ಚಂಡೀಗಢ ಪಾಲಿಕೆ: ಮೊದಲ ಚುನಾವಣೆಯಲ್ಲೇ ಆಪ್‌ ಜಯಭೇರಿ, ಪಾಲಿಕೆ ಅತಂತ್ರ!

By Kannadaprabha NewsFirst Published Dec 28, 2021, 3:59 AM IST
Highlights

* ಚಂಡೀಗಢ ಪಾಲಿಕೆ: ಮೊದಲ ಚುನಾವಣೆಯಲ್ಲೇ ಆಪ್‌ ಜಯಭೇರಿ

* 35 ವಾರ್ಡ್‌ಗಳ ಪೈಕಿ 14ರಲ್ಲಿ ಆಪ್‌ಗೆ ಗೆಲುವು, ಬಿಜೆಪಿಗೆ 8 ಸ್ಥಾನ ನಷ್ಟ, ಪಾಲಿಕೆ ಅತಂತ್ರ

* ಮುಂದಿನ ಪಂಜಾಜ್‌ ಚುನಾವಣೆಯ ಟ್ರೇಲರ್‌ ಇದು: ಆಪ್‌ ಸಂತಸ

ಚಂಡೀಗಢ(ಡಿ.28): ಚಂಡೀಗಢ ಪಾಲಿಕೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧಿಸಿದ್ದ ಆಮ್‌ ಆದ್ಮಿ ಪಕ್ಷ ನಿರೀಕ್ಷೆಗೂ ಮೀರಿ ಜಯ ಸಾಧಿಸಿದೆ. ಪಾಲಿಕೆಯ 35 ವಾರ್ಡ್‌ಗಳಿಗೆ ನಡೆದ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, 35ರ ಪೈಕಿ 14 ಕ್ಷೇತ್ರಗಳಲ್ಲಿ ಆಪ್‌ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ. ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ 8 ಸ್ಥಾನ ನಷ್ಟಅನುಭವಿಸುವ ಮೂಲಕ 12 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಆದರೆ ಯಾವುದೇ ಪಕ್ಷಕ್ಕೆ ಸ್ಪಷ್ಟಬಹುಮತ ಸಿಗದ ಕಾರಣ ಚಂಡೀಗಢ ಪಾಲಿಕೆ ಅತಂತ್ರವಾಗಿದೆ.

ಮುಂದಿನ ವರ್ಷದ ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷ ಅಧಿಕಾರದ ಗದ್ದುಗೆಗೇರಲಿದೆ ಎಂಬ ಚುನಾವಣೆ ಪೂರ್ವ ಸಮೀಕ್ಷೆಗಳ ಭವಿಷ್ಯದ ಬೆನ್ನಲ್ಲೇ, ಪಂಜಾಬ್‌ ಮತ್ತು ಹರ್ಯಾಣದ ಜಂಟಿ ರಾಜಧಾನಿ ಚಂಡೀಗಢ ಪಾಲಿಕೆ ಚುನಾವಣೆಯಲ್ಲಿ ಆಪ್‌ ಜಯಗಳಿಸಿರುವುದು ರಾಜಕೀಯ ಪಂಡಿತರಲ್ಲಿ ಅಚ್ಚರಿ ಮೂಡಿಸಿದೆ.

ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಈ ಬಾರಿ 4 ಸ್ಥಾನ ಲಾಭವಾಗಿದ್ದು, ಒಟ್ಟಾರೆ 8 ಸ್ಥಾನ ಸಿಕ್ಕಿದೆ. ಶಿರೋಮಣಿ ಅಕಾಲಿ ದಳ ಕೇವಲ 1 ಸ್ಥಾನ ಪಡೆಯುವಲ್ಲಿ ಶಕ್ತವಾಗಿದೆ.

ಈ ಹಿಂದೆ ಮೇಯರ್‌ ಆಗಿದ್ದ ಬಿಜೆಪಿಯ ರವಿಕಾಂತ್‌ ಶರ್ಮಾ ಅವರು ಆಪ್‌ನ ದಮನ್‌ಪ್ರೀತ್‌ ಸಿಂಗ್‌ ವಿರುದ್ಧ 828 ಮತಗಳ ಅಂತರದ ಸೋಲು ಅನುಭವಿಸಿದ್ದಾರೆ. ಅದೇ ರೀತಿ ಬಿಜೆಪಿಯ ಮಾಜಿ ಮೇಯರ್‌ ದವೇಶ್‌ ಮೌಡ್ಗಿಲ್‌, ಬಿಜೆಪಿ ಯುವ ಮೋರ್ಚಾ ನಾಯಕ ವಿಜಯ್‌ ಕೌಶಲ್‌ ರಾಣ ಸೇರಿದಂತೆ ಇತರ ಬಿಜೆಪಿಯ ಘಟಾನುಘಟಿ ನಾಯಕರು ಆಪ್‌ ಅಭ್ಯರ್ಥಿಗಳ ಎದುರು ಧೂಳಿಪಟವಾಗಿದ್ದಾರೆ. ಪಾಲಿಕೆಯಲ್ಲಿನ ತಮ್ಮ ಪಕ್ಷದ ಈ ಗೆಲುವನ್ನು ದಿಲ್ಲಿಯ ಆಪ್‌ ಶಾಸಕ ರಾಘವ್‌ ಚಡ್ಡಾ ಅವರು, ಮುಂದಿನ ವರ್ಷದ ವಿಧಾನಸಭೆ ಚುನಾವಣೆಯ ಟ್ರೇಲರ್‌ ಎಂದು ಬಣ್ಣಿಸಿದ್ದಾರೆ.

ಯಾರಿಗೆಷ್ಟು ಸ್ಥಾನ?

ಪಕ್ಷ ಸ್ಥಾನ ಹಿಂದಿನ ಫಲಿತಾಂಶ

ಒಟ್ಟು ಸ್ಥಾನ 35

ಆಪ್‌ 14 00

ಬಿಜೆಪಿ 12 20

ಕಾಂಗ್ರೆಸ್‌ 8 04

ಎಸ್‌ಎಡಿ 01 01

ಈ ಗೆಲುವು ಪಂಜಾಬ್‌ನಲ್ಲಿ ಬದಲಾವಣೆ ಸಂಕೇತ: ಕೇಜ್ರಿ

ಚಂಡೀಗಢ ಪಾಲಿಕೆ ಚುನಾವಣೆಯಲ್ಲಿನ ಆಮ್‌ ಆದ್ಮಿ ಪಕ್ಷದ ಈ ಅಭೂತಪೂರ್ವ ಗೆಲುವು ಪಂಜಾಬ್‌ನಲ್ಲಿ ಬದಲಾವಣೆಯ ಪರ್ವದ ಸಂಕೇತ. ಚಂಡೀಗಢದ ಜನತೆ ಭ್ರಷ್ಟಾಚಾರದ ರಾಜಕೀಯವನ್ನು ತಿರಸ್ಕರಿಸಿ, ಪ್ರಾಮಾಣಿಕ ರಾಜಕೀಯ ಮಾಡುವ ಆಪ್‌ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಬಾರಿ ಪಂಜಾಬ್‌ ಬದಲಾವಣೆಗೆ ಸಿದ್ಧವಾಗಿದೆ.

- ಅರವಿಂದ್‌ ಕೇಜ್ರಿವಾಲ್‌, ಆಪ್‌ ರಾಷ್ಟ್ರೀಯ ಸಂಚಾಲಕ

click me!