
ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ಬೆಂಗಳೂರೂ; ಅತ್ಯಂತ ರುಚಿಕಟ್ಟಾದ ಮಸಾಲ ಪುರಿಯಿಂದ ಮನೆಗಳಲ್ಲಿ ಮಾಡುವ ಸಾಂಪ್ರದಾಯಿಕ ಸಾಂಬಾರು, ಎಲ್ಲರೂ ಚಪ್ಪರಿಸಿ ತಿನ್ನುವ ಮೆಕ್ ಡೊನಾಲ್ಡಿನ ಬರ್ಗರ್ ತನಕ ಎಲ್ಲದರಲ್ಲೂ ಒಂದು ಭಾಗವಾಗಿದ್ದ, ಸರಳ ತರಕಾರಿಯಾದ ಟೊಮ್ಯಾಟೊ ಈಗ ಸಲಾಡ್‌ಗಳಿಂದ ಪ್ರತಿದಿನದ ಸಾರು - ಸಾಂಬಾರು, ಮೆಕ್ ಡೊನಾಲ್ಡ್ ಆಹಾರಗಳಿಂದ ಕಾಣೆಯಾಗಿಬಿಟ್ಟಿದೆ! ಈ ವರ್ಷದಲ್ಲಿ ಮೇ ತಿಂಗಳಿನಿಂದ ಟೊಮ್ಯಾಟೊ ದರ ಪ್ರತಿ ಕೆಜಿಗೆ 10 ರೂಪಾಯಿಗಳಿಂದ ಹೆಚ್ಚಾಗುತ್ತಾ ಬಂದು, ಜುಲೈ ತಿಂಗಳಲ್ಲಿ ಪ್ರತಿ ಕೆಜಿಗೆ 200-250 ರೂಪಾಯಿ ತಲುಪಿದೆ. ಹಾಗೆಂದು ಭಾರತಕ್ಕೆ ಇದೇನೂ ಹೊಸ ವಿಚಾರ ಖಂಡಿತಾ ಅಲ್ಲ. ಇಂದು ನಮ್ಮ ಬಳಿ ಕೃಷಿಕರಿಗೆ, ಉದ್ಯಮಿಗಳಿಗೆ ಬೆಳೆಗಳ ನಿರ್ವಹಣೆ, ಸಾಗಾಣಿಕೆಗೆ ನೆರವಾಗಬಲ್ಲ ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನಗಳಿದ್ದರೂ, ತರಕಾರಿ ಉತ್ಪನ್ನಗಳಾದ ಈರುಳ್ಳಿ, ಆಲೂಗಡ್ಡೆ, ಮತ್ತಿತರ ಅವಶ್ಯಕ ವಸ್ತುಗಳ ಬೆಲೆ ಪ್ರತಿದಿನವೂ ಹೆಚ್ಚು ಕಡಿಮೆ ಆಗುತ್ತಲೇ ಇರುತ್ತದೆ.
ಭಾರತದಲ್ಲಿ ಗೃಹಿಣಿಯರು ರುಚಿಕರವಾದ ಆಹಾರ ತಯಾರಿಸಲು ಪ್ರತಿದಿನವೂ ಹೊಸದೇನು ಮಾಡುವುದು ಎಂದು ಚಿಂತಿಸುವುದೇ ಕಷ್ಟಕರವಾಗಿದೆ. ಅವರು ಮನೆಯಲ್ಲಿ ಮಕ್ಕಳಿಗೆ, ಬರುವ ಅತಿಥಿಗಳಿಗೆ ಶುಚಿ - ರುಚಿಯಾದ ಆಹಾರ ತಯಾರಿಸಲು ಹಳೆಯ ಆಹಾರ ಪುಸ್ತಕಗಳಿಂದ, ಅಂತರ್ಜಾಲದಲ್ಲಿ ಸಿಗುವ ಅಡಿಗೆ ವಿಧಾನಗಳ ಕುರಿತು ತಡಕಾಡುತ್ತಾರೆ. ಇಂತಹ ಬಹುತೇಕ ಅಡಿಗೆಗಳಲ್ಲಿ, ಭಾರತದಾದ್ಯಂತ ಟೊಮ್ಯಾಟೊ ಒಂದು ಅವಿಭಾಜ್ಯ ಅಂಗವಾಗಿದೆ. ಆದರೆ ಇದ್ದಕ್ಕಿದ್ದಂತೆ ಟೊಮ್ಯಾಟೊ ಮೇ - ಜೂನ್ ಮಧ್ಯಭಾಗದಲ್ಲಿ ಮಾರುಕಟ್ಟೆಯಿಂದ ಕಣ್ಮರೆಯಾಯಿತು. ಈಗ, ಆಗಸ್ಟ್ ಮಧ್ಯಭಾಗದಲ್ಲೂ ಇದೇ ಪರಿಸ್ಥಿತಿ ಮುಂದುವರಿದಿದೆ!
