
ನವದೆಹಲಿ (ಆ.16): ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ಭಯೋತ್ಪಾದಕರೊಂದಿಗಿನ ಎನ್‌ಕೌಂಟರ್‌ನಲ್ಲಿ ಹತನಾದ ಕ್ಯಾಪ್ಟನ್ 25 ವರ್ಷದ ದೀಪಕ್ ಸಿಂಗ್, ತನ್ನ ಕೊನೆಯ ಫೋನ್ ಕರೆಯಲ್ಲಿ ತಾಯಿಗೆ ಸುಳ್ಳು ಹೇಳಿದ್ದ ಎಂದು ಗೊತ್ತಾಗಿದೆ. ಇದು ತನ್ನ ತಾಯಿಗೆ ಕೊನೆಯ ಪೋನ್ ಕಾಲ್ ಆಗಬಹುದು ಎನ್ನುವ ಅಂದಾಜೇ ಇಲ್ಲದಿದ್ದ ಕ್ಯಾಪ್ಟನ್ ದೀಪಕ್ ಸಿಂಗ್, ತಾಯಿಗೆ ತಾನು ಬೇಸ್‌ಗೆ ಹೋಗುತ್ತಿದ್ದು ಅಲ್ಲಿಯೇ ಕೆಲ ಹೊತ್ತು ವಿಶ್ರಾಂತಿ ಪಡೆದುಕೊಳ್ಳುತ್ತೇನೆ ಎಂದಿದ್ದ. ನಿಜವಾಗಿ ಅವರು, ಆಗಸ್ಟ್ 13 ರಂದು ದೋಡಾದಲ್ಲಿ ನಡೆದ ಡೆಡ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಅಲ್ಲಿಯೇ ಅವರು ಸಾವು ಕೂಡ ಕಂಡಿದ್ದಾರೆ. ದೀಪಕ್ ಸಿಂಗ್ ಅವರ ತಂದೆ, ಉತ್ತರಾಖಂಡ ಪೊಲೀಸ್‌ನ ನಿವೃತ್ತ ಇನ್ಸ್‌ಪೆಕ್ಟರ್ ಮಹೇಶ್ ಸಿಂಗ್ ಈ ಬಗ್ಗೆ ಮಾತನಾಡಿದ್ದು, ''ಸಾಮಾನ್ಯವಾಗಿ ಆತ ಜಮ್ಮು ಕಾಶ್ಮೀರದಿಂದ ವಿಡಿಯೋ ಕಾಲ್ ಮಾಡುತ್ತಿದ್ದ. ಆದರೆ, ಇಂಥ ವಿಚಾರಗಳಲ್ಲಿ ತಾಯಿಗೆ ಯಾವಾಗಲೂ ಸುಳ್ಳು ಹೇಳುತ್ತಿದ್ದ' ಎಂದು ಹೇಳಿದ್ದಾರೆ. 'ಅಮ್ಮಾ ಇಲ್ಲೆಲ್ಲವೂ ಸರಿಯಾಗಿದೆ. ಶಾಂತಿ ಇದೆ. ನಾನು ವಿಶ್ರಾಂತಿಗಾಗಿ ಬೇಸ್‌ಗೆ ಹೋಗ್ತಾ ಇದ್ದೇನೆ..' ಎಂದು ಕೊನೆಯ ಬಾರಿಗೆ ಹೇಳಿದ್ದ ಎಂದಿದ್ದಾರೆ.
ಒಮ್ಮೊಮ್ಮೆ ಯಾವ ರೀತಿ ಮಾಡ್ತಿದ್ದ ಎಂದರೆ, ವಿಡಿಯೋಕಾಲ್‌ನಲ್ಲಿ ಸಮವಸ್ತ್ರವನ್ನು ಬಿಚ್ಚುತ್ತಿದ್ದ. ಆ ಮೂಲಕ ತಾಯಿಗೆ ತಾನು ವಿಶ್ರಾಂತಿಯಲ್ಲಿದ್ದೇನೆ ಎಂದು ನಂಬುವಂತೆ ಮಾಡುತ್ತಿದ್ದ ಎಂದು ಮಹೇಶ್ ಸಿಂಗ್ ಹೇಳಿದ್ದಾರೆ. ಆದರೆ, ನಾನು ಪೊಲೀಸ್ ಅಧಿಕಾರಿಯಾಗಿದ್ದವನು. ಆತನ ಬೂಟ್ ಹಾಗೂ ಪ್ಯಾಂಟ್‌ಗಳನ್ನು ನೋಡ್ತಿದ್ದೆ. ಅದರಿಂದ ಆತ ಡ್ಯೂಟಿಯಲ್ಲಿದ್ದ ಎಂದು ನನಗೆ ಅರ್ಥವಾಗುತ್ತಿತ್ತು ಎಂದಿದ್ದಾರೆ.
