ಸದನದ ಹೊರಗೆ ನನ್ನ ಹತ್ಯೆಗೆ ಸಂಚು ರೂಪಿಸಲಾಗಿದೆ : ಬಿಎಸ್ಪಿ ಸಂಸದ

By Anusha KbFirst Published Sep 25, 2023, 8:10 AM IST
Highlights

ಸಂಸತ್ತಿನ ಹೊರಗೆ ತಮ್ಮನ್ನು ಹತ್ಯೆಗೈಯಲು ಸಂಚು ರೂಪಿಸಲಾಗಿದೆ ಎಂದು ಬಿಎಸ್ಪಿ ಸಂಸದ ದಾನಿಶ್‌ ಅಲಿ ಗಂಭೀರ ಆರೋಪ ಮಾಡಿದ್ದಾರೆ.

ನವದೆಹಲಿ: ಸಂಸತ್ತಿನ ಹೊರಗೆ ತಮ್ಮನ್ನು ಹತ್ಯೆಗೈಯಲು ಸಂಚು ರೂಪಿಸಲಾಗಿದೆ ಎಂದು ಬಿಎಸ್ಪಿ ಸಂಸದ ದಾನಿಶ್‌ ಅಲಿ ಗಂಭೀರ ಆರೋಪ ಮಾಡಿದ್ದಾರೆ.

ಬಿಜೆಪಿ ಸಂಸದ ರಮೇಶ್‌ ಬಿಧೂರಿ ಅವರು ಅಲಿ ಅವರನ್ನು ಉಗ್ರ ಎಂದು ಕರೆಯಲು, ಅಲಿ ಅವರು ಪ್ರಧಾನಿ ಮೋದಿ ಅವರನ್ನು ನೀಚ ಎಂದು ಕರೆದು ಅವಮಾನಿಸಿದ್ದು ಕಾರಣ. ಈ ಬಗ್ಗೆ ಲೋಕಸಭೆ ಸ್ಪೀಕರ್‌ ತನಿಖೆ ನಡೆಸಬೇಕು ಎಂಬ ಬಿಜೆಪಿಯ ಮತ್ತೋರ್ವ ಸಂಸದ ನಿಶಿಕಾಂತ್‌ ದುಬೆ (MP Nishikant Dubey) ಅವರ ಪತ್ರದ ಬಗ್ಗೆ ಪ್ರತಿಕ್ರಿಯಿಸಿದ ಅಲಿ, ‘ಸದನದ ಒಳಗೆ ನನ್ನನ್ನು ಮಾತಿನ ಮೂಲಕ ಹತ್ಯೆ ಮಾಡಲಾಗಿತ್ತು. ಇದೀಗ ಸ್ಪೀಕರ್‌ಗೆ ದುಬೆ ಅವರು ಬರೆದಿರುವ ಪತ್ರ, ನನ್ನನ್ನು ಸದನದ ಹೊರಗೆ ಹತ್ಯೆ ಮಾಡಲು ಅವಕಾಶ ಕಲ್ಪಿಸುವ ಉದ್ದೇಶದ್ದು’ ಎಂದು ಗಂಭೀರ ಆರೋಪ ಮಾಡಿದರು.

