ನವದೆಹಲಿ(ಮೇ.29): ಕೊರೋನಾ ವೈರಸ್ ಕಾರಣ ಹಲವು ಮಕ್ಕಳು ಅನಾಥರಾಗಿದ್ದಾರೆ. ಕೊರೋನಾಗೆ ತುತ್ತಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳ ಪರಿಸ್ಥಿತಿ ಹಾಗೂ ಮನಸ್ಥಿತಿ ಹೇಳತೀರದು. ಇದೀಗ ಕೋವಿಡ್ ಕಾರಣ ಪೋಷಕರನ್ನು ಕಳೆದುಕೊಂಡ ಮಕ್ಕಳ ಸಬಲೀಕರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಹೊಸ ಯೋಜನೆ ಘೋಷಿಸಿದ್ದಾರೆ. ಮೋದಿ ಸರ್ಕಾರಕ್ಕೆ 7 ವರ್ಷ ತುಂಬುತ್ತಿರುವ ಹಿನ್ನಲೆಯಲ್ಲಿ ಮಹತ್ವದ ಯೋಜನೆ ಘೋಷಿಸಿದ್ದಾರೆ.
ತಮ್ಮ ಉಳಿತಾಯದ 2.25 ಲಕ್ಷ ರೂ. ಪಿಎಂ ಕೇರ್ಸ್ ಫಂಡ್‌ಗೆ ದಾನ ಮಾಡಿದ ಮೋದಿ!
undefined
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪಿಎಂ ಕೇರ್ಸ್ ನಿಧಿಯಡಿಯಲ್ಲಿ ಕೊರೋನಾ ಕಾರಣ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳ ಸಂಪೂರ್ಣ ಜವಾಬ್ದಾರಿ ವಹಿಸಲಾಗುತ್ತಿದೆ. ಮಕ್ಕಳು ದೇಶದ ಭವಿಷ್ಯ. ಈ ಕಠಿಣ ಸಂದರ್ಭದಲ್ಲಿ ಮಕ್ಕಳನ್ನು ಬೆಂಬಲಿಸಿವುದು, ಅವರನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪಿಎಂ ಕೇರ್ಸ್’ ನಿಧಿಯಿಂದ ಕರ್ನಾಟಕಕ್ಕೆ 90 ವೆಂಟಿಲೇಟರ್: 34 ಕೋಟಿ ರು. ಅನುದಾನ ಮಂಜೂರು!
ಪಿಎಂ ಕೇರ್ಸ್ ನಿಧಿಯಲ್ಲಿ ಮಕ್ಕಳ ಸಬಲೀಕರಣಕ್ಕೆ ಮೋದಿ ಹತ್ತು ಹಲವು ಯೋಜನೆ ಘೋಷಿಸಿದ್ದಾರೆ. ಕೊರೋನಾದಿಂದ ಪೋಷಕರ ಕಳೆದುಕೊಂಡ ಮಕ್ಕಳ ಶಿಕ್ಷಣ ಜವಾಬ್ದಾರಿ, ವಿಮೆ, ತಿಂಗಳ ಭತ್ಯೆ, 10 ಲಕ್ಷ ರೂಪಾಯಿ ಫಿಕ್ಸೆಡ್ ಡೆಪಾಸಿಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ಮಕ್ಕಳಿಗೆ ನೀಡಲು ನಿರ್ಧರಿಸಲಾಗಿದೆ. ಮಕ್ಕಳ ಸಬಲೀಕರಣಕ್ಕೆ ಘೋಷಿಸಿದ ಹೊಸ ಯೋಜನೆ ವಿವರ ಇಲ್ಲಿದೆ.
ಉನ್ನತ ಶಿಕ್ಷಣ ಹಾಗೂ ಫಿಕ್ಸೆಡ್ ಡೆಪಾಸಿಟ್:
- ಪೋಷಕರ ಕಳೆದುಕೊಂಡ ಮಗ ಅಥವಾ ಮಗಳು 18 ವರ್ಷದ ಬಳಿಕ 5 ವರ್ಷಗಳ ಕಾಲ ಪ್ರತಿ ತಿಂಗಳು ಮಾಸಿಕ ಭತ್ಯೆ ಪಡೆಯಲಿದ್ದಾರೆ.
- 23 ವರ್ಷಕ್ಕೆ ಕಾಲಿಟ್ಟಾಗ ಫಿಕ್ಸೆಡ್ ಡೆಪಾಸಿಟ್ ರೂಪದಲ್ಲಿಟ್ಟ ಕಾರ್ಪಸ್ ಮೊತ್ತ 10 ಲಕ್ಷ ರೂಪಾಯಿ ಪಡೆಯಲಿದ್ದಾರೆ
10 ವರ್ಷದೊಳಗಿನ ಮಕ್ಕಳ ಶಾಲಾ ಶಿಕ್ಷಣ:
- ಮಗುವಿಗೆ ಹತ್ತಿರದ ಕೇಂದ್ರೀಯ ವಿದ್ಯಾಲಯ ಅಥವಾ ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ನೀಡಲು ವ್ಯವಸ್ಥೆ
- ಮಗುವನ್ನು ಖಾಸಗಿ ಶಾಲೆಯಲ್ಲಿ ಸೇರಿಸಿದರೆ, RTE ಮಾನದಂಡಗಳ ಪ್ರಕಾರ ಸ್ಕೂಲ್ ಫೀಸ್ ಮೊತ್ತವನ್ನು ಪಿಎಂ ಕೇರ್ಸ್ ನಿಧಿಯಿಂದ ನೀಡಲಾಗುತ್ತದೆ.