ಮಹಾರಾಷ್ಟ್ರ (Maharashtra), ಆಂಧ್ರಪ್ರದೇಶ, ಮತ್ತು ಕರ್ನಾಟಕದಲ್ಲಿ ಚಳಿಗಾಲದ (Winter crop) ಬೆಳೆಯಾಗಿ ಬೆಳೆಯುವ ಟೊಮ್ಯಾಟೊ, ಮಾರ್ಚ್‌ನಿಂದ ಆಗಸ್ಟ್ ನಡುವೆ ಮಾರುಕಟ್ಟೆಯನ್ನು ತಲುಪುತ್ತದೆ. ಆ ನಂತರ, ಖಾರಿಫ್ ಬೆಳೆಯಾಗಿ ಮಹಾರಾಷ್ಟ್ರದ ನಾಶಿಕ್, ಉತ್ತರ ಪ್ರದೇಶ ಮತ್ತು ದೇಶದ ಮತ್ತಿತರ ಭಾಗಗಳಲ್ಲಿ ಬೆಳೆಯುವ ಟೊಮ್ಯಾಟೊ ಮಾರುಕಟ್ಟೆ ಪ್ರವೇಶಿಸುತ್ತದೆ. ಮಾರುಕಟ್ಟೆಗೆ ಟೊಮ್ಯಾಟೊ ನಿರಂತರವಾಗಿ ಲಭಿಸುವುದನ್ನು ಖಾತ್ರಿ ಪಡಿಸಲು ರೈತರು ಸಾಮಾನ್ಯವಾಗಿ ಬೆಳೆಗಳನ್ನು ಆವರ್ತಕವಾಗಿ ಬೆಳೆಯುತ್ತಾರೆ.
ಈ ವರ್ಷದಲ್ಲಿ, ಮಾರ್ಚ್ - ಎಪ್ರಿಲ್ ತಿಂಗಳ ವೇಳೆಯಲ್ಲಿ ದೇಶಾದ್ಯಂತ ಟೊಮ್ಯಾಟೊ ಬಂಪರ್ ಬೆಳೆ ಬೆಳೆದ ಪರಿಣಾಮವಾಗಿ, ಟೊಮ್ಯಾಟೋದ ಸಗಟು ದರ ಪ್ರತಿ ಕೆಜಿಗೆ 2-3 ರೂಪಾಯಿಗಳಿಗೆ ಕುಸಿದಿತ್ತು. ಅಷ್ಟು ಕಡಿಮೆ ಬೆಲೆ ಟೊಮ್ಯಾಟೊದ ಸಾಗಾಣಿಕಾ ವೆಚ್ಚಕ್ಕೂ ಸಾಕಾಗುತ್ತಿರಲಿಲ್ಲ. ಮಾರುಕಟ್ಟೆಯಲ್ಲಿ ಟೊಮ್ಯಾಟೊ ಅತಿಯಾಗಿ ಪೂರೈಕೆಯಾದ ಕಾರಣ, ಬಹುತೇಕ ರೈತರಿಗೆ ಖರೀದಿದಾರರಿರಲಿಲ್ಲ. ಈ ಕಾರಣದಿಂದ ಬಹುತೇಕ ರೈತರು ಲೋಡ್‌ಗಟ್ಟಲೆ ಟೊಮ್ಯಾಟೋವನ್ನು ಸುರಿದು, ಟೊಮ್ಯಾಟೊ ಬೆಳೆಯನ್ನೇ ಕೈ ಬಿಡುವಂತಾಯಿತು. ಇನ್ನು ಹೊಲಗಳಲ್ಲಿ ಬೆಳೆದ, ಅಳಿದುಳಿದ ಪ್ರಮಾಣದ ಟೊಮ್ಯಾಟೊ ಬೆಳೆ ಜೂನ್ ತಿಂಗಳ ಮಧ್ಯ ಭಾಗದಲ್ಲಿ ಸುರಿದ ಮಳೆಯ ಕಾರಣದಿಂದ ನಾಶವಾಗಿ, ಇದ್ದಕ್ಕಿದ್ದಂತೆ ಟೊಮ್ಯಾಟೊ ಅಭಾವ ತಲೆದೋರಿತು.
