'ಕೊರೋನಾ ನಿಗ್ರಹದಲ್ಲಿ ಮೋದಿ ವಿಫಲ: ನಿಮ್ಮ ತಪ್ಪಿಗೆ ನೆಹರು ದೂಷಿಸಬೇಡಿ'

By Kannadaprabha NewsFirst Published Apr 22, 2021, 8:46 AM IST
Highlights

ಕೊರೋನಾ ನಿಗ್ರಹದಲ್ಲಿ ಮೋದಿ ವೈಫಲ್ಯ: ಪ್ರಿಯಾಂಕಾ| ನಿಮ್ಮ ತಪ್ಪಿಗೆ ನೆಹರು ಅವರನ್ನು ದೂಷಿಸಬೇಡಿ

ನವದೆಹಲಿ(ಏ.22): ಕೊರೋನಾ ಎರಡನೇ ಅಲೆ ಎದುರಿಸಲು ಕೇಂದ್ರ ಸರ್ಕಾರ ಸಿದ್ಧತೆಯನ್ನೇ ಮಾಡಿಕೊಂಡಿಲ್ಲ ಎಂದು ಟೀಕಿಸಿರುವ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ, ದೇಶದ ಲಸಿಕಾ ತಂತ್ರಗಾರಿಕೆ ಭಯಾನಕ ವೈಫಲ್ಯ ಅನುಭವಿಸಿದೆ. ತನ್ನ ಈ ತಪ್ಪಿಗೆ ಕೇಂದ್ರ ಸರ್ಕಾರ ಮಾಜಿ ಪ್ರಧಾನಿ ಜವಾಹರ ಲಾಲ್‌ ಅವರನ್ನು ದೂಷಿಸಬಾರದು. ಏಕೆಂದರೆ ಪ್ರಧಾನಿಯಾಗಿರುವವರು ನರೇಂದ್ರ ಮೋದಿ ಎಂದು ವ್ಯಂಗ್ಯವಾಡಿದ್ದಾರೆ.

ಭಾರತೀಯರಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಮೊದಲು ಆದ್ಯತೆ ನೀಡಬೇಕಾಗಿತ್ತು. ಉತ್ತರಪ್ರದೇಶದಲ್ಲಿ 22 ಕೋಟಿ ಜನರಿದ್ದಾರೆ. ಈವರೆಗೆ ಕೇವಲ 1 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಕೇಂದ್ರ ಸರ್ಕಾರ ಜನವರಿಯಿಂದ ಮಾಚ್‌ರ್‍ ಅವಧಿಯಲ್ಲಿ 6 ಕೋಟಿ ಲಸಿಕೆಗಳನ್ನು ಪ್ರಚಾರಕ್ಕಾಗಿ ವಿದೇಶಗಳಿಗೆ ರಫ್ತು ಮಾಡಿ ಫೋಟೋ ತೆಗೆಸಿಕೊಂಡಿದೆ. ಆದರೆ ಇದೇ ಅವಧಿಯಲ್ಲಿ ಕೇವಲ ಮೂರರಿಂದ ನಾಲ್ಕು ಕೋಟಿ ಭಾರತೀಯರಿಗಷ್ಟೇ ಲಸಿಕೆ ಸಿಕ್ಕಿದೆ ಎಂದು ಕಿಡಿಕಾರಿದ್ದಾರೆ.

ಆಮ್ಲಜನಕ ಉತ್ಪಾದನೆಯಲ್ಲಿ ದೇಶ ಮುಂಚೂಣಿ ಸ್ಥಾನದಲ್ಲಿದೆ. ಕಳೆದ ವರ್ಷ 7500 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಅನ್ನು ನಿತ್ಯ ಉತ್ಪಾದಿಸಲಾಗಿತ್ತು. ಆದರೆ ಅದರ ಅರ್ಧದಷ್ಟೂಕಳೆದ ವರ್ಷ ಬಳಕೆಯಾಗಿರಲಿಲ್ಲ. ನಮ್ಮಲ್ಲಿ ಆಮ್ಲಜನಕ ಸಾಕಷ್ಟಿದೆ. ಆದರೆ ಅದನ್ನು ದೇಶಾದ್ಯಂತ ಸಾಗಣೆ ಮಾಡಲು ಸೂಕ್ತ ವ್ಯವಸ್ಥೆಯನ್ನು ಸರ್ಕಾರ ಮಾಡಲಿಲ್ಲ. ಮೊದಲ ಹಾಗೂ ಎರಡನೆ ಲೆಗೆ ಸಮಯವಿತ್ತು. ಸರ್ಕಾರ ಏನನ್ನೂ ಮಾಡಲಿಲ್ಲ ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಕಿಡಿಕಾರಿದ್ದಾರೆ.

ಸ್ವಾರ್ಥರಹಿತವಾಗಿ ದೇಶ ಸೇವೆ ಮಾಡಿದ ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರು ಸರ್ಕಾರಕ್ಕೆ ಸಲಹೆ ನೀಡುವ ಪತ್ರ ಬರೆದರೆ ಸಚಿವರಿಂದ ಸರ್ಕಾರ ಉತ್ತರ ಕೊಡಿಸುತ್ತದೆ. ಪತ್ರಿಕಾ ಹೇಳಿಕೆಯಲ್ಲೂ ವಿಪಕ್ಷಗಳ ವಿರುದ್ಧ ದಾಳಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

click me!