ಅಕ್ರಮ ವಲಸಿಗರಿಗೆಲ್ಲ ಆಶ್ರಯ ನೀಡುತ್ತಾ ಹೋಗಲು ಭಾರತವೇನು ಧರ್ಮಛತ್ರವೇ?

By Suvarna NewsFirst Published Dec 13, 2019, 5:33 PM IST
Highlights

ಸದ್ಯದ ಕಾನೂನಿನ ಪ್ರಕಾರ ಎಲ್ಲ ಅಕ್ರಮ ವಲಸಿಗರನ್ನೂ ಭಾರತ ಸರ್ಕಾರವು ಅವರ ಮೂಲದೇಶಗಳಾದ ಇಸ್ಲಾಂ ದೇಶಗಳಿಗೆ ಅಟ್ಟಬೇಕು. ಆದರೆ, ಅಲ್ಲಿಗೆ ಮರಳಿ ಹೋದರೆ ಹಿಂದೂಗಳ, ಕ್ರೈಸ್ತರ, ಸಿಖ್ಖರ ಪಾಡೇನಾಗಬಹುದು! ದಶಕಗಳ ಕಾಲ ಭಾರತದಲ್ಲಿ ಜೀವ ಉಳಿಸಿಕೊಂಡಿರುವ ವಲಸಿಗ ಹಿಂದೂ, ಜೈನ, ಬೌದ್ಧ, ಸಿಖ್ಖರನ್ನು ಹಿಂದೂ ಬಹುಸಂಖ್ಯಾತರ ರಾಷ್ಟ್ರವಾದ ಭಾರತವೇ ತ್ಯಜಿಸಿಬಿಟ್ಟರೆ?

1947 ರ ಭಾರತ ವಿಭಜನೆಯ ಕುರಿತು ವಿಶ್ಲೇಷಣೆ ನಡೆಸುವಾಗ ‘ಟೂ ನೇಷನ್‌ ಥಿಯರಿ’ ಉಲ್ಲೇಖವಾಗುತ್ತದೆ. ಆ ಥಿಯರಿಯಲ್ಲಿದ್ದದ್ದು ಎರಡು ವಿಚಾರ - 1.ದೇಶವನ್ನು ವಿಭಜಿಸದೆ ಹಿಂದೂಗಳು ಮತ್ತು ಮುಸಲ್ಮಾನರು ಒಂದೇ ಸಂವಿಧಾನದಡಿ ಜೀವಿಸುವುದು.

ಇಲ್ಲಿ ಬಹುಸಂಖ್ಯಾತರಿಗೆ ಹೆಚ್ಚಿನ ಮಾನ್ಯತೆಯಿರುತ್ತದೆ. 2.ಮೊಹಮ್ಮದ್‌ ಅಲಿ ಜಿನ್ನಾ ಅವರ ಬಯಕೆಯಂತೆ ಭೌಗೋಳಿಕ ವಿಭಜನೆಯೊಂದಿಗೆ ಹಿಂದೂ ಮತ್ತು ಇಸ್ಲಾಂ ರಾಷ್ಟ್ರಗಳ ನಿರ್ಮಾಣ ಮಾಡುವುದು. ನೆಹರು ತಮ್ಮ ಅಧಿಕಾರದಾಹಕ್ಕಾಗಿ ಜಿನ್ನಾರ ಈ ಅವೈಜ್ಞಾನಿಕ ಪ್ರಸ್ತಾವನೆಗೆ ಸಹಿ ಹಾಕಿದರು.

