ಬಂಗಾಳದಲ್ಲಿ ಬಿಜೆಪಿ ಪರಿವರ್ತನ ಯಾತ್ರೆಗೆ ನಡ್ಡಾ ಚಾಲನೆ!

By Kannadaprabha NewsFirst Published Feb 7, 2021, 8:27 AM IST
Highlights

ಬಂಗಾಳದಲ್ಲಿ ಬಿಜೆಪಿ ಪರಿವರ್ತನ ಯಾತ್ರೆಗೆ ನಡ್ಡಾ ಚಾಲನೆ| ಮತಬ್ಯಾಂಕ್‌ಗಾಗಿ ದೇಶದ ಸಂಸ್ಕೃತಿ ಬದಲಿಸುವ ದೀದಿ: ಗುಡುಗು| ಜೈ ಶ್ರೀರಾಂ ಘೋಷಣೆಯೆಂದರೆ ಮಮತಾಗೇಕೆ ದ್ವೇಷ?

ನವದ್ವೀಪ್(ಫೆ.07): ಪಶ್ಚಿಮ ಬಂಗಾಳ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಪರಿವರ್ತನ ಯಾತ್ರೆಗೆ ನಾದಿಯಾ ಜಿಲ್ಲೆಯ ನವದ್ವೀಪ ಎಂಬಲ್ಲಿ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಶನಿವಾರ ಅದ್ಧೂರಿ ಚಾಲನೆ ನೀಡಿದ್ದಾರೆ. ‘ಯಾತ್ರೆಗೆ ದೀದಿ ಅನುಮತಿ ನೀಡದಿದ್ದರೂ ಸರಿ.. ಬಂಗಾಳ ಜನತೆ ಅನುಮೋದನೆ ನೀಡಿದ್ದಾರೆ’ ಎಂದು ಇದೇ ವೇಳೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಗುಡುಗಿದ್ದಾರೆ.

ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ನಡ್ಡಾ, ‘ತೃಣಮೂಲ ಕಾಂಗ್ರೆಸ್‌ನ ಘೋಷಣೆ ‘ತಾಯಿ, ಭೂಮಿ, ಜನ’ ಎಂಬುದಾಗಿತ್ತು. ಆದರೆ ಈಗ ಅದು ‘ಸರ್ವಾಧಿಕಾರ, ಸುಲಿಗೆ ಹಾಗೂ (ಮುಸ್ಲಿಂ) ಓಲೈಕೆ’ ಎಂದು ಬದಲಾಗಿದೆ. ಅಂಫನ್‌ ಚಂಡಮಾರುತದ ಪರಿಹಾರ ಹಣದಲ್ಲೂ ಅಕ್ರಮ ಎಸಗಲಾಗಿದೆ’ ಎಂದು ಆರೋಪಿಸಿದರು.

‘ಮಮತಾಗೆ ‘ಜೈ ಶ್ರೀರಾಂ’ ಎಂದರೆ ಏಕೆ ದ್ವೇಷ? ನಮ್ಮದೇ ದೇಶದ ಸಂಸ್ಕೃತಿಯ ಘೋಷಣೆ ಹಾಕುವುದು ತಪ್ಪೇ? ತೃಣಮೂಲ ಕಾಂಗ್ರೆಸ್‌ನವರು ಮತಬ್ಯಾಂಕ್‌ಗಾಗಿ ದೇಶದ ಸಂಸ್ಕೃತಿಯನ್ನೇ ಬದಲಿಸಲು ಹೊರಟವರು’ ಎಂದು ಕಿಡಿಕಾರಿದರು.

ಈ ನಡುವೆ, ನಡ್ಡಾ ಅವರು ರೈತರೊಂದಿಗೆ ಕೂತು ಮಾಲ್ಡಾದಲ್ಲಿ ಖಿಚಡಿ ಸವಿದರು. ಈ ವೇಳೆ ‘ಮೋದಿ ವಿರುದ್ಧದ ದ್ವೇಷ ತೀರಿಸಿಕೊಳ್ಳಲು ಮಮತಾ ಅವರು, ಪ್ರಧಾನಮಂತ್ರಿ ಕಿಸಾನ್‌ ಯೋಜನೆಯನ್ನು ಬಂಗಾಳದ ರೈತರಿಗೆ ನಿರಾಕರಿಸಿದರು’ ಎಂದು ಕಿಡಿಕಾರಿದರು.

click me!