ರಾಮನವಮಿಯಂದು ರಾಮಮಂದಿರ ನಿರ್ಮಾಣಕ್ಕೆ ಚಾಲನೆ; ಹೀಗಿರುತ್ತೆ ಟ್ರಸ್ಟ್?

Published : Nov 12, 2019, 11:36 AM ISTUpdated : Nov 13, 2019, 03:51 PM IST
ರಾಮನವಮಿಯಂದು ರಾಮಮಂದಿರ ನಿರ್ಮಾಣಕ್ಕೆ ಚಾಲನೆ; ಹೀಗಿರುತ್ತೆ ಟ್ರಸ್ಟ್?

ಸಾರಾಂಶ

ಟ್ರಸ್ಟ್‌ ಸ್ಥಾಪನೆಗೆ 3 ತಿಂಗಳ ಗಡುವು ನಂತರ ಬರಲಿರುವ ರಾಮನ ಜನ್ಮದಿನ |  2020ರ ಏಪ್ರಿಲ್‌ 2ರಂದು ರಾಮಮಂದಿರ ಕಾಮಗಾರಿಗೆ ಚಾಲನೆ ಸಂಭವ | ರಾಮನವಮಿಗೆ ಮಂದಿರ ಶುರು? 

ಲಖನೌ (ನ. 12): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್‌ ಹಸಿರು ನಿಶಾನೆ ತೋರಿರುವ ಹಿನ್ನೆಲೆಯಲ್ಲಿ ಶ್ರೀರಾಮಚಂದ್ರನ ಜನ್ಮದಿನವಾದ ರಾಮನವಮಿಯ ದಿನದಂದೇ ಮಂದಿರ ನಿರ್ಮಾಣ ಕಾಮಗಾರಿ ಆರಂಭವಾಗುವ ಲಕ್ಷಣಗಳು ಕಂಡುಬರುತ್ತಿವೆ.

ರಾಮನವಮಿ 2020 ರ ಏಪ್ರಿಲ್‌ 2 ರಂದು ಇದೆ. ದೇಗುಲ ನಿರ್ಮಾಣ ಕೆಲಸ ಅಂದೇ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಈ ಬೆಳವಣಿಗೆಗಳ ಕುರಿತು ಹೆಚ್ಚಿನ ಮಾಹಿತಿ ಇರುವ ವ್ಯಕ್ತಿಗಳು ತಿಳಿಸಿದ್ದಾರೆ ಎಂದು ಆಂಗ್ಲ ದೈನಿಕವೊಂದು ವರದಿ ಮಾಡಿದೆ.

ರಾಮನ ದರ್ಶನಕ್ಕಾಗಿ 27 ವರ್ಷ ಉಪವಾಸ, ಮುಗಿದಿಲ್ಲ 87 ರ ವೃದ್ದೆ ವನವಾಸ!

ಅಯೋಧ್ಯೆ ಕುರಿತು ಶನಿವಾರ ಐತಿಹಾಸಿಕ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್‌, ದೇಗುಲ ನಿರ್ಮಾಣಕ್ಕೆ 3 ತಿಂಗಳಿನಲ್ಲಿ ಟ್ರಸ್ಟ್‌ ಸ್ಥಾಪನೆ ಮಾಡುವಂತೆ ಸೂಚನೆ ನೀಡಿತ್ತು. ಈ ಮೂರು ತಿಂಗಳ ವಾಯಿದೆ ಮುಗಿದ ಕೆಲವು ವಾರಗಳ ಬಳಿಕ ರಾಮನವಮಿ ಬರುತ್ತದೆ. ಹೀಗಾಗಿ ಅಂದೇ ದೇಗುಲಕ್ಕೆ ಚಾಲನೆ ನೀಡಲಾಗುತ್ತದೆ. ಆದರೆ ಶಿಲಾನ್ಯಾಸ ಮಾಡಲಾಗುತ್ತದೋ ಅಥವಾ 1989ರಂತೆ ಬುನಾದಿ ಹಾಕಲಾಗುತ್ತದೋ ಎಂಬುದು ಸ್ಪಷ್ಟವಾಗಿಲ್ಲ.

