UP Assembly election: ಚುನಾವಣೆಗೆ 6 ತಿಂಗಳು ಮೊದಲೇ ಸಮೀಕ್ಷೆ ನಿಷೇಧಿಸಿ ಎಂದ ಮಾಯಾವತಿ

Suvarna News   | Asianet News
Published : Nov 28, 2021, 04:29 PM IST
UP Assembly election: ಚುನಾವಣೆಗೆ 6 ತಿಂಗಳು ಮೊದಲೇ ಸಮೀಕ್ಷೆ ನಿಷೇಧಿಸಿ ಎಂದ ಮಾಯಾವತಿ

ಸಾರಾಂಶ

ಅತೀ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಿದ್ದು, ದೇಶದ ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಉತ್ತರಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಮುಂದಿನ ಚುನಾವಣೆಗೆ ಸಿದ್ಧಗೊಳ್ಳುತ್ತಿದ್ದು, ಆರೋಪ ಪ್ರತ್ಯಾರೋಪದಲ್ಲಿ ತೊಡಗಿವೆ.

ಲಖ್ನೋ(ನ.28): ಚುನಾವಣೆಗೆ 6 ತಿಂಗಳು ಮೊದಲೇ ಮಾಧ್ಯಮಗಳಲ್ಲಿ ಚುನಾವಣಾ ಪೂರ್ವ ಸಮೀಕ್ಷೆಗಳನ್ನು  ಚುನಾವಣಾ ಆಯೋಗ ನಿಷೇಧಿಸಬೇಕು ಎಂದು ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಆಗ್ರಹಿಸಿದ್ದಾರೆ.  ಉತ್ತರಪ್ರದೇಶ ವಿಧಾನಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನ್ಯೂಸ್‌ ಚಾನಲ್‌ವೊಂದು ಚುನಾವಣಾ ಪೂರ್ವ ಸಮೀಕ್ಷೆಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಮುಂದಿನ 2022ರ ಚುನಾವಣೆ(2022 Assembly poll)ಯಲ್ಲಿ ರಾಜ್ಯದಲ್ಲಿ  ಬಿಜೆಪಿ ಅತೀ ಹೆಚ್ಚು ಸೀಟುಗಳನ್ನು ಗಳಿಸಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದೆ. ಈ ಸಮೀಕ್ಷೆ ಬಿಡುಗಡೆಯ ಬಳಿಕ ಮಾಯಾವತಿ ಸಮೀಕ್ಷೆಯನ್ನೇ ನಿಷೇಧಿಸಬೇಕು ಎಂಬ ಹೇಳಿಕೆ ನೀಡಿದ್ದಾರೆ.

ಕೇಂದ್ರದಲ್ಲಿಯೂ ಬಿಜೆಪಿ ನೇತೃತ್ವದ ಮೈತ್ರಿಕೂಟವಿದ್ದು, ಇವರು ಚುನಾವಣೆ ವೇಳೆ ತಮಗೆ ಪೂರಕವಾಗುವಂತೆ ಉತ್ತರ ಪ್ರದೇಶ ಸರ್ಕಾರದ ಆಡಳಿತವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಮಾಯಾವತಿ(Mayawati) ಆರೋಪಿಸಿದ್ದಾರೆ. ಈ ಸಂಬಂಧ ಚುನಾವಣಾ ಆಯೋಗ(Election Commission)ಕ್ಕೆ ಪತ್ರ ಬರೆಯುವುದಾಗಿ ತಿಳಿಸಿದ ಅವರು, ಮಾಧ್ಯಮಗಳು ಹಾಗೂ ಇತರ ಸಂಸ್ಥೆಗಳು ನಡೆಸುವ  ಚುನಾವಣಾ ಪೂರ್ವ ಸಮೀಕ್ಷೆಯನ್ನು ಚುನಾವಣೆ ನಡೆಯುವ 6 ತಿಂಗಳು ಮೊದಲೇ ನಿಷೇಧಿಸುವಂತೆ ಮನವಿ ಮಾಡಲಾಗುವುದು ಇದರಿಂದ ಚುನಾವಣೆಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಹೇಳಿದರು.