ಅದಾಗಿ ಕೆಲ ಸಮಯದಲ್ಲಿ ಟೊಮ್ಯಾಟೊ ಬೆಲೆ ಹೆಚ್ಚಳವಾಗಲು ಆರಂಭಿಸಿತು. ಜುಲೈ ತಿಂಗಳ ವೇಳೆಗೆ ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮ್ಯಾಟೊ ದರ ಪ್ರತಿ ಕೆಜಿಗೆ 200-250 ರೂಪಾಯಿ ತಲುಪಿತ್ತು. ಇದಕ್ಕೆ ಕೀಟ ಬಾಧೆ, ಹೆಚ್ಚಿನ ಉಷ್ಣತೆ ಕಾರಣವಾಗಿತ್ತು. ಸಾಮಾನ್ಯವಾಗಿ, ಜುಲೈ ತಿಂಗಳಲ್ಲಿ ತರಕಾರಿಗಳ ದರ ವರ್ಷದ ಇತರ ಸಮಯಗಳಿಂದ ಹೆಚ್ಚಾಗಿ, ವಾರ್ಷಿಕ ಅತ್ಯಧಿಕ ದರವನ್ನು ತಲುಪುತ್ತದೆ. ಯಾಕೆಂದರೆ, ಜುಲೈ ತಿಂಗಳಲ್ಲಿ ಬೆಳೆಗಳು ಇನ್ನೂ ಕೊಯ್ಲಿಗೆ ಬಂದಿರುವುದಿಲ್ಲ.
ಪ್ರತಿ ಸಲವೂ ಇಂತದ್ದು ಏನಾದರೂ ನಡೆದಾಗ, ರೈತರು ಇದ್ದಕ್ಕಿದ್ದ ಹಾಗೇ ಅಂತಹ ಅಭಾವವಿರುವ ಬೆಳೆಗಳನ್ನು ಬೆಳೆಯಲು ಹೊರಟು, ಅಂತಹ ಬೆಳೆಗಳು ಮಿತಿಮೀರಿ ಲಭ್ಯವಾಗುವಂತಾಗುತ್ತದೆ. ಇಂತಹ ಸಂದರ್ಭದಲ್ಲಿ, ಹೆಚ್ಚಾದ ಬೆಲೆ ಇದ್ದಕ್ಕಿದ್ದಂತೆ ಕುಸಿತ ಕಾಣುತ್ತದೆ. ಇಂತಹ ಪರಿಸ್ಥಿತಿ ಪ್ರತಿವರ್ಷವೂ ಆಲೂಗಡ್ಡೆ, ಈರುಳ್ಳಿ, ಟೊಮ್ಯಾಟೊ, ಮತ್ತಿತರ ತರಕಾರಿಗಳ ಜೊತೆ ಮುಂದುವರಿಯುತ್ತಲೇ ಇರುತ್ತದೆ.
