ಮಾತಿನ ಭರದಲ್ಲಿ ಏನೆಲ್ಲಾ ಮಾತನಾಡಬೇಡಿ, ಮಾಧ್ಯಮ ವಕ್ತಾರರಿಗೆ ಬಿಜೆಪಿಯ ಹೊಸ ನಿಯಮ!

By Santosh NaikFirst Published Jun 7, 2022, 11:00 PM IST
Highlights

ನೂಪುರ್ ಶರ್ಮಾ ಅವರು ಹೇಳಿದ ಮಾತುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಾದ ಎಬ್ಬಿಸಿದ ನಡುವೆ ಬಿಜೆಪಿ ತನ್ನ ಅಧಿಕೃತ ಮಾಧ್ಯಮ ವಕ್ತಾರರು ಹಾಗೂ ಟಿವಿ ಪ್ಯಾನೆಲಿಸ್ಟ್ ಗಳಿಗೆ ಹೊಸ ನಿಯಮವನ್ನು ರೂಪಿಸಿದೆ. ಟಿವಿ ಶೋ ಗಳಿಗೆ ವಕ್ತಾರರನ್ನು ನೇಮಕ ಮಾಡುವ ಹೊಣೆ ಇನ್ನು ಮುಂದೆ ಸ್ಥಳೀಯ ಬಿಜೆಪಿ ಮೀಡಿಯಾ ಸೆಲ್ ಗೆ ಇರಲಿದೆ.
 

ನವದೆಹಲಿ (ಜೂ. 7): ರಾಷ್ಟ್ರೀಯ ಟಿವಿಯಲ್ಲಿ (National Tv) ನಡೆದ ಚರ್ಚೆಯ ವೇಳೆ ಬಿಜೆಪಿಯ ಮಾಜಿ ವಕ್ತಾರೆಯಾಗಿದ್ದ ನೂಪುರ್ ಶರ್ಮ (Nupur Sharma) , ಪ್ರವಾದಿ ಮೊಹಮದ್ ಪೈಗಂಬರ್  (prophet muhammad paigambar) ಕುರಿತಾಗಿ ಮಾತನಾಡಿದ್ದ ವಿಚಾರವೀಗ ಅಂತಾರಾಷ್ಟ್ರೀಯ ವಿವಾದವಾಗಿ ಮಾರ್ಪಟ್ಟಿದೆ. ಇದರ ಬೆನ್ನಲ್ಲಿಯೇ, ಟಿವಿ ಶೋಗಳಲ್ಲಿ ಭಾಗಿಯಾಗುವ ತನ್ನ ವಕ್ತಾರರು ಹಾಗೂ ಪ್ಯಾನಲಿಸ್ಟ್ ಗಳಿಗೆ ಪಕ್ಷ ಹೊಸ ನಿಯಮಗಳನ್ನು ರೂಪಿಸಿದೆ.

