
ನವದೆಹಲಿ (ಏ.4): ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳು ದ್ವಿಭಾಷಾ ಸೂತ್ರದ ಅಳವಡಿಕೆಗೆ ಕ್ರಮ ಕೈಗೊಳ್ಳುತ್ತಿರುವ ನಡುವೆಯೇ, ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) 6ನೇ ತರಗತಿಯಿಂದ ತ್ರಿಭಾಷಾ ಸೂತ್ರದ ಹಂತಬದ್ಧ ಅನುಷ್ಠಾನಕ್ಕೆ ಮುಂದಾಗಿದೆ. 2026-27ರ ಶೈಕ್ಷಣಿಕ ವರ್ಷದಿಂದಲೇ ಇದು ಜಾರಿಗೆ ಬರಲಿದೆ.
ಇದರ ಜೊತೆಗೆ 9ನೇ ತರಗತಿಯಿಂದ ಗಣಿತ ಮತ್ತು ವಿಜ್ಞಾನಕ್ಕೆ 2 ಸ್ತರದ ಪರೀಕ್ಷಾ ವ್ಯವಸ್ಥೆ ಪ್ರಾರಂಭಿಸುತ್ತಿರುವುದಾಗಿಯೂ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅಡಿಯಲ್ಲಿ ತ್ರಿಭಾಷಾ ಸೂತ್ರವನ್ನು 2026ರಿಂದ 6ನೇ ತರಗತಿಗೆ ಮೊದಲ ಹಂತದಲ್ಲಿ ಅನುಷ್ಠಾನಗೊಳಿಸಲಾಗುತ್ತದೆ. ಭಾಷೆಗಳನ್ನು ಆರ್1, ಆರ್2, ಆರ್ 3 ಎಂಬ 3 ವಿಧದಲ್ಲಿ ವಿಂಗಡಿಸಲಾಗುತ್ತದೆ. ಈ 3 ಭಾಷೆಗಳಲ್ಲಿ 2 ಭಾಷೆಗಳು ಕಡ್ಡಾಯವಾಗಿ ಭಾರತೀಯ ಮೂಲದ್ದಾಗಿರಬೇಕು. 3ನೇ ಭಾಷೆಯ ಅಧ್ಯಯನವೂ ಕಡ್ಡಾಯ.
ಆದರೆ ವಿದೇಶಿ ಶಾಲೆಗಳಿಂದ ಹಿಂದಿರುಗುವ ವಿದ್ಯಾರ್ಥಿಗಳಿಗೆ, ಅಲ್ಲಿ 8 ಅಥವಾ 9ನೇ ತರಗತಿಯವರೆಗೆ ಅಧ್ಯಯನ ಮಾಡಿದ 3ನೇ ಭಾಷೆ ದೇಶೀಯ ಶಾಲೆಗಳಲ್ಲಿ ಲಭ್ಯವಿಲ್ಲದಿದ್ದರೆ, ಅಂತಹ ವಿದ್ಯಾರ್ಥಿಗಳಿಗೆ ಅನುಮೋದಿತ ಮಾನದಂಡಗಳ ಪ್ರಕಾರ ವಿನಾಯಿತಿ ನೀಡಬಹುದು. ಆದರೂ ಅವರು ಯೋಜನೆಯಂತೆ ನಿಗದಿಪಡಿಸಿದ ಒಟ್ಟು ವಿಷಯಗಳನ್ನು ಅಧ್ಯಯನ ಮಾಡಬೇಕಾಗುತ್ತದೆ.
9ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ 3 ಗಂಟೆಗಳ, 80 ಅಂಕದ ಸಾಮಾನ್ಯ ಪರೀಕ್ಷೆ ಇರುತ್ತದೆ. ಇದನ್ನು ಕಡ್ಡಾಯವಾಗಿ ಎಲ್ಲರೂ ಬರೆಯಬೇಕು. ಆದರೆ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಪ್ರಾವೀಣ್ಯ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ 25 ಅಂಕಗಳ, 1 ಗಂಟೆಯ ಪರೀಕ್ಷೆ ನಡೆಸಲಾಗುತ್ತದೆ. ಇದನ್ನು ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನ ಮತ್ತು ಕೌಶಲ ಪಡೆಯುವಂತೆ ರೂಪಿಸಲಾಗಿರುತ್ತದೆ. ಆದರೆ ಇದು ಐಚ್ಛಿಕ, ಇಷ್ಟವಿದ್ದವರು ಮಾತ್ರ ಬರೆಯಬಹುದು.