ಪಾಕಿಸ್ತಾನದ ಸೃಷ್ಟಿಗೆ ಕಾರಣ ಮತ್ತು ಆಧಾರ ಇಸ್ಲಾಂ. ಅಲ್ಲಿ ನೆಲೆಸಿರುವ ಹಿಂದೂ, ಇಸಾಯಿ, ಸಿಖ್‌, ಯಹೂದಿ, ಬೌದ್ಧ, ಜೈನರ ಭವಿಷ್ಯದ ಬಗ್ಗೆ ಕಿಂಚಿತ್ತೂ ಆಲೋಚನೆ ಮಾಡದೆ ತಾವು ಭಾರತದ ಪ್ರಧಾನಿಯಾದರೆ ಸಾಕು ಎಂದು ನೆಹರು ಮತ್ತು ಕಾಂಗ್ರೆಸ್‌ ಪಕ್ಷ ಅಂದು ಎಸಗಿದ್ದು ಐತಿಹಾಸಿಕ ಪ್ರಮಾದ. ಆ ಪ್ರಮಾದವನ್ನೀಗ ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಮಸೂದೆ-2019ನ್ನು ಅಂಗೀಕರಿಸುವ ಮೂಲಕ ಸರಿಪಡಿಸಲಾಗುತ್ತಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿವಾದ ಸೃಷ್ಟಿಸಿರುವುದು ಏಕೆ?

ಆದರೆ, ಸ್ವಲ್ಪವೂ ಹಿಂಜರಿಕೆಯಿಲ್ಲದೆ ಟೂ ನೇಷನ್‌ ಥಿಯರಿಯ ಲೇಪವನ್ನು ಕಾಂಗ್ರೆಸ್ಸಿಗರು ಇಂದು ಸಾವರ್ಕರರ ಮುಖಕ್ಕೆ ಒರೆಸುತ್ತಿರುವುದು ವಿಪರ್ಯಾಸವೇ ಸರಿ. ಸಾವರ್ಕರ್‌ ಜನನಕ್ಕಿಂತ ಮುಂಚೆಯೇ ಟೂ ನೇಷನ್‌ ಥಿಯರಿ ಇತ್ತು. ಸಯ್ಯದ್‌ ಅಹಮದ್‌ ಖಾನ್‌ ಎಂಬಾತ 1871ರಲ್ಲೇ ಹಿಂದೂಗಳು ಮತ್ತು ಮುಸಲ್ಮಾನರು ಒಂದೇ ಭಾರತದಲ್ಲಿ ಬದುಕಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಲು ಆರಂಭಿಸಿದ್ದ.

ವಿಶೇಷವೆಂದರೆ ಇಸ್ಲಾಂ ಧರ್ಮದ ಆಧಾರದ ಮೇಲೆ ಪಾಕಿಸ್ತಾನ ಭಾರತದಿಂದ ವಿಭಜಿತವಾಯಿತೇ ವಿನಃ ಧರ್ಮದ ಆಧಾರದ ಮೇಲೆ ಎರಡು ರಾಷ್ಟ್ರಗಳ ನಿರ್ಮಾಣ ಮಾತ್ರ ಆಗಲಿಲ್ಲ. ಭಾರತ ತನ್ನ ಸಂವಿಧಾನದಲ್ಲಿ ಹಿಂದೂ ಧರ್ಮವನ್ನು ಅಳವಡಿಸಿಕೊಳ್ಳದೆ ಜಾತ್ಯತೀತವಾಯಿತು. ಅಲ್ಲದೆ ಅಲ್ಪಸಂಖ್ಯಾತರ ರಕ್ಷಣೆಗೂ ಮುಂದಾಯಿತು.

ವಿಧಿ 14ರ ಅಡಿ ಜಾತಿ, ಮತ, ಪಂಥದ ಆಧಾರದ ಮೇಲೆ ತಾರತಮ್ಯ ಇರಬಾರದೆಂದು ವಿಶೇಷ ಕಾನೂನುಗಳನ್ನು ರೂಪಿಸಿತು. ಸೂಕ್ತ ನಿರ್ಬಂಧಗಳ ಅಡಿಯಲ್ಲಿ, ಅಷ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಮತೀಯ ಹಿಂಸೆಯಿಂದ ನಲುಗಿದ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವವನ್ನು ಕೊಡಬಹುದಾದ ವಿನಾಯಿತಿ ಇದೆ ಎಂಬ ಕಾರಣಕ್ಕೆ ಈಗಿನ ಪೌರತ್ವ ತಿದ್ದುಪಡಿ ಮಸೂದೆಯು ಸಂವಿಧಾನದ ವಿಧಿ 14ನ್ನು ಉಲ್ಲಂಘಿಸುವುದಿಲ್ಲ ಎಂಬುದು ಸರ್ಕಾರದ ವಾದ.

