ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಸಮಸ್ಯೆಯನ್ನು ಭಾರತವು ಸರಿಯಾಗಿ ಪರಿಹರಿಸಬೇಕೆಂದು ತನ್ನ ದೇಶವು ಬಯಸುತ್ತದೆ ಎಂದು ಜಸ್ಟಿನ್ ಟ್ರುಡೊ ಹೇಳಿದ್ದಾರೆ.
ಒಟ್ಟಾವ (ಸೆ.19): ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಗೂ ಭಾರತದ ಏಜೆಂಟ್‌ಗಳಿಗೂ ಸಂಬಂಧವಿದೆ ಎಂದು ಸೂಚಿಸುವ ಮೂಲಕ ಭಾರತವನ್ನು ಪ್ರಚೋದಿಸಲು ತನ್ನ ದೇಶವು ಪ್ರಯತ್ನಿಸುತ್ತಿಲ್ಲ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮಂಗಳವಾರ ಹೇಳಿದ್ದಾರೆ. ಆದರೆ, ಈಗ ಎದುರಾಗಿರುವ ಈ ಸಮಸ್ಯೆಯನ್ನು ನವದೆಹಲಿ ಬಹಳ ಸೂಕ್ತವಾಗಿ ಪರಿಹರಿಸಬೇಕು ಎಂದು ಕೆನಡಾ ಬಯಸುತ್ತದೆ ಎಂದಿದ್ದಾರೆ. "ಭಾರತ ಸರ್ಕಾರವು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾಗಿದೆ. ನಾವು ಅದನ್ನು ಮಾಡುತ್ತಿದ್ದೇವೆ, ನಾವು ಈ ಪ್ರಕರಣವನ್ನು ಪ್ರಚೋದಿಸಲು ಅಥವಾ ಉಲ್ಬಣಗೊಳಿಸಲು ನೋಡುತ್ತಿಲ್ಲ" ಎಂದು ಅವರು ತಿಳಿಸಿದ್ದಾರೆ. ಭಾರತ ಸರ್ಕಾರ ಈಗಾಗಲೇ ಕೆನಡಾ ಸರ್ಕಾರದ ಆರೋಪಗಳನ್ನು ಅಸಂಬದ್ಧವೆಂದು ತಳ್ಳಿಹಾಕಿದೆ. ಭಾರತದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಭಾರತದಿಂದ ಆರೋಪಿತವಾಗಿದ್ದ ಹರ್ದೀಪ್ ಸಿಂಗ್ ನಿಜ್ಜರ್‌ನನ್ನು ಕಳೆದ ಜೂನ್‌ನಲ್ಲಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಗೂ ಭಾರತೀಯ ಏಜೆಂಟ್‌ಗಳಿಗೂ ಸಂಬಂಧವಿದೆ ಎನ್ನುವ ವಿಶ್ವಾಸಾರ್ಹ ಸಾಕ್ಷಿಗಳಿಗೆ ಎಂದು ಟ್ರೊಡೊ ಸೋಮವಾರ ಹೇಳಿದ್ದರು.
ಈ ಹತ್ಯೆಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಭಾರತ ಸರ್ಕಾರ ಈಗಾಗಲೇ ಹೇಳಿದೆ. ಈ ಹಿಂದೆ ಟ್ರುಡೊ ಖಾಸಗಿಯಾಗ ಈ ವಿಚಾರ ಪ್ರಸ್ತಾಪಿಸಿದಾಗ ಪ್ರಧಾನಿ ನರೇಂದ್ರ ಮೋದಿ ಅವರು ಆರೋಪವನ್ನು "ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ" ಎಂದು ಹೇಳಿದರು. ಇನ್ನು ಮಂಗಳವಾರ, ಇದೇ ಕೇಸ್‌ಗೆ ಸಂಬಂಧಪಟ್ಟಂತೆ ಭಾರತದ ರಾಜತಾಂತ್ರಿಕ ಅಧಿಕಾರಿಯನ್ನು ಕೆನಡಾ ತನ್ನ ದೇಶದಿಂದ ಹೊರಹಾಕುವ ನಿರ್ಧಾರ ಮಾಡಿದ ಬೆನ್ನಲ್ಲಿಯೇ ಭಾರತ ಕೂಡ ಕೆನಡಾದ ರಾಜತಾಂತ್ರಿಕ ಅಧಿಕಾರಿಯನ್ನು ತನ್ನ ದೇಶದಿಂದ ಹೊರಹಾಕುವ ನಿರ್ಧಾರ ಮಾಡಿದೆ. ಇದು ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಉಲ್ಬಣಕ್ಕೆ ಕಾರಣವಾಗಿದೆ. ಈಗಾಗಲೇ ಖಲಿಸ್ತಾನಿ ವಿಚಾರದಲ್ಲಿ ಎರಡೂ ದೇಶಗಳ ಸಂಬಂಧ ಹದಗೆಟ್ಟಿದೆ.
ಭಾರತದಲ್ಲಿರುವ ಕೆನಡಾದ ಹೈಕಮಿಷನರ್ ಕ್ಯಾಮರೂನ್ ಮ್ಯಾಕೆ ಅವರಿಗೆ ಸಮನ್ಸ್ ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA), ಹಿರಿಯ ರಾಜತಾಂತ್ರಿಕರನ್ನು ಹೊರಹಾಕುವ ನಿರ್ಧಾರದ ಬಗ್ಗೆ ಅವರಿಗೆ ತಿಳಿಸಲಾಯಿತು. ನಮ್ಮ ದೇಶದ ಆಂತರಿಕ ವಿಚಾರದಲ್ಲಿ ಕೆನಡಾದ ರಾಜತಾಂತ್ರಿಕರ ಹಸ್ತಕ್ಷೇಪ ಹೆಚ್ಚಾಗಿದೆ. ಭಾರತ ವಿರೋಧಿ ಚಟುವಟಿಕೆಗಳಲ್ಲಿ ಅವರ ಪಾಲ್ಗೊಳ್ಳುವಿಕೆ ಕಾಣುತ್ತಿದೆ' ಎಂದು ಹೇಳಿದೆ.