ನೂಪುರ್ ಶರ್ಮಾ ಬಿಕ್ಕಟ್ಟಿನ ನಂತರದ ಹೊಸ ಆದೇಶದ ಪ್ರಕಾರ, ಅಧಿಕೃತ ವಕ್ತಾರರು (national spokesperson) ಮತ್ತು ಪ್ಯಾನೆಲಿಸ್ಟ್‌ಗಳಿಗೆ ಮಾತ್ರ ಈಗ ಟಿವಿ ಚರ್ಚೆಗಳಲ್ಲಿ ಕಾಣಿಸಿಕೊಳ್ಳಲು ಅವಕಾಶವಿರುತ್ತದೆ. ಟಿವಿ ಶೋಗಳ ಕಾರ್ಯಕ್ರಮಕ್ಕೆ ವಕ್ತಾರರನ್ನು ನೇಮಕ ಮಾಡುವ ಹೊಣೆ ಇನ್ನು ಮುಂದೆ ಸ್ಥಳೀಯ ಬಿಜೆಪಿ ಮೀಡಿಯಾ ಸೆಲ್ ಗೆ (BJP Media Cell) ಇರಲಿದೆ.
ಟಿವಿಯಲ್ಲಿ ಬರುವ ವಕ್ತಾರರು ಧಾರ್ಮಿಕ ಚಿಹ್ನೆಗಳು, ಧಾರ್ಮಿಕ ವಿಚಾರಗಳ ಬಗ್ಗೆ ಯಾವುದೇ ಕಾರಣಕ್ಕೂ ಮಾತನಾಡಬಾರದು ಎಂದು ಬಿಜೆಪಿ ಹೇಳಿದೆ. 'ಸಂಯಮದ ಭಾಷೆ ಬಳಸಿ. ಸಿಟ್ಟಾಗಬೇಡಿ ಮತ್ತು ಉದ್ರೇಕಗೊಳ್ಳಬೇಡಿ. ಯಾರ ಪ್ರಚೋದನೆಯಿಂದಲೂ ಪಕ್ಷದ ಸಿದ್ಧಾಂತ ಮತ್ತು ತತ್ವಗಳನ್ನು ಉಲ್ಲಂಘಿಸಬೇಡಿ' ಇವು ಕೆಲವು ಹೊಸ ನಿಯಮಗಳಾಗಿವೆ ಎಂದು ಮೂಲಗಳು ತಿಳಿಸಿವೆ.

ಚರ್ಚಾ ಕಾರ್ಯಕ್ರಗಳಿಗೆ ಹೋಗುವ ಮೊದಲು ವಿಷಯದ ಬಗ್ಗೆ ತಿಳಿದುಕೊಳ್ಳಲು ಪ್ರತಿನಿಧಿಗಳಿಗೆ ಸಲಹೆ ನೀಡಲಾಗಿದೆ. "ಚರ್ಚೆಗಳಿಗೆ ಸಿದ್ಧರಾಗಿ ಮತ್ತು ಅದರ ಬಗ್ಗೆ ಪಕ್ಷದ ಮಾರ್ಗ, ಪಕ್ಷದ ಸಿದ್ಧಾಂತಗಳ ಬಗ್ಗೆ ಮೊದಲೇ ತಿಳಿದುಕೊಂಡಿರಿ. ಆಯಾ ವಿವಾದಗಳು, ವಿಚಾರಗಳ ಬಗ್ಗೆ ಪಕ್ಷದ ನಿಲುವಿನ ಬಗ್ಗೆ ಸೂಕ್ತ ಮಾಹಿತಿ ಇರಲಿ' ಎನ್ನುವ ಸೂಚನೆಗಳನ್ನು ವಕ್ತಾರರಿಗೆ ನೀಡಲಾಗಿದೆ.
ನಿಯಮಗಳ ಪ್ರಕಾರ, ವಕ್ತಾರರು ಪಕ್ಷದ ಕಾರ್ಯಸೂಚಿಯಿಂದ ವಿಮುಖರಾಗಬಾರದು ಮತ್ತು ಯಾರಿಂದಲೂ ಸಿಕ್ಕಿಬೀಳದಂತೆ ಎಚ್ಚರಿಕೆ ವಹಿಸಬೇಕು. ಕಾರ್ಯಕ್ರಮಗಳಲ್ಲಿ ಬಡವರ ಕಲ್ಯಾಣಕ್ಕಾಗಿ ಮಾಡಿರುವ ಕೆಲಸಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸುವತ್ತ ಗಮನ ಹರಿಸಬೇಕು.