ಅಲ್ಲಿ ಹಿಂದೂಗಳ ಸ್ಥಿತಿ ಇಂದು ಏನಾಗಿದೆ?

ತನ್ನನ್ನು ಅಧಿಕಾರಪೂರ್ವಕವಾಗಿ ಇಸ್ಲಾಂ ರಾಷ್ಟ್ರವೆಂದು ಪ್ರಕಟಿಸಿಕೊಂಡ ಪಶ್ಚಿಮ ಪಾಕಿಸ್ತಾನದಲ್ಲಿ ಹಿಂದೂಗಳು ಮತ್ತಿತರ ಅಲ್ಪಸಂಖ್ಯಾತರ ಪರಿಸ್ಥಿತಿ ಇಂದು ಏನಾಗಿದೆ? ಪೂರ್ವ ಪಾಕಿಸ್ತಾನ ಅರ್ಥಾತ್‌ ಬಾಂಗ್ಲಾದೇಶವು 1971ರಲ್ಲಿ ಭಾರತದ ನೆರವಿನೊಂದಿಗೆ ಪಶ್ಚಿಮ ಪಾಕಿಸ್ತಾನದಿಂದ ವಿಮೋಚನೆಗೊಂಡು 1972ರಲ್ಲಿ ತನ್ನ ಸಂವಿಧಾನವನ್ನು ಸೆಕ್ಯುಲರ್‌ ಎಂದು ಘೋಷಿಸಿಕೊಂಡಿತು. ಆದರೆ 1977ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಸೆಕ್ಯುಲರ್‌ ಪದವನ್ನು ತೆಗೆದುಹಾಕಿತು. 1988ರಲ್ಲಿ ಇಸ್ಲಾಂ ಅನ್ನು ರಾಷ್ಟ್ರದ ಅಧಿಕೃತ ಮತವಾಗಿ ಘೋಷಿಸಿಕೊಂಡಿತು. ಇಂದು ಅಲ್ಲಿಯ ಹಿಂದೂಗಳು ಮತ್ತಿತರ ಅಲ್ಪಸಂಖ್ಯಾತರ ಕಥೆ ಏನಾಗಿದೆ?

ಅಂತಹ ಪೀಡಿತರ, ಅರ್ಥಾತ್‌ ತಮ್ಮ ಧರ್ಮ, ಮತಗಳ ಅನುಸರಣೆಗೆ ರಾಷ್ಟ್ರದ ಅನುಮೋದನೆಯನ್ನು ಪಡೆದೇ ತಮ್ಮ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ಅನುಭವಿಸುತ್ತಿರುವವರನ್ನು ರಕ್ಷಿಸಿ ಅವರಿಗೆ ಆಶ್ರಯ ನೀಡುವುದೇ ಈ ಪೌರತ್ವ ತಿದ್ದುಪಡಿ ಮಸೂದೆಯ ಮೂಲ ಉದ್ದೇಶ.

ರಾಜ್ಯಸಭೆಯಲ್ಲೂ ಪೌರತ್ವ ಮಸೂದೆ ಪಾಸ್, ಯಾವ ಬದಲಾವಣೆ ಆಗಲಿದೆ?

