
ಆಗ್ರಾ(ಜೂ.09): ಕೊರೋನಾ ಸೋಂಕಿನ 2ನೇ ಅಲೆ ತಾರಕಕ್ಕೇರಿದ ಸಂದರ್ಭದಲ್ಲಿ ಆಗ್ರಾದಲ್ಲಿನ ಆಸ್ಪತ್ರೆಯೊಂದರಲ್ಲಿ ಆಸ್ಪತ್ರೆಯ ಮಾಲೀಕನೇ ಖುದ್ದು 5 ನಿಮಿಷ ಆಕ್ಸಿಜನ್ ಪೂರೈಕೆಯನ್ನು ‘ಪ್ರಾಯೋಗಿಕ’ವಾಗಿ ಸ್ಥಗಿತಗೊಳಿಸಿದ ಪರಿಣಾಮ 22 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಹೇಳಲಾದ ವಿಡಿಯೋ ಈಗ ವೈರಲ್ ಆಗಿದೆ.
ಇದು ಉತ್ತರ ಪ್ರದೇಶದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಸೋಂಕಿತರ ಸಾವಿಗೆ ಕಾರಣ ಆದವರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಆಗ್ರಹಿಸಿದ್ದಾರೆ.
ಇಂಥ ಘಟನೆ ನಡೆದ ಬಗ್ಗೆ ಉತ್ತರ ಪ್ರದೇಶ ಸರ್ಕಾರ ಅನುಮಾನ ವ್ಯಕ್ತಪಡಿಸಿದೆಯಾದರೂ ತನಿಖೆಗೆ ಆದೇಶಿಸಿದೆ.
ಆಗಿದ್ದೇನು?:
ಏಪ್ರಿಲ್ 26ರಂದು ಪಾರಸ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಈ ಕುರಿತ ವಿಡಿಯೋವೊಂದು ಈಗ ವೈರಲ್ ಆಗಿದೆ.
ವಿಡಿಯೋದಲ್ಲಿ ಮಾತನಾಡುವ ವ್ಯಕ್ತಿಯೊಬ್ಬ ‘ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಇದೆ. ಇಲ್ಲಿನ ರೋಗಿಗಳಿಗೆ ಆಕ್ಸಿಜನ್‌ಗೆ ಬೇರೆ ಆಸ್ಪತ್ರೆಗೆ ಹೋಗಿ ಎಂದು ಹೇಳಿದರೂ ಹೋಗಲು ತಯಾರಿಲ್ಲ. ನೀವೇ ಆಕ್ಸಿಜನ್ ತೆಗೆದುಕೊಂಡು ಬನ್ನಿ ಎಂದರೂ ಕೇಳುತ್ತಿಲ್ಲ, ಹೀಗಾಗಿ ಒಂದು ಟ್ರಯಲ್ ಮಾಡೋಣ. ಯಾರಿಗೆ ಆಕ್ಸಿಜನ್ ಬೇಡವೋ ಅದನ್ನು ನಿಲ್ಲಿಸಿಬಿಡೋಣ. ಯಾರು ಬದುಕುತ್ತಾರೆ.. ಯಾರು ಸಾಯುತ್ತಾರೆ ನೋಡೋಣ’ ಎಂದು ಹೇಳುತ್ತಾನೆ.
ಬಳಿಕ ಮಾತು ಮುಂದುವರಿಸುವ ವ್ಯಕ್ತಿ, ‘7 ಗಂಟೆಗೆ ಮಾಕ್ ಡ್ರಿಲ್ ಮಾಡಿದೆವು. ಆಕ್ಸಿಜನ್ ಶೂನ್ಯ ಮಾಡಿದೆವು. ಆಗ 22 ಸೋಂಕಿತರು ಸತ್ತರು. ಇನ್ನು 74 ಮಂದಿ ಜೀವಂತವಾಗಿದ್ದಾರೆ. ಇದೊಂದು ದೊಡ್ಡ ಪ್ರಯೋಗ. ಉಳಿದವರು ತಾವೇ ಆಕ್ಸಿಜನ್‌ಗೆ ಏರ್ಪಾಟು ಮಾಡುತ್ತಾರೇನೋ ನೋಡೋಣ’ ಎನ್ನುತ್ತಾನೆ.
ಈ ಧ್ವನಿ ಪಾರಸ್ ಆಸ್ಪತ್ರೆಯ ಮಾಲೀಕ ಅರಿಂಜಯ್ ಜೈನ್‌ನದ್ದು ಎಂದು ಹೇಳಲಾಗಿದೆ.
ಆದರೆ ಏ.26ರಂದು ಈ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಕೇವಲ 4 ಮಂದಿ ಮಾತ್ರ. ಮರುದಿನ 3 ಜನ ಸಾವನ್ನನಪ್ಪಿದ್ದಾರೆ ಎಂಬುದು ನಮ್ಮ ಬಳಿ ಇರುವ ಅಧಿಕೃತ ಮಾಹಿತಿ. ಆದಾಗ್ಯೂ ಈ ವಿಡಿಯೋ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಪ್ರಭುನಾರಾಯಣ ಸಿಂಗ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