ಆದ್ದರಿಂದ, ರೈತರಿಗೆ ನೆರವಾಗುವ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿರುತ್ತದೆ. ಉದಾಹರಣೆಗೆ, ಪ್ರಸ್ತುತ ಇರುವ ಅಭಾವವನ್ನು ನೀಗಿಸಲು, ಕರ್ನಾಟಕದ ತೋಟಗಾರಿಕಾ ಇಲಾಖೆ ಲಕ್ಷಾಂತರ ಟೊಮ್ಯಾಟೊ ಬೀಜಗಳನ್ನು ಹಂಚುವ ಕ್ರಮಕ್ಕೆ ಮುಂದಾಗಿದೆ. ಆದರೆ, ವಾಸ್ತವದಲ್ಲಿ ಇದು ಮಿತಿ ಮೀರಿ ಟೊಮ್ಯಾಟೊ ಬೆಳೆಯುವಂತೆ ಮಾಡಿ, ಹೊಸದೊಂದು ಸಮಸ್ಯೆಗೆ ಹಾದಿ ಮಾಡಿಕೊಡುವ ಸಾಧ್ಯತೆಯಿದೆ. ಭಾರತದಲ್ಲಿ ಬೆಳೆ ಬೆಳೆಯುವ ರೀತಿ ಸಾಮಾನ್ಯವಾಗಿ ಮಣ್ಣು, ಮಳೆ, ತಾಪಮಾನ ಮತ್ತು ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿರುತ್ತದೆ.
ತರಕಾರಿ ಬೆಳೆಯುವ ವಿಧಾನ ಬದಲಾಗಬಲ್ಲ ರೀತಿಯದ್ದಾಗಿದ್ದು, ಯಾವ ಸಮಯದಲ್ಲಿ ಬೇಕಾದರೂ ಬೆಳೆಯ ರೀತಿ ಬದಲಾಗಬಲ್ಲದು. ಈಗ ನಮ್ಮಲ್ಲಿ ಸಾಕಷ್ಟು ತಾಂತ್ರಿಕ ಅಭಿವೃದ್ಧಿ ಸಾಧಿಸಲಾಗಿದ್ದು, ಬೆಳೆಯ ರೀತಿಯನ್ನು ಹವಾಮಾನ ಮುನ್ಸೂಚನೆ ಮತ್ತು ಮಾರುಕಟ್ಟೆ ಬೇಡಿಕೆಯ ಆಧಾರದಲ್ಲಿ ನಿರ್ಧರಿಸಬಹುದು. ಆದರೆ ರಾಜ್ಯ ಸರ್ಕಾರಗಳು ಈ ಕುರಿತು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು ವಿಫಲವಾಗುವ ಕಾರಣದಿಂದ, ರೈತರು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಲು ಕಾರಣವಾಗುತ್ತವೆ.
ಟೊಮ್ಯಾಟೋಗೆ ಅಥವಾ ಅಂತಹ ಯಾವುದೇ ಬೆಳೆಗೆ ಸಂಬಂಧಿಸಿದಂತೆ ಭವಿಷ್ಯದಲ್ಲಿ ಇಂತಹ ಪರಿಸ್ಥಿತಿಗಳು ತಲೆದೋರದಂತೆ ಮಾಡಲು, ಸರ್ಕಾರಗಳು ತರಕಾರಿಗಳ ಬೇಡಿಕೆ ಹಾಗೂ ವಿವಿಧ ಅಂಶಗಳನ್ನು ಗಮನಿಸಿ, ಬೇರೆ ಬೇರೆ ಪ್ರದೇಶಗಳಲ್ಲಿ ಯಾವ ತರಕಾರಿ ಬೆಳೆಗಳನ್ನು ಬೆಳೆಯಬೇಕು ಎಂದು ಮಾರ್ಗಸೂಚಿಗಳನ್ನು ಒದಗಿಸಬೇಕು. ಈ ಅಂಶಗಳಲ್ಲಿ ಮಳೆಯ ಸಾಧ್ಯತೆ, ಮಳೆ ಕೊರತೆ, ಮತ್ತಿತರ ಹವಾಮಾನ ಮುನ್ಸೂಚನೆಗಳೂ ಸೇರಿರುತ್ತವೆ. ರೈತರಿಗೆ ಇಂತಹ ವಿಚಾರಗಳಲ್ಲಿ ಸರಿಯಾದ ಸಮಯದಲ್ಲಿ ಸೂಕ್ತ ಮಾರ್ಗದರ್ಶನ ನೀಡದ ಹೊರತು, ಅವರು ಮತ್ತೆ ಅವೈಜ್ಞಾನಿಕ ಅಭ್ಯಾಸಗಳನ್ನು ಮುಂದುವರಿಸಿ, ಅದರಿಂದ ಅವರಿಗೆ ಮತ್ತು ಒಟ್ಟಾರೆಯಾಗಿ ದೇಶಕ್ಕೆ ತೊಂದರೆಗಳುಂಟಾಗುವಂತೆ ಮಾಡುತ್ತಾರೆ.