ಹಿಂದೂಗಳ ಮೇಲಿನ ದಬ್ಬಾಳಿಕೆಗೆ ಸಾಕ್ಷ್ಯ

ಅಷ್ಘಾನಿಸ್ತಾನದಲ್ಲಿ ಹಿಂದೂಗಳ ಸಂಖ್ಯೆ 1970ರ ದಶಕದಲ್ಲಿ 7,70,000 ಇದ್ದುದು 1990ರಲ್ಲಿ 7000ಕ್ಕೆ ಇಳಿದಿದೆ. ಪಾಕಿಸ್ತಾನದಲ್ಲಿ 1947ರಲ್ಲಿ ಶೇ.15ರಷ್ಟುಹಿಂದೂಗಳಿದ್ದರು. 1998ರಲ್ಲಿ ಅವರ ಸಂಖ್ಯೆ ಶೇ.1.5ಕ್ಕೆ ಕುಸಿದಿದೆ. ಬಾಂಗ್ಲಾದೇಶದಲ್ಲಿ 1951ರಲ್ಲಿ ಶೇ.22.5ರಷ್ಟುಹಿಂದೂಗಳಿದ್ದರು. 2011ರಲ್ಲಿ ಅದು ಶೇ.9.5ಕ್ಕೆ ಕುಸಿದಿದೆ. ಆ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರೆಲ್ಲ ಎಲ್ಲಿಗೆ ಹೋದರು? ಪಾಕಿಸ್ತಾನದಲ್ಲಿ 1947ರಲ್ಲಿದ್ದ ಶೇ.23 ಇದ್ದ ಅಲ್ಪಸಂಖ್ಯಾತರ ಸಂಖ್ಯೆ ಇಂದು ಶೇ.3ಕ್ಕೆ ಕುಸಿದಿದೆ.

ಪಾಕಿಸ್ತಾನದ ಸಿಂಧ್‌ನಲ್ಲಿ 20-25 ಹರೆಯದ ಹಿಂದೂ ಹೆಣ್ಣುಮಕ್ಕಳನ್ನು ಅಪಹರಿಸಿ ಅವರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಮತಾಂತರ ಮಾಡುವುದು ಎಲ್ಲರಿಗೂ ಗೊತ್ತಿರುವ ಸಂಗತಿ. 2018ರಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗ ಸಿದ್ಧಪಡಿಸಿದ 296 ಪುಟದ ವರದಿಯಲ್ಲೇ ಈ ವಿಚಾರಗಳಿವೆ.

ಕ್ರೈಸ್ತರಿಗೆ ಬದುಕಲಾಗದ ಪರಿಸ್ಥಿತಿ ಇರುವ ವಿಶ್ವದ 50 ರಾಷ್ಟ್ರಗಳಲ್ಲಿ ಪಾಕಿಸ್ತಾನ ಮುಂಚೂಣಿಯಲ್ಲಿದೆ. ಇನ್ನು ಖೈಬರ್‌-ಪಖ್ತೂನ್‌ಕ್ವಾ ಪ್ರದೇಶಲ್ಲಿನ ಸುಮಾರು 7000 ಸಿಖ್ಖರ ಬಾಳು ಬಾಂಬ್‌ ದಾಳಿ ಹಾಗೂ ಮತೀಯ ಕಿರುಕುಳದಿಂದ ನಲುಗುತ್ತಿದೆ.

ತಸ್ಲೀಮಾ ನಸ್ರೀನ್‌ರಂತಹ ಬಾಂಗ್ಲಾದೇಶದ ಲೇಖಕಿ ತಮ್ಮ ‘ಲಜ್ಜಾ’ ಕೃತಿಯಲ್ಲಿ ಬಾಂಗ್ಲಾದೇಶದ ಹಿಂದೂ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರದ ಕುರಿತು ಸುದೀರ್ಘವಾಗಿ ಬರೆದಿದ್ದಾರೆ. ಖ್ಞಿಜಿಠಿಛಿd ಖಠಿaಠಿಛಿs ಇಟಞಞಜಿssಜಿಟ್ಞ ಟ್ಞ ಐ್ಞಠಿಛ್ಟ್ಞಿaಠಿಜಿಟ್ಞa್ಝ ್ಕಛ್ಝಿಜಿಜಜಿಟ್ಠs ಊ್ಟಛಿಛಿdಟಞ ತನ್ನ 2006ರ ವರದಿಯಲ್ಲಿ ಅನೇಕ ವಿಚಾರಗಳನ್ನು ಬಿಚ್ಚಿಡುತ್ತದೆ. 2013ರಲ್ಲಿ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ, ಜಮಾತ್‌-ಎ-ಇಸ್ಲಾಮಿ ಸಂಘಟನೆಯು ಬಾಂಗ್ಲಾದೇಶದ ಹಿಂದೂಗಳ ಮೇಲೆಸಗಿದ ಅಪರಾಧಗಳಿಗೆ ಮರಣ ದಂಡನೆಯಂತಹ ಕಠಿಣ ಶಿಕ್ಷೆ ವಿಧಿಸಿದ ಉದಾಹರಣೆಗಳಿವೆ.