ಹೆಚ್ಚುವರಿ ಪತ್ರಿಕೆಯ ಅಂಕಗಳನ್ನು ಒಟ್ಟು ಅಂಕಗಳ ಲೆಕ್ಕದಲ್ಲಿ (ಓವರಾಲ್ ಅಗ್ರಿಗೇಟ್) ಸೇರಿಸಲಾಗುವುದಿಲ್ಲ. ಬದಲಿಗೆ, ಶೇ.50 ಅಥವಾ ಅದಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಅರ್ಹತೆಯನ್ನು ಅಂಕಪಟ್ಟಿಯಲ್ಲಿ ಪ್ರತ್ಯೇಕವಾಗಿ ತೋರಿಸಲಾಗುತ್ತದೆ. ಈ ಪದ್ಧತಿ 2026-27ರ ಶೈಕ್ಷಣಿಕ ವರ್ಷದಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಾರಂಭವಾಗುತ್ತದೆ. ಈ ಮಾದರಿಯನ್ನು ಅನ್ವಯಿಸಿದ 10ನೇ ತರಗತಿ ವಿದ್ಯಾರ್ಥಿಗಳ ಮೊದಲ ಬೋರ್ಡ್ ಪರೀಕ್ಷೆಗಳು 2028ರಲ್ಲಿ ನಡೆಯುತ್ತವೆ.
3 ಭಾಷೆಗಳ ಕಲಿಕೆ
- ಶಾಲೆಗಳಲ್ಲಿ ಮೂರೂ ಭಾಷೆಗಳನ್ನು ಕಲಿಸಬೇಕೆಂಬ ಸೂಚನೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇದೆ
- ಅದರಂತೆ 2026ನೇ ಸಾಲಿನಿಂದ ಸಿಬಿಎಸ್‌ಇ 6ನೇ ತರಗತಿಗಳಲ್ಲಿ ತ್ರಿಭಾಷಾ ಸೂತ್ರ ಅನುಷ್ಠಾನ
- ಆರ್1, ಆರ್2 ಹಾಗೂ ಆರ್3 ಎಂಬ ಹೆಸರಿನಲ್ಲಿ ಶಾಲೆಗಳಲ್ಲಿ ತ್ರಿಭಾಷಾ ಸೂತ್ರ ಕಡ್ಡಾಯವಾಗಿ ಜಾರಿ
- ಮೂರು ಭಾಷೆಗಳ ಪೈಕಿ ಎರಡು ಭಾರತೀಯ ಭಾಷೆಯಾಗಿರಬೇಕು. ಆರ್3 ಭಾಷೆಗೆ ಪುಸ್ತಕ ಬಿಡುಗಡೆ
- ಕರ್ನಾಟಕದಲ್ಲಿ ತೃತೀಯ ಭಾಷೆ ಅಂಕ ಪರಿಗಣನೆ ಮಾಡದಿರಲು ನಿರ್ಧರಿಸಿದ ಬೆನ್ನಲ್ಲೇ ಈ ಕ್ರಮ
ಗಣಿತ, ವಿಜ್ಞಾನಕ್ಕೆ 2 ಸ್ತರದ ಪರೀಕ್ಷೆ
- ಸಿಬಿಎಸ್‌ಇ ಶಾಲೆಗಳಲ್ಲಿ ಗಣಿತ ಹಾಗೂ ವಿಜ್ಞಾನ ವಿಷಯದಲ್ಲಿ ಅತ್ಯಂತ ಪ್ರಮುಖವಾದ ಬದಲಾವಣೆ
- 2026-27ನೇ ಸಾಲಿನಿಂದ 9ನೇ ತರಗತಿ ಮಕ್ಕಳಿಗೆ 2 ಸ್ತರದ ಹೊಸ ಪರೀಕ್ಷಾ ವಿಧಾನದ ಪರಿಚಯ
- 9ನೇ ತರಗತಿಯ ಎಲ್ಲ ಮಕ್ಕಳು 3 ಗಂಟೆಗಳ 80 ಅಂಕಗಳ ಸಾಮಾನ್ಯ ಪರೀಕ್ಷೆ ಬರೆವುದು ಕಡ್ಡಾಯ
- ಗಣಿತ, ವಿಜ್ಞಾನದಲ್ಲಿ ಹೆಚ್ಚಿನ ಪ್ರಾವೀಣ್ಯ ಬಯಸುವವರಿಗೆ 25 ಅಂಕದ 1 ಗಂಟೆಯ ಮತ್ತೊಂದು ಪರೀಕ್ಷೆ
- ಇದು ಐಚ್ಛಿಕ. ಒಟ್ಟು ಅಂಕಗಳಿಗೆ ಸೇರಿಸುವುದಿಲ್ಲ. ಹೆಚ್ಚಿನ ಜ್ಞಾನ ಬೇಕು ಎನ್ನುವವರಷ್ಟೇ ಬರೆಯಬಹುದು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