ರಾಜಕೀಯ ಜೀವನದಲ್ಲಿ ಹಲವು ಏರಿಳಿತವನ್ನು ಸುರೇಶ್ ಗೋಪಿ ಕಂಡಿದ್ದಾರೆ. ಕಳೆದ ಎಂಟು ವರ್ಷಗಳಿಂದ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಸುರೇಶ್ ಗೋಪಿ ತಮ್ಮ ಸಮೀಪದ ಸ್ಪರ್ಧಿ ಸಿಪಿಐನ ವಿಎಸ್ ಸುನಿಲ್ ಕುಮಾರ್ ಅವರನ್ನು 74 ಸಾವಿರ ಮತಗಳಿಂದ ಸೋಲಿಸಿದ್ದಾರೆ.
ನವದೆಹಲಿ: ದೇವರ ನಾಡು ಎಂದೇ ಕರೆಸಿಕೊಳ್ಳುವ ಕೇರಳದಲ್ಲಿ ಕಮಲ ಅರಳಿಸಿರೋ ಸಂಸದ ಸುರೇಶ್ ಗೋಪಿ (Suresh Gopi) ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ತ್ರಿಶೂರ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆಲ್ಲುವ ಮೂಲಕ ಸೂಪರ್‌ಸ್ಟಾರ್ ಸುರೇಶ್ ಗೋಪಿ ಮೊದಲ ಬಾರಿ ಲೋಕಸದನ ಪ್ರವೇಶಿಸಿದ್ದಾರೆ. 39 ವರ್ಷ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದ ಸುರೇಶ್ ಗೋಪಿ ತಮ್ಮ ಡೈಲಾಗ್‌ಗಳಿಂದಲೇ ಕೇರಳದಲ್ಲಿ ಫೇಮಸ್. ರಾಜಕೀಯ ಜೀವನದಲ್ಲಿ ಹಲವು ಏರಿಳಿತವನ್ನು ಸುರೇಶ್ ಗೋಪಿ ಕಂಡಿದ್ದಾರೆ. ಕಳೆದ ಎಂಟು ವರ್ಷಗಳಿಂದ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಸುರೇಶ್ ಗೋಪಿ ತಮ್ಮ ಸಮೀಪದ ಸ್ಪರ್ಧಿ ಸಿಪಿಐನ ವಿಎಸ್ ಸುನಿಲ್ ಕುಮಾರ್ ಅವರನ್ನು 74 ಸಾವಿರ ಮತಗಳಿಂದ ಸೋಲಿಸಿದ್ದಾರೆ.
ಚುನಾವಣೆಯಲ್ಲಿ ಗೆದ್ದ ನಂತರ ಪ್ರತಿಕ್ರಿಯಿಸಿದ್ದ ಸುರೇಶ್ ಗೋಪಿ, ನನ್ನ ಕಠಿಣ ಪರಿಶ್ರಮ ಹಾಗೂ ಕೆಲಸಗಳಿಂದ ಜಯ ಸಿಕ್ಕಿದೆ. ತನ್ನ ಪರವಾಗಿ ನಿಂತ ಕ್ಯಾಥೋಲಿಕ್ ಸಮುದಾಯದ ಜನತೆಗೂ ಸುರೇಶ್ ಗೋಪಿ ಧನ್ಯವಾದಗಳನ್ನು ಸಲ್ಲಿಸಿದ್ದರು. ಸಂಸದನಾಗಿ ಕೆಲಸ ಮಾಡಲು ಅವಕಾಶ ನೀಡಿದ ತ್ರಿಶೂರ್ ಜನತೆಗೆ ಧನ್ಯವಾದ ಸಲ್ಲಿಸಿದ್ದರು.
ಸುರೇಶ್ ಗೋಪಿ ಅವರು ಯಾವಾಗಲೂ ಬಡವರು ಮತ್ತು ನಿರ್ಗತಿಕರಿಗೆ ಸಹಾಯ ಮಾಡಲು ಸದಾ ಮುಂದಿರುತ್ತಾರೆ. ನಾನು ಸುರೇಶ್ಮ ಗೋಪಿ ರಾಜಕೀಯ ಸಿದ್ದಾಂತಗಳನ್ನು ಒಪ್ಪದಿದ್ರೂ, ಅವರನ್ನು ಓರ್ವ ವ್ಯಕ್ತಿಯಾಗಿ ತುಂಬಾ ಇಷ್ಟಪಡುತ್ತೇನೆ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳಂ ಸಿನಿಮಾ ನಟ ಸಲೀಂ ಕುಮಾರ್ ಹೇಳುತ್ತಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮಿತ್ರ ಪಕ್ಷಗಳು 292 ಸ್ಥಾನ ಪಡೆದುಕೊಂಡಿತ್ತು. ಬಿಜೆಪಿ ಏಕಾಂಗಿಯಾಗಿ 240 ಸ್ಥಾನ ಗೆದ್ದುಕೊಂಡಿತ್ತು. ಕಳೆದೆರಡು ಬಾರಿ ಬಿಜೆಪಿ ಏಕಾಂಗಿಯಾಗಿ ಬಹುಮತ ಪಡೆದಿದ್ದರೆ ಈ ಬಾರಿ ಭಾರಿ ಕುಸಿತ ಕಂಡಿತ್ತು. ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳದಲ್ಲಿ ಗಣನೀಯವಾಗಿ ಸ್ಥಾನಗಳ ಸಂಖ್ಯೆ ಕಡಿಮೆಯಾಗಿತ್ತು. ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಹಾಗೂ ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮೋದಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರನಿರ್ವಹಿಸಿದೆ.
ನರೇಂದ್ರ ಮೋದಿ ಪದಗ್ರಹಣ ಕಾರ್ಯಕ್ರಮದಲ್ಲಿ 10 ಸಾವಿರಕ್ಕೂ ಅಧಿಕ ಗಣ್ಯರು ಹಾಜರಾಗಿದ್ದರು. ನಟರಾದ ಶಾರೂಖ್ ಖಾನ್, ವಿಕ್ರಾಂತ್ ಮೆಸ್ಸಿ, ಅಕ್ಷಯ್ ಕುಮಾರ್, ರಜಿನಿಕಾಂತ್ ಹಾಗೂ ನಟಿ ಸೋನಾಲಿ ಬೇಂದ್ರೆ ಖ್ಯಾತ ನಿರ್ದೇಶಕ ರಾಜ್‌ಕುಮಾರ್ ಹಿರಾಣಿ ಆಗಮಿಸಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿರುವ ನಟಿ ಹೇಮಾ ಮಾಲಿನಿ ಮತ್ತು ಕಂಗನಾ ರಣಾವತ್ ಸಹ ಆಗಮಿಸಿದ್ದಾರೆ. ಮಂಡಿ ಲೋಕಸಭಾ ಕ್ಷೇತ್ರದಿಂದ ಗೆದ್ದಿರೋ ಕಂಗನಾ ರಣಾವತ್ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದಾರೆ. ಚಿರಾಗ್ ಪಾಸ್ವಾನ್ ಸಹ ಸಿನಿಮಾಗಳಲ್ಲಿ ನಟಿಸಿದ್ದು, ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡಿದ್ದಾರೆ.