ದೇಗುಲದ ವಿನ್ಯಾಸ ಈಗಾಗಲೇ ಸಿದ್ಧವಾಗಿದೆ. ಒಮ್ಮೆ ಕಾಮಗಾರಿ ಆರಂಭವಾದರೆ, ಮುಕ್ತಾಯಗೊಳ್ಳಲು ಎರಡರಿಂದ ಮೂರು ವರ್ಷಗಳು ಬೇಕಾಗುತ್ತವೆ ಎಂದು ಮೂಲಗಳು ತಿಳಿಸಿವೆ.

ಸೋಮನಾಥ ರೀತಿ ಟ್ರಸ್ಟ್‌?:

ಈ ನಡುವೆ, ಸುಪ್ರೀಂಕೋರ್ಟ್‌ ರಚಿಸಲು ಸೂಚಿಸಿರುವ ಟ್ರಸ್ಟ್‌ ಸೋಮನಾಥ ದೇಗುಲ, ಅಮರನಾಥ ದೇಗುಲ ಮಂಡಳಿ ಅಥವಾ ಮಾತಾ ವೈಷ್ಣೋದೇವಿ ದೇಗುಲ ಮಂಡಳಿಯ ರೀತಿ ಇರುತ್ತದೆ ಎಂದು ಹೇಳಿವೆ.

ಇದೇ ವೇಳೆ, ವಿವಾದಿತ ಜಾಗದ ಸುತ್ತಲಿನ ಜಾಗವನ್ನು ಬಹಳ ಹಿಂದೆಯೇ ವಶಪಡಿಸಿಕೊಂಡಿರುವ ಕೇಂದ್ರ ಸರ್ಕಾರ ಅದನ್ನು ಉದ್ದೇಶಿತ ಟ್ರಸ್ಟ್‌ಗೆ ವರ್ಗಾವಣೆ ಮಾಡಲಿದೆ. ಈ ಪೈಕಿ 43 ಎಕರೆ ಜಾಗ ರಾಮಜನ್ಮಭೂಮಿ ನ್ಯಾಸಕ್ಕೆ ಸೇರಬೇಕು. ಆ ಜಾಗವನ್ನು ಸರ್ಕಾರ ವಶಪಡಿಸಿಕೊಂಡಾಗ ನ್ಯಾಸ ಯಾವುದೇ ಪರಿಹಾರ ಪಡೆದಿರಲಿಲ್ಲ. ಹೊಸದಾಗಿ ರಚನೆಯಾಗಲಿರುವ ಟ್ರಸ್ಟ್‌ನಲ್ಲಿ ನ್ಯಾಸದ ಪ್ರತಿನಿಧಿಯೊಬ್ಬರಿಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಹೇಳಲಾಗಿದೆ.

ಅಯೋಧ್ಯೆ ಬೆನ್ನಲ್ಲೇ ಬರಲಿದೆ ಇನ್ನೂ 6 ತೀರ್ಪು; 3 ದಿನಗಳಲ್ಲಿ 6 ತಿಂಗಳ ತರಬೇತಿ!

ಇದಲ್ಲದೆ, ನ್ಯಾಸದ ಬಳಿ 1.80 ಲಕ್ಷ ಕಲ್ಲಿನ ಸ್ಲಾ್ಯಬ್‌ಗಳು ಇವೆ. ದೇಗುಲ ನಿರ್ಮಾಣಕ್ಕಾಗಿ ಇವನ್ನು ದಾಸ್ತಾನು ಮಾಡಲಾಗಿದೆ. ಇದೆಲ್ಲವನ್ನೂ ನ್ಯಾಸ ಸರ್ಕಾರ ರಚಿಸಲಿರುವ ಟ್ರಸ್ಟ್‌ ವಶಕ್ಕೆ ನೀಡಲಿದೆ ಎನ್ನಲಾಗಿದೆ.

ರಾಮಜನ್ಮಭೂಮಿ ನ್ಯಾಸದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೂ ಸದಸ್ಯರಾಗಿದ್ದಾರೆ. ಅವರು ಆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಪತ್ರಿಕೆಯ ವರದಿ ಹೇಳಿದೆ.

