ವ್ಯರ್ಥ ಮಾಡಿದವರಿಗೆ ಲಸಿಕೆ ಪ್ರಮಾಣ ಕಡಿತ: ಕೇಂದ್ರದ ಎಚ್ಚರಿಕೆ

By Suvarna NewsFirst Published Jun 9, 2021, 9:34 AM IST
Highlights

* ಕೇಂದ್ರ ಸರ್ಕಾರದಿಂದ ಪರಿಷ್ಕೃತ ಲಸಿಕೆ ಮಾರ್ಗಸೂಚಿ ಬಿಡುಗಡೆ

* ಬಡವರು ಲಸಿಕೆ ಪಡೆಯಲು ಆರ್ಥಿಕ ನೆರವು

* ಇ-ವೋಚರ್‌ ಮೂಲಕ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ

* ಸೋಂಕು ತೀವ್ರತೆ, ಜನಸಂಖ್ಯೆ ಆಧರಿಸಿ ರಾಜ್ಯಗಳಿಗೆ ಲಸಿಕೆ

ನವದೆಹಲಿ(ಜೂ.09): ಕೇಂದ್ರ ಸರ್ಕಾರವು 18ರಿಂದ 44 ವರ್ಷದ ವ್ಯಕ್ತಿಗಳ ಲಸಿಕೆ ಹೊಣೆ ಹೊತ್ತುಕೊಂಡ ಬೆನ್ನಲ್ಲೇ ಪರಿಷ್ಕೃತ ಲಸಿಕಾ ಮಾರ್ಗಸೂಚಿ ಹೊರಡಿಸಿದೆ. ಲಸಿಕೆಯನ್ನು ಆಯಾ ರಾಜ್ಯಗಳ ಜನಸಂಖ್ಯೆ, ಸೋಂಕಿನ ತೀವ್ರತೆ ಹಾಗೂ ಲಸಿಕಾ ಅಭಿಯಾನದ ವೇಗ ಆಧರಿಸಿ ನೀಡಲು ತೀರ್ಮಾನಿಸಿದೆ. ಜೊತೆಗೆ ಈವರೆಗೆ ನೀಡಿದ ಲಸಿಕೆ ಬಳಕೆಯ ವೇಳೆ ಭಾರೀ ಪ್ರಮಾಣದಲ್ಲಿ ಅದನ್ನು ವ್ಯರ್ಥ ಮಾಡಿದ ರಾಜ್ಯಗಳಿಗೆ, ಮುಂದಿನ ಹಂಚಿಕೆ ವೇಳೆ ಕಡಿತ ಮಾಡಲಾಗುವುದಾಗಿ ಕೇಂದ್ರ ಸರ್ಕಾರ ಪರೋಕ್ಷವಾಗಿ ಎಚ್ಚರಿಕೆ ನೀಡಿದೆ.

ಇದೇ ವೇಳೆ, ಆರ್ಥಿಕವಾಗಿ ದುರ್ಬಲರಾಗಿದ್ದವರಿಗೆ (ಬಡವರಿಗೆ) ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಲೂ ಅವಕಾಶ ನೀಡಲಾಗಿದ್ದು, ಇವರಿಗೆ ಇಲೆಕ್ಟ್ರಾನಿಕ್‌ ವೋಚರ್‌ ಮೂಲಕ ಲಸಿಕಾಕರಣಕ್ಕೆ ಆರ್ಥಿಕ ಸಹಾಯ ನೀಡಲಾಗುತ್ತದೆ. ರಿಸವ್‌ರ್‍ ಬ್ಯಾಂಕ್‌ ಅಂಗೀಕರಿಸಿರುವ ಈ ವೋಚರ್‌ ಬಳಸಿ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಬಹುದಾಗಿದೆ. ಈ ವೋಚರ್‌ಗಳನ್ನು ಯಾರು ಪಡೆದಿರುತ್ತಾರೋ ಅವರೇ ಬಳಸಬೇಕು. ವರ್ಗಾವಣೆ ಮಾಡಲಾಗದು.

ಲಸಿಕೆಯ ಆದ್ಯತಾ ಪಟ್ಟಿಯನ್ನೂ ಸರ್ಕಾರ ಪ್ರಕಟಿಸಿದೆ. ಮೊದಲು ಆರೋಗ್ಯ ಸಿಬ್ಬಂದಿಗೆ ಆದ್ಯತೆ ನೀಡಲಾಗುತ್ತದೆ. ನಂತರದ ಆದ್ಯತೆ ಮುಂಚೂಣಿ ಕಾರ್ಯಕರ್ತರಿಗೆ. ಮೂರನೇ ಆದ್ಯತೆ 45 ವರ್ಷ ಮೇಲ್ಪಟ್ಟವರಿಗೆ, 4ನೇ ಆದ್ಯತೆ ಎರಡನೇ ಡೋಸ್‌ ಪಡೆಯುವವರಿಗೆ ನೀಡಲಾಗುತ್ತದೆ. ಕೊನೆಯ ಆದ್ಯತೆ 18 ವರ್ಷ ಮೇಲ್ಪಟ್ಟವರಿಗೆ ಲಭಿಸಲಿದೆ. ಇನ್ನು ರಾಜ್ಯಗಳು ಕೂಡ ತಮ್ಮದೇ ಆದ್ಯತಾ ಪಟ್ಟಿಸಿದ್ಧಪಡಿಸಬಹುದು. ಆದರೆ ಲಸಿಕೆ ವ್ಯರ್ಥವಾಗುವುದನ್ನು ತಡೆಗಟ್ಟಬೇಕು ಎಂದು ತಿಳಿಸಲಾಗಿದೆ. ಈ ಹೊಸ ನೀತಿ ಜೂನ್‌ 21ರಿಂದ ಇದು ಜಾರಿಗೆ ಬರಲಿದೆ.

ಖಾಸಗಿ ಆಸ್ಪತ್ರೆಗಳು, ಕಂಪನಿಗಳು ನಿಗದಿಪಡಿಸಿದ ದರವನ್ನು ತೆತ್ತು ನೇರವಾಗಿ ಲಸಿಕೆ ಖರೀದಿಸಬಹುದು. ಆದರೆ ಪ್ರತಿ ಡೋಸ್‌ಗೆ 150 ರು. ಸೇವಾಶುಲ್ಕ ಮಾತ್ರ ಪಡೆಯಬೇಕು ಎಂಬ ಷರತ್ತು ವಿಧಿಸಲಾಗಿದೆ. ಖಾಸಗಿ ಆಸ್ಪತ್ರೆಗಳು ಶೇ.25ರಷ್ಟುಲಸಿಕೆ ಮಾತ್ರ ಖರೀದಿಸಬಹುದು ಎಂಬ ನಿರ್ಬಂಧ ಹಾಕಲಾಗಿದೆ. ಉಳಿದ ಶೇ.75 ಲಸಿಕೆ ಸರ್ಕಾರದ್ದು.

ಕೋವಿನ್‌ ಪೋರ್ಟಲ್‌ ಮೂಲಕ ಮೊದಲೇ ಬುಕ್ಕಿಂಗ್‌ ಮಾಡಿ ಲಸಿಕೆ ಪಡೆಯಬಹುದು. ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಆನ್‌ಸೈಟ್‌ ನೋಂದಣಿಗೂ ಅವಕಾಶವಿದೆ ಎಂದು ಮಾರ್ಗಸೂಚಿ ತಿಳಿಸಿದೆ.

click me!