ಭಾರತದ 440 ಜಿಲ್ಲೆಗಳಲ್ಲಿ ಅಂತರ್ಜಲದಲ್ಲಿ ಹೆಚ್ಚಿನ ಮಟ್ಟದ ನೈಟ್ರೇಟ್ ಕಂಡುಬಂದಿದ್ದು, ಕುಡಿಯಲು ಯೋಗ್ಯವಲ್ಲ ಎಂದು ವರದಿಯಾಗಿದೆ. ಮಾದರಿಗಳಲ್ಲಿ 20% ನಷ್ಟು ನೈಟ್ರೇಟ್ ಸಾಂದ್ರತೆಯು ಮಿತಿಗಿಂತ ಹೆಚ್ಚಿದೆ, ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
ನವದೆಹಲಿ (ಜ.2): ಭಾರತದ 440 ಜಿಲ್ಲೆಗಳಲ್ಲಿ ಅಂತರ್ಜಲದಲ್ಲಿ ಹೆಚ್ಚಿನ ಮಟ್ಟದ ನೈಟ್ರೇಟ್ ಕಂಡುಬಂದಿದ್ದು, ಇದು ಕುಡಿಯಲು ಯೋಗ್ಯವಲ್ಲ ಎಂದು ಕೇಂದ್ರೀಯ ಅಂತರ್ಜಲ ಮಂಡಳಿ (ಸಿಜಿಡಬ್ಲ್ಯುಬಿ) ವರದಿಯಲ್ಲಿ ಈ ಮಾಹಿತಿ ನೀಡಿದೆ. ಸಂಗ್ರಹಿಸಿದ ಮಾದರಿಗಳಲ್ಲಿ 20 ಪ್ರತಿಶತದಷ್ಟು ನೈಟ್ರೇಟ್ ಸಾಂದ್ರತೆಯು ಮಿತಿಗಿಂತ ಹೆಚ್ಚಿದೆ ಎಂದು ಮಂಡಳಿ ಹೇಳಿದೆ. ನೈಟ್ರೇಟ್ ಮಾಲಿನ್ಯವು ಪರಿಸರ ಮತ್ತು ಆರೋಗ್ಯಕ್ಕೆ ಗಂಭೀರ ಪರಿಣಾಮ ಉಂಟುಮಾಡುವುದು ಮಾತ್ರವಲ್ಲದೆ, ಸಾರಜನಕ ಆಧಾರಿತ ರಸಗೊಬ್ಬರಗಳು ಮತ್ತು ಪ್ರಾಣಿಗಳ ತ್ಯಾಜ್ಯವನ್ನು ಬಳಸುವ ಪ್ರದೇಶಗಳಲ್ಲಿ ಇದು ಪರಿಣಾಮ ಬೀರುತ್ತದೆ.
'ವಾರ್ಷಿಕ ಅಂತರ್ಜಲ ಗುಣಮಟ್ಟದ ವರದಿ - 2024'ಯಲ್ಲಿ ಶೇ.9.04 ಮಾದರಿಗಳು ಸುರಕ್ಷಿತ ಮಿತಿಗಿಂತ ಹೆಚ್ಚಿನ 'ಫ್ಲೋರೈಡ್' ಮಟ್ಟವನ್ನು ಹೊಂದಿದ್ದು, ಶೇ. 3.55 ಮಾದರಿಗಳಲ್ಲಿ 'ಆರ್ಸೆನಿಕ್' ಮಾಲಿನ್ಯ ಕಂಡುಬಂದಿದೆ ಎಂದು ಬಹಿರಂಗಪಡಿಸಿದೆ. ಮೇ 2023 ರಲ್ಲಿ ಅಂತರ್ಜಲ ಗುಣಮಟ್ಟವನ್ನು ಪರೀಕ್ಷಿಸಲು ದೇಶಾದ್ಯಂತ ಒಟ್ಟು 15,259 ಮೇಲ್ವಿಚಾರಣಾ ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ. ಇವುಗಳಲ್ಲಿ 25 ಪ್ರತಿಶತ ಬಾವಿಗಳನ್ನು (ಬಿಐಎಸ್ 10500 ಪ್ರಕಾರ ಹೆಚ್ಚಿನ ಅಪಾಯ) ವಿವರವಾಗಿ ಅಧ್ಯಯನ ಮಾಡಲಾಗಿದೆ.
