3 ಲಕ್ಷ ಸಮೀಪಕ್ಕೆ ದೈನಂದಿನ ಸೋಂಕು, 2023 ಸಾವು!

By Kannadaprabha NewsFirst Published Apr 22, 2021, 8:06 AM IST
Highlights

3 ಲಕ್ಷ ಸಮೀಪಕ್ಕೆ ದೈನಂದಿನ ಸೋಂಕು| ಒಂದೇ ದಿನ 2.95 ಲಕ್ಷ ಮಂದಿಗೆ ಸೋಂಕು, 2023 ಸಾವು| ಸೋಂಕು, ಸಾವಿನಲ್ಲಿ ಮತ್ತೊಂದು ಸಾರ್ವಕಾಲಿಕ ದಾಖಲೆ| ಸಕ್ರಿಯ ಪ್ರಕರಣಗಳ ಸಂಖ್ಯೆ 21.5 ಲಕ್ಷಕ್ಕೆ ಏರಿಕೆ| ಸಕ್ರಿಯ ಕೇಸು ಕಳೆದ ಮೊದಲ ಅಲೆಯ ಗರಿಷ್ಠಕ್ಕಿಂತ ದುಪ್ಪಟ್ಟು

ನವದೆಹಲಿ(ಏ.22): ದೇಶದಲ್ಲಿ ಕೊರೋನಾ ವೈರಸ್‌ ಸ್ಪೋಟ ಮುಂದುವರೆದಿದ್ದು, ಬುಧವಾರ ದೈನಂದಿನ ಸೋಂಕು ಮತ್ತು ಸಾವು ಎರಡೂ ಸಾರ್ವಕಾಲಿಕ ಗರಿಷ್ಠಕ್ಕೆ ತಲುಪಿದೆ. ಬುಧವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 2,95,041 ಪ್ರಕರಣಗಳು ದೃಢವಾಗಿವೆ. ಇದೇ ವೇಳೆ 2023 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಹೊಸ ಸೋಂಕಿತರೊಂದಿಗೆ ದೇಶದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 21.57 ಲಕ್ಷಕ್ಕೆ ಏರಿಕೆಯಾಗಿದೆ. ಇದು ಕಳೆದ ವರ್ಷ ಕೊರೋನಾ ಮೊದಲ ಅಲೆಯ ವೇಳೆ ತಾರಕಕ್ಕೆ ಏರಿದ್ದಾಗಿನ ಸಂಖ್ಯೆಗಿಂತ ದುಪ್ಪಟ್ಟಾಗಿದೆ. ಇದೇ ವೇಳೆ ಚೇತರಿಕೆ ಪ್ರಮಾಣ ಶೇ.85.01ಕ್ಕೆ ಕುಸಿದಿದೆ.

ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 1.56 ಕೋಟಿ ಮತ್ತು ಒಟ್ಟು ಸಾವಿಗೀಡಾದವರ ಸಂಖ್ಯೆ 1,82,553ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರ ಪೈಕಿ 1.32 ಕೋಟಿ ಮಂದಿ ಗುಣಮುಖರಾಗಿದ್ದಾರೆ.

76% ಹೊಸ ಕೇಸ್‌ 10 ರಾಜ್ಯಗಳಲ್ಲಿ:

ಭಾನುವಾರ ದೃಢಪಟ್ಟಿರುವ ಸೋಂಕಿನ ಪೈಕಿ ಶೇ.76ರಷ್ಟುಕರ್ನಾಟಕ ಸೇರಿದಂತೆ 10 ರಾಜ್ಯಗಳಲ್ಲಿ ದೃಢಪಟ್ಟಿವೆ. ಮಹಾರಾಷ್ಟ್ರ, ಉತ್ತರಪ್ರದೇಶ, ದೆಹಲಿ, ರಾಜಸ್ಥಾನ, ಗುಜರಾತ್‌, ಮಧ್ಯಪ್ರದೇಶ, ಕೇರಳ, ತಮಿಳುನಾಡು ಮತ್ತು ಛತ್ತೀಸ್‌ಗಢ ಉಳಿದ 9 ರಾಜ್ಯಗಳು.

ಹಾಗೆಯೇ ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ ಶೇ.60.86ರಷ್ಟುಮಹಾರಾಷ್ಟ್ರ, ಉತ್ತರಪ್ರದೇಶ, ಕರ್ನಾಟಕ, ಛತ್ತೀಸ್‌ಗಢ ಮತ್ತು ಕೇರಳ ಈ 5 ರಾಜ್ಯಗಳಲ್ಲಿಯೇ ಇವೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

ಉಳಿದಂತೆ ಭಾನುವಾರ ಮೃತಪಟ್ಟವರ ಪೈಕಿ ಶೇ.82.6ರಷ್ಟುಸಾವು ಕೇವಲ 10 ರಾಜ್ಯಗಳಲ್ಲಿ ಸಂಭವಿಸಿದೆ. ಮಹಾರಾಷ್ಟ್ರವೊಂದರಲ್ಲಿಯೇ 519 ಮಂದಿ, ದೆಹಲಿ 277, ಛತ್ತೀಸ್‌ಗಢದಲ್ಲಿ 191, ಉತ್ತರಪ್ರದೇಶದಲ್ಲಿ 162, ಕರ್ನಾಟಕದಲ್ಲಿ 149 ಮಂದಿ ಸಾವಿಗೀಡಾಗಿದ್ದಾರೆ.

click me!