ಯುದ್ಧ ಭೀತಿಯ ನಡುವೆಯೇ ಚೀನಾ ಗಡಿಯಲ್ಲಿನ 32 ರಸ್ತೆ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಭಾರತ ಸರ್ಕಾರ ಸಭೆಯಲ್ಲಿ ತೀರ್ಮಾನಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ(ಜೂ.23): ರಸ್ತೆ ನಿರ್ಮಾಣ ವಿಷಯಕ್ಕೆ ತಗಾದೆ ತೆಗೆದು ಗಡಿಯಲ್ಲಿ ಯುದ್ಧ ರೀತಿಯ ಸನ್ನಿವೇಶ ಸೃಷ್ಟಿಯಾಗಲು ಕಾರಣವಾಗಿರುವ ಚೀನಾಕ್ಕೆ ಭಾರತ ಮತ್ತೊಮ್ಮೆ ಸಡ್ಡು ಹೊಡೆದಿದೆ. ಚೀನಾ ಗಡಿಯಲ್ಲಿ ನಿರ್ಮಾಣ ಆಗುತ್ತಿರುವ 32 ರಸ್ತೆ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ತೀರ್ಮಾನಿಸಿದೆ.
ಕೇಂದ್ರ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯು), ಗಡಿ ರಸ್ತೆಗಳ ಸಂಘಟನೆ (ಬಿಆರ್‌ಒ) ಮತ್ತು ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಜೊತೆ ಗೃಹ ಸಚಿವಾಲಯ ಆಯೋಜಿಸಿದ್ದ ಉನ್ನತ ಮಟ್ಟದ ಸಭೆಯ ವೇಳೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಚೀನಿ ಕಂಪನಿ 5 ಸಾವಿರ ಕೋಟಿ ರುಪಾಯಿ ಹೂಡಿಕೆಗೆ ಮಹಾರಾಷ್ಟ್ರ ಬ್ರೇಕ್..!
ಚೀನಾ ಗಡಿಯಲ್ಲಿನ 32 ರಸ್ತೆ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಈ ಯೋಜನೆಯನ್ನು ಪೂರ್ಣಗೊಳಿಸಲು ಸಂಬಂಧಿಸಿದ ಸಂಸ್ಥೆಗಳು ಎಲ್ಲಾ ರೀತಿಯ ಸಹಕಾರ ನೀಡಲಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಚೀನಾ ಗಡಿಯಲ್ಲಿ ಒಟ್ಟು 72 ರಸ್ತೆಗಳನ್ನು ಭಾರತ ನಿರ್ಮಾಣ ಮಾಡುತ್ತಿದೆ. ಅವುಗಳ ಪೈಕಿ 12 ರಸ್ತೆ ಕಾಮಗಾರಿಗಳನ್ನು ಸಿಪಿಡಬ್ಲ್ಯುಡಿ ನಡೆಸುತ್ತಿದೆ. 61 ರಸ್ತೆ ಕಾಮಗಾರಿಗಳನ್ನು ಬಿಆರ್‌ಒ ಕೈಗೊಂಡಿದ್ದು, ಗೃಹ ಸಚಿವಾಲಯ ಅವುಗಳನ್ನು ನೇರ ಮೇಲ್ವಿಚಾರಣೆ ಮಾಡುತ್ತಿದೆ.