PFI Ban ವಿರುದ್ಧ ಸುಪ್ರೀಂ ಕೋರ್ಟ್‌ಗೆ: ಸಿಎಫ್‌ಐ, ತಮಿಳುನಾಡು ಪಿಎಫ್‌ಐ ಮುಖ್ಯಸ್ಥ ಘೋಷಣೆ

By Kannadaprabha NewsFirst Published Sep 29, 2022, 10:06 AM IST
Highlights

ಕೇಂದ್ರ ಸರ್ಕಾರ ಪಿಎಫ್‌ಐ ನಿಷೇಧಿಸಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೊರೆ ಹೋಗುವುದಾಗಿ ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ಹೇಳಿಕೆ ನೀಡಿದೆ. ಅಲ್ಲದೆ, ತಮಿಳುನಾಡು ಪಿಎಫ್‌ಐ ಮುಖ್ಯಸ್ಥ ಸಹ ನಮ್ಮ ಸಂಘಟನೆ ಕೋರ್ಟ್‌ ಮೊರೆ ಹೋಗಲಿದೆ ಎಂದು ಹೇಳಿದ್ದಾರೆ. 

ನವದೆಹಲಿ: ‘ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (Popular Front of India) ಸೇರಿದಂತೆ 9 ಸಂಘಟನೆಗಳನ್ನು ನಿಷೇಧ ಮಾಡಿರುವ ಸರ್ಕಾರದ ನಿಲುವು ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ವಿರೋಧವಾಗಿದೆ. ಹಾಗಾಗಿ ಈ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಪಿಎಫ್‌ಐನ ವಿದ್ಯಾರ್ಥಿ ಸಂಘಟನೆ ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ (Campus Front of India) (ಸಿಎಫ್‌ಐ) ಘೋಷಿಸಿದೆ. ‘ಪಿಎಫ್‌ಐ ಮತ್ತು ಸಿಎಫ್‌ಐ ಕುರಿತಾಗಿ ಸರ್ಕಾರ ಮಾಡಿರುವ ಎಲ್ಲಾ ಆರೋಪಗಳು ನಿರಾಧಾರವಾಗಿವೆ ಹಾಗೂ ಇವೆಲ್ಲವೂ ಸುಳ್ಳು. ಸಿಎಫ್‌ಐ ಎಲ್ಲಾ ಸಾಂವಿಧಾನಿಕ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಪಾಲನೆ ಮಾಡಿದೆ. ಕಾನೂನಿಗೆ ವಿರುದ್ಧವಾದ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ. ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಮನೋಭಾವ ಹೊಂದಿರುವ ಮತ್ತು ಸಾಮಾಜಿಕ ಕಳಕಳಿಯುಳ್ಳ ಯುವಕರನ್ನು ಸೃಷ್ಟಿಮಾಡಲು ದಶಕಗಳ ಕಾಲ ಶ್ರಮಿಸಿದೆ’ ಎಂದು ಸಿಎಫ್‌ಐ ಹೇಳಿದೆ.
‘ಏಕಾಏಕಿ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಧಕ್ಕೆಯಾಗಿದೆ. ಹಾಗಾಗಿ ಈ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡುತ್ತೇವೆ’ ಎಂದು ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ಹೇಳಿದೆ.

'ಕಾನೂನುಬಾಹಿರ ಮತ್ತು ಪ್ರಜಾಪ್ರಭುತ್ವ ವಿರೋಧಿ' ನಿಷೇಧವನ್ನು ಕಾನೂನುಬದ್ಧವಾಗಿ ಪ್ರಶ್ನಿಸುತ್ತೇವೆ: ತಮಿಳುನಾಡು PFI ಮುಖ್ಯಸ್ಥ
ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ತಮಿಳುನಾಡು ಘಟಕದ ಅಧ್ಯಕ್ಷ ಮೊಹಮ್ಮದ್ ಶೇಕ್ ಅನ್ಸಾರಿ ಅವರು ಪಿಎಫ್‌ಐ ಸಂಘಟನೆಯು ನಿಷೇಧದ ವಿರುದ್ಧ ಕಾನೂನು ಹೋರಾಟ ನಡೆಸಲಿದೆ ಎಂದು ಬುಧವಾರ ಹೇಳಿಕೆ ನೀಡಿದ್ದಾರೆ. "ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ಭಾರತದಲ್ಲಿ ನಿಷೇಧಿಸಲಾಗಿದೆ ಎಂದು ಆದೇಶ ಹೊರಡಿಸಲಾಗಿದೆ. ಈ ಕಾನೂನುಬಾಹಿರ ಮತ್ತು ಪ್ರಜಾಪ್ರಭುತ್ವ ವಿರೋಧಿ ನಿಷೇಧವನ್ನು ನಾವು ಪ್ರಶ್ನಿಸುತ್ತೇವೆ" ಎಂದು ಮೊಹಮ್ಮದ್ ಶೇಕ್ ಅನ್ಸಾರಿ ಅವರು ಹೇಳಿಕೆ ಹೊರಡಿಸಿದ್ದಾರೆ. 

