ಇಂಥಾ ಮಕ್ಕಳು ಬೇಕಾ? ಅಪ್ಪ ಐ ಫೋನ್ ಕೊಡ್ಸಿಲ್ಲ ಅಂತ 18ರ ಬಾಲಕ ಆತ್ಮಹತ್ಯೆ

By Anusha Kb  |  First Published Jul 11, 2024, 12:04 PM IST

18 ವರ್ಷದ ಬಾಲಕನೋರ್ವ ಅಪ್ಪ ಐಫೋನ್ ಕೊಡಿಸುವುದಕ್ಕೆ ನಿರಾಕರಿಸಿದರು ಎಂದು ಹೇಳಿ ಸಾವಿಗೆ ಶರಣಾಗಿದ್ದಾನೆ. ಮಹಾರಾಷ್ಟ್ರದ ಥಾಣೆಯ ಕಮೊಥೆ ಪ್ರದೇಶದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.


ಥಾಣೆ: ಇತ್ತೀಚೆಗೆ ಪೋಷಕರು ಮಕ್ಕಳ ಆಸೆ ಈಡೇರಿಸುವುದಕ್ಕಾಗಿ ಇನ್ನಿಲ್ಲದ ಹರಸಾಹಸ ಮಾಡುತ್ತಾರೆ. ಶಿಕ್ಷಣವೂ ವ್ಯವಹಾರವಾಗಿರುವ ಇಂದಿನ ದಿನಗಳಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವುದಕ್ಕೂ ಲಕ್ಷ ಲಕ್ಷ ವೆಚ್ಚ ಮಾಡಬೇಕಾಗುತ್ತದೆ. ಹೀಗಾಗಿ ಮಕ್ಕಳಿಗೊಂದು ಬದುಕಿನ ದಾರಿ ತೋರಿಸುವುದಕ್ಕಾಗಿ, ಮಕ್ಕಳ ಶಿಕ್ಷಣ ಅವರ ಆಸೆ ಈಡೇರಿಸುವುದಕ್ಕಾಗಿ ಹಗಲು ರಾತ್ರಿ ಎನ್ನದೇ ದುಡಿಯುತ್ತಿದ್ದಾರೆ. ಆದರೆ ಮಕ್ಕಳು ಮಾತ್ರ ಇದ್ಯಾವುದನ್ನು ಅರ್ಥ ಮಾಡಿಕೊಳ್ಳದೇ ಸಣ್ಣ ಪುಟ್ಟ ಕಾರಣಕ್ಕೆ ಸಾವಿನ ಹಾದಿ ಹಿಡಿಯುತ್ತಿದ್ದು, ಪೋಷಕರನ್ನು ಧೃತಿಗೆಡುವಂತೆ ಮಾಡಿದೆ. 

ಅದೇ ರೀತಿ ಈಗ ಇಲ್ಲೊಂದು ಕಡೆ 18 ವರ್ಷದ ಬಾಲಕನೋರ್ವ ಅಪ್ಪ ಐಫೋನ್ ಕೊಡಿಸುವುದಕ್ಕೆ ನಿರಾಕರಿಸಿದರು ಎಂದು ಹೇಳಿ ಸಾವಿಗೆ ಶರಣಾಗಿದ್ದಾನೆ. ಮಹಾರಾಷ್ಟ್ರದ ಥಾಣೆಯ ಕಮೊಥೆ ಪ್ರದೇಶದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.  ಮೃತ ಬಾಲಕನನ್ನು 18 ವರ್ಷದ ಸಂಜಯ್ ವರ್ಮಾ ಎಂದು ಗುರುತಿಸಲಾಗಿದೆ. ಬಾಲಕನ ತಂದೆ ನೀಡಿದ ದೂರಿನ ಪ್ರಕಾರ, ಈ ಬಾಲಕ ಒಂದೂವರೆ ಲಕ್ಷ ರೂಪಾಯಿ ಮೊತ್ತದ ಐಫೋನ್ ಕೊಡಿಸು ಎಂದು ಅಪ್ಪನಿಗೆ ದುಂಬಾಲು ಬಿದ್ದಿದ್ದ., ಆದರೆ ಓದೋ ಮಕ್ಕಳಿಗೆ ಇಷ್ಟೊಂದು ದೊಡ್ಡ ಮೊತ್ತದ ಫೋನ್ ಏಕೆ ಎಂದು ಅಪ್ಪ ಕಡಿಮೆ ಬೆಲೆಯ ವಿವೋ ಫೋನ್ ತೆಗೆದುಕೊಂಡು ಬಂದಿದ್ದಾರೆ. ಇದರಿಂದ ಅಸಮಾಧಾನಗೊಂಡ ಬಾಲಕ ಸಾವಿಗೆ ಶರಣಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಜುಲೈ 8ರ ರಾತ್ರಿ 11.30ರ ಸುಮಾರಿಗೆ ಈ ಘಟನೆ ನಡೆದಿದೆ. 