ಪ್ರಸ್ತುತ ಇರುವ ತಾಂತ್ರಿಕ ಅಭಿವೃದ್ಧಿಯ ಕಾರಣದಿಂದ, ಭಾರತದ ಕೃಷಿ ಸಾಕಷ್ಟು ಬದಲಾವಣೆಗಳನ್ನು ಹೊಂದುತ್ತಿದೆ. ಈಗ ದೇಶದಲ್ಲಿ ಸಾಕಷ್ಟು ಹೊಸ ಸ್ಟಾರ್ಟಪ್ ಸಂಸ್ಥೆಗಳು ರೈತ ಸ್ನೇಹಿ ಕ್ರಮಗಳನ್ನು ಕೈಗೊಳ್ಳುತ್ತಿವೆ.
ಕೃಷಿಯ ಮೇಲೆ ಕೃತಕ ಬುದ್ಧಿಮತ್ತೆಯ (ಎಐ) ಪ್ರಭಾವ
ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್ - ಎಐ) ಮುಂದಿನ ವರ್ಷಗಳಲ್ಲಿ ಕೃಷಿಗೆ ಸಂಬಂಧಿಸಿದಂತೆ ಮಹತ್ವದ ಪಾತ್ರಗಳನ್ನು ನಿರ್ವಹಿಸಲಿದೆ. ಕೃತಕ ಬುದ್ಧಿಮತ್ತೆ ಬೆಳೆಗಳನ್ನು ವೃದ್ಧಿಸಿ, ಪೋಲಾಗುವುದನ್ನು ಕಡಿಮೆಗೊಳಿಸಿ, ದಕ್ಷತೆಯನ್ನು ಹೆಚ್ಚಿಸುವ ಮೂಲಕ ಕೃಷಿ ರಂಗದಲ್ಲಿ ಕ್ರಾಂತಿಯನ್ನು ತರಲಿದೆ. ಮಾರ್ಕೆಟ್ ಸ್ಟ್ಯಾಂಡ್ ಮಾರ್ಕೆಟ್ಸ್ ವರದಿಯ ಪ್ರಕಾರ, ಕೃಷಿ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಅಸಾಧಾರಣ ಪ್ರಗತಿ ಸಾಧಿಸಲಿದ್ದು, 2020ರ 2.35 ಬಿಲಿಯನ್ ಡಾಲರ್ ಮೌಲ್ಯದಿಂದ, 2025ರ ವೇಳೆಗೆ 10.83 ಬಿಲಿಯನ್ ತಲುಪುವ ಸಾಧ್ಯತೆಗಳಿವೆ. ಅಂದರೆ, ಈ ಐದು ವರ್ಷಗಳ ಅವಧಿಯಲ್ಲಿ, ವಾರ್ಷಿಕವಾಗಿ (ಕೌಂಪೌಂಡ್ ಆ್ಯನುವಲ್ ಗ್ರೋತ್ ರೇಟ್ - ಸಿಎಜಿಆರ್) 35.6% ಇರಲಿದೆ ಎಂದು ಅಂದಾಜಿಸಲಾಗಿದೆ.