- ಮಕ್ಕಳ ಸಮವಸ್ತ್ರ, ಪಠ್ಯ ಪುಸ್ತಕ, ನೋಟ್‌ಬುಕ್ ಸೇರಿದಂತೆ ಶೈಕ್ಷಣಿಕ ಖರ್ಚು ವೆಚ್ಚ ಪಿಎಂ ಕೇರ್ಸ್ ನೋಡಿಕೊಳ್ಳಲಿದೆ
ಶಾಲಾ ಶಿಕ್ಷಣ: 11-18 ವರ್ಷದ ಮಕ್ಕಳಿಗೆ:
- ಸೈನಿಕ್ ಶಾಲೆ, ನವೋದಯ ವಿದ್ಯಾಲಯ ಮುಂತಾದ ಯಾವುದೇ ಕೇಂದ್ರ ಸರ್ಕಾರಿ ವಸತಿ ಶಾಲೆಯಲ್ಲಿ ಮಗುವಿಗೆ ಪ್ರವೇಶ ನೀಡಲಾಗುವುದು.
- ಒಂದು ವೇಳೆ ಮಗುವನ್ನು ಗಾರ್ಡಿಯನ್ / ಅಜ್ಜಿ / ಅಥವಾ ಕುಟುಂಬದ ಸದಸ್ಯರ ಆರೈಕೆಯಲ್ಲಿ ಮುಂದುವರಿಸಬೇಕಾದರೆ, ಅವನಿಗೆ ಅಥವಾ ಅವಳಿಗೆ ಹತ್ತಿರದ ಕೇಂದ್ರೀಯ ವಿದ್ಯಾಲಯದಲ್ಲಿ ಅಥವಾ ಖಾಸಗಿ ಶಾಲೆಯಲ್ಲಿ ಪ್ರವೇಶ ನೀಡಲಾಗುವುದು.
- ಮಗುವನ್ನು ಖಾಸಗಿ ಶಾಲೆಯಲ್ಲಿ ಸೇರಿಸಿದರೆ, RTE ಮಾನದಂಡಗಳ ಪ್ರಕಾರ ಶಾಲಾ ಫೀಸ್ ಪಿಎಂ ಕೇರ್ಸ್‌ನಿಂದ ನೀಡಲಾಗುತ್ತದೆ.
- ಮಕ್ಕಳ ಸಮವಸ್ತ್ರ, ಪಠ್ಯ ಪುಸ್ತಕ, ನೋಟ್‌ಬುಕ್ ಸೇರಿದಂತೆ ಶೈಕ್ಷಣಿಕ ಖರ್ಚು- ವೆಚ್ಚ ಪಿಎಂ ಕೇರ್ಸ್ ನೋಡಿಕೊಳ್ಳಲಿದೆ.
ಉನ್ನತ ಶಿಕ್ಷಣಕ್ಕೆ ಬೆಂಬಲ:
- ಪೋಷಕರನ್ನು ಕಳೆದುಕೊಂಡ ಮಕ್ಕಳ ಉನ್ನತ ಶಿಕ್ಷಣಕ್ಕೆ ಸಂಪೂರ್ಣ ಬೆಂಬಲ ನೀಡಲಾಗುತ್ತಿದೆ. ಉನ್ನತ ಶಿಕ್ಷಣಕ್ಕೆ ಸಾಲ ಸೌಲಭ್ಯ ಹಾಗೂ ಸಾಲದ ಮೇಲಿನ ಬಡ್ಡಿಯನ್ನು ಪಿಎಂ ಕೇರ್ಸ್ ಭರಿಸಲಿದೆ.
- ಪರ್ಯಾಯವಾಗಿ, ಸರ್ಕಾರದ ಮಾನದಂಡಗಳ ಪ್ರಕಾರ ಪದವಿಪೂರ್ವ / ವೃತ್ತಿಪರ ಕೋರ್ಸ್‌ಗಳಿಗೆ ಬೋಧನಾ ಶುಲ್ಕ / ಕೋರ್ಸ್ ಫೀಸ್‌ಗೆ ಸಮಾನವಾದ ವಿದ್ಯಾರ್ಥಿವೇತನವನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರಿ ಯೋಜನೆಗಳ ಅಡಿಯಲ್ಲಿ ನೀಡಲಾಗುವುದು. ಅಸ್ತಿತ್ವದಲ್ಲಿರುವ ವಿದ್ಯಾರ್ಥಿವೇತನ ಯೋಜನೆಗಳ ಅಡಿಯಲ್ಲಿ ಅರ್ಹತೆ ಇಲ್ಲದ ಮಕ್ಕಳಿಗೆ, ಪಿಎಂ ಕೇರ್ಸ್ ಸಮಾನ ವಿದ್ಯಾರ್ಥಿವೇತನವನ್ನು ನೀಡುತ್ತದೆ.
ಆರೋಗ್ಯ ವಿಮೆ:
- ಎಲ್ಲಾ ಮಕ್ಕಳಿಗೆ ಆಯುಷ್ಮಾನ್ ಭಾರತ್ ಯೋಜನೆ ಅಡಿ 5 ಲಕ್ಷ ರೂ ವಿಮೆ ನೀಡಲಾಗುತ್ತದೆ.
- ವಿಮೆಯ ಪ್ರೀಮಿಯಂ ಮೊತ್ತವನ್ನು ಮಕ್ಕಳು 18 ವರ್ಷ ತಲುಪುವರೆಗೆ ಪಿಎಂ ಕೇರ್ಸ್ ಪಾವತಿಸಲಿದೆ.