ಹಿಂದುಗಳ ಯಾವ ದೇವರೂ ಕೂಡ ಬ್ರಾಹ್ಮಣರಲ್ಲ, JNU ಉಪಕುಲಪತಿ ಧೂಳಿಪುಡಿ ವಿವಾದಿತ ಮಾತು!

By Santosh NaikFirst Published Aug 23, 2022, 4:34 PM IST
Highlights

ಹಿಂದು ದೇವರ ಕುರಿತಾಗಿ ನವದೆಹಲಿಯ ಜವಹರಲಾಲ್‌ ನೆಹರು ವಿಶ್ವವಿದ್ಯಾಲಯದ ಉಪ ಕುಲಪತಿ ಶಾಂತಿಶ್ರೀ ಧೂಳಿಪುಡಿ ವಿವಾದಿತ ಹೇಳಿಕೆ ನೀಡಿದ್ದಾರೆ, ಹಿಂದುಗಳ ಯಾವ ದೇವರು ಕೂಡ ಬ್ರಾಹ್ಮಣರಲ್ಲ. ಅವರೆಲ್ಲ ಆದಿವಾಸಿಗಳು ಹಾಗೂ ಕೆಳ ಜಾತಿಯ ವ್ಯಕ್ತಿಗಳು ಎಂದು ಹೇಳಿದ್ದಾರೆ.

ನವದೆಹಲಿ (ಆ.23): ವಿವಾದಿತ ಮಾತುಗಳು ಹಾಗೂ ದೇಶವಿರೋಧಿ ಆಂದೋಲನಗಳಿಗೆ ಹೆಸರುವಾಸಿಯಾಗಿರುವ ನವದೆಹಲಿಯ ಜೆಎನ್‌ಯುನ ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್‌ ವಿವಾದಿತ ಹೇಳಿಕೆಯನ್ನು ಸೋಮವಾರ ನೀಡಿದ್ದಾರೆ. ಕಳೆದ ಫೆಬ್ರವರಿಯಲ್ಲಿ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ನೇಮಕವಾಗಿದ್ದ ಶಾಂತಿಶ್ರೀ ಧೂಳಿಪುಡಿ ಪಂಡಿತ್‌, ಹಿಂದುಗಳ ದೇವರು ಹಾಗೂ ಜಾತಿಯ ಬಗ್ಗೆ ವಿವಾದಿತ ಮಾತುಗಳನ್ನಾಡಿದ್ದಾರೆ. ಭಗವಾನ್‌ ಶಿವ ಶೂದ್ರ. ಈತ ವಾಸ ಮಾಡುವುದು ಸ್ಮಶಾನದಲ್ಲಿ ಎಂದು ಹೇಳಿದ್ದಾರೆ. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ದೆಹಲಿಯಲ್ಲಿ ವಿಚಾರ ಸಂಕಿರಣವನ್ನು ಆಯೋಜಿಸಿತ್ತು, ಡಾ. ಬಿ.ಆರ್. ಅಂಬೇಡ್ಕರ್ ಲಿಂಗ ನ್ಯಾಯದ ಕುರಿತು ಚಿಂತನೆ: ಏಕರೂಪ ನಾಗರಿಕ ಸಂಹಿತೆಯ ಡಿಕೋಡಿಂಗ್ ಎನ್ನುವುದು ಇದರ ವಿಚಾರವಾಗಿತ್ತು. ಇಲ್ಲಿ ಮಾತನಾಡುವ ವೇಳೆ ಶಾಂತಿಶ್ರೀ ಈ ವಿವಾದಿತ ಹೇಳಿಕೆಯನ್ನು ನೀಡಿದ್ದಾರೆ. "ಯಾವುದೇ ದೇವತೆ ಬ್ರಾಹ್ಮಣರಲ್ಲ. ಕ್ಷತ್ರಿಯ ಎನ್ನುವುದು ಅತ್ಯುನ್ನತ ಸ್ಥಾನಮಾನ. ಶಿವನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದವನಾಗಿರಬೇಕು, ಏಕೆಂದರೆ ಅವನು ಸ್ಮಶಾನದಲ್ಲಿ ಹಾವಿನ ಜೊತೆ ಕುಳಿತುಕೊಳ್ಳುವ ವ್ಯಕ್ತಿ. ಅಲ್ಲದೆ, ಶಿವನಿಗೆ ಧರಿಸಲು ಬಹಳ ಕಡಿಮೆ ಬಟ್ಟೆಗಳಿದ್ದವು. ಅದಲ್ಲದೆ, ಬಾಹ್ಮಣರು ಯಾರೂ ಕೂಡ ಸ್ಮಶಾನದಲ್ಲಿ ಕುಳಿತುಕೊಳ್ಳುವುದಿಲ್ಲ' ಎಂದು ಹೇಳಿದ್ದಾರೆ. 