ಪೌರತ್ವ ಮಸೂದೆ ಪಾಸ್: ಮಗುವಿಗೆ ‘ನಾಗರಿಕತಾ’ ಎಂದು ಹೆಸರಿಟ್ಟ ಪಾಕ್‌ ಮಹಿಳೆ!

ವಲಸಿಗ ಮುಸ್ಲಿಮರಿಗೆ ಏಕೆ ಪೌರತ್ವ ನೀಡಲ್ಲ?

1947ರಿಂದ ಡಿಸೆಂಬರ್‌ 31, 2014ರ ವರೆಗೆ ಅಷ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಅಲ್ಪಸಂಖ್ಯಾತರೆಂಬ ಕಾರಣಕ್ಕೆ ಮತೀಯ ಕಿರುಕುಳಕ್ಕೊಳಗಾಗಿ ಪಲಾಯನ ಮಾಡಿ ಭಾರತಕ್ಕೆ ಬಂದು ನಿರಾಶ್ರಿತರಾಗಿ ಗುಡಿಸಲುಗಳಲ್ಲಿ ವಾಸಿಸುತ್ತಿರುವವರಿಗೆ ಈಗಿನ ತಿದ್ದುಪಡಿಯು ಪೌರತ್ವದ ಜತೆಗೆ ಗೌರವದ ಬದುಕನ್ನು ಕಟ್ಟಿಕೊಡುತ್ತದೆ.

ಹಾಗಿದ್ದರೆ ಮ್ಯಾನ್ಮಾರ್‌ನ ರೋಹಿಂಗ್ಯಾಗಳು, ಬಾಂಗ್ಲಾದೇಶದಿಂದ ಬಂದ ನುಸುಳುಕೋರರ ಕತೆ? ಅವರಿಗೆ ಈ ಕಾನೂನಿನಲ್ಲಿ ಪೌರತ್ವ ಸಿಗುವುದಿಲ್ಲ. ಮ್ಯಾನ್ಮಾರ್‌ ಜಾತ್ಯತೀತ ರಾಷ್ಟ್ರ. ಅಲ್ಲಿ ರೋಹಿಂಗ್ಯಾ ಮುಸ್ಲಿಮರು ಮತೀಯ ಕಿರುಕುಳಕ್ಕೊಳಗಾದವರಲ್ಲ. ಬಾಂಗ್ಲಾದೇಶ ಇಸ್ಲಾಂ ರಾಷ್ಟ್ರ. ಅಲ್ಲಿ ಮುಸಲ್ಮಾನರು ಹೇಗೆ ಮತೀಯ ಕಿರುಕುಳಕ್ಕೆ ಪಾತ್ರರಾಗುತ್ತಾರೆ? ಅವರೆಲ್ಲ ಭಾರತಕ್ಕೆ ನುಸುಳುಕೋರರು. ರೋಹಿಂಗ್ಯಾ ಹಿಂದೂಗಳಿಗೂ ಈ ಕಾನೂನಿನಡಿ ಪೌರತ್ವ ಸಿಗುವುದಿಲ್ಲ.

