Justice Yashwant Varma resignation: ನ್ಯಾ। ವರ್ಮಾ ಕೊನೆಗೂ ರಾಜೀನಾಮೆ! ವಾಗ್ದಂಡನೆ ವಿಚಾರಣೆಯಿಂದ ಪಾರು, ಸಿಗಲಿದೆ ಪಿಂಚಣಿ

Kannadaprabha News   | Kannada Prabha
Published : Apr 11, 2026, 08:10 AM IST
Bundles of Cash Case Justice Verma Finally Resigns

ಸಾರಾಂಶ

ಮನೆಯಲ್ಲಿ ಸುಟ್ಟ ನೋಟುಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧ ವಾಗ್ದಂಡನೆ ಪ್ರಕ್ರಿಯೆ ಎದುರಿಸುತ್ತಿದ್ದ ಅಲಹಾಬಾದ್‌ ಹೈಕೋರ್ಟ್‌ನ ನ್ಯಾ। ಯಶವಂತ್‌ ವರ್ಮಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ತನಿಖಾ ಸಮಿತಿಯ ಮುಂದೆ ಹಾಜರಾಗುವ ಮುನ್ನವೇ ರಾಷ್ಟ್ರಪತಿಗಳಿಗೆ ರಾಜೀನಾಮೆ ಪತ್ರ ನೀಡಿವಾಗ್ದಂಡನೆಯಿಂದ ಬಚಾವ್.

ನವದೆಹಲಿ: ಮನೆಯಲ್ಲಿ ಕಂತೆಕಂತೆ ಸುಟ್ಟ ನೋಟು ಪತ್ತೆಯಾದ ಪ್ರಕರಣದಲ್ಲಿ ದೆಹಲಿಯಿಂದ ಅಲಹಾಬಾದ್‌ ಹೈಕೋರ್ಟ್‌ಗೆ ಎತ್ತಂಗಡಿಯಾಗಿ, ಸದ್ಯ ಆಂತರಿಕ ತನಿಖೆ ಎದುರಿಸುತ್ತಿದ್ದ ನ್ಯಾ। ಯಶವಂತ್‌ ವರ್ಮಾ ತಮ್ಮ ಹುದ್ದೆಗೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಅಲ್ಲದೆ ವಾಗ್ದಂಡನೆ ಪ್ರಕ್ರಿಯೆಗಾಗಿ ಲೋಕಸಭೆಯ ಮೂಲಕ ರಚನೆಗೊಂಡಿದ್ದ ತನಿಖಾ ಸಮಿತಿಯ ಮುಂದೆ ಹಾಜರಾಗುವುದರಿಂದಲೂ ಹಿಂದೆ ಸರಿದಿದ್ದಾರೆ. ಈ ಮೂಲಕ ವಾಗ್ದಂಡನೆಗೆ ಒಳಪಡುವುದರಿಂದ ಪಾರಾಗಲು ಇದ್ದ ಏಕೈಕ ಮಾರ್ಗವನ್ನು ನ್ಯಾ. ವರ್ಮಾ ಆರಿಸಿಕೊಂಡಿದ್ದಾರೆ.

ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಅರವಿಂದ್‌ ಕುಮಾರ್‌, ಬಾಂಬೆ ಹೈಕೋರ್ಟ್‌ನ ಚಂದ್ರಶೇಖರ್‌ ಮತ್ತು ಹಿರಿಯ ವಕೀಲ, ಕನ್ನಡಿಗ ಬಿ.ವಿ.ಆಚಾರ್ಯ ಅವರನ್ನು ಒಳಗೊಂಡ ಸಮಿತಿಯ ಮುಂದೆ ನ್ಯಾ.ವರ್ಮಾ ಶುಕ್ರವಾರ ವಿಚಾರಣೆಗೆ ಹಾಜರಾಗಿ ತಮ್ಮ ಪರ ವಾದ ಮಂಡಿಸಬೇಕಿತ್ತು. ಅದಕ್ಕೂ ಮುನ್ನ ಅವರು ತನಿಖಾ ಸಮಿತಿಯ ವಿಚಾರಣೆಗೆ ಹಾಜರಾಗುವುದರಿಂದ ಹಿಂದೆ ಸರಿದಿದ್ದಾರೆ. ಅವರು ಗೈರಾದ ಕಾರಣ ಅವರ ವಿರುದ್ಧ ಆರಂಭಿಸಲಾಗಿದ್ದ ವಾಗ್ದಂಡನೆ ಪ್ರಕ್ರಿಯೆ ಅರ್ಧದಲ್ಲೇ ಮುಕ್ತಾಯಗೊಂಡಂತೆ ಆಗಿದೆ.

