ಇದೇ ಮೊದಲ ಬಾರಿ ಕೋಬ್ರಾ ಪಡೆಗೆ ಮಹಿಳಾ ಯೋಧರು!

By Kannadaprabha NewsFirst Published Feb 7, 2021, 8:22 AM IST
Highlights

 ಸಿಆರ್‌ಪಿಎಫ್‌ ಕೋಬ್ರಾ ಪಡೆಗೆ 34 ಮಹಿಳಾ ಯೋಧರ ಸೇರ್ಪಡೆ| ಶೀಘ್ರ ನಕ್ಸಲ್‌ಪೀಡಿತ ಛತ್ತೀಸ್‌ಗಢ ಅರಣ್ಯದಲ್ಲಿ ಅಖಾಡಕ್ಕೆ| ಮಹಿಳಾ ಸಬಲೀಕರಣದತ್ತ ಇದು ದಿಟ್ಟಹೆಜ್ಜೆ: ಸಿಆರ್‌ಪಿಎಫ್‌| ಇದೇ ಮೊದಲ ಬಾರಿ ಕೋಬ್ರಾ ಪಡೆಗೆ ಮಹಿಳಾ ಯೋಧರು!

ಗುರಗಾಂವ್‌(ಫೆ.07): ಇದೇ ಮೊದಲ ಬಾರಿ 34 ಮಹಿಳಾ ಸಿಬ್ಬಂದಿಯ ತಂಡವೊಂದು ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಕೋಬ್ರಾ ಕಮಾಂಡೋ ಪಡೆಗೆ ಸೇರ್ಪಡೆಯಾಗಿದೆ. ಇದು ಅರಣ್ಯದಲ್ಲಿ ಕಾರ್ಯಾಚರಣೆ ನಡೆಸುವ ವಿಶೇಷ ಪರಿಣತ ತಂಡವಾಗಿದ್ದು, ನಕ್ಸಲರು ಅವಿತಿರುವ ಛತ್ತೀಸ್‌ಗಢ ದಟ್ಟಾರಣ್ಯದಲ್ಲಿ ಶೀಘ್ರದಲ್ಲೇ ಅಖಾಡಕ್ಕಿಳಿಯಲಿದೆ.

ಕೋಬ್ರಾ (ಕಮಾಂಡೋ ಬೆಟಾಲಿಯನ್‌ ಫಾರ್‌ ರೆಸೊಲ್ಯೂಟ್‌ ಆ್ಯಕ್ಷನ್‌) ಪಡೆಯು 2009ರಲ್ಲಿ ಸ್ಥಾಪಿತವಾಗಿತ್ತು. ಇದು ಅರಣ್ಯದಲ್ಲಿ ಗುಪ್ತಚರ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸುತ್ತದೆ. ಹೆಚ್ಚಾಗಿ ಕೋಬ್ರಾ ಪಡೆಗಳನ್ನು ಮಾವೋವಾದಿಗಳ ನೆಲೆವೀಡಾಗಿರುವ ಬಿಹಾರ, ಛತ್ತೀಸ್‌ಗಢ ಹಾಗೂ ಜಾರ್ಖಂಡ್‌ನಲ್ಲಿ ನಿಯೋಜಿಸಲಾಗಿದೆ. ಈವರೆಗೆ ಇಲ್ಲಿ ಕೇವಲ ಪುರುಷ ಪಡೆಗಳು ಇದ್ದವು.

ಶನಿವಾರ ಸಿಆರ್‌ಪಿಎಫ್‌ನ ಮೊದಲ ಮಹಿಳಾ ಪಡೆ ಸ್ಥಾಪನೆಯ 35 ದಿನಾಚರಣೆ ನಡೆಯಿತು. ಇದೇ ವೇಳೆ ಕೋಬ್ರಾ ಪಡೆಗೆ ಮಹಿಳಾ ತಂಡ ಇದೇ ಮೊದಲ ಬಾರಿ ಗುರಗಾಂವ್‌ ಸಮೀಪದ ಕದರ್‌ಪುರ ಗ್ರಾಮದಲ್ಲಿ ಸೇರ್ಪಡೆಗೊಂಡಿತು. ಸಿಆರ್‌ಪಿಎಫ್‌ ಮಹಾನಿರ್ದೇಶಕ ಎ.ಪಿ. ಮಹೇಶ್ವರಿ ಅವರ ಉಪಸ್ಥಿತಿಯಲ್ಲಿ ಚೊಚ್ಚಳ ಮಹಿಳಾ ಕೋಬ್ರಾ ಪಡೆ ಯುದ್ಧ ತಾಲೀಮು ಪ್ರದರ್ಶಿಸಿತು.

ಸದ್ಯಕ್ಕೆ ಮಹಿಳಾ ಪಡೆಯು 3 ತಿಂಗಳು ತರಬೇತಿ ಪಡೆಯಲಿದ್ದು, ನಂತರ ಛತ್ತೀಸ್‌ಗಢದ ಸುಕ್ಮಾ, ದಂತೇವಾಡಾ ಹಾಗೂ ಬಿಜಾಪುರದ ನಕ್ಸಲ್‌ಪೀಡಿತ ಪ್ರದೇಶಗಳಿಗೆ ನಿಯೋಜನೆಗೊಳ್ಳಲಿದೆ. ಮಹಿಳಾ ಸಬಲೀಕರಣದತ್ತ ಇದೊಂದು ದಿಟ್ಟಹೆಜ್ಜೆ ಎಂದು ಸಿಆರ್‌ಪಿಎಫ್‌ ವಕ್ತಾರರು ತಿಳಿಸಿದ್ದಾರೆ.

click me!