
ನವದೆಹಲಿ (ನ. 12): ಸರ್ವೋಚ್ಚ ನ್ಯಾಯಾಲಯವು ಅಯೋಧ್ಯೆ ರಾಮಮಂದಿರ ನಿರ್ಮಾಣದ ಪರ ತೀರ್ಪು ಪ್ರಕಟಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರವು ಮಂದಿರ ಕುರಿತಾದ ‘ಧರ್ಮದರ್ಶಿ ಮಂಡಳಿ’ (ಟ್ರಸ್ಟ್) ರಚನೆ ಪ್ರಕ್ರಿಯೆ ಆರಂಭಿಸಿದೆ.
ಟ್ರಸ್ಟ್ ರಚಿಸಿ ಆ ಮೂಲಕ ರಾಮಮಂದಿರ ನಿರ್ಮಾಣ ಹಾಗೂ ನಿರ್ವಹಣೆಯನ್ನು ಕೇಂದ್ರ ಸರ್ಕಾರ ಮಾಡಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿ, ಈ ಪ್ರಕ್ರಿಯೆ ಅಂತ್ಯಕ್ಕೆ 3 ತಿಂಗಳ ಗಡುವು ವಿಧಿಸಿತ್ತು. ಈ ಪ್ರಕಾರ, ಕೇಂದ್ರ ಕನೂನು ಸಚಿವಾಲಯ, ಗೃಹ ಸಚಿವಾಲಯ ಹಾಗೂ ವಿತ್ತ ಸಚಿವಾಲಯದ ಉನ್ನತ ಅಧಿಕಾರಿಗಳು ಮತ್ತು ಅಟಾರ್ನಿ ಜನರಲ್ ಅವರ ಸಲಹೆಯನ್ನು ಕೇಂದ್ರ ಸರ್ಕಾರ ಕ್ರೋಡೀಕರಿಸಲು ನಿರ್ಧರಿಸಿದ್ದು, ಇವರನ್ನು ಒಳಗೊಂಡ ಮಂಡಳಿಯನ್ನು ಮೊದಲ ಹಂತದಲ್ಲಿ ರಚಿಸಲಿದೆ.
ಐತಿಹಾಸಿಕ ಅಯೋಧ್ಯೆ ತೀರ್ಪು ಬರೆದಿದ್ದು ನ್ಯಾ. ಚಂದ್ರಚೂಡ್?
ಈ ಮಂಡಳಿಯು ಗಹನ ಚರ್ಚೆ ನಡೆಸಿ ಟ್ರಸ್ಟ್ ರಚನೆಗೆ ಸರ್ಕಾರಕ್ಕೆ ತನ್ನ ಸಲಹೆ ನೀಡಲಿದೆ. ಅಲ್ಲದೆ, ಟ್ರಸ್ಟ್‌ನ ನಿಯಮಗಳು ಏನಿರಬೇಕು ಎಂಬ ಶಿಫಾರಸನ್ನೂ ಮಂಡಳಿ ಮಾಡಲಿದೆ. ಇನ್ನು ಸುಪ್ರೀಂ ಕೋರ್ಟ್ ತೀರ್ಪನ್ನು ಸರ್ಕಾರದ ಅಧಿಕಾರಿಗಳ ತಂಡವೊಂದು ಅಧ್ಯಯನ ನಡೆಸುತ್ತಿದೆ. ತೀರ್ಪಿನ ಪ್ರಕಾರ ಟ್ರಸ್ಟ್ ಯಾವ ರೀತಿ ಇರಬೇಕು ಎಂಬುದನ್ನು ಅದು ತಿಳಿದುಕೊಂಡು ಸರ್ಕಾರಕ್ಕೆ ಮಾಹಿತಿ ನೀಡಲಿದೆ.
ಅಯೋಧ್ಯೆ ಮರುಪರಿಶೀಲನಾ ಅರ್ಜಿ ಬಗ್ಗೆ ನ.17 ರಂದು ತೀರ್ಮಾನ
ಅಯೋಧ್ಯೆ ರಾಮಜನ್ಮಭೂಮಿ ಪ್ರಕರಣದ ಬಗ್ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸುವ ಬಗ್ಗೆ ನವೆಂಬರ್ 17 ರಂದು ತೀರ್ಮಾನ ಕೈಗೊಳ್ಳುತ್ತೇವೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಹೇಳಿದೆ. ಮುಖ್ಯ ನ್ಯಾಯಾಧೀಶ ನ್ಯಾ| ರಂಜನ್ ಗೊಗೋಯ್ ಅವರ ಪೀಠ ಕಳೆದ ಶನಿವಾರ ನೀಡಿದ ತೀರ್ಪಿನಲ್ಲಿ, ‘ವಿವಾದಿತ ಭೂಮಿಯ ಮೇಲೆ ಸುನ್ನಿ ವಕ್ಫ್ ಮಂಡಳಿಗೆ ಯಾವುದೇ ಅಧಿಕಾರವಿಲ್ಲ’ ಎಂದಿತ್ತು. ಆದರೆ ಮಸೀದಿ ನಿರ್ಮಿಸಲು ಅದಕ್ಕೆ 5 ಎಕರೆ ಪ್ರತ್ಯೇಕ ಜಾಗ ನೀಡುವಂತೆ ಸರ್ಕಾರಕ್ಕೆ ಆದೇಶಿಸಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಎಐಎಂಪಿಎಲ್‌ಬಿ ಮುಖಂಡ ಜಫರ್ಯಾಬ್ ಜಿಲಾನಿ, ‘ಆದೇಶವನ್ನು ಮರುಪರಿಶೀಲಿಸುವಂತೆ ಕೋರುವ ಬಗ್ಗೆ ನ.17 ರ ಭಾನುವಾರ ಸಭೆಯಲ್ಲಿ ತೀರ್ಮಾನಿಸಲಾಗುವುದು’ ಎಂದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