ಉ.ಪ್ರ.ದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ? ಸಮೀಕ್ಷೆ ಭವಿಷ್ಯ

ಕಾಂಶಿರಾಮ್‌ ಸ್ಮಾರಕ ಸ್ಥಳದಲ್ಲಿ ನಡೆದ ಬಹುಜನ ಸಮಾಜವಾದಿ ಪಕ್ಷ(BSP)ದ ಸಂಸ್ಥಾಪಕ ಕಾಂಶಿ ರಾಮ್‌ ಅವರ 15ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾಯಾವತಿ  ಮಾತನಾಡುತ್ತಿದ್ದರು.  ದಲಿತ ನಾಯಕ ಕಾಂಶಿರಾಮ್‌(Kanshiram) ಅವರಿಗೆ ಭಾರತರತ್ನ(Bharat Ratna) ನೀಡಬೇಕು ಎಂದು ಮಾಯಾವತಿ ಇದೇ ವೇಳೆ ತಿಳಿಸಿದರು.

ಉತ್ತರಪ್ರದೇಶದ ಜನ ರಾಜ್ಯದಲ್ಲಿ ಅಧಿಕಾರವನ್ನು ಬದಲಾಯಿಸಬೇಕೆನ್ನುವ ಯೋಚನೆಯಲ್ಲಿದ್ದಾರೆ. ಚುನಾವಣಾ ಪೂರ್ವ ಸಮೀಕ್ಷೆ ನಡೆಸುವುದನ್ನು ನಿಷೇಧಿಸುವಂತೆ ಶೀಘ್ರದಲ್ಲಿಯೇ ಚುನಾವಣಾ ಆಯೋಗಕ್ಕೆ ನಾನು ಪತ್ರ ಬರೆಯುತ್ತೇನೆ. ನಿಮಗೂ ತಿಳಿದಿರಬಹುದು. ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದ ವೇಳೆ ಸಮೀಕ್ಷೆಗಳು ಮಮತಾ ಬ್ಯಾನರ್ಜಿ( Mamata Banerjee) ಸೋಲುತ್ತಿದ್ದಾರೆ ಎಂದು ತಿಳಿಸಿದ್ದವು. ಆದರೆ ಫಲಿತಾಂಶದ ವೇಳೆ ಅದು ಸಂಪೂರ್ಣ ವಿರುದ್ಧವಾಗಿತ್ತು. ಮಮತಾ ಭಾರಿ ಬಹುಮತದೊಂದಿಗೆ ಚುನಾವಣೆಯಲ್ಲಿ ಗೆದ್ದು ಬೀಗಿದರು.  ಅಲ್ಲಿ ಅಧಿಕಾರ ಹಿಡಿಯಬೇಕೆಂದು ಬಯಸಿದ್ದ ಕೆಲವರ ಕನಸುಗಳು ಭಗ್ನಗೊಂಡವು. ಹೀಗಾಗಿ ಸಮೀಕ್ಷೆಯ ಮೂಲಕ ಜನರ ದಾರಿ ತಪ್ಪಿಸಬಾರದು ಎಂದು ಮಾಯಾವತಿ ಹೇಳಿದರು.

ಒಂದು ರಾಜಕೀಯ ಪಕ್ಷ ತನ್ನ ಗಿಮಿಕ್‌ಗಳು ಯಾವುದು ನಡೆಯದಿದ್ದಾಗ, ಅಂತಿಮವಾಗಿ ಚುನಾವಣೆಗೆ  ಹಿಂದೂ ಮುಸ್ಲಿಂ ಬಣ್ಣವನ್ನು  ನೀಡುತ್ತದೆ ಹಾಗೂ ಸಂಪೂರ್ಣ ರಾಜಕೀಯ ಲಾಭ ಪಡೆಯಲು ಮುಂದಾಗುತ್ತದೆ. ಇದೆಲ್ಲವನ್ನು ಗಮನದಲ್ಲಿರಿಸಿಕೊಂಡು ಚುನಾವಣೆಗೆ ಸ್ಪರ್ಧಿಸಬೇಕಾಗಿದೆ ಎಂದು ಆಡಳಿತದಲ್ಲಿರುವ ಬಿಜೆಪಿ(BJP) ವಿರುದ್ಧ ಪರೋಕ್ಷವಾಗಿ ಮಾಯಾವತಿ ವಾಗ್ದಾಳಿ ನಡೆಸಿದರು. 

