖೆಯ ಪ್ರಕಾರ, ಅರ್ಮಾನ್ ತನ್ನ ಪ್ರೇಯಸಿಯನ್ನು ತಕ್ಷಣವೇ ಮದುವೆಯಾಗಬೇಕು ಮತ್ತು ಆಕೆಯನ್ನು ತಮ್ಮ ಮನೆಗೆ ಕರೆದುಕೊಂಡು ಬರಬೇಕು ಎಂದು ತಂದೆ-ತಾಯಿಯ ಮೇಲೆ ತೀವ್ರ ಒತ್ತಡ ಹೇರುತ್ತಿದ್ದ. ಜೊತೆಗೆ ತನ್ನ ವಿವಿಧ ಅಗತ್ಯಗಳಿಗಾಗಿ ತಂದೆಯಿಂದ 10 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ.
"ಗುರುವಾರ ಸಂಜೆ ಅರ್ಮಾನ್ ತನ್ನ ಪೋಷಕರೊಂದಿಗೆ ತೀವ್ರವಾಗಿ ಜಗಳವಾಡಿದ್ದ. ಆತನಿಗೆ ಹುಡುಗಿಯನ್ನು ತಕ್ಷಣವೇ ಮದುವೆಯಾಗಬೇಕಿತ್ತು. ಆದರೆ ಆತನಿಗೆ ಮದುವೆಯ ಕಾನೂನುಬದ್ಧ ವಯಸ್ಸಾದ 21 ವರ್ಷ ತುಂಬಿದ ನಂತರವಷ್ಟೇ ಮದುವೆ ಮಾಡಲು ಸಾಧ್ಯ ಎಂದು ಪೋಷಕರು ಪಟ್ಟು ಹಿಡಿದಿದ್ದರು. ಅಲ್ಲದೆ ಆತನ ಹಣದ ಬೇಡಿಕೆಯನ್ನೂ ತಿರಸ್ಕರಿಸಿದ್ದರು," ಎಂದು ಹಿರಿಯ ಪೊಲೀಸ್ ಅಧಿಕಾರಿ ಸುದೇಶ್ ಕುಮಾರ್ ಅವರು ಪಿಟಿಐ (PTI) ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ತಂದೆಯನ್ನು ಕೊಂದ ಬಳಿಕವೂ ಆರೋಪಿ ಅರ್ಮಾನ್ ಮುಖದಲ್ಲಿ ಯಾವುದೇ ರೀತಿಯ ಪಶ್ಚಾತ್ತಾಪದ ಭಾವನೆಗಳಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ತಂದೆಯನ್ನೇ ಕೊಂದ ಆರೋಪಿ ಅರ್ಮಾನ್ ಸೌಮ್ಯ ಸ್ವಭಾವದವನೇನಲ್ಲ. ಈ ವರ್ಷದ ಆರಂಭದಲ್ಲಿ ಮಣಿಮಾಜ್ರಾದಲ್ಲಿ ನಡೆದ ಭೀಕರ ರಸ್ತೆ ಅಪಘಾತ ಪ್ರಕರಣದಲ್ಲೂ ಈತ ಆರೋಪಿಯಾಗಿದ್ದ. ತನ್ನ ಸ್ನೇಹಿತನ 'ಮಹೀಂದ್ರಾ ಥಾರ್' (Mahindra Thar) ವಾಹನವನ್ನು ಅತಿ ವೇಗವಾಗಿ ಚಲಾಯಿಸಿ ಬೈಕ್‌ಗೆ ಗುದ್ದಿದ್ದ. ಈ ಅಪಘಾತದಲ್ಲಿ ಬೈಕ್‌ನಲ್ಲಿದ್ದ ಸಹೋದರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಜೋಡಿ ಕೊಲೆಗೆ ಸಮನಾದ ಅಪಘಾತ ಪ್ರಕರಣದಲ್ಲಿ ಅರ್ಮಾನ್ ಜೈಲು ಪಾಲಾಗಿದ್ದ. ಇತ್ತೀಚೆಗಷ್ಟೇ ನ್ಯಾಯಾಲಯದಿಂದ ಜಾಮೀನು (Bail) ಪಡೆದು ಹೊರಬಂದಿದ್ದ ಈತ, ಈಗ ಹೆತ್ತ ತಂದೆಯನ್ನೇ ಗುಂಡಿಕ್ಕಿ ಕೊಂದು ಮತ್ತೆ ಕಂಬಿ ಎಣಿಸುವಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