ಕೃಷಿಯಲ್ಲಿ ಕೃತಕ ಬುದ್ಧಿಮತ್ತೆಯ ಮಹತ್ವದ ಅನುಕೂಲತೆ ಎಂದರೆ, ಅದು ಕೃಷಿಕರಿಗೆ ಅಪಾರ ಪ್ರಮಾಣದ ಮಾಹಿತಿಗಳನ್ನು ಕಲೆ ಹಾಕುತ್ತದೆ. ಇದು ರೈತರಿಗೆ ಸವಾಲಿನ ಸನ್ನಿವೇಶಗಳಲ್ಲಿ ಉತ್ತಮ ನಿರ್ಧಾರ ಕೈಗೊಳ್ಳಲು, ಹೆಚ್ಚಿನ ಇಳುವರಿ ಪಡೆಯಲು ನೆರವಾಗಿ, ಜಾಗತಿಕ ಆಹಾರ ಕೊರತೆಯನ್ನು ನಿಭಾಯಿಸಲು ಪೂರಕವಾಗುತ್ತದೆ.
ಕೃತಕ ಬುದ್ಧಿಮತ್ತೆ ರೈತರಿಗೆ ಹವಾಮಾನ ಬದಲಾವಣೆ, ಮಣ್ಣಿನ ಗುಣಮಟ್ಟ, ಬೆಳೆಗಳ ಪ್ರಗತಿಗಳನ್ನು ತಿಳಿಯಲು ನೆರವಾಗುತ್ತದೆ. ಆ ಮೂಲಕ ರೈತರಿಗೆ ಕೃಷಿಯನ್ನು ಬಾಧಿಸುವ ರೋಗಗಳನ್ನು ಆರಂಭದಲ್ಲೇ ತಿಳಿದು, ಅದಕ್ಕೆ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಂಡು, ಕೃಷಿಗೆ ಹಾನಿಯಾಗದಂತೆ ಕಾಪಾಡಲು ನೆರವಾಗುತ್ತದೆ. ಅದರೊಡನೆ, ಕೃತಕ ಬುದ್ಧಿಮತ್ತೆ ಹವಾಮಾನ ಮುನ್ಸೂಚನೆಗಳನ್ನು ನೀಡಿ, ರೈತರಿಗೆ ಸೂಕ್ತ ಕೃಷಿ ಚಟುವಟಿಕೆಗಳನ್ನು ಯೋಚಿಸಿ, ಸೂಕ್ತವಾದ ಬೆಳೆಯನ್ನು ಬೆಳೆಯಲು ನೆರವಾಗುತ್ತದೆ.
ಅದರೊಡನೆ, ಕೃತಕ ಬುದ್ಧಿಮತ್ತೆ ಕೃಷಿಯಲ್ಲಿ ಬೆಳೆ ಪೋಲಾಗದಂತೆ, ಸಂಪನ್ಮೂಲಗಳು ವ್ಯರ್ಥವಾಗದಂತೆ ನೋಡಿಕೊಳ್ಳಲು ನೆರವಾಗುತ್ತದೆ. ಉದಾಹರಣೆಗೆ, ರೈತರು ಕೃತಕ ಬುದ್ಧಿಮತ್ತೆಯನ್ನು ಬಳಸಿ, ಬೆಳೆಗಳಿಗೆ ಸೂಕ್ತ ಪ್ರಮಾಣದಲ್ಲಿ ರಸಗೊಬ್ಬರ ಮತ್ತು ನೀರು ಪೂರೈಸಿ, ಆ ಮೂಲಕ ಪರಿಸರ ಸ್ನೇಹಿ ಕ್ರಮಗಳನ್ನು ಕೈಗೊಳ್ಳಲು ಅನುಕೂಲ ಕಲ್ಪಿಸುತ್ತದೆ. ಇಂತಹ ಕ್ರಮಗಳು ಇತ್ತೀಚಿನ ದಿನಗಳಲ್ಲಿ ಬಹುದೊಡ್ಡ ಸಮಸ್ಯೆಯಾಗಿರುವ ಮಣ್ಣು ಮತ್ತು ನೀರಿನ ಮಾಲಿನ್ಯವನ್ನು ತಡೆಗಟ್ಟಲು ನೆರವಾಗುತ್ತವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