ಅಯೋಧ್ಯೆಯ ರಾಮ ಮಂದಿರ: ಉತ್ತರ ಪ್ರದೇಶ ಚುನಾವಣೆ ದಿಕ್ಕನ್ನೇ ಬದಲಾಯಿಸುತ್ತಾ?

ಕೆಲವೊಂದು ಸಣ್ಣ ಪಕ್ಷಗಳಿವೆ. ಅವುಗಳಿಗೆ ಚುನಾವಣೆಯಲ್ಲಿ ಗೆಲ್ಲುವ ಉದ್ದೇಶವಿಲ್ಲ. ಆದಾಗ್ಯೂ ಅವರು ಚುನಾವಣೆಯಲ್ಲಿ ಏಕಾಂಗಿಯಾಗಿ ಅಥವಾ ಜಂಟಿಯಾಗಿ ಸ್ಪರ್ಧಿಸುತ್ತವೆ. ಇವು ಅಧಿಕಾರದಲ್ಲಿರುವ ಪಕ್ಷಗಳಿಗೆ ತೆರೆಮರೆಯಲ್ಲಿ ಸಹಾಯ ಮಾಡುತ್ತವೆ ಎಂದು ಆರೋಪಿಸಿದ ಮಾಯಾವತಿ ಇಂತಹ ಪಕ್ಷಗಳ ಪ್ರಭಾವಕ್ಕೆ ಜನ ಒಳಗಾಗಬಾರದು ಎಂದು ಹೇಳಿದರು.

ಮುಂದಿನ ವರ್ಷ ಗೋವಾ, ಮಣಿಪುರ, ಉತ್ತರಪ್ರದೇಶ(Uttara Pradesh), ಪಂಜಾಬ್, ಗುಜರಾತ್‌(Gujarath), ಹಿಮಾಚಲ ಪ್ರದೇಶ, ಉತ್ತರಾಖಂಡ್‌(Uttarakhand)ನ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅದರಲ್ಲೂ ಮುಖ್ಯವಾಗಿ ದೇಶದ ರಾಜಕೀಯ ಚಿತ್ರಣವನ್ನೇ ಬದಲಿಸುವ ಅತೀ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ, ದೊಡ್ಡ ರಾಜ್ಯವಾಗಿರುವ ಉತ್ತರಪ್ರದೇಶದಲ್ಲಿ ರಾಜಕೀಯ ಚಟುವಟಿಕೆಗಳು ಗರಿ ಗೆದರಿವೆ.  ಮುಂಬರುವ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೇರುವ ಕನಸನ್ನು ಯೋಗಿ ಆದಿತ್ಯನಾಥ್‌(Yogi Adityanath) ನೇತೃತ್ವದ ಆಡಳಿತರೂಢ ಪಕ್ಷ ಕಾಣುತ್ತಿದ್ದರೆ, ಇತ್ತ ಸಮಾಜವಾದಿ, ಬಹುಜನ ಸಮಾಜವಾದಿ ಪಕ್ಷಗಳು ಈ ಬಾರಿಯಾದರೂ ಮತ್ತೆ ಅಧಿಕಾರದ ಗದ್ದುಗೆ ಹಿಡಿಯುವ ಹುಮ್ಮಸ್ಸಿನಲ್ಲಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತಿರುಪತಿ ತಿಮ್ಮಪ್ಪನಿಗೆ ಅಂಗವಸ್ತ್ರದ ಮೋಸ, ಪ್ಲಾಸ್ಟಿಕ್‌ ಸಿಲ್ಕ್‌ ಕೊಟ್ಟು 55 ಕೋಟಿ ಯಾಮಾರಿಸಿದ ಕಂಪನಿ!
ರಾಷ್ಟ್ರಪತಿಗಳು ಪದಕ ನೀಡುತ್ತಿದ್ದಂತೆ ಕೊರಳಿನಿಂದ ಕಿತ್ತೆಸೆದ ಬಾಲಕ! ವೈರಲ್ ವಿಡಿಯೋ ಹಿಂದಿನ ಸತ್ಯವೇನು?