ಹೇಗಿರಲಿದೆ ಟ್ರಸ್ಟ್? 

ರಾಮಮಂದಿರ ಟ್ರಸ್ಟ್ ಅನ್ನು ಸೋಮನಾಥ ಅಥವಾ ವೈಷ್ಣೋದೇವಿ ಟ್ರಸ್ಟ್ ರೀತಿ ರಚಿಸುವ ಸಾಧ್ಯತೆ ಇದೆ. ಸೋಮನಾಥ ಮಾದರಿಯಲ್ಲಿ ಪ್ರಧಾನಿ, ಕೇಂದ್ರ ಗೃಹ ಸಚಿವರು, ರಾಜ್ಯ ಸರ್ಕಾರದ ಪ್ರತಿನಿಧಿ, ಸಮಾಜದ ಗಣ್ಯರು ಸದಸ್ಯರಾಗಿರುತ್ತಾರೆ. ವೈಷ್ಣೋದೇವಿ ಟ್ರಸ್ಟ್‌ಗೆ ರಾಜ್ಯಪಾಲರು ಮುಖ್ಯಸ್ಥರು. ಐಎಎಸ್ ಅಧಿಕಾರಿಗೆ ಅದರ ಉಸ್ತುವಾರಿ . ಟ್ರಸ್ಟ್‌ನಲ್ಲಿ ದೇಶದ ವಿವಿಧ ಭಾಗಗಳಗಣ್ಯರು ಸದಸ್ಯರಾಗಿರುತ್ತಾರೆ.

ಮಂದಿರಕ್ಕೆ ಜನರಿಂದ ದೇಣಿಗೆ: ಭೇಟಿಗೆ ಕರ ಸೇವಕರಿಗೆ ಚಾನ್ಸ್

ಸಾರ್ವಜನಿಕರು, ರಾಮಭಕ್ತರಿಂದ ಸಂಗ್ರಹಿಸಲಾಗುವ ದೇಣಿಗೆ ಹಣದಿಂದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವನ್ನು ನಿರ್ಮಿಸಲು ವಿಶ್ವ ಹಿಂದೂ ಪರಿಷತ್ ನಿರ್ಧರಿಸಿದೆ. ವಿಶ್ವ ಹಿಂದೂ ಪರಿಷತ್ ನ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ಅವರು ಇದನ್ನು ಖಚಿತಪಡಿಸಿದ್ದು, ದೇಶದ ಉದ್ದಗಲದಲ್ಲಿ ಕೋಟ್ಯಂತರ ರಾಮ ಭಕ್ತರಿದ್ದು, ಅವರೆಲ್ಲರನ್ನೂ ಭೇಟಿ ಮಾಡಲಾಗುವುದು.

ಕಟ್ಟಡ ನಿರ್ಮಾಣಕ್ಕಾಗಿ ಅವರು ನೀಡುವ ಹಣದಿಂದಲೇ ಮಂದಿರ ನಿರ್ಮಾಣ ಮಾಡಲಾಗುವುದು ಎಂದು ಹೇಳಿದ್ದಾರೆ. ಅಲ್ಲದೆ, ಕರಸೇವಕರು ಇನ್ನೊಂದು ಬಾರಿ ಅಯೋಧ್ಯೆಗೆ ಬಂದು ಸ್ವಯಂಪ್ರೇರಿತರಾಗಿ ಕೆಲಸದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು. ಮಂದಿರ ನಿರ್ಮಾಣ ಆರಂಭಿಕ ಯೋಜನೆ ಮಾಹಿತಿ ನೀಡಲಾಗುವುದು ಎಂದಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: 5 ವರ್ಷಗಳಲ್ಲಿ 2400 ವಿಮಾನಗಳಲ್ಲಿ ದೋಷ: ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ
ಮಹಿಳೆಯರ ಸಾರಥ್ಯದಲ್ಲಿ ಭಾರತ, ನ್ಯೂಜಿಲೆಂಡ್‌ ವ್ಯಾಪಾರ ಒಪ್ಪಂದ!