ಇದೆಲ್ಲವನ್ನು ನೋಡಿದರೆ, ದೇವತೆಗಳಲ್ಲಿ ಯಾರೂ ಕೂಡ ಮೇಲ್ಜಾತಿಯಿಂದ ಬಂದವರಲ್ಲ. ನೀವು ನೋಡುವುದಾದರೆ ಲಕ್ಷ್ಮಿ, ಶಕ್ತಿ ಮತ್ತು ಜಗನ್ನಾಥ ಎಲ್ಲಾ ದೇವತೆಗಳು ಬುಡಕಟ್ಟು ಜನಾಂಗದಿಂದ ಬಂದವರು. ಆದರೆ, ಈಗಲೂ ನಾವು ಜಾತಿ ವ್ಯವಸ್ಥೆಯನ್ನು ಮುಂದುವರಿಸುತ್ತಲೇ ಇದ್ದೇವೆ. ಇದು ನಿಜಕ್ಕೂ ಅಮಾನವೀಯವಾಗಿದೆ ಎಂದು ಹೇಳಿದ್ದಾರೆ.

"No god is a Brahmin", says JNU Vice Chancellor Santishree Dhulipudi Pandit while delivering the keynote address at the B R Ambedkar Lecture Series.

The JNU VC also said that the 'Manusmriti' has categorised all women as 'shudras', which is "extraordinarily regressive". pic.twitter.com/OLiwGTuGfs

— Dipak Kumar Biswas / দীপক কুমার বিশ্বাস (@DipakBiswas_)


ಭಾರತೀಯ ಸಮಾಜ ಹಾಗೂ ಅಂಬೇಡ್ಕರ್‌ ಕುರಿತಾಗಿಯೂ ಹೇಳಿಕೆ: ಭಾರತೀಯ ಸಮಾಜ ಏನಾದರೂ ಒಳ್ಳೆಯದನ್ನು ಮಾಡಲು ಬಯಸಿದರೆ ಜಾತಿಯನ್ನು ತೊಡೆದುಹಾಕುವುದು ಬಹಳ ಮುಖ್ಯವಾಗಿದೆ. ತಾರತಮ್ಯ ಮತ್ತು ಅಸಮಾನತೆಯ ಗುರುತಿನ ಬಗ್ಗೆ ನಾವು ಏಕೆ ಭಾವನಾತ್ಮಕವಾಗಿದ್ದೇವೆ ಎಂದು ನನಗೆ ಅರ್ಥವಾಗುತ್ತಿಲ್ಲ. ಈ ಕೃತಕ ಗುರುತನ್ನು ರಕ್ಷಿಸಲು ನಾವು ಯಾರನ್ನೂ ಕೊಲ್ಲಲು ನಾವು ಸಿದ್ಧರಿದ್ದೇವೆ ಎಂದು ಶಾಂತಿಶ್ರೀ ಧೂಳಿಪುಡಿ ಪಂಡಿತ್‌ ಹೇಳಿದ್ದಾರೆ. ಬೌದ್ಧಧರ್ಮವು ಶ್ರೇಷ್ಠ ಧರ್ಮಗಳಲ್ಲಿ ಒಂದಾಗಿದೆ, ಏಕೆಂದರೆ ಭಾರತೀಯ ನಾಗರಿಕತೆಯು ಭಿನ್ನಾಭಿಪ್ರಾಯ, ವೈವಿಧ್ಯತೆ ಮತ್ತು ವ್ಯತ್ಯಾಸವನ್ನು ಸ್ವೀಕರಿಸುತ್ತದೆ ಎನ್ನುವುದನ್ನು ಅದು ಸಾಬೀತು ಮಾಡಿದೆ. ಗೌತಮ ಬುದ್ಧ ಬ್ರಾಹ್ಮಣ ಹಿಂದೂ ಧರ್ಮದ ಮೊದಲ ವಿರೋಧಿ. ಅವರು ಇತಿಹಾಸದಲ್ಲಿ ಮೊದಲ ವಿಚಾರವಾದಿಯೂ ಹೌದು. ಇಂದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಪುನರುಜ್ಜೀವನಗೊಳಿಸಿದ ಸಂಪ್ರದಾಯವನ್ನು ನಾವು ಹೊಂದಿದ್ದೇವೆ ಎಂದು ಹೇಳಿದ್ದಾರೆ.