Tap to resize

Latest Videos

ಪೋಷಕರ ವಿಚ್ಛೇದನದಿಂದ ಖಿನ್ನತೆ : 7ನೇ ತರಗತಿ ಬಾಲಕ ಸಾವಿಗೆ ಶರಣು

ಎಂಥಾ ವಿಪರ್ಯಾಸ ನೋಡಿ,  ಅಪ್ಪನ ಆರ್ಥಿಕ ಸ್ಥಿತಿ ಹೇಗಿತ್ತೋ ಯಾರಿಗೆ ಗೊತ್ತು. ಒಂದೂವರೆ ಲಕ್ಷದ ಮೊಬೈಲ್ ಫೋನ್ ಎಂದರೆ ಮಧ್ಯಮ ವರ್ಗದ ಕುಟುಂಬಕ್ಕೆ ಅದು ದೊಡ್ಡದಾದ ಮೊತ್ತವೇ. ಬೆಂಗಳೂರಿನಂತಹ ಮಹಾನಗರಿಯಲ್ಲಿ ಅದು ಕೇವಲ ಎಲ್‌ಕೆಜಿಯ ಶುಲ್ಕವಾದರೆ, ಹಳ್ಳಿಗಳಲ್ಲಿ ಅಷ್ಟೊಂದು ದೊಡ್ಡ ಮೊತ್ತದಲ್ಲಿ ಇಡೀ ವರ್ಷದ ಖರ್ಚು ಕಳೆಯುವುದು. ಅಪ್ಪನಿಗೆ ಒಂದೊಂದು ರೂಪಾಯಿಗಿರುವ ಬೆಲೆಯ ಅರಿವಿದೆ. ಇದೇ ಕಾರಣಕ್ಕೆ ಅಷ್ಟೊಂದು ದುಬಾರಿ ಫೋನ್‌ಗೆ ನೋ ಹೇಳಿದ್ದಾರೆ. ಆದರೆ ಅವಿವೇಕಿ ಮಗ ಸಾವಿನ ದಾರಿ ಹೇಳಿದ್ದಾನೆ. 

ಅದೊಂದು ಕಾಲವಿತ್ತು, ಹೊಡೆದು ಹೊಡೆದು ಬೆತ್ತ ಹುಡಿಯಾದರೂ, ಬೆನ್ನಲ್ಲಿ ದೊಡ್ಡದಾದ ಬಾಸುಂಡೆ ಬಂದರೂ ಯಾವ ಮಕ್ಕಳೂ ಕೂಡ ಸಾವಿನ ಹಾದಿ ಹಿಡಿಯುತ್ತಿಲ್ಲ, ಮನೆ ಬಿಟ್ಟು ಹೋಗಿ ತಮ್ಮದೇ ಹಾದಿ ಹಿಡಿಯುತ್ತಿದ್ದರೇ ಹೊರತು ಸಾವಿನ ಕದ ತಟ್ಟುತ್ತಿದ್ದವರು ತೀರಾ ಕಡಿಮೆ. ಆದರೆ ಇತ್ತೀಚೆಗೆ ಸಣ್ಣ ಸಣ್ಣ ಮಕ್ಕಳು ಕೂಡ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಸಂಖ್ಯೆ ಹೆಚ್ಚಾಗುತ್ತಿದೆ. ಅಪ್ಪ ಹೊಡೆದರು, ಅಮ್ಮ ಬೈದರು, ನೆಂಟರು ಹೀಗಳೆದರು, ಫೋನ್ ಕಿತ್ತುಕೊಂಡರು ಅವಮಾನಿಸಿದರು ಎಂಬ ಸಣ್ಣಪುಟ್ಟ ಕಾರಣಗಳ ನೆಪ ಹೇಳಿ ಮಕ್ಕಳು ಸಾವಿನ ಹಾದಿ ಹಿಡಿಯುತ್ತಿರುವುದು ಆಘಾತಕಾರಿ ಘಟನೆಯಾಗಿದೆ. 