WHO ಮತ್ತು BIS ಮಾನದಂಡಗಳ ಪ್ರಕಾರ ಅಪಾಯಕಾರಿ ಮಟ್ಟ: ಮಾನ್ಸೂನ್ ಮೊದಲು ಮತ್ತು ನಂತರ 4,982 ಸ್ಥಳಗಳಿಂದ ಅಂತರ್ಜಲದ ಮಾದರಿ ಪರೀಕ್ಷೆ ಮಾಡಲಾಗಿದೆ. ಶೇ.20ರಷ್ಟು ನೀರಿನ ಮಾದರಿಗಳಲ್ಲಿ ನೈಟ್ರೇಟ್ ಸಾಂದ್ರತೆಯು ಪ್ರತಿ ಲೀಟರ್‌ಗೆ 45 ಮಿಲಿಗ್ರಾಂ (mg/L) ಮಿತಿಯನ್ನು ಮೀರಿದೆ ಎಂದು ವರದಿ ತಿಳಿಸಿದೆ. ಇದು ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಕುಡಿಯುವ ನೀರಿಗೆ ನಿಗದಿಪಡಿಸಿದ ಮಿತಿಯಾಗಿದೆ.
ಯಾವ ರಾಜ್ಯದಲ್ಲಿ ನೈಟ್ರೇಟ್ ಮಟ್ಟ ಎಷ್ಟಿದೆ?: ರಾಜಸ್ಥಾನ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಶೇಕಡಾ 40 ಕ್ಕಿಂತ ಹೆಚ್ಚು ಮಾದರಿಗಳು ಮಿತಿಗಿಂತ ಹೆಚ್ಚಿನ ನೈಟ್ರೇಟ್ ಹೊಂದಿದ್ದರೆ, ಮಹಾರಾಷ್ಟ್ರದಲ್ಲಿ ಶೇ.35.74 , ತೆಲಂಗಾಣ ಶೇ. 27.48, ಆಂಧ್ರಪ್ರದೇಶ ಶೇ.23.5 ಮತ್ತು ಮಧ್ಯಪ್ರದೇಶದಲ್ಲಿ ಶೇ. 22.58 ಮಾದರಿಗಳು ಕಲುಷಿತವಾಗಿವೆ. ಉತ್ತರ ಪ್ರದೇಶ, ಕೇರಳ, ಜಾರ್ಖಂಡ್ ಮತ್ತು ಬಿಹಾರದಲ್ಲಿ ಕಡಿಮೆ ಶೇಕಡಾವಾರು ಮಾಲಿನ್ಯವಿದೆ. ಅರುಣಾಚಲ ಪ್ರದೇಶ, ಅಸ್ಸಾಂ, ಗೋವಾ, ಮೇಘಾಲಯ, ಮಿಜೋರಾಂ ಮತ್ತು ನಾಗಾಲ್ಯಾಂಡ್‌ನ ಎಲ್ಲಾ ಮಾದರಿಗಳು ಸುರಕ್ಷಿತ ಮಿತಿಯಲ್ಲಿವೆ.
ರಾಜಸ್ಥಾನ, ಮಧ್ಯಪ್ರದೇಶ ಮತ್ತು ಗುಜರಾತ್‌ನಂತಹ ರಾಜ್ಯಗಳಲ್ಲಿ 2015 ರಿಂದ 'ನೈಟ್ರೇಟ್' ಮಟ್ಟವು ಸ್ಥಿರವಾಗಿದೆ ಎಂದು CGWB ಹೇಳಿದೆ. ಆದರೆ, ಉತ್ತರ ಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಹರಿಯಾಣದಲ್ಲಿ 2017 ರಿಂದ 2023 ರವರೆಗೆ ಮಾಲಿನ್ಯದ ಹೆಚ್ಚಳ ಕಂಡುಬಂದಿದೆ.