ಈಗ ಅಮಾನತುಗೊಂಡಿರುವ ಅದರ ವಕ್ತಾರೆ ನೂಪುರ್ ಶರ್ಮಾ ಅವರ ಮಾತುಗಳು ಇತರ ದೇಶಗಳಿಂದ ಟೀಕೆಗೆ ಗುರಿಯಾದಾಗಿನಿಂದ ಭಾರತೀಯ ಜನತಾ ಪಕ್ಷವು ಈ ವಿವಾದವನ್ನು ತಿಳಿ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ. ಪಕ್ಷವು ಎಲ್ಲಾ ಧರ್ಮವನ್ನು ಗೌರವಿಸುತ್ತದೆ ಎಂದು ಹೇಳುವ ಮೂಲಕ  ವಕ್ತಾರರು ನೀಡುವ ವೈಯಕ್ತಿಕ ಹೇಳಿಕೆಗಳಿಂದ ದೂರವಿದೆ. ನೂಪುರ್ ಶರ್ಮಾ ಅವರನ್ನು ಅಮಾನತುಗೊಳಿಸಿದ್ದರೆ, ಮತ್ತೊಬ್ಬ ವಕ್ತಾರ ನವೀನ್ ಕುಮಾರ್ ಜಿಂದಾಲ್ ಅವರನ್ನು ಪ್ರವಾದಿ ಮೊಹಮ್ಮದ್ ಕುರಿತು ಹೇಳಿಕೆಗಾಗಿ ಪಕ್ಷದಿಂದ ಹೊರಹಾಕಲಾಗಿದೆ.

ಧಾರ್ಮಿಕ ಸ್ವಾತಂತ್ರ್ಯದ ಕುರಿತು ಭಾರತಕ್ಕೆ ಪಾಠ ಮಾಡಿದ ತಾಲಿಬಾನ್!

ಕತಾರ್, ಕುವೈತ್, ಯುಎಇ, ಪಾಕಿಸ್ತಾನ, ಮಾಲ್ಡೀವ್ಸ್ ಮತ್ತು ಇಂಡೋನೇಷ್ಯಾ ಸೇರಿದಂತೆ ಹಲವು ದೇಶಗಳು ಟಿವಿ ಕಾರ್ಯಕ್ರಮವೊಂದರಲ್ಲಿ ಶರ್ಮಾ ಮಾಡಿದ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿವೆ. #ShameOnBJP ಯಂತಹ ಟ್ವಿಟರ್ ಹ್ಯಾಶ್‌ಟ್ಯಾಗ್‌ಗಳು ಶರ್ಮಾ ಅವರನ್ನು ಅಮಾನತುಗೊಳಿಸಿದ ನಂತರ ಅನೇಕ ಪ್ರಮುಖ ಬಿಜೆಪಿ ಬೆಂಬಲಿಗರೊಂದಿಗೆ ಟ್ರೆಂಡ್ ಆಗಿವೆ, ಅಧಿಕೃತವಾಗಿ ಬಿಜೆಪಿ ಸದಸ್ಯರಲ್ಲದಿದ್ದರೂ, ಅವರನ್ನು ಪಕ್ಷವು 'ಕೈಬಿಡಲಾಗಿದೆ' ಎಂದು ಟೀಕಿಸುತ್ತಿದ್ದಾರೆ ಎಂದು ವರದಿಯಾಗಿದೆ. 

ನಮ್ಮ ಸರ್ಕಾರದ ಧರ್ಮವನ್ನು ನೆನಪಿಸಿದ್ದಕ್ಕೆ ಗಲ್ಫ್ ರಾಷ್ಟ್ರಗಳಿಗೆ ಥ್ಯಾಂಕ್ಸ್ ಎಂದ ಸ್ವರ ಭಾಸ್ಕರ್!

"ಮೂಲತಃ, ಇದು ಅಂತರರಾಷ್ಟ್ರೀಯ ಸಮಸ್ಯೆಯಾಗುವವರೆಗೆ, ನಾವು ಯಾವುದೇ ಕ್ರಮವನ್ನು ತೆಗೆದುಕೊಂಡಿರಲಿಲ್ಲ. ಇದು ಅಮಾನತಿನ ಹಿಂದಿನ ಕಾರಣಗಳಿಗೆ ಸಂಬಂಧಿಸಿದಂತೆ ಅಪ್ರಬುದ್ಧತೆಯನ್ನು ಚಿತ್ರಿಸುತ್ತದೆ ಮತ್ತು ನಮ್ಮ ಮೇಲಿನ ಆಕ್ರೋಶಕ್ಕೆ ಕಾರಣವಾಗುವುದು" ಎಂದು ಬಿಜೆಪಿಯ ಹಿರಿಯ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.

click me!