India Fights Corona: 'ಕೋವಿಡ್‌ ಹೆಚ್ಚಾದರೆ ಸ್ಥಳೀಯ ನಿರ್ಬಂಧ ವಿಧಿಸಿ, ಪಂಚಸೂತ್ರ ಪಾಲಿಸಿ'

By Kannadaprabha NewsFirst Published Dec 28, 2021, 3:03 AM IST
Highlights

* ರಾಜ್ಯಗಳಿಗೆ ಕೇಂದ್ರ ಸರ್ಕಾರದ ಸೂಚನೆ

* ಕೋವಿಡ್‌ ಹೆಚ್ಚಾದರೆ ಸ್ಥಳೀಯ ನಿರ್ಬಂಧ ವಿಧಿಸಿ

* ಸೋಂಕು ನಿಯಂತ್ರಿಸಲು ಪಂಚಸೂತ್ರ ಪಾಲಿಸಿ

 

ನವದೆಹಲಿ: ಒಮಿಕ್ರೋನ್‌ ಪ್ರಕರಣಗಳು ಹಾಗೂ ಹಲವೆಡೆ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಹೊಸ ಸಲಹಾವಳಿಗಳನ್ನು ನೀಡಿದೆ. ಅಗತ್ಯ ಬಿದ್ದರೆ ಸ್ಥಳೀಯ ನಿಯಂತ್ರಣ ಕ್ರಮಗಳು ಹಾಗೂ ನಿರ್ಬಂಧಗಳನ್ನು ಹೇರಬೇಕು. ಹಬ್ಬ ಹಾಗೂ ಹೊಸ ವರ್ಷಾಚರಣೆಯ ಈ ಸಂದರ್ಭದಲ್ಲಿ ಜನಜಂಗುಳಿ ಸೇರದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದೆ.

ಕೋವಿಡ್‌ ವಿರುದ್ಧದ ಯುದ್ಧ ಇನ್ನೂ ಮುಗಿದಿಲ್ಲ. ಹೀಗಾಗಿ ಶಸ್ತ್ರತ್ಯಾಗ ಬೇಡ. ಕೋವಿಡ್‌ ತಪಾಸಣೆ, ಚಿಕಿತ್ಸೆ, ಲಸಿಕಾಕರಣ, ಸೋಂಕಿತರ ಪತ್ತೆ, ಕೋವಿಡ್‌ ಸನ್ನಡತೆ ಪಾಲನೆಯಂಥ ‘ಐದಂಶದ ಸೂತ್ರ’ ಪಾಲನೆ ಮರೆಯಬಾರದು. ಡಿ.21ರಂದು ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಗಳು ಪಾಲನೆ ಆಗುವಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಆಜಯ್‌ ಭಲ್ಲಾ, ಸೋಮವಾರ ಎಲ್ಲ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದ್ದಾರೆ.

‘ಈವರೆಗೆ ಸಕ್ರಿಯ ಪ್ರಕರಣ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆಯಾಗಿದೆ. ಆದರೆ ಹೊಸ ಒಮಿಕ್ರೋನ್‌ ರೂಪಾಂತರಿಯು 3 ಪಟ್ಟು ಹೆಚ್ಚು ಸಾಂಕ್ರಾಮಿಕವಾಗಿದ್ದು, ಕೋವಿಡ್‌ ನಿಯಂತ್ರಣ ಕ್ರಮಗಳಿಗೆ ಸವಾಲಾಗಿದೆ. ಈವರೆಗೆ 578 ಒಮಿಕ್ರೋನ್‌ ಪ್ರಕರಣ ದೇಶದಲ್ಲಿ ಪತ್ತೆಯಾಗಿವೆ. ಜಾಗತಿಕವಾಗಿ 116 ದೇಶಗಳಲ್ಲಿ ಹಾಗೂ ದೇಶದ 19 ರಾಜ್ಯಗಳಲ್ಲಿ ಒಮಿಕ್ರೋನ್‌ ವ್ಯಾಪಿಸಿದೆ. ಇದೇ ಕಾರಣದಿಂದ ಡಿ.21ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿಯು, ಸೋಂಕು ಪತ್ತೆ, ತಡೆ, ನಿಯಂತ್ರಣ, ಕಠಿಣ ಕಂಟೈನ್ಮೆಂಟ್‌ ಕ್ರಮ, ಕಟ್ಟೆಚ್ಚರಗಳ ಬಗ್ಗೆ ಒತ್ತಿ ಹೇಳಿದೆ. ಅದನ್ನು ಚಾಚೂತಪ್ಪದೇ ಪಾಲನೆ ಆಗಬೇಕು’ ಎಂದು ಭಲ್ಲಾ ತಿಳಿಸಿದ್ದಾರೆ.

‘ವದಂತಿಗಳಿಂದ ಜನರನ್ನು ದೂರ ಮಾಡಲು ರಾಜ್ಯ ಸರ್ಕಾರಗಳು ಆಗಾಗ ಸುದ್ದಿಗೋಷ್ಠಿ ನಡೆಸಿ, ನಾಗರಿಕರಿಗೆ ಕೋವಿಡ್‌ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಸಂದೇಶ ಬಿತ್ತರಿಸಬೇಕು. ರಾಜ್ಯ ಸರ್ಕಾರಗಳು ಎಲ್ಲ ಜಿಲ್ಲೆಗಳಿಗೆ ಈ ಕುರಿತು ನಿರ್ದೇಶನಗಳನ್ನು ರವಾನಿಸಿ ಕೋವಿಡ್‌ ನಿಯಮ ಜಾರಿ ಆಗುವಂತೆ ಸೂಚಿಸಬೇಕು. ಮುಂಜಾಗ್ರತಾ ಕ್ರಮ ಜರುಗಿಸಬೇಕು’ ಎಂದಿದ್ದಾರೆ.

- ಸೋಂಕು ಹೆಚ್ಚಾದರೆ ಆಯಾ ನಿರ್ದಿಷ್ಟಸ್ಥಳದಲ್ಲಿ ನಿರ್ಬಂಧ ವಿಧಿಸಿ

- ಹಬ್ಬ, ಹೊಸ ವರ್ಷದ ವೇಳೆ ಜನಜಂಗುಳಿ ಸೇರದಂತೆ ನೋಡಿಕೊಳ್ಳಿ

- ಸಕ್ರಿಯ ಕೇಸು ಇಳಿದರೂ, ಒಮಿಕ್ರೋನ್‌ ಏರುತ್ತಿದೆ

- ಇದು ಕೋವಿಡ್‌ ನಿಯಂತ್ರಣ ಕ್ರಮಗಳಿಗೆ ಸವಾಲಾಗಿದೆ

- ಹೀಗಾಗಿ ಕೋವಿಡ್‌ ನಿಯಮದ ಕಠಿಣ ಜಾರಿಯತ್ತ ಗಮನ ಹರಿಸಿ

- ವದಂತಿಗಳನ್ನು ದೂರ ಮಾಡಲು ಸುದ್ದಿಗೋಷ್ಠಿ ನಡೆಸಿ ಜಾಗೃತಿ ಮೂಡಿಸಿ

- ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯದ ಪತ್ರ

ಪಂಚಸೂತ್ರಗಳು

1.ಕೋವಿಡ್‌ ತಪಾಸಣೆ

2. ಚಿಕಿತ್ಸೆ

3. ಲಸಿಕಾಕರಣ

4. ಸೋಂಕಿತರ ಪತ್ತೆ

5. ಕೋವಿಡ್‌ ಸನ್ನಡತೆ ಪಾಲನೆ

click me!