ಪ್ರಧಾನಿ ಘೋಷಿಸಿದ್ದ ‘ಗತಿಶಕ್ತಿ’ಯೋಜನೆಗೆ ಸಂಪುಟ ಒಪ್ಪಿಗೆ!

By Suvarna NewsFirst Published Oct 22, 2021, 12:03 PM IST
Highlights

* ಮೂಲಸೌಕರ‍್ಯ ಯೋಜನೆಗೆ 16 ಇಲಾಖೆಗಳ ಸಮನ್ವಯ

* ಪ್ರಧಾನಿ ಘೋಷಿಸಿದ್ದ ‘ಗತಿಶಕ್ತಿ’ಯೋಜನೆಗೆ ಸಂಪುಟ ಒಪ್ಪಿಗೆ

ನವದೆಹಲಿ(ಅ.22): ದೇಶದ ಮೂಲ ಸೌಕರ್ಯ ಕ್ಷೇತ್ರದಲ್ಲಿ ಕ್ರಾಂತಿ ಉಂಟುಮಾಡಬಲ್ಲ ಗತಿಶಕ್ತಿ ಯೋಜನೆಗೆ(Gati Shakti plan) ಸಚಿವ ಸಂಪುಟ ಸಭೆ ಗುರುವಾರ ಅನುಮೋದನೆ ನೀಡಿದೆ. ಅ.13ರಂದು 100 ಲಕ್ಷ ಕೋಟಿ ಮೌಲ್ಯದ ಈ ಯೋಜನೆಯನ್ನು ಪ್ರಧಾನಿ ಮೋದಿ(Pm Narendra Modi) ಘೋಷಣೆ ಮಾಡಿದ್ದರು.

ಈ ಯೋಜನೆಯಿಂದ ಸರಕು ಸಾಗಣೆ ವೆಚ್ಚ ತಗ್ಗಲಿದೆ. ಪೂರೈಕೆ ಸಾಮರ್ಥ್ಯ ಹೆಚ್ಚಾಗಲಿದೆ. ಮೂಲಸೌಕರ್ಯಕ್ಕೆ ಸಂಬಂಧಿಸಿದ ಎಲ್ಲಾ ಇಲಾಖೆಗಳು ಒಂದಕ್ಕೊಂದು ಸಂಯೋಜನೆಗೊಂಡಿದೆ. ಸರ್ಕಾರದ 16 ವಿವಿಧ ಇಲಾಖೆಗಳು ಹಾಗೂ ರಾಜ್ಯ ಸರ್ಕಾರಗಳ ನಡುವೆ ಸಮನ್ವಯ ಹೆಚ್ಚಿಸಿ, ಯೋಜನೆಗಳ ವಿಳಂಬವನ್ನು ತಗ್ಗಿಸಿ ಆರ್ಥಿಕತೆಯನ್ನು ಮೇಲಕ್ಕೆ ಕೊಂಡೊಯ್ಯಲಿದೆ.

‘ಕ್ಯಾಬಿನೆಟ್‌ ಕಾರ್ಯದರ್ಶಿಯ ನೇತೃತ್ವದಲ್ಲಿ ಗತಿಶಕ್ತಿ ಯೋಜನೆ(Gati Shakti plan) ಕಾರ್ಯನಿರ್ವಹಿಸಲಿದೆ. 18 ಮಂತ್ರಿಗಳನ್ನು ಸದಸ್ಯರಾಗಿ ನೇಮಿಸಲಾಗುತ್ತದೆ’ ಎಂದು ಕೇಂದ್ರ ಮಂತ್ರಿ ಅನುರಾಗ್‌ ಠಾಕೂರ್‌ ಹೇಳಿದ್ದಾರೆ.

ಏನಿದು ಗತಿಶಕ್ತಿ ಮಾಸ್ಟರ್‌ ಪ್ಲಾನ್‌?

- ಯೋಜನೆಗಳ ಜಾರಿಯಲ್ಲಿ ಸಮನ್ವಯಕ್ಕಾಗಿ ಆರಂಭಿಸಿದ ಹೊಸ ವೆಬ್‌ಸೈಟ್‌

- ಇದರಲ್ಲಿ ಇಡೀ ದೇಶದ 3ಡಿ ಮ್ಯಾಪಿಂಗ್‌, 16 ಸಚಿವಾಲಯಗಳ ಮಾಹಿತಿ

- ಈ ಸಚಿವಾಲಯಗಳ 2025ರವರೆಗಿನ ಹೊಸ ಯೋಜನೆಗಳ ಮಾಹಿತಿ ಲಭ್ಯ

- ಇದರಿಂದ ಸಚಿವಾಲಯ, ರಾಜ್ಯಗಳ ನಡುವೆ ಯೋಜನೆ ಜಾರಿಯಲ್ಲಿ ಸಮನ್ವಯ

ಉದ್ದೇಶ ಏನು?:

ಹೆಚ್ಚು ಯೋಜನಾಬದ್ಧವಾಗಿ ಕಾಮಗಾರಿ ಪೂರ್ಣ, ಮಾಹಿತಿಯ ಮುಕ್ತ ಹಂಚಿಕೆ, ದೇಶದ ಸಂಪನ್ಮೂಲಗಳ ಸದ್ಭಳಕೆ ಮೂಲಕ ವಿಶ್ವದರ್ಜೆಯ ಮೂಲಸೌಕರ್ಯ ಕಲ್ಪಿಸುವುದು ಮತ್ತು ಈ ಮೂಲಕ ಜನಸಾಮಾನ್ಯರಿಗೆ ಗರಿಷ್ಠ ಲಾಭ ತಲುಪಿಸುವುದು ಯೋಜನೆಯ ಮೂಲ ಉದ್ದೇಶವಾಗಿದೆ. ಹೀಗಾಗಿಯೇ ಅ.13ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ಮನವಿ ಮಾಡಿದೆ. ಈ ಕಾರ್ಯಕ್ರಮದ ಬಳಿಕ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು, ರಾಜ್ಯದ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸುವ ಮೂಲಕ ಇಡೀ ಯೋಜನೆಯ ಉದ್ದೇಶ, ಅದರ ಲಾಭಗಳ ಕುರಿತು ಮಾಹಿತಿ ನೀಡಲಿದ್ದಾರೆ. ಎರಡು ದಿನಗಳ ಕಾಲ ನಡೆಯಲಿರುವ ಈ ಸಮಾಲೋಚನಾ ಸಮ್ಮೇಳನದಲ್ಲಿ ಖಾಸಗಿ ಸಂಸ್ಥೆಗಳು, ವಿವಿಧ ವಿಷಯವಾರು ತಜ್ಞರೂ ಪಾಲ್ಗೊಳ್ಳಲಿದ್ದಾರೆ.

ಉತ್ತಮ ಮಾಹಿತಿಯು ಉತ್ತಮ ನಿರ್ಧಾರಕ್ಕೆ ಕಾರಣವಾಗಬಲ್ಲದು ಎಂಬ ನೀತಿಯಡಿ, ವೇದಿಕೆಯಡಿ ಬರುವ ಎಲ್ಲಾ 16 ಸಚಿವಾಲಯಗಳು ಮತ್ತು ರಾಜ್ಯಗಳು, ಇತರರು ಎಲ್ಲಿ, ಯಾವಾಗ, ಯಾವ ರೀತಿಯ ಯೋಜನೆ ಜಾರಿಗೊಳಿಸುತ್ತಿದ್ದಾರೆ ಎಂಬ ತಾಜಾ ಮಾಹಿತಿಯನ್ನು ಪಡೆಯುವ ಮೂಲಕ ಅದಕ್ಕೆ ಅನುಸಾರವಾಗಿ ತಮ್ಮ ಯೋಜನೆಗಳನ್ನು ಜಾರಿಗೊಳಿಸಬಹುದು ಅಥವಾ ಅದಕ್ಕೆ ಪೂರಕವಾದ ಯೋಜನೆಗಳನ್ನು ಜಾರಿಗೊಳಿಸಬಹುದು.

ಯಾವ ಇಲಾಖೆಗಳ ನಡುವೆ ಸಮನ್ವಯ?

ಮೂಲಸೌಕರ‍್ಯ ಯೋಜನೆಗಳಲ್ಲಿ ಪ್ರಮುಖ ಪಾತ್ರ ವಹಿಸುವ ರೈಲ್ವೆ, ಹೆದ್ದಾರಿ, ಟೆಲಿಕಾಂ, ಹಡಗು, ಇಂಧನ, ಪೆಟ್ರೋಲಿಯಂ, ವಿಮಾನಯಾನ ಹಾಗೂ ಕೃಷಿ ಸೇರಿದಂತೆ 16 ಇಲಾಖೆಗಳ ನಡುವೆ ಸಮನ್ವಯ ಏರ್ಪಡಲಿದೆ. ಇವುಗಳೊಂದಿಗೆ ರಾಜ್ಯ ಸರ್ಕಾರಗಳೂ ಸಮನ್ವಯ ಸಾಧಿಸಲಿವೆ.

click me!