ಅದರೊಂದಿಗೆ ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡೋ ಹಾಗೂ ವಿದೇಶಾಂಗ ಸಚಿವೆ ಮೆಲಿನ್ ಜೋಲಿ ಅವರ ಹೇಳಿಕೆಗಳನ್ನು ಭಾರತ ಬಲವಾದ ಪದಗಳಲ್ಲಿ ಖಂಡಿಸಿದೆ. 'ಇಂತಹ ಆಧಾರರಹಿತ ಆರೋಪಗಳು ಕೆನಡಾದಲ್ಲಿ ಆಶ್ರಯ ಪಡೆದಿರುವ ಮತ್ತು ಭಾರತದ ಸಾರ್ವಭೌಮತೆಗೆ ಬೆದರಿಕೆಯನ್ನು ಮುಂದುವರೆಸಿರುವ ಖಲಿಸ್ತಾನಿ ಭಯೋತ್ಪಾದಕರು ಮತ್ತು ಉಗ್ರಗಾಮಿಗಳಿಂದ ಗಮನವನ್ನು ಬದಲಾಯಿಸಲು ಪ್ರಯತ್ನಿಸುತ್ತವೆ. ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ಉಂಟು ಮಾಡುತ್ತಿದೆ' ಎಂದು ಹೇಳಿದೆ.
ಐದು ದಿನಗಳೊಳಗೆ ಭಾರತವನ್ನು ತೊರೆಯುವಂತೆ ಸೂಚಿಲಾಗಿರುವ ಕೆನಡಾದ ರಾಜತಾಂತ್ರಿಕರ ಹೆಸರನ್ನು ನವದೆಹಲಿ ಬಹಿರಂಗಪಡಿಸದಿದ್ದರೂ, ವಿಷಯದ ಪರಿಚಯವಿರುವ ಜನರು ಇದು ಕೆನಡಾದ ಗುಪ್ತಚರ ಸಂಸ್ಥೆಯ ಸ್ಟೇಷನ್ ಮುಖ್ಯಸ್ಥ ಹೊಸದಿಲ್ಲಿ ಒಲಿವಿಯರ್ ಸಿಲ್ವೆಸ್ಟೆರೆ ಆಗಿರಬಹುದು ಎಂದು ಹೇಳಲಾಗಿದೆ. ಕೆನಡಾದಿಂದ "ಉನ್ನತ ಭಾರತೀಯ ರಾಜತಾಂತ್ರಿಕ"ರನ್ನು ಹೊರಹಾಕಲಾಗಿದೆ ಎಂದು ಜೋಲಿ ಘೋಷಿಸಿದ ಕೆಲವೇ ಗಂಟೆಗಳ ನಂತರ ಕೆನಡಾದ ರಾಜತಾಂತ್ರಿಕರನ್ನು ಹೊರಹಾಕುವ ಭಾರತೀಯ ಕ್ರಮವು ಬಂದಿತು. ಕೆನಡಾದ ಖಲಿಸ್ತಾನಿ ಭಯೋತ್ಪಾದಕ ನಿಜ್ಜರ್‌ನನ್ನು ಜೂನ್ 18 ರಂದು ಸರ್ರೆಯಲ್ಲಿ ಇಬ್ಬರು ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದರು.
ಖಲಿಸ್ತಾನ್ ಉಗ್ರ ನಿಜ್ಜರ್ ಹತ್ಯೆ : ಭಾರತದ ವಿರುದ್ಧ ಸೇಡು ತೀರಿಸಲು ಮುಂದಾದ ಕೆನಡಾ ಪ್ರಧಾನಿ
ಕೆನಡಾದ ಬ್ರಾಡ್‌ಕಾಸ್ಟರ್ ಸಿಬಿಸಿ ನ್ಯೂಸ್ ಪ್ರಕಾರ, ಕೆನಡಾವನ್ನು ತೊರೆಯಲು ಆದೇಶಿಸಿದ ರಾಜತಾಂತ್ರಿಕರು ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ) ಮುಖ್ಯಸ್ಥ ಪವನ್ ಕುಮಾರ್ ರೈ ಎಂದು ಜೋಲಿಯ ಕಚೇರಿ ತಿಳಿಸಿದೆ. ಇಂತಹ ಸಮಸ್ಯೆಗಳನ್ನು ಸಾಮಾನ್ಯವಾಗಿ ವಿವೇಚನಾಯುಕ್ತ ರೀತಿಯಲ್ಲಿ ನಿರ್ವಹಿಸುವುದರಿಂದ ಭಾರತೀಯ ಗುಪ್ತಚರ ಅಧಿಕಾರಿಯನ್ನು ಹೊರಹಾಕುವ ಕೆನಡಾದ ಸಾರ್ವಜನಿಕ ಪ್ರಕಟಣೆಯನ್ನು "ಅಪರೂಪ" ಎಂದು ನೋಡಲಾಗುತ್ತದೆ.
ಖಲಿಸ್ತಾನಿಗಳ ಹೆಡೆಮುರಿ ಕಟ್ಟಿದ ಸರ್ಕಾರ, ಕೆನಡಾದ ನಡುರಸ್ತೆಯಲ್ಲಿಯೇ ಹೆಣವಾದ ಹರ್ದೀಪ್ ಸಿಂಗ್ ನಿಜ್ಜಾರ್!