ಹಾಗಿದ್ದರೆ ಅಹ್ಮದೀಯರು ಮತ್ತು ಶಿಯಾಗಳು? ಅವರೂ ಮತೀಯ ಕಿರುಕುಳಕ್ಕೊಳಗಾದವರಲ್ಲವೇ? ಇಸ್ಲಾಂನೊಳಗಿನ ಒಳಜಗಳಕ್ಕೆ ತುತ್ತಾದವರಿಗೆ ಆಶ್ರಯ ಮತ್ತು ಪೌರತ್ವ ನೀಡಲಾರಂಭಿಸಿದರೆ ನಾಳೆ ಆಫ್ರಿಕಾ, ಮಧ್ಯಪ್ರಾಚ್ಯದಿಂದಲೂ ವಲಸಿಗರು ಬರುತ್ತಾರೆ. ಅವರೆಲ್ಲರಿಗೂ ಪೌರತ್ವ ಕೊಡಲು ನಮ್ಮದು ದೇಶವೇ ಹೊರತು ಧರ್ಮಶಾಲೆಯಲ್ಲ!

ಶ್ರೀಲಂಕಾದ ತಮಿಳರು? 1970ರ ದಶಕದಿಂದ 1990ರ ನಡುವೆ ಹಲವು ಬಾರಿ ಶ್ರೀಲಂಕಾದ ಲಕ್ಷಾಂತರ ಯುದ್ಧಪೀಡಿತರಿಗೆ ಭಾರತ ಆಶ್ರಯ ನೀಡಿದೆ. ಈಗಿನ ಕಾಯ್ದೆ ತಿದ್ದುಪಡಿಯು ಪಾಕಿಸ್ತಾನ, ಅಷ್ಘಾನಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಮಾತ್ರ ಸೀಮಿತ. ಏಕೆಂದರೆ ದಶಕಗಳಿಂದ ಈ ದೇಶಗಳ ನಿರಾಶ್ರಿತರ ಗುಂಪಿಗೆ ಭಾರತ ಪೌರತ್ವವನ್ನು ನಿರಾಕರಿಸಿದೆ.

ತ್ರಿವಳಿ ತಲಾಖ್, ಆರ್ಟಿಕಲ್ 370, ಪೌರತ್ವ ಮಸೂದೆ: ಮುಂದಿನ ಹೆಜ್ಜೆಗೆ ಕೇಂದ್ರದ ಭರದ ಸಿದ್ಧತೆ!

ಲಿಯಾಕತ್‌ ಒಪ್ಪಂದದ ಪ್ರಮಾದ

ಜಮ್ಮು ಕಾಶ್ಮೀರಕ್ಕೆ 370ನೇ ವಿಧಿಯಡಿ ಪ್ರತ್ಯೇಕ ಮಾನ್ಯತೆ ನೀಡಿದ್ದಂತಹುದೇ ಇನ್ನೊಂದು ಐತಿಹಾಸಿಕ ಪ್ರಮಾದ 1950ರ ನೆಹರು-ಲಿಯಾಕತ್‌ ಒಪ್ಪಂದ. ಆ ತಪ್ಪನ್ನು ತಿದ್ದುವುದು ಪೌರತ್ವ ತಿದ್ದುಪಡಿ ಮಸೂದೆಯ ಮೂಲ ಉದ್ದೇಶ. ಏನದು ನೆಹರು-ಲಿಯಾಕತ್‌ ಒಪ್ಪಂದ? ಭಾರತ ಹಾಗೂ ಪಾಕಿಸ್ತಾನದ ಮತೀಯ ಅಲ್ಪಸಂಖ್ಯಾತರಿಗೆ ತಮ್ಮ ಮನೆಗಳಿಗೆ ಮರಳುವ ಅವಕಾಶ ಕಲ್ಪಿಸಿಕೊಡಲು ಅಲ್ಪಸಂಖ್ಯಾತ ಆಯೋಗಗಳನ್ನು ನಿರ್ಮಿಸುವುದು.