ರಾಜೀನಾಮೆ ಸಲ್ಲಿಕೆ:

ಏ.9ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿರುವ ವರ್ಮಾ, ‘ನಾನು ಈ ಪತ್ರ ಸಲ್ಲಿಸುವಂತೆ ಮಾಡಿರುವ ಘಟನೆಯಿಂದ ನ್ಯಾಯಾಂಗದ ಮೇಲೆ ಒತ್ತಡ ಬೀಳಬಾರದೆಂಬ ಕಾರಣಕ್ಕೆ ವೇದನೆಭರಿತ ಹೃದಯದಿಂದ ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಅದರಲ್ಲಿ ಬರೆದಿದ್ದಾರೆ. ಜತೆಗೆ, ತಮ್ಮ ವಿರುದ್ಧದ 3 ಸದಸ್ಯರ ತಂಡ ನಡೆಸುತ್ತಿರುವ ವಾಗ್ದಂಡನೆ ಪ್ರಕ್ರಿಯೆಯನ್ನು ನಿಷ್ಪ್ರಯೋಜಕ ಎಂದಿದ್ದಾರೆ.

ತನಿಖೆ ಆರಂಭವಾದಾಗಲೇ ರಾಜೀನಾಮೆ ನೀಡುವಂತೆ ಅಂದಿನ ಸಿಜೆಐ ಸಂಜೀವ್‌ ಖನ್ನಾ ಅವರು ಸೂಚಿಸಿದ್ದರಾದರೂ ವರ್ಮಾ ಅದನ್ನು ತಿರಸ್ಕರಿಸಿದ್ದರು. ಆ ಬಳಿಕವೇ ವಾಗ್ದಂಡನೆಯ ಸಿದ್ಧತೆ ಶುರುವಾದದ್ದು.

ಪಿಂಚಣಿ ಸಿಗುತ್ತೆ?:

ಒಂದು ವೇಳೆ ನ್ಯಾ.ವರ್ಮಾ ರಾಜೀನಾಮೆಯನ್ನು ರಾಷ್ಟ್ರಪತಿಗಳು ಸ್ವೀಕರಿಸಿದರೆ, ನಿವೃತ್ತಿಯಾದ ಜಡ್ಜ್‌ಗಳಿಗೆ ಸಿಗುವ ಪಿಂಚಣಿ ಸೇರಿದಂತೆ ಎಲ್ಲಾ ಸೌಲಭ್ಯಗಳು ನ್ಯಾ.ವರ್ಮಾಗೂ ಸಿಗುತ್ತವೆ. ಒಂದು ವೇಳೆ ವಾಗ್ದಂಡನೆ ಮೂಲಕ ಅವರನ್ನು ಕಿತ್ತುಹಾಕಿದ್ದರೆ ಅವರಿಗೆ ಈ ಸೌಲಭ್ಯಗಳು ಸಿಗುತ್ತಿರಲಿಲ್ಲ.