ಕರ್ನಾಟಕದಲ್ಲಿ ಹೆಚ್ಚಿನ ಫ್ಲೋರೈಡ್ ಕಂಡುಬಂದ 19 ಜಿಲ್ಲೆಗಳು: ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬಿಜಾಪುರ, ಚಿಕ್ಕಬಳ್ಳಾಪುರ, ಚಿತ್ರದುರ್ಗ,ದಾವಣಗೆರೆ, ಧಾರವಾಡ, ಗದಗ, ಗುಲ್ಬರ್ಗ, ಹಾವೇರಿ, ಕೋಲಾರ, ಕೊಪ್ಪಳ, ಮಂಡ್ಯ, ಮೈಸೂರು, ರಾಯಚೂರು, ರಾಮನಗರ, ತುಮಕೂರು, ವಿಜಯನಗರ, ಯಾದಗಿರಿ
ನೈಟ್ರೇಟ್, ಫ್ಲೋರೈಡ್ ಮತ್ತು ಯುರೇನಿಯಂ ಅಂತರ್ಜಲದಲ್ಲಿ ಕರಗುತ್ತವೆ:
- ಅಂತರ್ಜಲದಲ್ಲಿ ಹೆಚ್ಚಿನ ಮಟ್ಟದ ನೈಟ್ರೇಟ್ ಕಂಡುಬಂದಿರುವ ಭಾರತದಲ್ಲಿ 15 ಜಿಲ್ಲೆಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ರಾಜಸ್ಥಾನದ ಬಾರ್ಮರ್, ಜೋಧಪುರ, ವಾರ್ಧಾ, ಬುಲ್ಧಾನ, ಅಮರಾವತಿ, ಮಹಾರಾಷ್ಟ್ರದ ನಾಂದೇಡ್, ಬೀಡ್, ಜಲಗಾಂವ್ ಮತ್ತು ಯವತ್ಮಾಲ್, ರಂಗಾರೆಡ್ಡಿ, ಆದಿಲಾಬಾದ್ ಮತ್ತು ತೆಲಂಗಾಣದ ಸಿದ್ದಿಪೇಟ್, ತಮಿಳುನಾಡಿನ ವಿಲ್ಲುಪುರಂ, ಆಂಧ್ರಪ್ರದೇಶದ ಪಲ್ನಾಡು ಮತ್ತು ಪಂಜಾಬ್‌ನ ಬಟಿಂಡಾ ಸೇರಿವೆ. ಅಂತರ್ಜಲದಲ್ಲಿ ಹೆಚ್ಚುತ್ತಿರುವ ನೈಟ್ರೇಟ್ ಮಟ್ಟಗಳು ಅತಿಯಾದ ನೀರಾವರಿಯ ಪರಿಣಾಮವಾಗಿರಬಹುದು, ಇದು ಮಣ್ಣಿನಲ್ಲಿ ಆಳವಾಗಿ ತಲುಪುವ ರಸಗೊಬ್ಬರಗಳಲ್ಲಿ ಇರುವ ನೈಟ್ರೇಟ್ ಕೂಡ ಆಗಿರಬಹುದು ಎಂದು ವರದಿ ಹೇಳಿದೆ.
- ರಾಜಸ್ಥಾನ, ಹರಿಯಾಣ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 'ಫ್ಲೋರೈಡ್' ಹೆಚ್ಚಿನ ಸಾಂದ್ರತೆಯು ಕಳವಳಕಾರಿ ವಿಷಯವಾಗಿದೆ. ಗಂಗಾ ಮತ್ತು ಬ್ರಹ್ಮಪುತ್ರ ನದಿಗಳ ಬಯಲು ಪ್ರದೇಶದಲ್ಲಿ ಆರ್ಸೆನಿಕ್ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದೆ ಎಂದು ಅದು ಹೇಳಿದೆ. ಈ ರಾಜ್ಯಗಳು ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶ, ಅಸ್ಸಾಂ ಮತ್ತು ಮಣಿಪುರ. ಪಂಜಾಬ್‌ನ ಕೆಲವು ಭಾಗಗಳು ಮತ್ತು ಛತ್ತೀಸ್‌ಗಢದ ರಾಜ್‌ನಂದಗಾಂವ್ ಜಿಲ್ಲೆಯ ನೀರಿನಲ್ಲಿ ಹೆಚ್ಚಿನ ಪ್ರಮಾಣದ ಆರ್ಸೆನಿಕ್ ಕಂಡುಬಂದಿದೆ.