ಆ ಒಪ್ಪಂದಕ್ಕೆ ಕಾರಣ, ಅಂದು ಸುಮಾರು 10 ಲಕ್ಷ ಹಿಂದೂಗಳು ಅಂದಿನ ಪೂರ್ವ ಪಾಕಿಸ್ತಾನದಿಂದ ಕಿರುಕುಳ ತಾಳಲಾಗದೆ ಪಶ್ಚಿಮ ಬಂಗಾಳಕ್ಕೆ ವಲಸೆ ಬಂದಿದ್ದರು. ಆ ಒಪ್ಪಂದದ ವೈಫಲ್ಯತೆಯೇ ಇಂದಿಗೂ ಭಾರತದಲ್ಲಿನ ಅಕ್ರಮ ವಲಸಿಗ ಸಮಸ್ಯೆಗೆ ಕಾರಣ. ಭಾರತೀಯ ಜನಸಂಘದ ಸಂಸ್ಥಾಪಕರಾದ ಡಾ

ಶ್ಯಾಮಪ್ರಸಾದ್‌ ಮುಖರ್ಜಿಯವರು ಆ ಪೊಳ್ಳು ಒಪ್ಪಂದ ವಿರೋಧಿಸಿಯೇ ಅಂದು ಸಚಿವ ಸ್ಥಾನ ತ್ಯಜಿಸಿದ್ದರು. ಹಾಗಾಗಿ ಬಿಜೆಪಿ ಮತೀಯ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತ ವಲಸಿಗರ ಪರ ತನ್ನ ಕಟಿಬದ್ಧತೆಯನ್ನು ಎಲ್ಲಾ ಪ್ರಣಾಳಿಕೆಗಳಲ್ಲಿ ಪುನರುಚ್ಚರಿಸುತ್ತಲೇ ಬಂದಿದೆ.

ಸದ್ಯ ಜಾರಿಯಲ್ಲಿರುವ ಕಾನೂನಿನ ಪ್ರಕಾರ ಎಲ್ಲ ಅಕ್ರಮ ವಲಸಿಗರನ್ನೂ ಭಾರತ ಸರ್ಕಾರವು ಅವರ ಮೂಲದೇಶಗಳಾದ ಇಸ್ಲಾಂ ದೇಶಗಳಿಗೆ ಗಡೀಪಾರು ಮಾಡಬೇಕು. ಆದರೆ, ಅಲ್ಲಿಗೆ ಮರಳಿ ಹೋದರೆ ಹಿಂದೂಗಳ, ಕ್ರೈಸ್ತರ, ಸಿಖ್ಖರ ಪಾಡೇನಾಗಬಹುದು, ಊಹಿಸಿ! ದಶಕಗಳ ಕಾಲ ಭಾರತದಲ್ಲಿ ಆಶ್ರಯ ಪಡೆದು ಜೀವ ಉಳಿಸಿಕೊಂಡಿರುವ ಅಂತಹ ಹಿಂದೂ, ಜೈನ, ಬೌದ್ಧ, ಸಿಖ್ಖರನ್ನು ಹಿಂದೂ ಬಹುಸಂಖ್ಯಾತರ ರಾಷ್ಟ್ರವಾದ ಭಾರತವೇ ತ್ಯಜಿಸಿಬಿಟ್ಟರೆ?

ಭಾರತದಲ್ಲಿ 1951ರಲ್ಲಿ ಶೇ.84.1ರಷ್ಟಿದ್ದ ಹಿಂದೂಗಳ ಸಂಖ್ಯೆ 2011ರಲ್ಲಿ ಶೇ.79.8ಕ್ಕೆ ಕುಸಿದಿದೆ. 1951ರಲ್ಲಿ ಶೇ.9.9ರಷ್ಟಿದ್ದ ಮುಸ್ಲಿಮರ ಸಂಖ್ಯೆ 2011ರಲ್ಲಿ ಶೇ.14.2ಕ್ಕೆ ಏರಿದೆ. ಅಕ್ರಮವಾಗಿ ವಲಸೆ ಬಂದ ಮುಸ್ಲಿಮರಿಗೆ ಪೌರತ್ವ ಕೊಡದೆ ವಾಪಸ್‌ ಕಳಿಸಿದರೆ ಇಸ್ಲಾಮಿಕ್‌ ದೇಶಗಳಲ್ಲಿ ಅವರಿಗೆ ಮತೀಯ ಕಿರುಕುಳವಂತೂ ಆಗುವುದಿಲ್ಲ.

ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನದ ಅನುಸೂಚಿತ 6ನೇ ಪಟ್ಟಿಯಡಿ ಬರುವ ಅಸ್ಸಾಂ, ಮೇಘಾಲಯ, ಮಿಜೋರಂ ಮತ್ತು ತ್ರಿಪುರಾದ ವನವಾಸಿ ಪ್ರದೇಶಗಳಿಗೆ ಅನ್ವಯವಾಗುವುದಿಲ್ಲ. ಬದಲಿಗೆ ಜೈನರು, ಬೌದ್ಧರು, ಪಾರ್ಸಿ, ಸಿಖ್‌, ಹಿಂದೂಗಳು ಸೇರಿ ಸುಮಾರು 30 ಸಾವಿರ ಮಂದಿಯ ನೆಮ್ಮದಿಯ ನಿಟ್ಟುಸಿರಿಗೆ ಮಾತ್ರ ಕಾರಣವಾಗಲಿದೆ.

ಭಾರತದ ಮುಸ್ಲಿಮರಿಗೆ ತೊಂದರೆಯಿಲ್ಲವೆ?

ಇಲ್ಲ. ಅವರು ಇಲ್ಲಿಯ ಪೌರರು ಮತ್ತು ಹಾಗೆಯೇ ಉಳಿಯುತ್ತಾರೆ. ಆದರೆ, ತಮ್ಮ ವೋಟ್‌ ಬ್ಯಾಂಕಿಗಾಗಿ ಅಕ್ರಮ ಬಾಂಗ್ಲಾದೇಶಿ ನುಸುಳುಕೋರರಿಗೆ ರೇಷನ್‌ ಕಾರ್ಡ್‌, ಆಧಾರ್‌ ಕಾರ್ಡ್‌ ಕೊಡಿಸಿರುವ ಕಾಂಗ್ರೆಸ್‌ ಮತ್ತು ಬಂಗಾಳದ ಮಮತಾ ದೀದಿಗೆ ಎನ್‌ಆರ್‌ಸಿ ಬಂದರೆ ತಲೆಬಿಸಿ ತಪ್ಪಿದ್ದಲ್ಲ! ನೆಹರುವಿನ ಮತ್ತೊಂದು ಐತಿಹಾಸಿಕ ಪ್ರಮಾದವನ್ನು ಬಿಜೆಪಿ ಸರ್ಕಾರ ಹೋಗಲಾಡಿಸಿತು ಎಂಬ ಕಸಿವಿಸಿ, ತಮ್ಮ  ವೋಟ್‌ಬ್ಯಾಂಕಿಗೆ ಸಮಸ್ಯೆಯಾಗುತ್ತಿದೆ ಎಂಬ ಕಳವಳ, ಅಂದು ನೆಹರು ವಿರುದ್ಧ ಗರ್ಜಿಸಿದ ಡಾ. ಮುಖರ್ಜಿಯವರ 1950ರ ಹೋರಾಟಕ್ಕೆ 69 ವರ್ಷಗಳ ನಂತರ ಜಯ ಸಲ್ಲುತ್ತಿದೆ ಎಂಬ ಕೋಪ... ಈ ಕಾರಣದಿಂದ ಕಾಂಗ್ರೆಸ್‌ ಮತ್ತದರ ಮಿತ್ರ ಪಕ್ಷಗಳು ಸಂಸತ್ತಿನಲ್ಲಿ ವಿನಾಕಾರಣ ಗದ್ದಲ ಮಾಡಿದವು. ಸಾಮಾನ್ಯ ಭಾರತೀಯನ ಬದುಕನ್ನು ಈ ಪೌರತ್ವ ತಿದ್ದುಪಡಿ ಮಸೂದೆ ಯಾವ ರೀತಿಯಲ್ಲೂ ಬಾಧಿಸುವುದೂ ಇಲ್ಲ, ಭೇದಿಸುವುದೂ ಇಲ್ಲ!

- ಮಾಳವಿಕಾ ಅವಿನಾಶ್‌, ಬಿಜೆಪಿ ಸಹ ವಕ್ತಾರರು

click me!