ಕಳೆದ ಗುರುವಾರ ಲೋಕಸಭೆಯ ಕಲಾಪದ ವೇಳೆ ಬಿಧೂರಿ (BJP MP Ramesh Bidhuri) ಅವರು ದಾನಿಶ್ ಅಲಿ (Danish Ali) ಅವರನ್ನು ಉಗ್ರ ಎಂಬುದೂ ಸೇರಿದಂತೆ ಹಲವು ಕೀಳು ಬದ ಬಳಸಿ ಟೀಕಿಸಿದ್ದರು. ಇದನ್ನು ಪಕ್ಷಾತೀತವಾಗಿ ಎಲ್ಲರೂ ಖಂಡಿಸಿದ್ದರು. ಬಿಜೆಪಿ ಕೂಡಾ ಈ ಕುರಿತು ಸ್ಪಷ್ಟನೆ ಕೇಳಿ ನೋಟಿಸ್‌ ಜಾರಿ ಮಾಡಿತ್ತು. ಈ ಬಗ್ಗೆ ಶನಿವಾರ ಪ್ರತಿಕ್ರಿಯಿಸಿದ್ದ ದುಬೆ, ಬಿಧೂರಿ ನೀಡಿದ ಹೇಳಿಕೆಯನ್ನು ಯಾವ ನಾಗರಿಕ ಸಮಾಜ ಕೂಡಾ ಒಪ್ಪದು. ಆದರೆ ಇಂಥ ಹೇಳಿಕೆಗೆ ಪ್ರಚೋದನೆ ನೀಡಿದ ಅಂಶ ಕೂಡಾ ಶಿಕ್ಷಾರ್ಹ. ಹೀಗಾಗಿ ಆ ಕುರಿತೂ ಸ್ಪೀಕರ್‌ ತನಿಖೆ ನಡೆಸಬೇಕು ಎಂದು ಕೋರಿ ಪತ್ರ ಬರೆದಿದ್ದರು.

ಸ್ಪೀಕರ್‌ ಕ್ರಮ ಕೈಗೊಳ್ಳುತ್ತಾರೆ: ಬಿಜೆಪಿ ಸಂಸದ ಬಿಧೂರಿ

ಈ ಮಧ್ಯೆ ಬಿಎಸ್‌ಪಿ ಸಂಸದ ದಾನಿಶ್‌ ಅಲಿ ಅವರಿಗೆ ಕಲಾಪದ ವೇಳೆ ಅವಾಚ್ಯವಾಗಿ ನಿಂದಿಸಿದ್ದ ಬಿಜೆಪಿ ಸಂಸದ ರಮೇಶ್‌ ಬಿಧೂರಿ, ಈ ಘಟನೆ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯಿಸಿದ್ದು, ಎಲ್ಲವನ್ನು ಸ್ಪೀಕರ್‌ ಓಂ ಬಿರ್ಲಾ (Speaker Om Birla) ಅವರು ನೋಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಭಾನುವಾರ ಮಾಧ್ಯಮದ ಮುಂದೆ ಬಂದ ಅವರು ದಾನಿಶ್‌ ಅಲಿ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ರಮೇಶ್‌ ಈ ರೀತಿ ಉತ್ತರಿಸಿದ್ದಾರೆ.

ಈ ನಡುವೆ, ಅಲಿ ಅವರು ಮೊದಲು ಪ್ರಚೋದಿಸಿದ್ದು, ಅವರ ಪಾತ್ರದ ಬಗ್ಗೆ ಸ್ಪೀಕರ್ ತನಿಖೆ ನಡೆಸಬೇಕು ಎಂದು ಬಿಜೆಪಿ ಸಂಸದ ರವಿಕಿಶನ್‌ ಆಗ್ರಹಿಸಿದ್ದಾರೆ. ಗುರುವಾರ ಚಂದ್ರಯಾನ-3ರ ಯಶಸ್ಸಿನ ಬಗ್ಗೆ ಕಲಾಪದಲ್ಲಿ ಸಂಸದ ದಾನಿಶ್‌ ಅಲಿ, ತಮ್ಮ ಭಾಷಣಕ್ಕೆ ಅಡ್ಡಿ ಮಾಡಿದರೆಂದು ಅವರಿಗೆ ರಮೇಶ್‌ ಅವಾಚ್ಯವಾಗಿ ನಿಂದಿಸಿದ್ದರು. ಇವರ ಹೇಳಿಕೆಗೆ ಬಿಜೆಪಿ ಶೋಕಾಸ್‌ ನೋಟಿಸ್‌ ಜಾರಿ ಮಾಡಿತ್ತು. ಸ್ಪೀಕರ್‌ ತೀವ್ರವಾಗಿ ಎಚ್ಚರಿಕೆ ನೀಡಿದ್ದರು.

click me!