ಅಪ್ಪ ಅಮ್ಮ ಇಬ್ಬರೂ ಐಎಎಸ್: ಗಗನಚುಂಬಿ ಕಟ್ಟಡದ 10ನೇ ಮಹಡಿಯಿಂದ ಹಾರಿ ಮಗಳು ಸಾವಿಗೆ ಶರಣು

ಜನರೇಷನ್ ಜೆಡ್ ತಲೆಮಾರಿನ ಇಂದಿನ ಮಕ್ಕಳನ್ನು ನಿರ್ವಹಿಸುವುದು ಸರಿದಾರಿಗೆ ತರುವುದು ಹೇಳಿದ ಮಾತನ್ನು ಕೇಳುವಂತೆ ಮಾಡುವುದು ಕೂಡ ದೊಡ್ಡ ಸವಾಲಿನ ವಿಚಾರವಾಗಿದೆ. ಕೇಳಿದ್ದು ಕೊಡಿಸದೇ ಹೋದರೆ ನಮ್ಮನ್ನೇಕೆ ಹುಟ್ಟಿಸಿದ್ದೀರಿ ಎಂದು ಪೋಷಕರನ್ನೇ ಮಕ್ಕಳು ಪ್ರಶ್ನೆ ಮಾಡುತ್ತಾರೆ. ಇದೇ ಕಾರಣಕ್ಕೆ ಮಕ್ಕಳಿಗೆ ಯಾವ ತಮ್ಮ ಕಷ್ಟಗಳಾವುದನ್ನು ಹೇಳಿಕೊಳ್ಳದೇ ಕಷ್ಟ ತಿಳಿಯದಂತೆ ಇಂದಿನ ಪೋಷಕರು ಮಕ್ಕಳನ್ನು ಸಾಕುತ್ತಿದ್ದಾರೆ. ಜೀವನದ ಬೆಲೆ ಅರಿಯದ ಮಕ್ಕಳು ಸಣ್ಣಪುಟ್ಟ ಮಾತುಗಳನ್ನು ಸಹಿಸುವ ತಾಳ್ಮೆ ಇಲ್ಲದೇ ಸಾವಿನ ಹಾದಿ ಹಿಡಿಯುತ್ತಿದ್ದಾರೆ. ಒಬ್ಬರು ಇಬ್ಬರು ಇರುವ ಇಂದಿನ ವಿಭಕ್ತ ಕುಟುಂಬದಲ್ಲಿ ಇರುವ ಒಬ್ಬನೋ ಒಬ್ಬಳೋ ಸಾವಿನ ಹಾದಿ ಹಿಡಿದರೆ ಪೋಷಕರ ಗತಿ ಏನು? ಈ ಬಗ್ಗೆ ಪೋಷಕರು ಚಿಂತನೆ ನಡೆಸಬೇಕಾಗಿದೆ.  ತಮ್ಮ ಆರ್ಥಿಕ ಸ್ಥಿತಿಯನ್ನು ಮಕ್ಕಳಿಗೆ ಸಮಾಧಾನದಿಂದ ಅರ್ಥ ಮಾಡಿಸಬೇಕಿದೆ. ಜೊತೆಗೆ ಹಾಸಿಗೆ ಇದಷ್ಟೇ ಕಾಲು ಚಾಚಬೇಕು ಎನ್ನುವ ಆರ್ಥಿಕ ಶಿಸ್ತಿನ ಬಗ್ಗೆ ಮಕ್ಕಳಿಗೆ ಹೇಳಿಕೊಡಬೇಕಿದೆ.

click me!