ಪಠ್ಯವಿವಾದಕ್ಕೆ ಎಂಟ್ರಿ ಕೊಟ್ಟ JNU professors ವಿರುದ್ಧ ಸಚಿವ ನಾಗೇಶ್ ಕಿಡಿ

ಜಲೋರ್‌ ಘಟನೆಯ ಬಗ್ಗೆ ಬೇಸರ: ಶಾಂತಿಶ್ರೀ ಅವರು ತಮ್ಮ ಭಾಷಣದಲ್ಲಿ, ರಾಜಸ್ಥಾನದಲ್ಲಿ ಒಂಬತ್ತು ವರ್ಷದ ದಲಿತ ಬಾಲಕನ ಸಾವಿನ ಬಗ್ಗೆಯೂ ಮಾತನಾಡಿದರು. ಆ ಹುಡುಗ ಮೇಲ್ಜಾತಿಯ ಶಿಕ್ಷಕನಿಂದ ಹಲ್ಲೆಗೊಳಗಾದ. ದುರದೃಷ್ಟವಶಾತ್ ಇಂದು ಜಾತಿ ಹುಟ್ಟಿನ ಮೇಲೆ ಆಧಾರಿತವಾಗಿದೆ, ಯಾರಾದರೂ ಬ್ರಾಹ್ಮಣ ಅಥವಾ ಚಮ್ಮಾರರಾಗಿದ್ದರೆ, ಅವನು ಹುಟ್ಟಿದ ತಕ್ಷಣ ಅವನು ದಲಿತನಾಗುತ್ತಾನೆಯೇ? ರಾಜಸ್ಥಾನದಲ್ಲಿ ಇತ್ತೀಚೆಗೆ ಒಂದು ಘಟನೆ ನಡೆಯಿತು. ಮೇಲ್ಜಾತಿಯವರಿಗೆ ಸೇರಿದ ನೀರನ್ನು ಬರೀ ಮುಟ್ಟಿದ ಕಾರಣಕ್ಕೆ ಹೊಡೆದು ಸಾಯಿಸಲಾಗಿದೆ. ಇದು ಮಾನವ ಹಕ್ಕುಗಳ ಪ್ರಶ್ನೆಯಾಗಿದೆ. ಮನುಷ್ಯನೊಬ್ಬನನ್ನು ಮನುಷ್ಯ ಈ ರೀತಿಯಾಗಿ ನಡೆಸಿಕೊಳ್ಳಲು ಹೇಗೆ ಸಾಧ್ಯ' ಎಂದು ಪ್ರಶ್ನೆ ಮಾಡಿದ್ದಾರೆ.

ಜೆಎನ್‌ಯುನಲ್ಲಿ ಭಾಗವಾ ಪೋಸ್ಟರ್‌, ಧ್ವಜ ಪ್ರತ್ಯಕ್ಷ: ಪೊಲೀಸರಿಂದ ತೆರವು

9 ಭಾಷೆಗಳ ಪಾಂಡಿತ್ಯ ಹೊಂದಿರುವ ಉಪಕುಲಪತಿ: ಜೆಎನ್‌ಯು ಉಪಕುಪತಿಯಾಗಿರುವ ಪ್ರೊಫೆಸರ್‌ ಶಾಂತಿಶ್ರೀ ಧೂಳಿಪುಡಿ ಪಂಡಿತ್‌, ತೆಲುಗು, ತಮಿಳು, ಮರಾಠಿ, ಸಂಸ್ಕೃತ, ಇಂಗ್ಲೀಷ್‌, ಕನ್ನಡ, ಮಲಯಾಳಂ ಹಾಗೂ ಕೊಂಕಣಿ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದಾರೆ. ಅದಲ್ಲದೆ, ಸಾಕಷ್ಟು ಪುಸ್ತಕಗಳನ್ನು ಬರೆದಿದ್ದಾರೆ. ಇವುಗಳಲ್ಲಿ ಭಾರತದಲ್ಲಿ ಸಂಸತ್ತು ಮತ್ತು ವಿದೇಶಾಂಗ ನೀತಿ, ಏಷ್ಯಾ-ನೈತಿಕತೆ ಮತ್ತು ನೀತಿಯಲ್ಲಿ ಪರಿಸರ ಆಡಳಿತವನ್ನು ಪುನರ್ರಚಿಸುವುದು ಸೇರಿದಂತೆ ಇನ್ನೂ ಹಲವು ಪುಸ್ತಕಗಳು ಸೇರಿವೆ.

click me!