ಸಂತ್ರಸ್ತೆಗೆ ಹಣ ನೀಡಿ ಸೆಟ್ಲ್‌ಮೆಂಟ್: ಕೇರಳದ ಸಿಪಿಐಎಂ ನಾಯಕ ಕೋಡಿಯೇರಿ ಬಾಲಕೃಷ್ಣನ್ ಪುತ್ರನ ವಿರುದ್ಧದ ರೇಪ್ ಕೇಸ್ ರದ್ದು

By Anusha KbFirst Published Sep 30, 2022, 6:48 AM IST
Highlights

ಕೇರಳದ ಪ್ರಭಾವಿ ರಾಜಕೀಯ ನಾಯಕ, ಸಿಪಿಐಎಂ ಮುಖಂಡ ಕೋಡಿಯೇರಿ ಬಾಲಕೃಷ್ಣನ್ ಪುತ್ರನ ವಿರುದ್ಧದ ಅತ್ಯಾಚಾರ ಪ್ರಕರಣವನ್ನು ಬಾಂಬೆ ಹೈಕೋರ್ಟ್ ರದ್ದುಪಡಿಸಿದೆ. ಸಂತ್ರಸ್ತೆ ಹಾಗೂ ಅತ್ಯಾಚಾರ ಪ್ರಕರಣದಿಂದ ಜನಿಸಿದ ಮಗುವಿಗೆ ಜೊತೆಯಾಗಿ 80 ಲಕ್ಷ ರೂ. ಪರಿಹಾರ ನೀಡಿದ ಹಿನ್ನೆಲೆಯಲ್ಲಿ ಕೋಡಿಯೇರಿ ಬಾಲಕೃಷ್ಣನ್ ಪುತ್ರ ಬಿನೋಯ್ ವಿರುದ್ಧದ ಪ್ರಕರಣವನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ. 

ತಿರುವನಂತಪುರಂ/ಬಾಂಬೆ: ಕೇರಳದ ಪ್ರಭಾವಿ ರಾಜಕೀಯ ನಾಯಕ, ಸಿಪಿಐಎಂ ಮುಖಂಡ ಕೋಡಿಯೇರಿ ಬಾಲಕೃಷ್ಣನ್ ಪುತ್ರನ ವಿರುದ್ಧದ ಅತ್ಯಾಚಾರ ಪ್ರಕರಣವನ್ನು ಬಾಂಬೆ ಹೈಕೋರ್ಟ್ ರದ್ದುಪಡಿಸಿದೆ. ಸಂತ್ರಸ್ತೆ ಹಾಗೂ ಅತ್ಯಾಚಾರ ಪ್ರಕರಣದಿಂದ ಜನಿಸಿದ ಮಗುವಿಗೆ ಜೊತೆಯಾಗಿ 80 ಲಕ್ಷ ರೂ. ಪರಿಹಾರ ನೀಡಿದ ಹಿನ್ನೆಲೆಯಲ್ಲಿ ಕೋಡಿಯೇರಿ ಬಾಲಕೃಷ್ಣನ್ ಪುತ್ರ ಬಿನೋಯ್ ವಿರುದ್ಧದ ಪ್ರಕರಣವನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ. 

ನ್ಯಾಯಮೂರ್ತಿ ಆರ್‌.ಪಿ ಮೊಹಿತೆದೆರೆ ( R.P. Mohitedere) ಹಾಗೂ ಎಸ್‌. ಎಂ. ಮೋದಕ್ (S.M. Modak) ಅವರಿದ್ದ ಬಾಂಬೆ ಹೈಕೋರ್ಟ್ ವಿಭಾಗೀಯ ಪೀಠ ಸೆಪ್ಟೆಂಬರ್ 27 ರಂದು ಈ ತೀರ್ಪು ನೀಡಿದೆ. ಬಿನೋಯ್ ಕೊಡಿಯೇರಿ 'ತಾನು 80 ಲಕ್ಷ ಹಣವನ್ನು ಆಕೆಗೆ ಪರಿಹಾರವಾಗಿ ಈಗಾಗಲೇ ನೀಡಿದ್ದೇನೆ. ಹೀಗಾಗಿ ಆಕೆ ತನ್ನ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಲು ನಿರ್ಧರಿಸಿದ್ದಾಳೆ ಎಂದು ಕೋರ್ಟ್‌ಗೆ ತಿಳಿಸಿದ ಬಳಿಕ ಬಾಂಬೆ ಹೈಕೋರ್ಟ್ ಈ ತೀರ್ಪು ನೀಡಿದೆ. 

PFIಗೆ ಮತ್ತೊಂದು ಸ್ಟ್ರೋಕ್, KSRTCಗೆ ಆದ 5.20 ಕೋಟಿ ರೂ ನಷ್ಟ ಭರಿಸುವಂತೆ ಹೈಕೋರ್ಟ್ ತಾಕೀತು!