ವಕೀಲರ ಸಂಘ ಸ್ವಾಗತ:

ವರ್ಮಾರ ರಾಜೀನಾಮೆ ನಿರ್ಧಾರವನ್ನು ಅಲಹಾಬಾದ್ ಹೈಕೋರ್ಟ್ ವಕೀಲರ ಸಂಘ ಸ್ವಾಗತಿಸಿದೆ. ಅದರ ​​ಅಧ್ಯಕ್ಷ ರಾಕೇಶ್ ಪಾಂಡೆ ಮಾತನಾಡಿ, ‘ಅವರು ಈ ನಿರ್ಧಾರವನ್ನು ಮೊದಲೇ ಕೈಗೊಂಡಿದ್ದರೆ ಎಲ್ಲರಿಗೂ ಒಳ್ಳೆಯದಾಗುತ್ತಿತ್ತು. ಜತೆಗೆ ಅನಗತ್ಯ ವಿವಾದ ಸೃಷ್ಟಿಯಾಗಿ ನ್ಯಾಯಾಂಗದ ಛವಿಗೆ ಧಕ್ಕೆಯಾಗುವುದು ತಪ್ಪುತ್ತಿತ್ತು’ ಎಂದು ಹೇಳಿದ್ದಾರೆ.

ಆಗಿದ್ದೇನು?:

ಕಳೆದ ವರ್ಷ ಮಾ.14ರ ರಾತ್ರಿ ವೇಳೆ ವರ್ಮಾರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅದನ್ನು ನಂದಿಸಲು ಬಂದಿದ್ದ ಅಗ್ನಿಶಾಮಕ ಸಿಬ್ಬಂದಿಗೆ ಸುಟ್ಟ ನೋಟುಗಳ ಕಂತೆ ಸಿಕ್ಕಿತ್ತು. ಅಷ್ಟು ಮೊತ್ತದ ಹಣ ಬಂದದ್ದೆಲ್ಲಿಂದ ಎಂಬ ಪ್ರಶ್ನೆಯೇಳುತ್ತಿದ್ದಂತೆ ವರ್ಮಾರನ್ನು ದೆಹಲಿ ಹೈಕೋರ್ಟ್‌ನಿಂದ ಅಲಹಾಬಾದ್‌ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು. ಆದರೆ ಅಲ್ಲಿ ಅವರಿಗೆ ಯಾವುದೇ ಜವಾಬ್ದಾರಿಗಳನ್ನು ನೀಡಲಿಲ್ಲ. ರಾಜೀನಾಮೆಗೆ ಅವರು ನಿರಾಕರಿಸಿದ ಕಾರಣ ವಾಗ್ದಂಡನೆಗೆ ಆಗ್ರಹಿಸಲಾಯಿತು ಹಾಗೂ ಆಂತರಿಕ ತನಿಖೆಯನ್ನು ನ್ಯಾಯಾಂಗ ಆರಂಭಿಸಿತ್ತು. ಒಂದೊಮ್ಮೆ ಅದರಲ್ಲಿ ಅವರು ಅಪರಾಧಿಯೆಂದು ಸಾಬೀತಾದಲ್ಲಿ, ವಾಗ್ದಂಡನೆಗೆ ಒಳಗಾದ ಮೊದಲ ಜಡ್ಜ್‌ ಎನಿಸಿಕೊಳ್ಳುತ್ತಿದ್ದರು. ಆ ಅವಮಾನ ತಪ್ಪಿಸಿಕೊಳ್ಳಲು ಅವರು ಇದೀಗ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

National News Live: Justice Yashwant Varma resignation - ನ್ಯಾ। ವರ್ಮಾ ಕೊನೆಗೂ ರಾಜೀನಾಮೆ! ವಾಗ್ದಂಡನೆ ವಿಚಾರಣೆಯಿಂದ ಪಾರು, ಸಿಗಲಿದೆ ಪಿಂಚಣಿ
West bengal assembly election 2026 ಬಂಗಾಳ ಚುನಾವಣೆಗೆ ಕರ್ನಾಟಕ ರೀತಿ ಬಿಜೆಪಿಯಿಂದ ಗ್ಯಾರೆಂಟಿ ಭರವಸೆ!