ಇದನ್ನು ಓದಿ: ಮಂಗಳೂರಿನಲ್ಲಿ ಸಿಎಫ್‌ಐ ಗರ್ಲ್ಸ್‌ ಕಾನ್ಫರೆನ್ಸ್; ಕಾರ್ಯಕರ್ತರಿಗೆ ಕಮಿಷನರ್‌ ತರಾಟೆ

ಪಿಎಫ್‌ಐ ಮೇಲೆ ನಿಷೇಧಕ್ಕೆ ಎಸ್‌ಡಿಪಿಐ ತೀವ್ರ ವಿರೋಧ
ಕೇಂದ್ರ ಸರ್ಕಾರ ಪಿಎಫ್‌ಐ ಮೇಲೆ ನಿಷೇಧ ಹೇರಿರುವುದು ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯನ್ನು ಹೇರಿದಂತಾಗಿದೆ ಎಂದು ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ(ಎಸ್‌ಡಿಪಿಐ) ಆಕ್ರೋಶ ವ್ಯಕ್ತಪಡಿಸಿದೆ .ಈ ಬಗ್ಗೆ ಹೇಳಿಕೆ ನೀಡಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ, ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಸಂಘಟನೆಯನ್ನು ನಿಷೇಧಿಸಿರುವುದು ಬಿಜೆಪಿ ಸರ್ಕಾರದ ಜನವಿರೋಧಿ ನೀತಿಯನ್ನು ತೋರಿಸುತ್ತದೆ. ಆಡಳಿತದ ವಿರುದ್ಧ ಯಾರೇ ಧ್ವನಿ ಎತ್ತಿದರೂ ಅಂತಹವರ ಮೇಲೆ ತನಿಖಾ ಸಂಸ್ಥೆಗಳಿಂದ ದಾಳಿ ಮಾಡಿಸಿ ಬಂಧಿಸಲಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತದೆ ಎಂದು ಟೀಕಿಸಿದ್ದಾರೆ.

ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರೆ ಅಂತಹ ಸಂಘಟನೆಯನ್ನು ಕ್ರೂರವಾಗಿ ಹತ್ತಿಕ್ಕಲಾಗುತ್ತಿದೆ. ಇದು ಸಂವಿಧಾನದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಈ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷಗಳನ್ನು ಬೆದರಿಸುವ ತಂತ್ರ ಮಾಡುತ್ತಿದೆ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿರುವ ಸಂದರ್ಭ ಸೃಷ್ಟಿಯಾಗಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: PFI Ban: 5 ವರ್ಷಗಳ ಕಾಲ ನಿಷೇಧ; ಕೇಂದ್ರ ಸರ್ಕಾರದ ಮಾಸ್ಟರ್‌ ಸ್ಟ್ರೋಕ್‌

ಪಿಎಫ್‌ಐ ನಿಷೇಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಎಲ್ಲ ಜಾತ್ಯತೀತ ಪಕ್ಷಗಳು ಹೋರಾಟ ನಡೆಸಬೇಕು. ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳನ್ನು ಕಾಪಾಡುವ ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

ಸಿಮಿ ನಿಷೇಧ ಆಗಿದ್ದೂ ಸೆಪ್ಟೆಂಬರ್‌ನಲ್ಲಿ!
ಪಿಎಫ್‌ಐ ಅನ್ನು 2022ರ ಸೆಪ್ಟೆಂಬರ್‌ 28ರಂದು ಕೇಂದ್ರ ಸರ್ಕಾರ ನಿಷೇಧಿಸಿದೆ. ಇನ್ನು ಇನ್ನೊಂದು ವಿವಾದಿತ ಸಂಘಟನೆ ‘ಸಿಮಿ’ (SIMI) ನಿಷೇಧ ಆಗಿದ್ದೂ ಸೆಪ್ಟೆಂಬರ್‌ನಲ್ಲಿ ಎಂಬುದು ಗಮನಾರ್ಹ ಸಂಗತಿ. 2001ರ ಸೆಪ್ಟೆಂಬರ್‌ 26 ಕ್ಕೆ ಸಿಮಿ ನಿಷೇಧಕ್ಕೆ ಒಳಗಾಗಿತ್ತು.

click me!