ಏನಿದು ಪ್ರಕರಣ

ಆರೋಪಿ ಬಿನೋಯ್ ಕೊಡಿಯೇರಿ ( Binoy Kodiyeri), ಮದುವೆಯ ಭರವಸೆ ನೀಡಿ ಬಹಳ ಕಾಲದವರೆಗೆ ನನ್ನ ಜೊತೆ ಸಂಬಂಧದಲ್ಲಿದ್ದು(Relationship) ಬಳಿಕ ತನಗೆ ಮೋಸ ಮಾಡಿದ್ದಲ್ಲದೇ ತನ್ನ ಮೇಲೆ ದಬ್ಬಾಳಿಕೆ ಮಾಡಿದ್ದಾನೆ. ಈ ಸಂಬಂಧದಿಂದ ತನಗೆ ಮಗು ಕೂಡ ಜನಿಸಿದೆ. ಆದರೆ 2018 ರ ನಂತರ ಬಿನೋಯ್ ತನ್ನನ್ನು ಹಾಗೂ ಮಗುವನ್ನು ತ್ಯಜಿಸಿ ಹೋಗಿದ್ದು, ಯಾವುದೇ ಪರಿಹಾರವನ್ನು ಕೂಡ ನೀಡಿಲ್ಲ ಎಂದು 33 ವರ್ಷದ ಮಹಿಳೆ ಕೋರ್ಟ್ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಬಿನೋಯ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ಅಡಿ (ಅತ್ಯಾಚಾರಕ್ಕೆ ಶಿಕ್ಷೆ), 420 (ಮೋಸ ಹಾಗೂ ಅಪ್ರಾಮಾಣಿಕವಾಗಿ ಆಸ್ತಿಯ ವಿತರಣೆ), 506 (ಅಪರಾಧ ಬೆದರಿಕೆಗೆ ಶಿಕ್ಷೆ) ಅಡಿ ಎಫ್‌ಐಆರ್ ದಾಖಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 3 2019ರಂದು ದಿನ್ದೊಶಿ ಸೆಷನ್ ಕೋರ್ಟ್ (Dindoshi sessions court) 25 ಸಾವಿರ ರೂಪಾಯಿಯ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತದ ಇಬ್ಬರು ಅಥವಾ ಒಬ್ಬರ ಶ್ಯೂರಿಟಿ ಪಡೆದು, ಬಿನೋಯ್ ಕೊಡಿಯೇರಿಗೆ ನಿರೀಕ್ಷಣಾ ಜಾಮೀನು ನೀಡಿತ್ತು ಹಾಗೂ ಪಿತೃತ್ವ ಪರೀಕ್ಷೆಗಾಗಿ (paternity test) ತನ್ನ ರಕ್ತದ ಮಾದರಿಯನ್ನು ಒಶಿವರ ಪೊಲೀಸ್ ಠಾಣೆಗೆ ನೀಡುವಂತೆ ಆದೇಶಿಸಿತ್ತು. ಅಲ್ಲದೇ ನ್ಯಾಯಾಧೀಶ ಎಂ.ಹೆಚ್. ಶೇಕ್ ಅವರು ಬಿನೋಯ್‌ಗೆ ಪ್ರತಿ ತಿಂಗಳು ಒಶಿವಾರಾ ಪೊಲೀಸ್ ಠಾಣೆಗೆ ಬಂದು ಹಾಜರಾಗುಂತೆ ಹೇಳಿತ್ತು. ಅಲ್ಲದೇ ದೇಶ ಬಿಟ್ಟು ಹೋಗದಂತೆ, ಹಾಗೂ ಸಂತಸ್ತೆಗೆ ಬೆದರಿಕೆ ಒಡ್ಡದಂತೆ ಹಾಗೂ ಸಾಕ್ಷ್ಯ ನಾಶ ಪಡಿಸದಂತೆ ಆದೇಶಿಸಿತ್ತು. 

ಪತಿಯಿಂದ ದೂರವಾದ ಮಹಿಳೆಯ ಗರ್ಭಪಾತಕ್ಕೆ ಗಂಡನ ಒಪ್ಪಿಗೆ ಅಗತ್ಯವಿಲ್ಲ; ಕೇರಳ ಹೈಕೋರ್ಟ್

ಆದರೆ ಈಗ ಈ ಬಗ್ಗೆ ಬಾಂಬೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ಬಿನೋಯ್ ಪರ ವಕೀಲರು ಬಿನೋಯ್ ಸಂತ್ರಸ್ತೆಗೆ 80 ಲಕ್ಷ ಪರಿಹಾರ ನೀಡಲು ಒಪ್ಪಿ ಪ್ರಕರಣವನ್ನು ಅಂತ್ಯಗೊಳಿಸಲು ಸಂತ್ರಸ್ತೆಯ ಬಳಿ ಕೇಳಿದ್ದು, ಇದಕ್ಕೆ ಸಂತ್ರಸ್ತೆಯೂ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ವಜಾಗೊಳಿಸಲಾಗಿದೆ.

2008ರಲ್ಲಿ ದುಬೈನಲ್ಲಿ ಡಾನ್ಸ್ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ್ ಮೂಲದ ಮಹಿಳೆ ಜೊತೆ ಬಿನೋಯ್‌ಗೆ ಸ್ನೇಹ ಬೆಳೆದಿತ್ತು. ನಂತರ ಇಬ್ಬರು ಆಪ್ತರಾಗಿದ್ದು, ಬಿನೋಯ್ ಮದುವೆಯ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿದ್ದ. ಇದರ ಪರಿಣಾಮ ಮಗುವೂ ಜನಿಸಿದ್ದು ಮಗು ತಾಯಿಯೊಂದಿಗೆ ಇದೆ. ಮಗುವಿನ ಆರೈಕೆಗೆ 2015ರವರೆಗೂ ಆತ ಹಣ ಕಳುಹಿಸಿದ್ದ ಎಂದು ಮಹಿಳೆ ಕೋರ್ಟ್‌ಗೆ ಸಲ್ಲಿಸಿದ್ದ ಮೂಲ ಅರ್ಜಿಯಲ್ಲಿದೆ. ಇದಾದ ಬಳಿಕ 2019ರಲ್ಲಿ ಮಹಿಳೆ ಬಿನೋಯ್ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದರು. 
 

click me!