48 ರಾಷ್ಟ್ರೀಯ ರೈಫಲ್ಸ್‌ನ ಕ್ಯಾಪ್ಟನ್ ದೀಪಕ್ ಕುಮಾರ್ ಅವರು ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಅಸ್ಸಾರ್ ಅರಣ್ಯ ಪ್ರದೇಶದಲ್ಲಿ ನಾಲ್ವರು ಪಾಕಿಸ್ತಾನಿ ಭಯೋತ್ಪಾದಕರೊಂದಿಗಿನ ಭೀಕರ ಎನ್‌ಕೌಂಟರ್‌ನಲ್ಲಿ ವೀರ ಮರಣ ಕಂಡಿದ್ದರು. ಇಂಡಿಯನ್ ಮಿಲಿಟರಿ ಅಕಾಡೆಮಿಯಿಂದ ಪದವಿ ಪಡೆದ ನಂತರ 2020 ರಲ್ಲಿ ಸಿಗ್ನಲ್ಸ್ ರೆಜಿಮೆಂಟ್‌ನಲ್ಲಿ ನಿಯೋಜಿಸಲ್ಪಟ್ಟ ಕ್ಯಾಪ್ಟನ್ ದೀಪಕ್ ಅವರು ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರೀಯ ರೈಫಲ್ಸ್‌ನೊಂದಿಗೆ ಎರಡು ವರ್ಷಗಳ ನಿಯೋಜಿತರಾಗಿ ಸೇವೆ ಸಲ್ಲಿಸುತ್ತಿದ್ದರು. ರಾಷ್ಟ್ರೀಯ ರೈಫಲ್ಸ್‌ನಲ್ಲಿ ಅಧಿಕಾರಾವಧಿ ಮುಗಿದ ನಂತರ ಮದುವೆಯಾಗುವುದಾಗಿ ಪೋಷಕರಿಗೆ ಭರವಸೆ ನೀಡಿದ್ದರು.
ಇಬ್ಬರು ಸಹೋದರಿಯರಿಗೆ ಈತ ಒಬ್ಬನೇ ಸಹೋದರ. ಆತನ ಸಾವಿನ ಸುದ್ದಿ ಬರುವ ಮೊದಲು ಮನೆಯಲ್ಲಿ ಸಂಭ್ರಮದ ವಾತಾವರಣ ಇತ್ತು. ನನ್ನ ಹಿರಿಯ ಮಗಳು ನಮ್ಮ ಮೊಮ್ಮಗನಿಗೆ ಜನ್ಮ ನೀಡಿದ್ದು, ನಾವೆಲ್ಲರೂ ತುಂಬಾ ಖುಷಿಯಾಗಿದ್ದೆವು ಎಂದು ಮಹೇಶ್ ಸಿಂಗ್ ಭಾವುಕರಾಗಿ ಹೇಳಿದ್ದಾರೆ. ಆತನಿಗೆ ಮದುವೆ ಮಾಡಬೇಕು ಎಂದು ಪ್ಲ್ಯಾನ್ ಮಾಡುತ್ತಿದ್ದೆವು. ಆದರೆ, ರಾಷ್ಟ್ರೀಯ ರೈಫಲ್ಸ್‌ನೊಂದಿಗೆ ತಮ್ಮ ಅವಧಿ ಮುಗಿಯಲು ಇನ್ನೂ ಒಂದು ವರ್ಷ ಬಾಕಿ ಇದೆ. ಅದು ಮುಗಿಯಲಿ ಎಂದು ಹೇಳುತ್ತಿದ್ದ. ಆದರೆ, ಅವಧಿ ಮುಗಿಯುವ ಮುನ್ನವೇ ಆತ ಶ್ರೇಷ್ಠ ಬಲಿದಾನ ಮಾಡಿದ್ದಾನೆ ಎಂದು ಮಹೇಶ್ ಸಿಂಗ್ ಹೇಳಿದ್ದಾರೆ. ನನ್ನ ಮಗನ ಸಾವಿಗೆ ನಾನು ಒಂದು ತೊಟ್ಟು ಕಣ್ಣೀರು ಹಾಕೋದಿಲ್ಲ. ಯಾಕೆಂದರೆ, ಭಾರತೀಯ ಸೇನೆಗೆ ಸೇರಬೇಕು ಎನ್ನುವುದು ನನ್ನ ಮಗನ ಆಸೆಯಾಗಿತ್ತು. ಆತನ ಆಯಸ್ಸು ಅಷ್ಟೇ ಇತ್ತು ಎಂದು ಕಾಣುತ್ತದೆ ಎಂದು ತಿಳಿಸಿದ್ದಾರೆ.
'ನಿಮ್ಮ ಲುಕ್‌ಗಿಂತ ಕಣ್ಣುಗಳೇ ಮಾತನಾಡ್ತಿವೆ..' ವರಮಹಾಲಕ್ಷ್ಮೀ ಹಬ್ಬಕ್ಕೆ ರೆಟ್ರೋ ಸ್ಟೈಲ್‌ನಲ್ಲಿ ಅನುಪಮಾ ಗೌಡ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