- ವರದಿಯಲ್ಲಿನ ಪ್ರಮುಖ ಕಳವಳವೆಂದರೆ ಹಲವು ಪ್ರದೇಶಗಳಲ್ಲಿ ಹೆಚ್ಚಿನ ಮಟ್ಟದ ಯುರೇನಿಯಂ. ರಾಜಸ್ಥಾನದ ಶೇ.42 ಮತ್ತು ಪಂಜಾಬ್‌ನ ಶೇ.30 ಮಾದರಿಗಳಲ್ಲಿ ಯುರೇನಿಯಂ ಮಾಲಿನ್ಯ ಕಂಡುಬಂದಿದೆ ಎಂದು ವರದಿ ಹೇಳುತ್ತದೆ.
2024ರಲ್ಲಿ ತಿರುಪತಿ ದೇವಸ್ಥಾನಕ್ಕೆ 2.55 ಕೋಟಿ ಭಕ್ತರ ಭೇಟಿ, ಕಾಣಿಕೆ ಹುಂಡಿಯಲ್ಲಿ ಬಿದ್ದ ಹಣವೆಷ್ಟು?
ಈ ಅಂಶಗಳು ನಮ್ಮ ಆರೋಗ್ಯಕ್ಕೆ ಏಕೆ ಅಪಾಯಕಾರಿ?: ಹೆಚ್ಚಿನ 'ನೈಟ್ರೇಟ್' ಮಟ್ಟಗಳು ಶಿಶುಗಳಲ್ಲಿ 'ಬ್ಲೂ ಬೇಬಿ ಸಿಂಡ್ರೋಮ್' ನಂತಹ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಫ್ಲೋರೈಡ್ ಮತ್ತು ಆರ್ಸೆನಿಕ್ ಮಾಲಿನ್ಯಕಾರಕಗಳಿಗೆ ದೀರ್ಘಾವಧಿಯ ಆರೋಗ್ಯ ಪರಿಣಾಮಗಳನ್ನು ಉಂಟುಮಾಡಬಹುದು. ಫ್ಲೋರೈಡ್ ಮಾಲಿನ್ಯವು ಫ್ಲೋರೋಸಿಸ್ಗೆ ಕಾರಣವಾಗಬಹುದು ಮತ್ತು ಆರ್ಸೆನಿಕ್ ಮಾಲಿನ್ಯವು ಕ್ಯಾನ್ಸರ್ ಅಥವಾ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು.
ಮೇಲೆದ್ದು ಬಂದಳಾ ಗುಪ್ತಗಾಮಿನಿ ಸರಸ್ವತಿ: ಜೈಸಲ್ಮೇರ್ ಮರುಭೂಮಿಯಲ್ಲಿ ಉಕ್ಕೆದ್ದು ಹರಿದ ನೀರು
ಯುರೇನಿಯಂಗೆ ಮಿಶ್ರಿತ ನೀರನ್ನು ಕುಡಿಯುವುದರಿಂದ ಮೂತ್ರಪಿಂಡಗಳು ಹಾನಿಗೊಳಗಾಗಬಹುದು. ರಾಜಸ್ಥಾನ, ಗುಜರಾತ್, ಹರಿಯಾಣ, ಪಂಜಾಬ್, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕದ ಭಾಗಗಳಲ್ಲಿ ಅಂತರ್ಜಲದಲ್ಲಿ ಯುರೇನಿಯಂನ ಹೆಚ್ಚಿನ ಸಾಂದ್ರತೆಯು ಕಂಡುಬಂದಿದೆ.